ಸಿದ್ದೇಶ್ವರ ಗ್ರಾಮದಲ್ಲಿ ಶ್ರಾವಣ ಸಂಭ್ರಮ
ಭಾಲ್ಕಿ:
ಬಸವತತ್ವ ಆಚರಣೆಗಳು ಎನ್ನುವುದು ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಸಮಾನತೆ, ಕಾಯಕ ಮತ್ತು ದಾಸೋಹದ ಆಧಾರದ ಮೇಲೆ ರೂಪಿತವಾದ ವೈಚಾರಿಕ ಜೀವನ ಪದ್ಧತಿಯಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಸಿದ್ದೇಶ್ವರ ಗ್ರಾಮದಲ್ಲಿ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಪ್ರವಚನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರ ತತ್ವಗಳು ಮತ್ತು ಸಿದ್ಧಾಂತಗಳು ಮನುಕುಲಕ್ಕೆ ಸಮಾನತೆ, ಕರುಣೆ ಹಾಗೂ ಸರಳತೆಯ ದಾರಿಯನ್ನು ತೋರಿಸುತ್ತವೆ. ಕಾಯಕವೇ ಕೈಲಾಸ, ಸಮಾನತೆ, ದಾಸೋಹ ತತ್ವ, ಅಹಿಂಸೆ ಮತ್ತು ಕರುಣೆ, ಮೂಢನಂಬಿಕೆ ವಿರೋಧ, ಅವರ ತತ್ವಾದರ್ಶಗಳು ಅಂದು-ಇಂದು-ಮುಂದೆ ಎಂದಿಗೂ ಪ್ರಸ್ತುತವಾಗಿವೆ.
ಇಂದಿನ ದಿನಮಾನಗಳಲ್ಲಿ ಒಳಗಣ ರಣರಂಗ ಹೊರಗಣ ಶೃಂಗಾರ ಆಗುತ್ತಿದೆ. ಮನುಷ್ಯನು ಹೊರನೋಟಕ್ಕೆ ಮಾತ್ರ ಒಳ್ಳೆಯವನಂತೆ, ನಟಿಸುತ್ತಿದ್ದಾನೆ. ಆದರೆ ಆತನ ಮನಸ್ಸಿನ ಒಳಗೆ ಷಡ್ವರ್ಗಗಳ ದೊಡ್ಡ ಯುದ್ಧವೇ ನಡೆಯುತ್ತಿದೆ.

ಹೊರಗೆ ಸಾಚಾತನ ತೋರಿಸಿ ಒಳಗೆ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಳ್ಳದೇ ಒಳ-ಹೊರಗೂ ಒಂದೇ ರೀತಿಯಿಂದ ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರು, ಪ್ರಮುಖರಾದ ಸೋಮನಾಥ ಅಷ್ಟೂರೆ, ಡಾ. ಮಲ್ಲಿಕಾರ್ಜುನ ಬುಕ್ಕಾ, ಜಯಕುಮಾರ ಪಾಟೀಲ ಯರನಳ್ಳಿ, ರಮೇಶ ಬಿರಾದಾರ ಚಿಟ್ಟಾ, ವಿಜಯಕುಮಾರ ಬಾಬಣೆ, ಕಂಟೆಪ್ಪ ಗಂದಿಗುಡಿ, ಚಂದ್ರಶೇಖರ ಹೆಬ್ಬಾಳೆ, ಪ್ರಭು ಮಡಿವಾಳ, ಸಂತೋಷ ಪಾಟೀಲ, ಸದಾನಂದ ಕಂದಗೂಳೆ, ಬಸವರಾಜ ದುಖಾನದಾರ, ಶ್ರೀನಿವಾಸ ಬಾಳೆ, ಬಸವರಾಜ ಉಂಡೆ, ಗಾಳೆಪ್ಪ ಖಂಡ್ರೆ, ಭಕ್ತರಾಜ ಖಂಡ್ರೆ, ರಾಜಕುಮಾರ ಬ್ಯಾಲಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.
ಉದ್ಯಮಿ ಜೈರಾಜ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಾಂತಾ ಜೈರಾಜ ಖಂಡ್ರೆ ಹಾಗೂ ಕಂಟೆಪ್ಪ ಗಂದಿಗೂಡೆ ಅವರಿಂದ ವಚನ ಪ್ರಾರ್ಥನೆ ಜರುಗಿತು. ಸುರೇಶ ಸ್ವಾಮಿ ನಿರೂಪಿಸಿದರು.
ನಂತರ ಭಾಲ್ಕಿ ಶ್ರೀಮಠದ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ನಡೆದ ಬಸವ ಆಸ್ತಿ ರೂಪಕ ನೋಡುಗರ ಮನ ರಂಜಿಸಿತು. ಶಾಂತಾ ಜೈರಾಜ ಖಂಡ್ರೆ ದಂಪತಿಗಳಿಂದ ಭಕ್ತಿದಾಸೋಹ ಜರುಗಿತು.
