ಹುಬ್ಬಳ್ಳಿ
“ರಾಜ್ಯ ಸರ್ಕಾರ ಮಾಡಿರುವ ಜಾತಿ ಗಣತಿ ಅಲ್ಲ ಅದೊಂದು ಸಾಮಾಜಿಕ ಸಮೀಕ್ಷೆ ಆಗಿದೆ. ಇದಕ್ಕೆ ನಮ್ಮ ತಕರಾರಿದೆ. ಎಲ್ಲ ಜಾತಿಯ ಜನರ ನಿಖರ ಸಂಖ್ಯೆ ತಿಳಿಯಲು ವೈಜ್ಞಾನಿಕ ಗಣತಿ ಅಗತ್ಯವಿದೆ. ಸರ್ಕಾರ ಹೊಸದಾಗಿ ಜಾತಿ ಗಣತಿ ಮಾಡಲಿ,” ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದರು ಅವರು, ಸರ್ಕಾರ ಏನಾದರೂ ಜಾತಿ ಗಣತಿಯನ್ನು ಜಾರಿ ಮಾಡಲು ಹೊರಟರೇ ಅದಕ್ಕೆ ನಾವು ಒಪ್ಪಲ್ಲ ಎಂದು ಅವರು ತಿಳಿಸಿದ್ದಾರೆ.
ಐಬಿಯಲ್ಲಿ ಕುಳಿತುಕೊಂಡು ಮಾಡಿದರೆ ಸಮೀಕ್ಷೆ ಆಗುತ್ತದೆ. ಮನೆ ಮನೆಗೆ ತೆರಳಿ ಸರ್ವೇ ಮಾಡಬೇಕು. ಮತ್ತೊಮ್ಮೆ ಜಾತಿ ಗಣತಿ ಮಾಡಬೇಕೆಂಬುದು ನಮ್ಮ ಆಗ್ರಹ ವಿದೆ. ಈಗಿನ ಜಾತಿ ಗಣತಿ ವರದಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಜಾತಿ ಗಣತಿ ಮಾಡಲು ನಮ್ಮದೇನು ವಿರೋಧವಿಲ್ಲ. ‘ಗಣತಿಯ ಅಂಕಿ ಅಂಶಗಳು ಬಹಿರಂಗ ಆಗಿರದಿದ್ದರೂ ಕೆಲ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರು ಆಕ್ಷೇಪಿಸಿದ್ದಾರೆ. ತಮ್ಮ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ ಎಂಬ ಅಸಮಾಧಾನ ಅವರಲ್ಲಿದೆ’ ಎಂದರು.