ಬೆಳಗಾವಿ
ನಗರದ ಬಸವ ಸಂಘಟನೆಗಳಿಂದ ಸದ್ಯದಲ್ಲೇ ಎಲ್ಲಾ ಸಮುದಾಯಗಳ ಬಳಕೆಗಾಗಿ ಐಕ್ಯ ಮಂಟಪ ಮಾದರಿ ಶ್ರದ್ಧಾಂಜಲಿ ವಾಹನ ಬರಲಿದೆ.
ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ನೂತನ ವಾಹನದ ಚಾಸಿಸ್ ನ ಪೂಜಾ ಕಾರ್ಯಕ್ರಮವು ವಿಶ್ವಗುರು ಬಸವ ಮಂಟಪದಲ್ಲಿ ಸೋಮವಾರ ನೆರವೇರಿತು. ಯಾರಾದರೂ ಲಿಂಗೈಕ್ಯರಾದಾಗ ಅವರನ್ನು ಮನೆಯಿಂದ ಮಸಣಕ್ಕೆ ಸಾಗಿಸಲು ಅನುಕೂಲವಾಗುವ ಈ ವಾಹನ, ಬೆಳಗಾವಿ ಬಸವ ಕಾಯಕಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವದಳದ ಸಂಯುಕ್ತ ಸೇವಾ ಕಾಣಿಕೆ ಆಗಿದೆ.
ಐಷರ್ ಕಂಪನಿಯ ವಾಹನದ ಚಾಸಿಸ್ ಇದಾಗಿದ್ದು, 14 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಬಸವ ಕಾಯಕ ಜೀವಿಗಳ ಸಂಘಟನೆಯ ನಿರ್ದೇಶಕರು, ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳು ಮತ್ತು ಸಮಾಜದ ಕೆಲವರಿಂದ ಇದಕ್ಕಾಗಿ ಕಾಣಿಕೆ ಪಡೆಯಲಾಗಿದೆ.
ವಿನೂತನ ಮಾದರಿಯಲ್ಲಿ ವಾಹನದ ಕವಚ ಕಟ್ಟಿಸುವ ಯೋಜನೆ ಹೊಂದಲಾಗಿದೆ. ಬಸವಣ್ಣನವರ ಐಕ್ಯಮಂಟಪ ಪರಿಕಲ್ಪನೆಯ ಉದ್ಧೇಶ ಇಟ್ಟುಕೊಂಡಿದ್ದೇವೆ. ಇದಕ್ಕೆ ಇನ್ನು 8 ರಿಂದ 10 ಲಕ್ಷ ರುಪಾಯಿ ಖರ್ಚು ಬರಬಹುದು, ಅದಕ್ಕೆಂದೇ ದಾಸೋಹಿಗಳು ಯಾರಾದರು ಮುಂದೆ ಬಂದಾರು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಕೆ. ಶರಣಪ್ರಸಾದ ಅವರು ಹೇಳುತ್ತಾರೆ.