ಮರಣವೇ ಮಹಾನವಮಿಯಲ್ಲಿ ಜ್ಞಾನದೀಪ್ತಿಯ ತೈಲ ಗೋಷ್ಠಿ.
ಬೀದರ :
ಸಕಲ ಜೀವರಾಶಿಗಳಲ್ಲೇ ಆಲೋಚನಾ ಶಕ್ತಿ ಇರುವುದು ಮನುಷ್ಯನಿಗೆ ಮಾತ್ರ ಎಂದು ಚಿಂತಕಿ ಸಂಗೀತಾ ಆರ್. ಪಾಟೀಲ ಹೇಳಿದರು.

ಮರಣವೇ ಮಹಾನವಮಿ ಮಹೋತ್ಸವದ ನಾಲ್ಕನೆಯ ದಿನವಾದ ಬುಧವಾರ ನಗರದ ಬಸವಗಿರಿಯಲ್ಲಿ ನಡೆದ ಜ್ಞಾನ ದೀಪ್ತಿಯ ತೈಲ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮನುಷ್ಯನಿಗೂ-ಪ್ರಾಣಿಗಳಿಗೂ ಇರುವ ವ್ಯತ್ಯಾಸವೇ ಜ್ಞಾನ. ಅಂತೆಯೇ ಜ್ಞಾನ ಇಲ್ಲದವರನ್ನು ಪಶುವಿಗೆ ಸಮಾನ ಎನ್ನಲಾಗುತ್ತದೆ ಎಂದು ತಿಳಿಸಿದರು.
ಮನ, ಬುದ್ಧಿಗಳನ್ನು ಅರಳಿಸಲೆಂದು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದರು. ಅದೇ ಮಾದರಿಯಲ್ಲಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಭಾರತ ಮಂಟಪ ಸ್ಥಾಪಿಸಿರುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿ ಎಂದರು.

ಜ್ಞಾನದೀಪ್ತಿ ಎಂದರೆ ಜ್ಞಾನದ ಕಿರಣ. ಅದು ಪ್ರಜ್ವಲಿಸಬೇಕಾದರೆ ಶರಣ ನುಡಿಗಣದ ಎಣ್ಣೆ ಬಾಳಜ್ಯೋತಿಗೆ ಹಾಕುತ್ತಿರಬೇಕು ಎಂದು ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಜ್ಞಾನದ ಮಾತುಗಳು ಯಾರಿಂದಲೇ ಬರಲಿ, ಯಾವ ಬೆಲೆ ತೆತ್ತಾದರೂ ಪಡೆಯಬೇಕು. ನಾನೆಂಬ ಅಹಂಕಾರ ತೊರೆದು ಬಸವಾದಿ ಶರಣರಂತೆ ಒಳ್ಳೆಯ ಮಾತುಗಳನ್ನು ಆಡಬೇಕು, ಕೇಳಬೇಕು. ಲಿಂಗ ಮೆಚ್ಚಿ ಅಹುದಹುದು ಎನ್ನುವಂತೆ ಬಾಳಬೇಕು ಎಂದು ತಿಳಿಸಿದರು.
ಸುನೀತಾ ಚಿಂಚನಸೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೀಲಾ ಮೈನಾಳೆ ವಚನ ಪಠಣಗೈದು ಗೊಷ್ಠಿಯನ್ನು ಉದ್ಘಾಟಿಸಿದರು. ಶ್ಯಾಮಲಾ ಎಲಿ ಅಧ್ಯಕ್ಷತೆ ವಹಿಸಿದ್ದರು.

ಡಾ. ಪ್ರಿಯಾ ಎಲಿ ಹಾಗೂ ಪೂರ್ಣಚಂದ್ರ ಮೈನಾಳೆ ಅತ್ಯಾಕರ್ಷಕ ವಚನ ನೃತ್ಯ ಪ್ರದರ್ಶಿಸಿದರು. ವಿಜಯನಗರ ನೀಲಮ್ಮ ಬಳಗದ ಕೋಲಾಟ ಸಭಿಕರ ಗಮನ ಸೆಳೆಯಿತು.
ಸುಶೀಲಾ ಉಮೇಶ ಪಾಟೀಲ, ಇಂದುಮತಿ ಕಾಡವಾದೆ, ಮಹಾದೇವಿ ಬೆಳಕೋಟಿ ಮುಖ್ಯ ಅತಿಥಿಗಳಾಗಿದ್ದರು. ಕವಿತಾ ಕಾಡವಾದೆ, ಚಂದ್ರಕಲಾ ಪಾಟೀಲ ವಿಶೇಷ ಆಮಂತ್ರಿತರಾಗಿದ್ದರು.
ನೀಲಮ್ಮ ರೂಗನ್ ಹಾಗೂ ಮಹಾದೇವಿ ಮಠಪತಿ ಪ್ರಾರ್ಥನೆ ನಡೆಸಿಕೊಟ್ಟರು. ರೂಪಾ ಹಂಡೆ ಸ್ವಾಗತಿಸಿದರು. ಕೃತಿಕಾ ಪಾಟೀಲ ನಿರೂಪಿಸಿದರು. ಉಮಾ ರಿಕ್ಕೆ ಭಕ್ತಿ ದಾಸೋಹಗೈದರು.
