ಬಸವಣ್ಣನವರ ವಿಚಾರಗಳು ಅಂದಿಗಿಂತ ಇಂದು ಪ್ರಸ್ತುತ: ಹಂಪನಗೌಡ ಬಾದರ್ಲಿ
ಸಿಂಧನೂರು :
ಬಸವಣ್ಣನವರ ವಿಚಾರ ತತ್ವಗಳು ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಹೇಳಿದರು.
ನಗರದ ಬಸವಪರ ಸಂಘಟನೆಗಳು ಹಮ್ಮಿಕೊಂಡಿರುವ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಬಸವಣ್ಣನವರ ವಿಚಾರಗಳು ನಾಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಪ್ರಚಾರವಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆ.
ಅವರು ಅನುಭವ ಮಂಟಪದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಹೊಸ ಸಮಾಜ ಕಟ್ಟಲು ಬಯಸಿದರು.
ಅವರ ಸ್ತ್ರೀ ಸಮಾನತೆ ಹಾಗೂ ಸಮಸಮಾಜ ನಿರ್ಮಾಣದ ಕನಸು ಈಡೇರಬೇಕು. ಅದಕ್ಕಾಗಿ ಸಿಂಧನೂರಿನಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿ. ಈಗಾಗಲೇ ಸಿ.ಎ. ನಿವೇಶನ ಮಂಜೂರು ಮಾಡಿ 50 ಲಕ್ಷ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ.

ಇದೇ ಬಸವ ಜಯಂತಿಯಂದು ಭೂಮಿ ಪೂಜೆಯನ್ನು ಸುವರ್ಣಗಿರಿ ವಿರಕ್ತಮಠದ ಪೂಜ್ಯ ಡಾ. ಸಿದ್ದಲಿಂಗ ಮಹಾಸ್ವಾಮಿಗಳು, ಹಾಗೂ ಯದ್ದಲದೊಡ್ಡಿ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಭೂಮಿ ಪೂಜೆಯನ್ನು ಮಾಡಲಾಗುವುದು ಎಂದರು.
ಮುಂದಿನ ದಿನಮಾನಗಳಲ್ಲಿ ಕಟ್ಟಡ ಭವ್ಯ ಮಂಟಪವಾಗಿ ನಿರ್ಮಾಣವಾಗಲಿದೆ. ಅಲ್ಲಿ ನಿರಂತರ ಬಸವಾದಿ ಶರಣರ ವಿಚಾರಗಳ ಚಿಂತನ-ಮಂಥನ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಬೇಕು ಎಂದು ಹೇಳಿದರು.
ನಗರದ ಬಸವ ವೃತ್ತಕ್ಕೆ ಹೊಸ ರೂಪ ನೀಡಲು ಯೋಚನೆ ಮಾಡಲಾಗುವುದು, ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಶೀಘ್ರವಾಗಿ ತೀರ್ಮಾನ ಕೈಕೊಳ್ಳುವುದಾಗಿ ಭರವಸೆಯನ್ನು ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಪಿ. ರುದ್ರಪ್ಪ ಕುರುಕುಂದ ಮಾತನಾಡುತ್ತಾ, ಮಾನ್ಯ ಶಾಸಕರಾದ ಹಂಪನಗೌಡ ಬಾದರ್ಲಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದರೊಂದಿಗೆ ಬಸವಣ್ಣನವರ ವಿಚಾರಗಳನ್ನು 11 ದಿನಗಳ ಕಾಲ ನಡೆಯುವ ಪ್ರವಚನದಲ್ಲಿ ಸಾಧ್ಯವಾದಷ್ಟು ಜನರಿಗೆ ತಲುಪಿಸುವ ಕೆಲಸ ಪ್ರವಚನಕಾರರಾದ ಡಾ. ಗುರುಲಿಂಗ ಮಹಾಸ್ವಾಮಿಗಳು ಅಕ್ಕಿಮಠ, ಅಗಡಿ ಅವರು ಮಾಡಲಿದ್ದಾರೆ. ನಗರದ ಶರಣ ತಂದೆ ತಾಯಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಎಂ. ಪಾಟೀಲ ಅನ್ನದಾನೇಶ್ವರ ಆಸ್ಪತ್ರೆ ಇವರು ಮಾತನಾಡುತ್ತಾ, ಮಾನ್ಯ ಶಾಸಕರ ಬಸವಪ್ರೇಮವನ್ನು ಕೊಂಡಾಡಿದರು. ಶಿವಶರಣರ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಕಾಯಕ ತತ್ವ ಹಾಗೂ ಮಾನವೀಯ ಮೌಲ್ಯವನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ಪ್ರವಚನಕಾರರಾದ ಪೂಜ್ಯ ಡಾ. ಗುರುಲಿಂಗ ಮಹಾಸ್ವಾಮಿಗಳು ಮಾತನಾಡುತ್ತಾ, ಮುಂದಿನ 10 ದಿನಗಳ ಪರ್ಯಂತರ 12ನೇ ಶತಮಾನದ ಬಸವೇಶ್ವರರ ವಿಚಾರಗಳನ್ನು ಈ ವೇದಿಕೆಯ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಆಶಯದ ನುಡಿಗಳನ್ನು ನುಡಿದರು. ಪ್ರಾಸ್ತಾವಿಕವಾಗಿ ಬಸವಲಿಂಗಪ್ಪ ಬಾದರಲಿ ಮಾತನಾಡುತ್ತಾ, ಹರ್ಡೇಕರ್ ಮಂಜಪ್ಪನವರಿಂದ 1913ರಿಂದ ಆರಂಭವಾದ ಬಸವ ಜಯಂತಿ ಆಚರಣೆ ಕಾರ್ಯಕ್ರಮ ಇಂದು ವಿದೇಶಗಳಲ್ಲಿಯೂ ಪಸರಿಸಿದೆ. ವಚನ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಸರಕಾರ 25 ಎಕರೆ ಭೂಮಿ ನೀಡುವುದರೊಂದಿಗೆ ಪುನಃ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಭಕ್ತಿ ಮತ್ತು ಗೌರವವನ್ನು ಸಲ್ಲಿಸಿದೆ ಎಂದು ನುಡಿದರು.
ವೇದಿಕೆಯಲ್ಲಿ ಮುಖಂಡರಾದ ಅಮರೇಗೌಡ ವಿರುಪಾಪುರ, ಸೋಮನಗೌಡ ಬಾದರ್ಲಿ, ನಿಜಗುಣ ಹಡಪದ, ಡಾ. ಅನ್ನಪೂರ್ಣ ವಿಶ್ವನಾಥರೆಡ್ಡಿ, ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ಸುಮಂಗಲ ಎಸ್. ಚಿಂಚರಕಿ ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶರಣ ಬಸವರಾಜ್ ಪಿ. ಕುರಕುಂದ ಸ್ವಾಗತಿಸಿದರು. ಸಮಿತಿಯ ಸಂಚಾಲಕರಾದ ಚಂದ್ರೇಗೌಡ ಹರೇಟನೂರ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಮಾರು 600ಕ್ಕಿಂತ ಹೆಚ್ಚಿನ ಬಸವ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಚನ ದೀವಿಗೆ, ಪಾದಯಾತ್ರೆ:

ಜಯಂತಿ ಅಂಗವಾಗಿ ಎಪ್ರೀಲ್ 10ರಿಂದ 10ದಿನಗಳ ಕಾಲ “ಶರಣರ ಮನೆಗೆ ವಚನ ದೀವಿಗೆ, ವಚನ ಪಠಣ ಪಾದಯಾತ್ರೆ” ಹಮ್ಮಿಕೊಳ್ಳಲಾಗಿದೆ. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ಸಾನಿಧ್ಯ, ಅಗಡಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಯಾತ್ರೆ ನಡೆಯುತ್ತಿದೆ. ಬಸವಪರ ಸಂಘಟನೆಗಳ ಪ್ರಮುಖರು, ಸದಸ್ಯರು ಇದರಲ್ಲಿ ಇರುತ್ತಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga
