ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ ಪರಿಚಯ ಅತ್ಯಗತ್ಯ
ಬಸವಕಲ್ಯಾಣ:
ನಗರದ ಶಾಂತಿನಿಕೇತನ ಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸುತ್ತೂರು ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 111ನೇ ಜಯಂತಿ ಹಾಗೂ ಲಿಂಗೈಕ್ಯ ಕಾಶಮ್ಮಾ ರಾಮಲಿಂಗಯ್ಯಾ ಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ ಅವರು, ವಿದ್ಯಾರ್ಥಿ ಜೀವನದಲ್ಲಿ ವಚನ ಸಾಹಿತ್ಯದ ಪರಿಚಯ ಮತ್ತು ಅಧ್ಯಯನ ಅತ್ಯಂತ ಅವಶ್ಯಕವಾಗಿದೆ, ವಚನಗಳು ಬದುಕಿಗೆ ದಾರಿದೀಪ ಎಂದು ಅಭಿಪ್ರಾಯಪಟ್ಟರು.

ವಚನ ಸಾಹಿತ್ಯವು ಕೇವಲ ಧಾರ್ಮಿಕ ಸಾಹಿತ್ಯವಲ್ಲ, ಅದು ಬದುಕುವ ಕಲೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರ ವಚನಗಳು ವೈಜ್ಞಾನಿಕ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬೆಳೆಸುತ್ತವೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ಹೊರಬಂದು ವಚನಗಳತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಂತಿನಿಕೇತನ ಶಾಲೆಯ ಮುಖ್ಯ ಗುರುಗಳಾದ ಚೆನ್ನವೀರ ಕೆ. ಬಿರಾದಾರ ಅವರು ಮಾತನಾಡಿ, ಶರಣರ ತತ್ವಗಳು ಶಾಲಾ ಪಠ್ಯದ ಭಾಗವಾಗಬೇಕು ಎಂದರು.

ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ ಪರಿಚಯ ಮತ್ತು ಅವಶ್ಯಕತೆ ಎಂಬ ವಿಷಯದ ಕುರಿತು ನಿವೃತ್ತ ಉಪನ್ಯಾಸಕರಾದ ಶ್ರೀ ಶೈಲ ಹುಡೆದ ಅವರು ದತ್ತಿ ಉಪನ್ಯಾಸ ನೀಡಿದರು.
ಅವರು ಮಾತನಾಡಿ, 12ನೇ ಶತಮಾನದ ವಚನಗಳು ಇಂದಿಗೂ ಪ್ರಸ್ತುತ. ಸಮಾನತೆ, ಕಾಯಕ, ದಾಸೋಹ ತತ್ವಗಳು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ವಿವರಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗುರುನಾಥ ಗಡ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
