ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಚಾಮರಾಜನಗರ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಾಮರಾಜನಗರ
ಲಿಂಗಾಯತ ಸಮಾಜ, ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳುವ ಅಗತ್ಯವಿದೆ. ಸಮಾಜದ ಅಗತ್ಯಗಳಿಗೆ ಸ್ಪಂದಿಸುವಂತೆ ಎಲ್ಲಾ ಪಕ್ಷ, ಅಭ್ಯರ್ಥಿಗಳ ಮೇಲೆ ಒತ್ತಡ ತರುವಂತಹ ಕೆಲಸವಾಗಬೇಕು.
ಇಂದು ರಾಜಕಾರಣಿಗಳು ಅಧಿಕೃತವಾಗಿ ಪಕ್ಷ ಹೇಳಿದ್ದನ್ನೇ ಮಾಡಬೇಕಾಗುತ್ತದೆ. ಆದರೆ ವೈಯಕ್ತಿಕವಾಗಿ, ಖಾಸಗಿಯಾಗಿ ಭೇಟಿ ಮಾಡಿದಾಗ ಎಲ್ಲರೂ ಸಮಾಜಕ್ಕೆ ಸ್ಪಂದಿಸುತ್ತಾರೆ. ಅವರು ಯಾವ ಪಕ್ಷದಲ್ಲಿದ್ದರೂ ಸರಿಯಾದ ಜಾಗೃತಿ ಮೂಡಿಸಿ, ಒತ್ತಡ ತಂದು ಕೆಲಸ ಮಾಡಿಸಿಕೊಳ್ಳಬಹುದು ಎಂದು ಇದು ತೋರಿಸುತ್ತದೆ.
ಬಸವ ಶಕ್ತಿಯ ರಾಜಕೀಯ ತರಬೇತಿ ಶಿಬಿರಗಳು ಮತದಾರರಿಗೂ, ಕಾರ್ಯಕರ್ತರಿಗೂ ಈ ಕೆಲಸ ಮಾಡುವಂತೆ ಶಕ್ತಿ ತುಂಬಲಿ.
ನಮ್ಮದು ಬಹಳ ಬಡವರು, ರೈತರು ಇರುವ ಸಮಾಜ. ಇಲ್ಲಿ ನೂರಾರು ಸಮಸ್ಯೆಗಳಿವೆ. ಇವರಿಗೆಲ್ಲಾ ನೆರವಾಗುವಂತಹ ಯೋಜನೆ, ಬೇಡಿಕೆಗಳಿಗೆ ಆದ್ಯತೆ ಕೊಡಬೇಕು. ರಾಜಕಾರಣಿಗಳಿಗೆ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಏನು ಕೆಲವಾಗುತ್ತಿದೆ? ಅದಕ್ಕೆ ಎಷ್ಟು ಅನುಧಾನ ಕೊಡುತ್ತಿದ್ದಾರೆ? ಮೀಸಲಾತಿ ಹೋರಾಟ ಹೇಗೆ ಮುಂದುವರೆಸಬೇಕು? ಇಂತಹ ಅನೇಕ ಪ್ರಶ್ನೆಗಳಿವೆ.
ಬಸವ ಶಕ್ತಿ ಶಿಬಿರ, ಸಮಾವೇಶಗಳಿಗೆ ನಮ್ಮ ಬೆಂಬಲವಿದೆ. ನಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ನಿಮಗೆ ಸ್ವಾಗತವಿದೆ.
ಚಾಮರಾಜನಗರದಲ್ಲಿ ಹೋಬಳಿ ಮಟ್ಟದಲ್ಲಿ ಸಂಘಟನೆ ಬೆಳೆಯುತ್ತಿದೆ. ಸದ್ಯದಲ್ಲೇ 500 ಜನ ಸೇರಿಸಿ ಸಮಾಜದ ಸಮಸ್ಯೆಗಳನ್ನು ಚರ್ಚಿಸುತ್ತೇವೆ.
ನಂತರ ಗ್ರಾಮಗಳಲ್ಲಿ ಲಿಂಗಧಾರಣೆ ಕಾರ್ಯಕ್ರಮ ಇಟ್ಟು ಕೊಳ್ಳುತ್ತೇವೆ. ಜಿಲ್ಲೆಯಲ್ಲಿ ಯುವಕರ ಸಮಾವೇಶವನ್ನೂ ಮಾಡುತ್ತೇವೆ. ನೀವೂ ಈ ಕಾರ್ಯಕ್ರಮಗಳ ಜೊತೆ ಸೇರಿಕೊಳ್ಳಬಹುದು.
ರಾಜಕೀಯ ಪ್ರಜ್ಞೆ ಬೆಳೆದರೆ ಸಮಾಜ ಗಟ್ಟಿಯಾಗುತ್ತದೆ. ಸಮಾಜದಲ್ಲಿರುವ ಬಿರುಕುಗಳನ್ನೂ ಮರೆತು ಒಗ್ಗಟ್ಟಿನಿಂದ ನಡೆಯಬಹುದು. ನಮಗೆಲ್ಲರಿಗೂ ಬಸವಣ್ಣನವರೇ ಮುಖ್ಯ. ಬಸವಣ್ಣನವರ ಪುತ್ಥಳಿಗೆ ವರ್ಷಾನುಗಟ್ಟಲೆ ಹೋರಾಟ ಮಾಡಿದ್ದೇವೆ. ಈಗ ಒಂಬತ್ತು ಕೋಟಿ ವೆಚ್ಚದಲ್ಲಿ ಬಸವ ಭವನ ಕಟ್ಟಿಸುತ್ತಿದ್ದೇವೆ.
ಪಕ್ಷಭೇದವಿಲ್ಲದೆ ಕೆಲಸ ಮಾಡುವುದನ್ನೂ ಕಲಿಯಬೇಕು. ಪಂಚಾಯತಿ ಚುನಾವಣೆಗಳು ಪಕ್ಷಾತೀತವಾಗಿಯೇ ನಡೆಯುತ್ತವೆ. ಅಲ್ಲಾದರೂ ಪಕ್ಷ ರಾಜಕೀಯ ಬಿಟ್ಟು ಅಭ್ಯರ್ಥಿಗಳ ಯೋಗ್ಯತೆ ನೋಡಿ ಬೆಂಬಲಿಸಬಹುದು.

ಚಾಮರಾಜನಗರ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ನಂದೀಶಣ್ಣ ನವರಿಗೆ ಶರಣಾರ್ಥಿಗಳು