ಮಹಾರಾಷ್ಟ್ರ ಗ್ರಾಮದಲ್ಲಿ ಬಸವ ಪ್ರಜ್ಞೆ ಬಿತ್ತುತ್ತಿರುವ ಹೊಸ ಅನುಭವ ಮಂಟಪ

(ಬಸವ ಮೀಡಿಯಾದ ‘ಶರಣ ಬದುಕು’ ಅಂಕಣ ಸಾಮಾನ್ಯ ಶರಣರ ವಿಶಿಷ್ಟ ಸಾಧನೆ, ಅನುಭವಗಳನ್ನು ಗುರುತಿಸಲು ಯತ್ನಿಸುತ್ತದೆ.

ಔರಂಗಾಬಾದ್ ಜಿಲ್ಲೆಯ ದಹೆಗಾಂವ ಗ್ರಾಮದ ವೀರೇಂದ್ರ ಮಂಗಲಗೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿ ಎಲ್ಲಾ ಧರ್ಮದ ಜನರಿಗೂ ಅದನ್ನು ತೆರೆದಿದ್ದಾರೆ. ಈ ಬಗ್ಗೆ ರವೀಂದ್ರ ಹೊನವಾಡ ಮತ್ತು ಮಂಜುನಾಥ ಹೂಗಾರ ಅವರ ವಿಶೇಷ ವರದಿ.

ಇಂತಹ ಅಸಾಮಾನ್ಯ ಸಾಧನೆ ಮಾಡಿರುವ ಸಾಮಾನ್ಯ ಶರಣರು ನಿಮಗೆ ಗೊತ್ತಿದ್ದರೆ ದಯವಿಟ್ಟು basavamedia1@gmail.comಗೆ ಇಮೇಲ್ ಮಾಡಿ. ಅವರನ್ನು ಸಂಪರ್ಕಿಸಿ ವರದಿ ಮಾಡುತ್ತೇವೆ. ಅವರ ಸಾಧನೆ ಎಲ್ಲರಿಗೂ ತಿಳಿಯಲಿ.)

ಔರಂಗಾಬಾದ್ ಜಿಲ್ಲೆಯ ಕನಂದ ತಾಲೂಕಿನಲ್ಲಿ ಸುಮಾರು 5000 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಗ್ರಾಮ, ದಹೆಗಾಂವ.

ಮಹಾರಾಷ್ಟ್ರದ ಈ ಗ್ರಾಮದಲ್ಲಿ ಆಗಸ್ಟ್ 11ರಂದು ಅನುಭವ ಮಂಟಪ ಕಟ್ಟಡ ಹಾಗೂ ಬಸವಣ್ಣನವರ ಮೂರ್ತಿ ಲೋಕಾರ್ಪಣೆಗೊಂಡಿತು.

ಲಿಂಗಾಯತ ಶರಣ ಫೌಂಡೇಶನ್ ಮುಖಂಡರಾಗಿರುವ ವೀರೇಂದ್ರ ಮಂಗಲಗೆ ಅವರ ಸ್ವಂತ ಖರ್ಚಿನಲ್ಲಿ ಅನುಭವ ಮಂಟಪ ನಿರ್ಮಾಣವಾಗಿದೆ. ದಾಸೋಹಿ ಮಂಗಲಗೆ ಅವರು ಮಹಾರಾಷ್ಟ್ರದಲ್ಲಿ ನಡೆದ ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಪ್ರತಿಯೊಂದು ಹೋರಾಟಗಳಿಗೆ ತಮ್ಮ ತನು ಮನ ಧನ ಸಹಾಯ ಮಾಡಿ ಹೋರಾಟಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದವರು.

ಬಸವಾದಿ ಶರಣರ ತತ್ವ ಪ್ರಚಾರಕ್ಕೆಂದು, ತಮ್ಮ ತಂದೆ ಗುರುಲಿಂಗಪ್ಪ ಮಂಗಲಗೆ ಅವರ ಶತಮಾನೋತ್ಸವದ ಸವಿನೆನಪಿಗಾಗಿ ಅನುಭವ ಮಂಟಪ ನಿರ್ಮಿಸಿರುವುದು ವಿಶೇಷವಾಗಿದೆ.

ದಹೆಗಾಂವ ಗ್ರಾಮದಲ್ಲಿ ಬೆರಳೆಣಿಕೆಯ ಲಿಂಗಾಯತರಿದ್ದು, ಬಸವ ತತ್ವದ ಮಹತ್ವ ತಿಳಿದುಕೊಂಡ ಊರಿನ ಯುವಕರು ನಮ್ಮ ಈ ಕಾರ್ಯಕ್ಕೆ ಕೈಜೋಡಿಸಿರುವರು. ಅನುಭವ ಮಂಟಪ ನಿರ್ಮಿಸಿ, ಉದ್ಘಾಟಿಸಿದ್ದರಿಂದ ದಹೆಗಾಂವ ಗ್ರಾಮದ ಹೆಸರು ರಾಜ್ಯ ಹಾಗೂ ರಾಜ್ಯದ ಗಡಿದಾಟಿ ಕೇಳುವಂತಾಗಿದೆ. ಮುಂದೆ ಈ ಹಳ್ಳಿಯ ಹೆಸರು ಬದಲಾಗಿ ‘ಬಸವಗಾಂವ’ ಎಂದು ಕರೆಸಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ಮಾತನ್ನು ನಾವು ಹೇಳುವುದಿಲ್ಲ, ಊರಿನ ಜನರೇ ಹೇಳುತ್ತಿದ್ದಾರೆ. ಈ ಮಾತುಗಳನ್ನೆಲ್ಲ ಕೇಳುತ್ತಿದ್ದರೆ ನಮಗೆಲ್ಲ ತುಂಬಾ ಖುಷಿ ಎನಿಸುತ್ತದೆ ಎನ್ನುತ್ತಾರೆ ವೀರೇಂದ್ರ ಮಂಗಲಗೆ ಅವರು.

ಈ ಭಾಗದಲ್ಲಿ ಮೊದಲು ನಮ್ಮ ಜನರ ಮೇಲೆ ಪಂಚಪೀಠಗಳ, ಅದರ ಪೀಠಾಧಿಪತಿಗಳ ಬಗ್ಗೆ ಪ್ರಭಾವ ಇತ್ತು. ಬಸವತತ್ವದ ಬಗ್ಗೆ ಬಹಳ ಜನರಿಗೆ ಗೊತ್ತಿರಲಿಲ್ಲ. ನಾವೆಲ್ಲ ಬಸವತತ್ವವ ಹೇಳಲು ಹೋದರೆ ಯಾರು ಒಪ್ಪಿಕೊಳ್ಳುತ್ತಿರಲಿಲ್ಲ.

ಆದರೆ ಈಗ್ಗೆ ಆರೇಳು ವರ್ಷಗಳ ಹಿಂದೆ ಕರ್ನಾಟಕದ ಬೀದರದಿಂದ ಆರಂಭವಾದ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿನ ಹೋರಾಟದಿಂದ ಜನರಲ್ಲಿ ಜಾಗೃತಿ ಮೂಡಲಾರಂಭಿಸಿತು. ನಾವೂ ಸಹ ಕೆಲವರು ಹೋರಾಟಗಳಲ್ಲಿ ಭಾಗವಹಿಸಿ ಬಂದೆವು.

ಬರೀ ಹೋರಾಟಗಳಲ್ಲಿ ಭಾಗವಹಿಸಿ ಬಂದರೆ ಸಾಲುವುದಿಲ್ಲ, ನಾವು ಈ ಪಂಚಪೀಠಗಳ ತೆಕ್ಕೆಯಿಂದ ಜನರನ್ನು ಹೊರತಂದು ಬದಲಾವಣೆ ಮಾಡಬೇಕೆಂಬ ನಿರ್ಧಾರ ನಮ್ಮಲ್ಲಿ ಮೂಡಹತ್ತಿತು. ಇದೆಲ್ಲ ಆಗಬೇಕೆಂದರೆ ಬರೀ ಹೋರಾಟಕ್ಕೆ ಹೋಗಿಬರುವುದರಿಂದ ಆಗುವುದಿಲ್ಲವೆಂಬುದ ಅರಿತುಕೊಂಡೆವು. ಈ ಬಗ್ಗೆ ಚಿಂತನೆ ಮಾಡಹತ್ತಿದ ನಾವು ಮೊದಲು ನಮ್ಮ ನಮ್ಮ ಊರುಗಳಲ್ಲಿ ಬಸವತತ್ವ ಹೇಳುವ ಗಟ್ಟಿ ಅನುಯಾಯಿಗಳನ್ನು ಹುಟ್ಟಾಕಬೇಕೆಂದು ಅಂದುಕೊಂಡು, ಅವರಿಗಾಗಿ ತರಬೇತಿ ಕೊಡಲು ಕಟ್ಟಡ ಅವಶ್ಯಕತೆ ಮನಗಂಡು, ಅನುಭವ ಮಂಟಪ ನಿರ್ಮಿಸುವ ನಿರ್ಧಾರ ಮಾಡಿದೆವು, ಅದರಂತೆ ಈಗ ಅದನ್ನು ನಿರ್ಮಾಣ ಮಾಡಿದೆವು.

ಅನುಭವ ಮಂಟಪದಲ್ಲಿ ನಾಲ್ಕು ಕಂಬಗಳನ್ನು ನಿರ್ಮಿಸಿದ್ದು ಕಾಣಬಹುದು. ಅವಕ್ಕೆ ಇಷ್ಟಲಿಂಗ, ಕಾಯಕ, ದಾಸೋಹ ಮತ್ತು ಸಮಾನತೆ ಎಂದು ಹೆಸರು ಕೊಡಲಾಗಿದೆ.

ವಚನ ಪಠಣ, ವಚನ ಪ್ರಾರ್ಥನೆ, ಶಿವಯೋಗ-ಧ್ಯಾನ, ಬಸವತತ್ವದ ಚಿಂತನ-ಮಂಥನ ಮಾಡಲು, ಶರಣರು ಬೋಧಿಸಿದ ಆಚಾರ ವಿಚಾರಗಳನ್ನು ಅರಿತು ಪ್ರಚಾರ ಮಾಡಲು, ಅವುಗಳನ್ನು ಅನುಷ್ಠಾನಗೊಳಿಸಲು ತರಬೇತಿ ಪಡೆಯಲೆಂದು ಅನುಭವ ಮಂಟಪ ನಿರ್ಮಿಸಲಾಗಿದೆ. ಇದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಅಂದರೆ ವಚನಮೂರ್ತಿಗಳನ್ನು ಬರಮಾಡಿಕೊಂಡು ಅವರಿಂದ ವಚನ ಅಧ್ಯಯನ, ವಚನ ಚಿಂತನ, ಅನುಭಾವ ಶಿಬಿರ ನಡೆಸುವ ವಿಚಾರ ಇಟ್ಟುಕೊಳ್ಳಲಾಗಿದೆ.

ಅನುಭವ ಮಂಟಪವನ್ನು ಯಾವುದೇ ಜಾತಿ ಧರ್ಮದ ಬಳಕೆಗೆ ಸೀಮಿತಗೊಳಿಸದೆ, ಸಕಲರಿಗೂ ಇದರ ಬಳಕೆ ಮಾಡಿಕೊಳ್ಳುವ, ಸಮಾಜಮುಖಿ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಗುವುದು.

ಆಗಸ್ಟ್ 11ರಂದು ಈ ಅನುಭವ ಮಂಟಪವನ್ನು ಮಹಾರಾಷ್ಟ್ರದ ಮಾಜಿ ಸಂಸದ ಚಂದ್ರಕಾಂತ ಖೈರೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಸವ ಸಮಿತಿಯ ಡಾ. ಅರವಿಂದ ಜತ್ತಿ ಅವರು, ಸಾನಿಧ್ಯವನ್ನು ಬಾಲ್ಕಿಯ ಬಸವಲಿಂಗಪಟ್ಟದ ದೇವರು ವಹಿಸಿಕೊಂಡಿದ್ದರು. ಲಾತೂರಿನ ಮಾಧವರಾವ ಪಾಟೀಲ, ಡಾ. ಸೋಮನಾಥ ರೋಡೆ, ಪುಣೆಯ ಕಾಕಾ ಕೋಯಿತೆ, ಜಾಲನಾದ ಮಧುಕರ ಲಿಂಗಾಯತ, ನಾಂದೇಡದ ಅವಿನಾಶ್ ಭೋಸಿಕರ್, ಪ್ರದೀಪ ಬುರಾಂಡೆ, ಸಚಿನ್ ಸಂಗಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ಅನುಭವ ಮಂಟಪದ ಪಕ್ಕ ಲಭ್ಯವಿರುವ ಜಾಗದಲ್ಲಿ ಎರಡು ರೂಂ ನಿರ್ಮಿಸಿ, ಬಸವಾದಿ ಶರಣರ ವಚನ ಸಾಹಿತ್ಯ ಒಳಗೊಂಡ ಗ್ರಂಥಾಲಯ ಮಾಡುವುದಾಗಿ ವೀರೇಂದ್ರ ಮಂಗಲಗೆ ಹೇಳುತ್ತಾರೆ.

ವೀರೇಂದ್ರ ಮಂಗಲಗೆ ಅವರು ವಿದ್ಯುತ್ ಉಪಕರಣಗಳ ತಯಾರಿಕೆ ಉದ್ಯಮಿ. ದಹೆಗಾಂವ ಗ್ರಾಮಕ್ಕೆ ಹೊಂದಿಕೊಂಡ ಜಮೀನು ಖರೀದಿಸಿ ಅಲ್ಲಿ ಅನುಭವ ಮಂಟಪ ನಿರ್ಮಿಸಿದ್ದಾರೆ.

Share This Article
9 Comments
  • ಅಬ್ಬಾ…. ನೀವೇ ಇಂದಿನ ಲಿಂಗಾಯತದ ಬಸವನುಸಿರು!
    ನಿಮ್ಮಂತಹ ಉಳ್ಳವರ ಸಂಖ್ಯೆ ಹೆಚ್ಚುತಿರಲಿ! ಗ್ರಾಮ ಗ್ರಾಮಗಳಲ್ಲಿ ಇಂತಹ ಅನುಭವ ಮಂಟಪಗಳು ತಲೆಯಿತ್ತಲಿ! ಭಾರತ ಬಸವ ಭಾರತವಾಗಲಿ!!

  • I am happy to learn to know the efforts made to make people aware regarding popularise basava phylosophy.

  • ಬಸವಾದಿ ಶರಣರ ತತ್ತ್ವ ಆಚರಣೆಗಳನ್ನು ಪ್ರಚಾರ ಮಾಡುವ ತಮ್ಮ ಇಂತಹ ಕಾಯಕ ನಮಗೆಲ್ಲಾ ಆದರ್ಶಪ್ರಾಯವಾಗಿದೆ.
    ಶರಣುಶರಣಾರ್ಥಿಗಳು.

    • ಶೇಖರಪ್ಪ ಸಿದ್ಧಲಿಂಗಪ್ಪ ಕಳಸಾಪೂರಶೆಟ್ರ. ಗದಗ. says:

      ಸಾಕಾರವಾದ ಗುರು ಲಿಂಗ ಜಂಗಮ ಭಕ್ತಿ. ವೀರೇಂದ್ರ ಮಂಗಲಗೆ ಅವರಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.

  • ಬಸವಣ್ಣನ ವಚನಗಳು ಅವರ ತತ್ವಗಳನ್ನು ಕನ್ನಡ ಇಲ್ಲದ ನಾಡಲ್ಲಿ ಭಿತ್ತುತ್ತಿರುವ ನಿಮಗೆ ಶರಣು ಶರಣಾರ್ಥಿ.🌹🌷🌹

  • ಅಕ್ಕ ಮಹಾದೇವಿ, ಗದಗ ಇವರಿಂದ ನನಗೆ ಬಂದ ವ್ಯಾಟ್ಸಪ್ ಪ್ರತಿಕ್ರಿಯೆ …

    ಬಸವ ಮೀಡಿಯ ಚೆನ್ನಾಗಿ ಬರುತ್ತಿದೆ. ಬಸವಣ್ಣ ಹಾಗೂ ಶರಣರರ ತತ್ವದ ಬಗೆಗಿನ ನಿಮ್ಮ ಕಾಯ೯ ಶ್ಲಾಘನೀಯ. ನಿಮ್ಮ ಈ ಪ್ರಯತ್ನ ಯಶಸ್ಸು ಕಾಣಲಿ ಅಂತ ಹಾರೈಸುವೆ. ಮಹಾರಾಷ್ಟ್ರದ ದಹೆಗಾಂವ್ ಗ್ರಾಮದ ವೀರೇಂದ್ರ ಮಂಗಲಗೆ ಶರಣರ ಕಾಯ೯ ಅನುಪಮವಾದದ್ದು, ಅವರ ಸೇವೆಗೆ ಅನಂತ ಶರಣು ಶರಣಾಥಿ೯ಗಳು 🙏🙏.
    ಹಾಗೆ ಈ ಲೇಖವನ್ನು ಚಂದಾಗಿ ಬರೆದ ಶರಣರಾದ ರವೀಂದ್ರ ಹೊನವಾಡ ಸರ್ ಮತ್ತು ಮಂಜುನಾಥ ಹೂಗಾರ ಅವರಿಗೆ ಕೂಡ ಅನಂತ ಶರಣು ಶರಣಾಥಿ೯ಗಳು 🙏🙏.

  • ಐ ಆರ್ ಮಠಪತಿ ಹಾರೂಗೇರಿ ಬೆಳಗಾವಿ ಜಿಲ್ಲೆ says:

    ತಮ್ಮ ಬಸವ ಕಾರ್ಯಕ್ಕೆ ಶರಣಾರ್ಥಿಗಳು

  • ಶರಣು ಶರಣಾಥಿ೯ಗಳು ಸರ್ ತುಂಬಾ ಚೆನ್ನಾಗಿದೆ ನಿಮ್ಮ ಬರಹ. ಬಸವ ಬಳ್ಳಿಗಳು ಎಲ್ಲಾ ಕಡೆ ಹಬ್ಬಲಿ 🙏🙏

Leave a Reply

Your email address will not be published. Required fields are marked *