ಕನ್ನೇರಿ ಸ್ವಾಮಿ ರಾಜ್ಯ ಪ್ರವೇಶ ನಿಷೇಧಿಸಲು ಅಫಜಲಪುರ ಬಸವ ಸಂಘಟನೆಗಳ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಅಫಜಲಪುರ

ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ, ನಿಂದನಾತ್ಮಕ ಶಬ್ದಗಳನ್ನು ಬಳಸಿರುವುದನ್ನು ಖಂಡಿಸಿ, ಅವರ ರಾಜ್ಯ ಪ್ರವೇಶ ನಿಷೇಧಿಸಲು ಒತ್ತಾಯಿಸಿ, ಬಸವಪರ ಸಂಘಟನೆಗಳ ಒಕ್ಕೂಟ ಮಂಗಳವಾರ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಕಛೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಖಂಡ ಬಸಣ್ಣ ಗುಣಾರಿ, ಕನ್ನೇರಿ ಸ್ವಾಮೀಜಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಅಪಮಾನಕಾರಿ, ಮಾನಹಾನಿಕರ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸುವ ಶಬ್ದಗಳನ್ನು ಬಳಸಿದ್ದಾರೆ. ಅವರು ಈ ಕೂಡಲೇ ಕ್ಷಮೆ ಕೇಳಬೇಕು ಇಲ್ಲದೆ ಹೋದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಮೃತರಾವ ಪಾಟೀಲ ಮಾತನಾಡುತ್ತಾ, ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ‘….. ಮಕ್ಕಳು’ ಎಂದು ನಿಂದಿಸಿ, ‘….. ಹೊಡೆಯುತ್ತೇನೆ’ ಎಂದು ಅತ್ಯಂತ ಅವಮಾನಕರ ಭಾಷೆ ಬಳಸಿದ್ದಾರೆ. ಇಂತಹ ಹೇಳಿಕೆಗಳು ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುತ್ತವೆ ಮತ್ತು ಸಮಾಜದಲ್ಲಿ ದ್ವೇಷ ಹುಟ್ಟಿಸುತ್ತವೆ.

“ಅವರು ಇದೇ 16 ರಂದು ಬಸವನಬಾಗೇವಾಡಿಗೆ ಬರಲಿದ್ದಾರೆ, ಆ ಭೇಟಿಯನ್ನು ಕೂಡಲೇ ನಿಷೇಧಿಸಬೇಕು” ಎಂದು ಅವರು ಆಗ್ರಹಿಸಿದರು.

ಬಿ.ಎಸ್. ಬಾಳಿಕಾಯಿ ಮಾತನಾಡಿ, “ಸ್ವಾಮೀಜಿಯವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕು. ಬಸವತತ್ವ ಮಠದ ಪೀಠಾಧಿಪತಿಗಳಾಗಿ ಅವರು ಪೀಠದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ”, ಎಂದು ಹೇಳಿದರು.

ಸಂಘಟನೆಗಳ ಮುಖಂಡರಾದ ಗುರು ಚಾಂದಕವಟೆ, ಶ್ರೀಮಂತ ಬಿರಾದಾರ, ಪ್ರಮೋದ ಭೋವಿ, ಮಹೇಶ ಅಲೆಗಾಂವ, ಶಾಂತಪ್ಪ ಅಂಜುಟಗಿ, ರೇವಣಸಿದ್ದಪ್ಪ ಹೂಗಾರ, ಗೋಪಾಲ ಮಾಂಗ, ಬಸವರಾಜ ಕೆಂಗನಾಳ, ರಾಜೇಂದ್ರ ನರೋಣ, ಬಸವರಾಜ ಪಾಟೀಲ, ಶಿವಪುತ್ರ ಗೊಂಡಿ, ಮುರುಗೇಂದ್ರ ಮಸಳಿ, ಶರಣಪ್ಪ ಮೇತ್ರಿ, ಧರೆಪ್ಪ ಅಂಜುಟಗಿ, ಬಸವರಾಜ ಹೂಗಾರ, ಮಾರುತಿ ಭೋವಿ, ಪ್ರಹ್ಲಾದ ಬರಗಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *