ಲಿಂಗಾಯತ ಜಾತಿ ಪ್ರಮಾಣಪತ್ರ ವಾಪಸ್ ಪಡೆದು, ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಂತೆ ಕೋರಿ ರಾಯಚೂರು ಜಿಲ್ಲೆಯ ಸಿಂಧನೂರಿನ ರುದ್ರಯ್ಯಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್ನ ಕಲಬುರಗಿ ಪೀಠದಲ್ಲಿರುದ್ರಯ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಲಿಂಗಾಯತ ಜಂಗಮ ಜಾತಿಗೆ ಸೇರಿದ ರುದ್ರಯ್ಯ ಸ್ವಾಮಿ, ‘ನನಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿ’ ಎಂದು ಸಿಂಧನೂರು ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ಕಂದಾಯ ನಿರೀಕ್ಷಕರ ಪರಿಶೀಲನಾ ವರದಿಯನ್ನು ಆಧರಿಸಿದ್ದ ತಹಶೀಲ್ದಾರ್ ಈ ಮನವಿಯನ್ನು 2018ರ ಆಗಸ್ಟ್ 27ರಂದು ತಿರಸ್ಕರಿಸಿದ್ದರು.
ಇದನ್ನು ಪ್ರಶ್ನಿಸಿದ್ದ ರುದ್ರಯ್ಯ ಸ್ವಾಮಿ, ‘ನನಗೆ ಈ ಹಿಂದೆ ನೀಡಿರುವ ಲಿಂಗಾಯತ ಜಂಗಮ ಎಂಬ ಜಾತಿ ಪ್ರಮಾಣ ಪತ್ರವನ್ನು ವಾಪಸು ಪಡೆದು, ಹೊಸದಾಗಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಲು ಉಪವಿಭಾಗಾಧಿಕಾರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಲಿಂಗಸೂಗೂರು ಉಪವಿಭಾಗಾಧಿಕಾರಿ ಮತ್ತು ಸಿಂಧನೂರು ತಹಶೀಲ್ದಾರ್ ಪರ ಹೈಕೋರ್ಟ್ ವಕೀಲರಾದ ಸಿ.ಜಗದೀಶ್, ‘ಅರ್ಜಿದಾರರು 2018ರಲ್ಲಿ ತಮಗೆ ನೀಡಲಾಗಿದ್ದ ಲಿಂಗಾಯತ ಜಂಗಮ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಮತ್ತು ಹೊಸದಾಗಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಇದಕ್ಕೆ ಯಾವುದೇ ಕಾರಣ ಉಲ್ಲೇಖಿಸಿಲ್ಲ’ ಎಂದು ಆಕ್ಷೇಪಿಸಿದ್ದರು.
‘ಒಮ್ಮೆ ಅರ್ಜಿ ಸಲ್ಲಿಸಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೆ ಅದನ್ನು ವಾಪಸು ಪಡೆದು, ಹೊಸ ಪ್ರಮಾಣ ಪತ್ರ ವಿತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಕರ್ನಾಟಕ ಹೈಕೋರ್ಟ್ 2012ರಲ್ಲಿ ವಿಷ್ಣು ಎನ್. ಭಜನಕರ್ ಪ್ರಕರಣದಲ್ಲಿ ಸ್ಪಷ್ಟ ತೀರ್ಪು ನೀಡಿದೆ’ ಎಂದು ಜಗದೀಶ್ ವಾದಿಸಿದ್ದರು.
ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಈ ಮೊದಲು ತಪ್ಪಾಗಿ ಪ್ರಮಾಣ ಪತ್ರ ನೀಡಲಾಗಿದೆ. ಅದನ್ನು ಬದಲಾಯಿಸಬೇಕು ಎಂದಷ್ಟೇ ಅರ್ಜಿದಾರರ ಪರ ವಕೀಲರು ಮೌಖಿಕ ವಿವರಣೆ ನೀಡಿದ್ದಾರೆ. ಆದರೆ, ಅದಕ್ಕೆ ಸೂಕ್ತವಾದ ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ,’ ಎಂದು ತಿಳಿಸಿದೆ.