ಬಸವ ಶಕ್ತಿ ಸಮಾವೇಶ: ಸಾವಿರಾರು ಸಂಖ್ಯೆಯಲ್ಲಿ ಬರುತ್ತೇವೆ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.

ಇಂದು ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.

ಈ ಸಾಧ್ಯತೆಯ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ‘ಬಸವ ಶಕ್ತಿ’ ಸಮಾವೇಶ ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.

ಇಂದು ‘ಬಸವ ಶಕ್ತಿ’ ಸಮಾವೇಶದ ಬಗ್ಗೆ ಶರಣತತ್ವ ಚಿಂತಕ ಡಾ. ಸಂಗಮೇಶ ಕಲಹಾಳ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?

ರಾಜಕೀಯದಲ್ಲಿ ಪ್ರಭಾವಿಗಳಾದರೆ ನಮ್ಮ ಧರ್ಮ ಮತ್ತು ಆಚರಣೆ ಉಳಿಸಿಕೊಳ್ಳಲು ಯಾರೂ ಅಡ್ಡಿಬರುವುದಿಲ್ಲ. ಅದಕ್ಕೆ ಜ್ವಲಂತ ನಿದರ್ಶನಗಳು ತುಂಬಾ ಇವೆ.

ಈ ವಿಷಯದಲ್ಲಿ ಸಿಖ್ ಮತ್ತು ಇಸ್ಲಾಂ ಧರ್ಮಿಯರಿಂದ ಕಲಿಯಬೇಕು.

ಇಂದು ಬಹುಪಾಲು ಲಿಂಗಾಯತ ರಾಜಕಾರಣಿಗಳು ಅಧಿಕಾರಕ್ಕೆ ಬಸವತತ್ವವನ್ನು ಉದಾಶೀನ ಮಾಡುತ್ತಾರೆ. ಇದರಿಂದ ಅವರು ಬಸವತತ್ವ ಮತ್ತು ಅಧಿಕಾರ ಎರಡಕ್ಕೂ ಯೋಗ್ಯರಾಗಿ ಉಳಿಯುತ್ತಿಲ್ಲ.

ಇಂತಹ ಸಂಘರ್ಷದ ಕಾಲದಲ್ಲಿ ಲಿಂಗಾಯತ ಜನಪ್ರತಿನಿಧಿಗಳು ತಮ್ಮ ಧರ್ಮಕ್ಕಾಗಿ ದುಡಿಯುವಂತೆ ಮಾಡುವ ಜವಾಬ್ದಾರಿ ಬಸವ ಸಂಘಟನೆಗಳ ಮೇಲಿದೆ.

ಆದರೆ ಬಸವ ಸಂಘಟನೆಗಳು ಸೈದ್ಧಾಂತಿಕ ಸಂಸ್ಥೆಗಳೇ ಆಗಿ ಉಳಿಯಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಸಂಸ್ಥೆಯಾಗಿ ಬದಲಾಗಬಾರದು. ಸೈದ್ಧಾಂತಿಕ ಸಂಸ್ಥೆಗಳು ಶಾಶ್ವತ. ರಾಜಕೀಯ ಸಂಸ್ಥೆ ತಾತ್ಕಾಲಿಕ.

ನೇರವಾಗಿ ರಾಜಕೀಯ  ಪ್ರಭಾವ ಬೆಳೆಸಿಕೊಂಡರೆ ಸೈದ್ಧಾಂತಿಕ ನೆಲೆಗೆ ಮತ್ತು ಶಾಶ್ವತ ಅಸ್ತಿತ್ವಕ್ಕೆ ಧಕ್ಕೆ ಮಾಡಿಕೊಂಡಂತಾಗುವದು.

ಅದಕ್ಕೆ ಬಸವ ಸಂಘಟನೆಗಳು ತಮ್ಮದೇ ಪ್ರತ್ಯೇಕ ರಾಜಕೀಯ ಅಂಗವನ್ನು (ವಿಭಾಗವನ್ನು) ರಚಿಸಿಕೊಂಡು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕು.

ಬಸವತತ್ವ ಅನುಯಾಯಿಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು. ಒಳ್ಳೆಯ ವ್ಯಕ್ತಿತ್ವ, ಮಾತಿನ ಕೌಶಲ್ಯ, ಎಲ್ಲರನ್ನೂ ಸಮತೋಲನವಾಗಿ ಒಯ್ಯಬಲ್ಲ, ನಾಯಕತ್ವ ಗುಣಲಕ್ಷಣಗಳನ್ನು ಹೊಂದಿರುವ ಯೋಗ್ಯ ಬಸವತತ್ವ ಅನುಯಾಯಿಗಳನ್ನು ಈ ಕೆಲಸಕ್ಕೆ ತೊಡಗಿಸಬೇಕು.

ಅವರಿಗೆ ರಾಜಕೀಯ ಪಕ್ಷದ ಸದಸ್ಯತ್ವ ಪಡೆಯುವಂತೆಯೂ ಸೂಚಿಸಬಹುದು. ಅವಶ್ಯವಿದ್ದರೆ ಅವರಿಗೆ ಜನನಾಯಕತ್ವ  ವ್ಯಕ್ತಿತ್ವ ವಿಕಾಸ ತರಬೇತಿ ನೀಡಬಹುದು.

ರಾಜಕೀಯ ಸೇರುವ ಬಸವತತ್ವ ಅನುಯಾಯಿಗಳಿಗೆ ಕಿವಿಮಾತು:

  • ರಾಜಕೀಯದ ಯಾವುದೇ ಪಕ್ಷದಲ್ಲಿ ಇರಲಿ ಬಸವತತ್ವ ಗಟ್ಟಿಯಾಗಿ ಉಳಿಸಿಕೊಳ್ಳಬೇಕು.
  • ಸೈದ್ಧಾಂತಿಕ ರಾಜಕೀಯ ಬೆಳೆಸಲು ಬಸವತತ್ವದ ಪ್ರಭಾವವನ್ನು ಬಳಸಿಕೊಳ್ಳಬೇಕು.
  • ತಮ್ಮ ವೈಯಕ್ತಿಕ ಅಸ್ತಿತ್ವ ಉಳಿಸಿಕೊಳ್ಳಲು ಬಸವತತ್ವವನ್ನು ಬಲಿ ಕೊಡಬಾರದು.
  • ಸತ್ಯಶುದ್ಧ ಕಾಯಕ-ದಾಸೋಹ ತತ್ವ ಅನುಸರಿಸಬೇಕು. “ಸ್ವಾರ್ಥಕ್ಕೆ ಸ್ವಲ್ಪ, ಪರಾರ್ಥಕ್ಕೆ ಬಹಳ” ತತ್ವ ಅನುಸರಿಸಬೇಕು.

2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?

ನಿಶ್ಚಿತವಾಗಿ ಬಸವ ಸಂಘಟನೆಗಳಿಗೆ ಮತ್ತು ರಾಜಕೀಯ ಆಸಕ್ತರಿಗೆ ತರಬೇತಿ ಅಗತ್ಯವಾಗಿದೆ. ತರಬೇತಿಗಳು ನಿರಂತರವಾಗಿ ಇರಬೇಕು. ನಾಲ್ಕು ಹಂತಗಳಲ್ಲಿ ತರಬೇತಿ ನೀಡಬೇಕು.

  1. ಬುನಾದಿ ತರಬೇತಿ (Foundation training)
  2. ತತ್ವ-ಸಿದ್ಧಾಂತಗಳ ತರಬೇತಿ (Training in principles and theories)
  3. ಸಾಮಾಜಿಕ ಅಭಿವೃದ್ಧಿ ತರಬೇತಿ (social development training)
  4. ಪುನರ್ ಮನನ ತರಬೇತಿ (re-orientation training)

ತರಬೇತಿ ಒಳಗೊಂಡಿರಬೇಕಾದ ವಿಷಯಗಳು :

ವ್ಯಕ್ತಿತ್ವ ವಿಕಾಸ

ಪರಿಣಾಮಕಾರಿ ಭಾಷಣಕಲೆ, ಸಂವಿಧಾನದ ಜ್ಞಾನ, ನೈತಿಕ ಮೌಲ್ಯಗಳು, ಮಾನವ ಸಂಬಂಧಗಳು, ಮಾನವ ಹಕ್ಕುಗಳು, ಮಹಿಳಾ ಮತ್ತು ಮಕ್ಕಳ ಹಕ್ಕುಗಳು, ಭಾರತ ನಾಗರಿಕನ ಕರ್ತವ್ಯಗಳು ಇತ್ಯಾದಿ ಅಗತ್ಯ ತರಬೇತಿಗಳನ್ನು ಮೂಲ ಬಸವ ಸಂಘಟನೆ ಮೂಲಕ ಕೊಡಬೇಕು.

ಯಾವುದೇ ಪಕ್ಷದವರಿರಲಿ ಪಕ್ಷಾತೀತವಾಗಿ ತನ್ನ ಮೂಲ ಬಸವ ಸಂಘಟನೆ ಮತ್ತು ಬಸವಧರ್ಮದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಬದ್ಧತೆಯಿಂದ ಮಾಡುವಂತಾಗಬೇಕು.

ರಾಜಕೀಯ ತತ್ವ  

ರಾಜಕೀಯ ತತ್ವಗಳು ಅಧಿಕಾರ, ರಾಜ್ಯ, ಸಾರ್ವಭೌಮತ್ವ, ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಹಕ್ಕುಗಳಂತಹ ವ್ಯವಸ್ಥೆಗಳಿಂದ ಕೂಡಿರುತ್ತದೆ. ಅಧಿಕಾರ ಹಂಚಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ರಾಜಕೀಯ ರಚನೆಗಳ ಭವಿಷ್ಯದ ಮೇಲೆ ಕೇಂದ್ರೀಕರಿಸುತ್ತದೆ.

ಬಸವತತ್ವ

ಬಸವತತ್ವ ಅಂದರೆ ವಿಶ್ವತತ್ವ. ಬಸವ ಧರ್ಮ ಅಂದರೆ ವಿಶ್ವಧರ್ಮ. ಕೇವಲ ಮಾನವರಿಗಷ್ಟೇ ಅಲ್ಲ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವ ಸರ್ವಸಮನ್ವಯ ತತ್ವಜ್ಞಾನ. ಸರ್ವಸಮಾನತೆ, ಸರ್ವಾಂಗೀಣ ಪ್ರಗತಿ ಮಾಡುವಂತಹ ತತ್ವ. ವಿಶ್ವದ ಅನೇಕ ವಿಷಯಗಳಲ್ಲಿ ಒಂದಾದ ರಾಜಕೀಯಕ್ಕೆ ಕೂಡಾ ಮಾರ್ಗದರ್ಶನ ಮಾಡುವ ತತ್ವಗಳಾಗಿವೆ. ಇವೆಲ್ಲವುಗಳ ಜ್ಞಾನ ನೀಡಬೇಕು.

3) ಬಸವ ಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.

  • ಬಸವಶಕ್ತಿ ಸಮಾವೇಶವನ್ನು “ಲಿಂಗಾಯತ ಪುನರುತ್ಥಾನ ಸಮಾವೇಶ”ವಾಗಿ ನಡೆಸಬೇಕು.
  • ಲಿಂಗಾಯತ ಸಮುದಾಯದ ನ್ಯೂನ್ಯತೆಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವ ಸಮಾವೇಶವಾಗಬೇಕು.
  • ಲಿಂಗಾಯತದಲ್ಲಿ ಹಿಂದುಳಿದವರೆನ್ನುವ, ದಲಿತರೆನ್ನುವ ಸಮುದಾಯಗಳಲ್ಲಿ “ಲಿಂಗಾಯತ ಮನಸ್ಥಿತಿ” ನಿರ್ಮಿಸುವ ಸಮಾವೇಶ ಆಗಬೇಕು.
  • ಲಿಂಗಾಯತದಲ್ಲಿ ಹಿಂದುಳಿದವರೆನ್ನುವ, ದಲಿತರೆನ್ನುವ ಸಮುದಾಯಗಳಲ್ಲಿ ತಾವು “ಲಿಂಗಾಯತ” ಎನ್ನುವ ಮನಸ್ಥಿತಿ ಉಂಟಾಗಲು ಅಗತ್ಯ ಚಟುವಟಿಕೆ, ಕಾರ್ಯಕ್ರಮಗಳನ್ನು ಈ ಸಮಾವೇಶದಲ್ಲಿ ಅಳವಡಿಸಬೇಕು.

ಈ ಎಲ್ಲ ಸಮುದಾಯಗಳಲ್ಲಿ “ಲಿಂಗಾಯತ ಮನಸ್ಥಿತಿ” ಸ್ಥಾಪಿತವಾದರೆ ; ಲಿಂಗಾಯತ ರಾಜ್ಯ, ದೇಶ, ವಿದೇಶಗಳಲ್ಲಿ ಬಸವಶಕ್ತಿ ಬಹುದೊಡ್ಡ ಶಕ್ತಿಯಾಗುತ್ತದೆ. ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಇತ್ಯಾದಿ ಎಲ್ಲ ರಂಗಗಳಲ್ಲಿ ಉತ್ತುಂಗದ ಬೃಹತ್ ಶಕ್ತಿಯಾಗಿ ಬೆಳೆಯುವುದು.

4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುವಿರಿ?

ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತೇವೆ.

5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?

ನಿಶ್ಚಿತವಾಗಿ ಆಸಕ್ತಿ ಇದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *