ಬಸವ ಭಾಷೆ : ‘ಏನನ್ನೂ ವಂಚಿಸದ ಭಾಷೆ’

(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)

ಪೂಜ್ಯ ಪ್ರಭುದೇವ ಮಹಾಸ್ವಾಮಿಗಳು, ಲಿಂಗಾಯತ ಮಹಾಮಠ, ಬೀದರ

ಕೊಪ್ಪಳ :

12.04.2026

ಯಾವುದನ್ನೂ ಮೋಸ ಮಾಡದ ಜೀವನ ಅತ್ಯಂತ ಮುಖ್ಯ. ಆದರೆ ಅದನ್ನು ಅನುಸರಿಸುವುದು ಕಷ್ಟ. ಬಸವಣ್ಣನವರು ತನು ವಂಚನೆ, ಮನ ವಂಚನೆ, ಧನ ವಂಚನೆ ಎಂಬ ಮೂರು ವಿಧದ ವಂಚನೆಗಳನ್ನು ಮಾಡಬಾರದೆಂದು ಹೇಳಿದ್ದಾರೆ.

ವಂಚನೆ ಎಂದರೆ ಮೋಸ ಅಥವಾ ಸ್ವಾರ್ಥಕ್ಕಾಗಿ ಏನನ್ನಾದರೂ ಕಾಯ್ದಿಡುವುದು. ಸೇವೆ ಮಾಡುವಾಗ ದೇಹವನ್ನು ತೊಡಗಿಸದೇ ಇರುವುದು ತನು ವಂಚನೆ. ಮನದಲ್ಲಿ ಶುದ್ಧತೆ ಇಲ್ಲದೇ ಇರುವಿಕೆ ಮನ ವಂಚನೆ. ದಾಸೋಹ ಮಾಡದೇ ಧನವನ್ನು ಉಳಿಸಿಕೊಳ್ಳುವುದು ಧನ ವಂಚನೆ.

ಪ್ರಪಂಚದಲ್ಲಿ ನನ್ನದು ಎಂಬುದು ಯಾವುದೂ ಇಲ್ಲ. ನಾವು ಬದುಕಲು ಇರುವ ಭೂಮಿ, ಭೂಮಿ ಮೇಲಿರುವ ಸಸ್ಯಸಂಪತ್ತು, ಎಲ್ಲ ಹಳ್ಳ ಕೊಳ್ಳ ನದಿ ಸಾಗರ ಸಂಪತ್ತು, ಜೀವಂತ ಇರಬೇಕಾದರೆ, ಅನ್ನ ಬೇಯಿಸಲು ಇತ್ಯಾದಿ ಜೀವನದ ಅಗತ್ಯವಾಗಿರುವ ಬೆಂಕಿ, ಪರಿಸರ ಹಿತಕರವಾಗಿ ಸುಖಕರವಾಗಿ ಇರಲು ಮತ್ತು ಪ್ರಾಣವೇ ಆದ ಗಾಳಿ ಮೇಲಾಗಿ ವಿಶ್ವವೆಲ್ಲವೂ ದೇವನ ಕೊಡುಗೆ. ನಾವು ಮಾಡಬೇಕಾದುದು ದೇಹದಿಂದ ಕಾಯಕ ಮಾಡಬೇಕು. ಗುರುವಿಗೇ ತನುವನ್ನು ಕೊಡಬೇಕು ಅಂದರೆ ಶ್ರಮವರಿಯದೇ ಗುರುವಿನ ಸೇವೆ ಮಾಡಬೇಕು. ಲಿಂಗಕ್ಕೆ ಅಂದರೆ ದೇವನಿಗೆ ಮನಸಾಕ್ಷಿಯಾಗಿ ಅರ್ಪಣಾಭಾವ ಹೊಂದಿರಬೇಕು. ಜಂಗಮಕ್ಕೆ ಅಂದರೆ ಸಮಾಜಕ್ಕೆ ಧನವನ್ನು ಕೊಟ್ಟು ಸಾರ್ಥಕ ಜೀವನ ತಮ್ಮದಾಗಿಸಿಕೊಳ್ಳಬೇಕು.

ಇಂದಿನ ಜಗತ್ತಿನಲ್ಲಿ ಎಲ್ಲೆಡೆ ಮೋಸ ಹೆಚ್ಚಾಗಿದೆ. ಜನರು ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡಲು ಸಿದ್ಧರಾಗಿದ್ದಾರೆ. ಕೆಲವರು ಹಣಕ್ಕಾಗಿ ದೇಶದ ರಹಸ್ಯಗಳನ್ನೇ ಮಾರುವ ಮಟ್ಟಕ್ಕೆ ಹೋಗಿದ್ದಾರೆ. ಇದು ಅಪಾಯಕಾರಿ. ಎಲ್ಲರೂ ಪ್ರಾಮಾಣಿಕರಾಗಿದ್ರೆ ಮಾತ್ರ ಸಮಸ್ಯೆಗಳು ಕಡಿಮೆಯಾಗುತ್ತವೆ. ಸಮಯ, ಶ್ರಮ ಉಳಿಯುತ್ತದೆ. ಕಚ್ಚಾಟ, ಮೋಸ, ವಂಚನೆ ಇಲ್ಲದ ನೆಮ್ಮದಿಯ ಜೀವನ ಸಿಗುತ್ತದೆ. ಮಾತಿನಲ್ಲಿ ಮಾತ್ರ ಭಕ್ತಿ ತೋರದೇ ನಿಜವಾದ ಭಕ್ತಿ ಹೊಂದಿರಬೇಕು. ಸ್ವಾರ್ಥವಿಲ್ಲದೆ ಸಮಾಜದ ಹಿತಕ್ಕಾಗಿ ಬದುಕುವುದು ಬಸವಾದಿ ಶರಣರ ಆಶಯವಾಗಿದೆ.

ನಾವು ಅರ್ಥವಿಲ್ಲದ, ಸರಿ ತಪ್ಪು ಅರಿಯದ, ಅಗತ್ಯ-ಅನಗತ್ಯ ತಿಳಿಯದ ನಿಯಮಗಳನ್ನು ಜೀವನದಲ್ಲಿಅನುಸರಿಸುತ್ತೇವೆ. ಉಪ್ಪು ಬಿಡುವ, ತುಪ್ಪ ಬಿಡುವ, ಜಡೆ ಬಿಡುವ, ಉರುಳು ಸೇವೆಗೈವ, ಕುರಿ ಕೋಳಿ ಬಲಿ ಕೊಡುವ, ಬರಿಗಾಲಲ್ಲಿ ನಡೆವ, ಎಣ್ಣೆ ಹಚ್ಚದ, ಬೆಣ್ಣೆ ಉಣ್ಣದ ವ್ಯರ್ಥ ನೇಮಗಳಿಂದೇನು ಪ್ರಯೋಜನ? ಸ್ವಾರ್ಥಕ್ಕಾಗಿ ಇನ್ನೊಬ್ಬರಿಗೆ ಮೋಸ ವಂಚನೆ ಮಾಡದ, ಸಮಾಜದ ಹಿತಕ್ಕಾಗಿ ನಿರ್ವಂಚನೆಯಿಂದ ನೀಡುವ ನೇಮ ಕೈಕೊಳ್ಳಬೇಕು. ಪ್ರತಿಯೊಬ್ಬರು ಈ ನೇಮಕ್ಕೆ ಒಳಪಟ್ಟಾಗ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯವೆಂದು ಬಸವಾದಿ ಶರಣರು ಬೋಧಿಸಿದ್ದಾರೆ.

ಸಮಾಜದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿಗಬೇಕಾದರೆ, ಸತ್ಯ ಪ್ರಾಮಾಣಿಕತೆಯಿಂದ, ಮಾತು-ನಡೆ ಒಂದೇ ಆಗಿ, ಸಮಾಜದ ಹಿತವೇ ನಮ್ಮ ಹಿತವೆಂದು ನಂಬಿ, ಆತ್ಮಸಾಕ್ಷಿಗನುಗುಣವಾಗಿ ವಂಚನೆಯಿಲ್ಲದೇ ನಡೆದುಕೊಳ್ಳುವುದೇ “ಏನನ್ನೂ ವಂಚಿಸದ ಭಾಷೆ”ಬಸವಣ್ಣನವರದಾಗಿತ್ತು. ಅವರ ಉಪದೇಶ, ಸಂದೇಶಗಳಿಗೆ ಅನುಗುಣವಾಗಿ ನಾವೆಲ್ಲರೂ ನಡೆದಿದ್ದೇ ಆದರೆ ಸಕಲಜೀವಾವಳಿಗೆ ಲೇಸಾಗುವ ಕಲ್ಯಾಣ ರಾಜ್ಯ ನಿರ್ಮಾಣವಾಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *