ಶೋಷಣೆ, ಅಸಮಾನತೆ ನಿವಾರಣೆಗಾಗಿ ಬಂದ ಬಸವ ಧರ್ಮ: ಗೋವಿಂದ ಕಾರಜೋಳ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ:

ವಿಶ್ವಗುರು ಬಸವಣ್ಣನವರು ಶೋಷಣೆ ತಪ್ಪಿಸಲಿಕ್ಕೆ, ಅಸಮಾನತೆ ನಿವಾರಣೆಗಾಗಿ, ಲಿಂಗಭೇದ ತೊಲಗಿಸಲು ಬಸವಧರ್ಮ ಸ್ಥಾಪಿಸಿದರು. ೧೨ನೇ ಶತಮಾನದ ಶರಣರ ಸಂಸ್ಕೃತಿ ಕಾಯಕ ಜೀವಿಗಳಿಗೆ, ನೊಂದವರಿಗೆ ಮಾರ್ಗದರ್ಶನವಾಗಿದೆ, ಎಂದು ಶ್ರೀ ಗೋವಿಂದ ಎಂ ಕಾರಜೋಳರವರು ಬುಧವಾರ ಹೇಳಿದರು.

ಶ್ರೀ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಜಯದೇವ ಜಗದ್ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಂಸದರು ಲಿಂಗಾಯತ ಮಠಗಳು ಈ ನಾಡಿನ ಉದ್ದಗಲಕ್ಕೂ ಎಲ್ಲಾ ಸಮಾಜಕ್ಕೂ ಅಕ್ಷರ ದಾಸೋಹ, ಅನ್ನ ದಾಸೋಹ ನೀಡಿವೆ. ಬಸವಣ್ಣನವರ ಸುಂದರ ಸಮಾಜದ ಕಲ್ಪನೆಗೆ ಮತ್ತೆ ಮೆರಗು ನೀಡಬೇಕೆಂದರೆ ನಾಡಿನ ತಾಯಂದಿರು ಹುಟ್ಟುವ ಮಕ್ಕಳಿಗೆ ಬಸವತತ್ತ್ವ ಬೋಧನೆಯನ್ನು ಮಾಡಬೇಕು, ಎಂದು ತಿಳಿಸಿದರು.

ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಡಾ.ಸೋಮಶೇಖರ್.ಸಿ, ಮಾತನಾಡಿ, ಜಯದೇವ ಮಹಾಸ್ವಾಮಿಗಳು ಮಾಡಿದ ಕಾಯಕ, ಲಿಂಗಾರ್ಚನೆ, ಗುರುಪೂಜೆ, ಜಂಗಮ ದಾಸೋಹಕ್ಕಾಗಿ ಶ್ರಮಿಸಿದವರು. ಲಿಂಗಾಯತ ಮಠಗಳು ಸ್ಥಾಪಿಸಿದ ವಿದ್ಯಾರ್ಥಿನಿಲಯಗಳಲ್ಲಿ ಅನೇಕರು ವ್ಯಾಸಂಗ ಮಾಡಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಾನು ಸಹ ಜಯದೇವ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಬ್ಯಾಸ ಮಾಡಿದವನು. ೧೯೩೭ರಲ್ಲಿ ಮಹಾರಾಜರು ಕೇಳಿಕೊಂಡಾಗ ರೋಗ ನಿರೋಧಕ ಔಷದಿಗಾಗಿ ೪೦ಸಾವಿರ ರೂ ದೇಣಿಗೆ ನೀಡಿದಂತಹ ಮಹಾನ್ ವ್ಯಕ್ತಿ ಜಯದೇವ ಶ್ರೀಗಳು ಎಂದು ತಿಳಿಸಿದರು.

ಮಾಜಿ ಶಾಸಕರಾದ ಶ್ರೀ.ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಹಿಂದಿನ ಅನುಭವಮಂಟಪದ ಆಧಾರದ ಮೇರೆಗೆ ಇಂದಿನ ಸಂಸತ್ತು ನಿರ್ಮಾಣವಾಗಿದೆ. ಅದಕ್ಕೆ ಬಸವಣ್ಣನವರೇ ಮೂಲ. ನಮ್ಮ ಸಮುದಾಯದ ಕಟ್ಟಡವನ್ನು ಕಟ್ಟಲು ಜಯದೇವ ಶ್ರೀಗಳು ಅಂದಿನ ಕಾಲದಲ್ಲೇ ೧ ಸಾವಿರ ದೇಣಿಗೆಯನ್ನು ನೀಡಿದ್ದರು. ನಾನು ಚಿಕ್ಕವನಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೊರಸಂಚಾರ ಬರುತ್ತಿದ್ದುದು ನೆನಪಿದೆ ಎಂದು ಹೇಳಿದರು.

ಧಾರವಾಡ ಶ್ರೀ ಮುರುಘಾಮಠದ ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು, ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಮಿಗಳು, ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಯೋಗಗುರು ವೈದ್ಯಶ್ರೀ ಶ್ರೀ ಚೆನ್ನಬಸವಣ್ಣ, ವಿಧಾನಪರಿಷತ್ ಸದಸ್ಯರಾದ ಶ್ರೀ ಕೆ.ಎಸ್.ನವೀನ್, ಶ್ರೀಮತಿ ದೇವಿಕುಮಾರಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಕೆ ಎಂ ವೀರೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಸೋಮಶೇಖರ್.ಸಿ, ನಿವೃತ್ತ ಐ.ಎ.ಎಸ್ ಅಧಿಕಾರಿಗಳು, ಜಯದೇವ ಹಾಸ್ಟೆಲ್ ಹಳೆಯ ವಿದ್ಯಾರ್ಥಿ ಬೆಂಗಳೂರು, ತುಮಕೂರಿನ ಶ್ರೀ ಜಯದೇವ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ಸದಸ್ಯರುಗಳನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಸಂಭ್ರಮದಲ್ಲಿ ಚಿತ್ರದುರ್ಗದ ಸರಿಗಮ ಸಂಗೀತ ಪಾಠಶಾಲೆಯ ಶ್ರೀ.ಸುಚಿತ್ ಕುಲಕರ್ಣಿ ಸಂಗೀತ, ಚಂದ್ರವಳ್ಳಿ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಎಸ್.ಜೆ.ಎಂ.ರೆಸಿಡೆನ್ಶಿಯಲ್ ಶಾಲೆ ವತಿಯಿಂದ ನೃತ್ಯ, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಾದ ನಯನ, ಜಗ್ಗಪ್ಪ, ಅಪ್ಪಣ್ಣ ಮತ್ತು ದೀಪಿಕಾ ಹಾಸ್ಯರೂಪಕ, ಜೀ ಕನ್ನಡ ಸರಿಗಮಪ ಹೆಸರಾಂತ ಕಲಾವಿದರಾದ ಸುನೀಲ್, ವರ್ಣ ಚವ್ಹಾಣ್, ಶಿವಾನಿ ಮತ್ತು ದರ್ಶನ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜ್ಞಾನಯೋಗಿ ಬಳಗದವರು ಪ್ರಾರ್ಥಿಸಿ, ಜಿ.ಟಿ.ನಂದೀಶ್ ಸ್ವಾಗತಿಸಿ, ಪ್ರೊ. ಜ್ಞಾನಮೂರ್ತಿ, ಶ್ರೀನಿವಾಸ್ ನಿರೂಪಿಸಿ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *