ಭದ್ರಾ ಮೇಲ್ದಂಡೆ ಯೋಜನೆಗೆ ₹21,000 ಕೋಟಿ ಅಗತ್ಯವಿದೆ: ಟಿ.ರಘುಮೂರ್ತಿ

ಬಸವ ಮೀಡಿಯಾ
ಬಸವ ಮೀಡಿಯಾ

‘ಭದ್ರಾ ನೀರಿಗೆ ನಡೆದ ಹೋರಾಟಕ್ಕೆ ಕೈ ಜೋಡಿಸಿದ ಮುರುಘಾ ಮಠ’

ಚಿತ್ರದುರ್ಗ:

ಶರಣ ಸಂಸ್ಕೃತಿ ಉತ್ಸವ-೨೦೨೬ ನಿಮಿತ್ತ ಮುರುಘಾಮಠದ ಅನುಭವ ಮಂಟಪದಲ್ಲಿ ಕೃಷಿ ಮೇಳದ ಅಂಗವಾಗಿ “ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿ ಪರಿಕಲ್ಪನೆ-ತ್ವರಿತ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಹೊಣೆಗಾರಿಕೆ “ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಸಮ್ಮುಖವನ್ನು ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ವಹಿಸಿ ಮಾತನಾಡಿ, “ಕೃಷಿಯೇ ಆಸ್ತಿ, ಕೃಷಿ ಚೆನ್ನಾಗಿದ್ದರೆ ಅಲ್ಲಿ ದುರ್ಭಿಕ್ಷ ಇರುವುದಿಲ್ಲ. ಚಿತ್ರದುರ್ಗ ಜಿಲ್ಲೆ ಹಲವು ವರ್ಷಗಳಿಂದ ಬರಗಾಲದ ಕಾರಣದಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಆದರೆ, ಇಂದು ಸಚಿವ ಟಿ. ರಘುಮೂರ್ತಿಯವರ ಬದ್ಧತೆ ಹಾಗೂ ಪ್ರಯತ್ನಗಳಿಂದ ಭದ್ರಾ ನದಿಯ ನೀರು ಚಿತ್ರದುರ್ಗಕ್ಕೆ ಹರಿದು ಬಂದಿದೆ. ಇದರಿಂದ ಭದ್ರಾ ಮೇಲ್ದಂಡೆ ಯೋಜನೆಯ ಪರಿಪೂರ್ಣತೆಯನ್ನು ಕಾಣಲು ಸಾಧ್ಯವಾಗಿದೆ.

ಗ್ಯಾರಂಟಿ ಯೋಜನೆಗಳ ಮೂಲಕವೂ ಜನರಿಗೆ ಹಲವು ರೀತಿಯ ಸಹಾಯವನ್ನು ಒದಗಿಸಲಾಗಿದೆ. ಚಿತ್ರದುರ್ಗದ ನೀರಾವರಿ ಯೋಜನೆಗೆ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು, ರೈತರ ಸಹಕಾರದೊಂದಿಗೆ ಕೆರೆಗಳಿಗೆ ನೀರು ತುಂಬಿಸಲು ಸಚಿವರು ಕಾರಣಕರ್ತರಾಗಿದ್ದಾರೆ,” ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಟಿ. ರಘುಮೂರ್ತಿ ಮಾತನಾಡಿ, “ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಳ್ಳಲು ಸ್ವಾಮೀಜಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ನಡೆಸಿದ ಹೋರಾಟ ಮತ್ತು ನೀಡಿದ ಸಹಕಾರ ಪ್ರಮುಖವಾಗಿದೆ. ಇಂದು ಈ ಯೋಜನೆಯಿಂದ ನಾಲ್ಕು ಜಿಲ್ಲೆಗಳ ೧೩ ತಾಲ್ಲೂಕುಗಳಿಗೆ ಅನುಕೂಲವಾಗುವಂತಾಗಿದೆ. ಈ ಯೋಜನೆಯಡಿ ೨೯.೯ ಟಿಎಂಸಿ ನೀರನ್ನು ಒದಗಿಸುವ ಗುರಿ ಹೊಂದಲಾಗಿದೆ. ನಾನು ಸಚಿವನಾಗುವ ಮೊದಲೇ ಈ ಯೋಜನೆಗೆ ಚಾಲನೆ ದೊರೆತಿತ್ತು. ಇಂದು ಎಲ್ಲರ ಸಹಕಾರದಿಂದ  ಯೋಜನೆ ಸಾಕಾರಗೊಳ್ಳುತ್ತಿದೆ.

ಈ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಮಹತ್ವದ್ದಾಗಿದೆ, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು.

ಪಕ್ಷದಲ್ಲಿದ್ದುಕೊಂಡು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು ಅಥವಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಾಗಲೂ ಜನರ ಹಿತವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನನ್ನ ಕ್ಷೇತ್ರದ ಜವಾಬ್ದಾರಿಯೇನು ಎಂಬುದನ್ನು ಅರಿತು ಕೆಲಸ ಮಾಡಬೇಕು. ಪಕ್ಷಾತೀತ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ, ಈ ಯೋಜನೆಗೆ ಸುಮಾರು ೨೧,೦೦೦ ಕೋಟಿ ರೂಪಾಯಿಗಳ ಅಗತ್ಯವಿದೆ.

೫೦೦೦ ಕೋಟಿ ಹಣ ಕೇಂದ್ರದಿಂದ ಬಂದರೆ ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಿ ಯೋಜನೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತದೆ. ಸುಮಾರು ೨೦,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ.

ನಾಲ್ಕು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೆರವು ಅತ್ಯಗತ್ಯವಾಗಿದೆ. ಎಲ್ಲರೂ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದರೆ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಅಭಿವೃದ್ಧಿ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯಲು ಸಮಗ್ರ ಯೋಜನೆ ಮತ್ತು ಸಂಘಟಿತ ಪ್ರಯತ್ನ ಅಗತ್ಯ. ತುಂಗಾ ನದಿಯಿಂದಲೂ ನೀರನ್ನು ತಂದು ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳುವ ಸಾಧ್ಯತೆಗಳ ಕುರಿತು ಚಿಂತನೆ ನಡೆಸಬಹುದು ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾಧಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ೧೯೯೬ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಲಾಯಿತು. ಆಗಿನ ಸಂದರ್ಭದಲ್ಲಿ ಈ ಯೋಜನೆ ಅಸಾಧ್ಯವೆಂಬ ಭಾವನೆ ಜನರಲ್ಲಿ ಇತ್ತು. ಆದರೆ ಇಂದು ನಮ್ಮ ಚಿತ್ರದುರ್ಗದ ಗೋನೂರು ಕೆರೆಗೆ ನೀರು ಹರಿದು ಬಂದಿದೆ. ಈ ಹೋರಾಟ ಪ್ರಾರಂಭವಾದಾಗ ಡೆಂಟಲ್ ಕಾಲೇಜಿನ ಕೊಠಡಿಯವೊಂದನ್ನು ಹೋರಾಟಕ್ಕಾಗಿ ಬಿಟ್ಟುಕೊಟ್ಟು ಅವಕಾಶ ನೀಡಿದ್ದು ಎಸ್.ಜೆ.ಎಂ. ವಿದ್ಯಾಪೀಠ.

ಅನೇಕ ಕೃಷಿ ಹೋರಾಟಗಾರರಾದ ಮಂಜುನಾಥ್, ಕೋದಂಡರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ಶಿವಪ್ರಕಾಶ್ ಜಯಣ್ಣ, ನುಲೆನೂರ್ ಶಂಕ್ರಪ್ಪ ಮುಂತಾದವರ ಹೋರಾಟದ ಫಲವಾಗಿ ವಾಣಿವಿಲಾಸ ಸಾಗರಕ್ಕೆ ಭದ್ರೆಯ ನೀರು ಹರಿದು ಬಂದಿತ್ತು, ಇದಕ್ಕೆ ೩೦ ಸಾವಿರ ಕೋಟಿ ಆಗಬಹುದೆಂಬ ಅಂದಾಜು ಲೆಕ್ಕಾಚಾರವಿತ್ತು. ಇದು ಈಗ ಸಾಧ್ಯವಾಗಿದೆ.

೨೦೧೪-೧೫ನೇ ಸಾಲಿನಲ್ಲಿ ಇದು ಸಮಗ್ರ ಯೋಜನೆಯಾಗಿ ಅಭಿವೃದ್ಧಿಗೆ ಸಹಾಯಕವಾಯಿತು. ಕರ್ನಾಟಕದಲ್ಲಿ ೯೭ ಬೆಳೆಗಳನ್ನು ಬೆಳೆಯುತ್ತಾರೆ. ಇದರಲ್ಲಿ ೩೩ ಪ್ರಮುಖ ಬೆಳೆಗಳಾಗಿವೆ. ಇದಕ್ಕೆ ರೈತರ ಮುಖಂಡರು ಹಾಗೂ ಜನ ಪ್ರತಿನಿಧಿಗಳ ಕೊಡುಗೆ ಅಪಾರ ಎಂದು ತಿಳಿಸಿದರು.

ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ಮಾತನಾಡಿ, ಚಿಕ್ಕಗೊಂಡನಹಳ್ಳಿಯಲ್ಲಿ ವಸತಿ ನಿಲಯವನ್ನು ನಿರ್ಮಿಸಲು ಹಾಗೂ ದಾಸೋಹ ಕೇಂದ್ರವನ್ನು ನಿರಂತರವಾಗಿ ನಡೆಸಲು ಅಗತ್ಯ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಅವರು ಮಾತನಾಡಿ, “ಶ್ರೀಮಠದ ಸ್ವಾಮೀಜಿಯವರು ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯವಾದ ಸಹಕಾರವನ್ನು ನೀಡಿದ್ದಾರೆ. ನಮ್ಮ ಸಚಿವರು ಮೂರು ತಾಲೂಕುಗಳಿಗೆ ಭದ್ರಾ ನದಿಯ ನೀರನ್ನು ಪ್ರಾಯೋಗಿಕವಾಗಿ ಹರಿಸುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ. ಇದೇ ರೀತಿಯ ಬದ್ಧತೆಯನ್ನು ಎಲ್ಲಾ ರಾಜಕಾರಣಿಗಳು ಅಳವಡಿಸಿಕೊಂಡರೆ, ಎಲ್ಲ ಯೋಜನೆಗಳನ್ನು ಸುಸೂತ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಸಮಾಜದ ಪ್ರಮುಖ ಕಾರ್ಯಗಳು ಯಶಸ್ವಿಯಾಗಲು ರಾಜಕೀಯ ವ್ಯಕ್ತಿಗಳ ಸಹಕಾರ ಅತ್ಯಗತ್ಯ,” ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ನಿವೃತ್ತ ಮುಖ್ಯ ಇಂಜಿನಿಯರ್ ಚೆಲುವರಾಜ ಮಾತನಾಡಿ, ಭದ್ರೆ ನೀರು ಹರಿಯಲು ಇಂಜಿನಿಯರಿಂಗ್ ಇಲಾಖೆ ಹಾಗೂ ಜನರ ಸಹಕಾರ ಅತಿ ಅಗತ್ಯವಾಗಿತ್ತು. ಇಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಭದ್ರೆ ನೀರು ಸಹಾಯಕವಾಗಿದೆ ಎಂದು ತಿಳಿಸಿದರು.

ರೈತ ಪ್ರತಿನಿಧಿ ಬಿ.ಲಿಂಗಾರೆಡ್ಡಿ ಮಾತನಾಡಿ ಭದ್ರಾ ಮೇಲ್ದಂಡೆಯಿಂದ ನಮ್ಮ ಭಾಗದ ಜನರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಶಿವಣ್ಣ ಅವರು ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದಲ್ಲಿ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ. ಎಲ್ಲರ ಸಹಕಾರದಿಂದಲೇ ಈ ಯೋಜನೆಯ ಕಾರ್ಯಗಳು ಪರಿಣಾಮಕಾರಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಆಡಳಿತಮಂಡಳಿಯ ಸದಸ್ಯರಾದ ಎಸ್.ಎಸ್. ಚಂದ್ರಶೇಖರ, ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರರಾದ ರವಿಶಂಕರ್, ಕರ್ನಾಟಕ ಸರ್ಕಾರದ ಕರ್ನಾಟಕ ರೈತ ಸಂಘದ ಅಧ್ಯಕ್ಷರಾದ ಈಚಘಟ್ಟದ ಸಿದ್ಧವೀರಪ್ಪ, ರೈತ ಮುಖಂಡರಾದ ಚಳ್ಳಕೆರೆಯ ರೆಡ್ಡಿಹಳ್ಳಿ ವೀರಣ್ಣ, ಕೆ.ಪಿ. ಭೂತಯ್ಯ, ಹಿರಿಯೂರಿನ ಸಿದ್ರಾಮಪ್ಪ, ಬಸ್ತಿಹಳ್ಳಿ ಸುರೇಶ್ ಬಾಬು, ದೊಡ್ಡಸಿದ್ದವನಹಳ್ಳಿ ಮಲ್ಲಿಕಾರ್ಜುನಪ್ಪ, ಶಾಂತ ಅಶೋಕ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ, ಕೆ ಸಿ ಹೊರಕೇರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೇಣುಕಾಪುರದ ಪ್ರಗತಿಪರ ರೈತರಾದ ನರಸಿಂಹಮೂರ್ತಿ, ಕೊಂಡ್ಲಹಳ್ಳಿ ಉಣ್ಣೆ ನೇಕಾರರಾದ ತಿಪ್ಪೇಸ್ವಾಮಿ, ಅಂದನೂರು ಪಶುಸಂಗೋಪಕರಾದ ರೇವಣ್ಣ,  ಮಾಡನಾಯಕನಹಳ್ಳಿಯ ಕೆ.ಎನ್. ತಿಪ್ಪೇಸ್ವಾಮಿ, ವರ್ಷ ಅಸೋಸಿಯೇಟ್ಸ್ ರಾಜು ಎಸ್. ವಿ, ರೇಷ್ಮೆ ಬೆಳೆಗಾರರಾದ ತಿಮ್ಮಕ್ಕ ತಿಪ್ಪೇಸ್ವಾಮಿ, ಲಕ್ಕಿಹಳ್ಳಿಯ ಲೋಕೇಶ್ ಡಿ, ಹಿರಿಯೂರಿನ ಕೌಶಿಕ್ ನಾಯ್ಡು ಅವರನ್ನು ಸನ್ಮಾನಿಸಲಾಯಿತು.

ಅಂಜನಾ ನೃತ್ಯ ಕಲಾಕೇಂದ್ರ ಮತ್ತು ನಾಟ್ಯರಂಜಿನಿ ನೃತ್ಯ ಕಲಾ ಕೇಂದ್ರ ಇವರಿಂದ ನೃತ್ಯ ಕಾರ್ಯಕ್ರಮ ನಡೆದವು. ಕೃಷಿ ಮೇಳದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಪೈಕಿ, ಡಾ. ಬಸವಕುಮಾರ ಸ್ವಾಮೀಜಿಯವರು ಬಹುಮಾನಗಳನ್ನು ಘೋಷಿಸಿದರು.

ಕೃಷಿ ಇಲಾಖೆಯು ಪ್ರಥಮ ಬಹುಮಾನ, ತೋಟಗಾರಿಕೆ ಇಲಾಖೆಯು ದ್ವಿತೀಯ ಬಹುಮಾನ ಹಾಗೂ ರೇಷ್ಮೆ ಇಲಾಖೆಯು ತೃತೀಯ ಬಹುಮಾನವನ್ನು ಪಡೆದುಕೊಂಡವು. ಜಿಲ್ಲಾ ಪಂಚಾಯತ್, ಚಿತ್ರದುರ್ಗ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತು.

ಕೃಷಿ ಮೇಳದ ಅಂಗವಾಗಿ ಜಿಲ್ಲಾ ಪಶು ಸಂಗೋಪನ ಮತ್ತು ವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಜೋಡೆತ್ತುಗಳ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನ ನಡೆಯಿತು. ಜೋಡೆತ್ತು ಹಾಗೂ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ೭೦ ಜೋಡೆತ್ತುಗಳು, ೧೫ ನಾಟಿಹಸುಗಳು, ಮಿಶ್ರತಳಿ ಜಾನುವಾರುಗಳು, ಟಗರುಗಳು, ಕೋಳಿ, ಹುಂಜ, ಪಾರಿವಾಳ ಪ್ರಾಣಿಗಳು ಪ್ರದರ್ಶನದಲ್ಲಿದ್ದವು.

ಜೋಡೆತ್ತು ಪ್ರದರ್ಶನದಲ್ಲಿ ಕೌಶಿಕ್ ನಾಯ್ಡು, ಪವನ್, ವಿನಯಕುಮಾರ, ಕಲ್ಲೇಶ, ಪಾಲಯ್ಯ, ಮಹೇಶ ಜಿ. ಟಿ. ಪ್ರಶಸ್ತಿಗೆ ಪಾತ್ರರಾದರು.

ಕೃಷಿಮೇಳದಲ್ಲಿ ಸ್ವದೇಶಿ ಖಾದಿ, ರೇಷ್ಮೆ ಇಲಾಖೆ, ಆಯುಷ್ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ, ಅಮೃತ್ ಆರ್ಗ್ಯಾನಿಕ್ ಸೇರಿದಂತೆ ಕೃಷಿಗೆ ಸಂಬಂಧಿಸಿದ ಹಲವಾರು ಮಳಿಗೆಗಳಿದ್ದವು.

ಜಮುರಾ ಕಲಾವಿದರು ಪ್ರಾರ್ಥಿಸಿ, ವಿರೇಂದ್ರಕುಮಾರ ಸ್ವಾಗತಿಸಿ, ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಹಾಗೂ ನವೀನ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *