ಬೆಂಗಳೂರು
ಮೂರು ವರ್ಷಗಳ ಕಾಲ ನಿರ್ಮಾಣದ ಕಾರ್ಯ ಬಹುತೇಕ ಸಂಪೂರ್ಣವಾಗಿದ್ದರೂ ಮುಸುಕಿನಲ್ಲಿಯೇ ನಿಂತಿದ್ದ ಬಸವ ಪುತ್ಥಳಿ ಕೊನೆಗೂ ಅನಾವರಣಗೊಂಡಿದೆ. ಸ್ಥಳೀಯ ರಾಜಕಾರಣಿಗಳ ನಿರ್ಲಕ್ಷ್ಯದ ವಿರುದ್ಧ ನಿರಂತರವಾಗಿ ಧ್ವನಿಯೆತ್ತಿದ್ದ ಬಸವ ಸಂಘಟನೆಗಳ ಹೋರಾಟ ಕೊನೆಗೂ ಫಲ ನೀಡಿದೆ.
ನವರಂಗ ಮುಖ್ಯರಸ್ತೆಯಲ್ಲಿ ಬಸವ ಮಂಟಪದ ಹತ್ತಿರ ಸ್ಥಾಪಿತವಾಗಿರುವ ಕಂಚಿನ ಪುತ್ತಳಿ ಸರಿಯಾದ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಮಾಸಿ, ಅಲ್ಲಲ್ಲಿ ಬಿರುಕು ಕೂಡ ಬಿಟ್ಟುಕೊಂಡಿದ್ದು ಬಸವ ಅಭಿಮಾನಿಗಳನ್ನು ಕೆರಳಿಸಿತ್ತು. ಕೆಲವು ತಿಂಗಳ ಹಿಂದೆ ಹೊದಿಸಿದ ಬಟ್ಟೆ ಹರಿದು ಚಿಂದಿಯಾಗಿ ಬಸವಣ್ಣನವರ ಮುಖ ಮುಚ್ಚುವಷ್ಟು ಮಾತ್ರ ಉಳಿದುಕೊಂಡಿತ್ತು.
ಲೋಕಾರ್ಪಣೆ ವಿಳಂಬವಾಗುತ್ತಿರುವ ವಿಷಯದಲ್ಲಿ ರಾಜ್ಯಪಾಲರಿಗೆ ದೂರನ್ನೂ ನೀಡಲಾಗಿತ್ತು. ದೂಳುಹಿಡಿದು ಮಾಸುತ್ತಿರುವ ಬಸವ ಪುತ್ತಳಿ ನೋವಿನ ಸಂಗತಿ ಎಂದು ಸಿದ್ದಗಂಗಾ ಶ್ರೀಗಳು ಪತ್ರವನ್ನೂ ಬರೆದ್ದಿದ್ದರು.
ಬಸವ ಜಯಂತಿಗೆ ಪುತ್ಥಳಿ ಲೋಕಾರ್ಪಣೆ ಆಗದಿದ್ದರೆ ನಾವೇ ಮಾಡುತ್ತೇವೆ: ಎಂದು ಬಸವ ಸಂಘಟನೆಗಳು ಎಚ್ಚರಿಕೆಯನ್ನೂ ನೀಡಿದ್ದವು.
ಕೊನೆಗೂ, ಅನೇಕ ವರ್ಷಗಳ ವಿಳಂಬದ ನಂತರ ಬಸವ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿವಾರ ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣಗೊಂಡಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಮಾತನಾಡಿ ಕಾಯಕಯೋಗಿ ಬಸವಣ್ಣ ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ, ಸಮ ಸಮಾಜದ ನಿರ್ಮಾಣ ಮಾಡಿದರು. ಯುವ ಪೀಳಿಗೆಗೆ ಬಸವೇಶ್ವರ ಸಿದ್ದಾಂತಗಳು ದಾರಿದೀಪವಾಗಲಿ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬಸವಣ್ಣ ಅವರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು. ಸರ್ವ ಸಮುದಾಯದ ನಾಯಕ. ಜ್ಞಾನಿಗಳು, ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು ಪುಟಗಟ್ಟಲೆ ಹೇಳುವುದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ನಾಲ್ಕೈದು ಸಾಲಿನಲ್ಲಿ ತಿಳಿಸಿದ ಮಹಾನ್ ನಾಯಕ ಬಸವಣ್ಣ’ ಎಂದರು.

‘ಕೆಂಪೇಗೌಡರು ಎಲ್ಲಾ ವರ್ಗಗಳಿಗೆ ಬೆಂಗಳೂರು ಕಟ್ಟಿದಂತೆ ಬಸವಣ್ಣ ಅವರು ಎಲ್ಲಾ ವರ್ಗಗಳ ಏಳಿಗೆಗೆ ಸಂದೇಶ ನೀಡಿದರು’ ಎಂದರು.
ಬಸವಣ್ಣನ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆ ಪಾಲನೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟರು.

‘ಅಸಮಾನತೆ, ಕಂದಾಚಾರ, ಅಸ್ಪೃಶ್ಯತೆ, ಮೌಢ್ಯತೆ ಇದ್ದ 850 ವರ್ಷಗಳ ಹಿಂದೆ ಬಸವಣ್ಣ ಅವರು ಶ್ರೇಣಿರಹಿತ ಸಮ ಸಮಾಜದ ಕನಸು ಕಂಡಿದ್ದರು. ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಬೇಕೆಂದು ಪ್ರತಿಪಾದಿಸಿದ್ದರು. ಸಮ ಸಮಾಜದ ಅವರ ಕನಸನ್ನು ನನಸಾಗಿಸಬೇಕು’ ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಬಸವೇಶ್ವರ ನಗರದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆ ಆಗಿರುವುದು ಅರ್ಥಪೂರ್ಣವಾಗಿದೆ. ಬಸವಣ್ಣನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಸುರೇಶ್ ಕುಮಾರ್ ಹಾಜರಿದ್ದರು.

ಸಮಿತಿ ಅಧ್ಯಕ್ಷ ಸಿ.ಸೋಮಶೇಖರ್ ಅವರ ‘ಮಾತೆಂಬುದು ಜ್ಯೋತಿರ್ಲಿಂಗ’ ಕೃತಿಯನ್ನು ಶಾಸಕ ಗೋಪಾಲಯ್ಯ ಬಿಡುಗಡೆ ಮಾಡಿದರು. ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ, ಶಿಲ್ಪಿ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಪ್ರಧಾನ ಸಂಚಾಲಕ ಎಚ್.ಆರ್.ಮಲ್ಲಿಕಾರ್ಜುನಯ್ಯ ಹಾಜರಿದ್ದರು.
Nice work
You should invite v somanna minister this you people made mistake sir
ಲಿಂಗಾಯತ ಸಮುದಾಯದ ಸಾಕಷ್ಟು ಮಂತ್ರಿಗಳು ಇದ್ದರೂ ಬಸವಣ್ಣ ಮೂರ್ತಿಗೆ ಮೋಕ್ಷ ಸಿಗಲು 2-3 ವರ್ಷ ಕಾಯ ಬೇಕಾಯಿತು. ಅದೇ ಟಿಪ್ಪು ಸುಲ್ತಾನ್ ನ ಮೂರ್ತಿ ಆಗಿದ್ದರೆ ಸಿದ್ದರಾಮಯ್ಯ ಯಾವಾಗಲೋ ಸ್ವತಃ ಮಾಡತ್ತಿದ್ದರು
ತಡವಾದರೂ ವ್ಯವಸ್ಥಿತವಾಗಿ ಆಯಿತಲ್ಲ ಅದುವೇ ಖುಷಿ ತಂದಿದೆ