ಚಿತ್ರದುರ್ಗ
ಶೂನ್ಯಪೀಠ ಪರಂಪರೆಯ ಮುರುಘಾ ಮಠದಲ್ಲಿ ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ದೇವರ ಭಾವಚಿತ್ರ ಹಾಗೂ ಜಯದೇವ ಸ್ವಾಮೀಜಿಯ ಬೆಳ್ಳಿ ಪುತ್ಥಳಿ ಇಟ್ಟು ರವಿವಾರ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರು ಜಯದೇವ ಶ್ರೀಗಳ ಬೆಳ್ಳಿ ಪುತ್ಥಳಿಗೆ ಪೂಜೆ ಸಲ್ಲಿಸಿ, ಬಳಿಕ ಭದ್ರತೆಯಲ್ಲಿ ರಾಜಾಂಗಣಕ್ಕೆ ತಂದು ಶೂನ್ಯ ಪೀಠಾರೋಹಣ ನೆರವೇರಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳೂ ಸೇರಿದಂತೆ ವಿವಿಧ ಮಠಾಧೀಶರು, ಸಾಧಕರು, ಭಕ್ತರು, ಎಸ್.ಜೆ.ಎಂ.ವಿದ್ಯಾಪೀಠದ ಸದಸ್ಯರು ಶೂನ್ಯ ಪೀಠಾರೋಹಣವನ್ನು ಸಾಕ್ಷೀಕರಿಸಿದರು.
ಶರಣ ಸಂಸ್ಕೃತಿ ಉತ್ಸವದಲ್ಲಿ ಮಠದ ಪೀಠಾಧ್ಯಕ್ಷರು ಶೂನ್ಯ ಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನ ನೀಡುವುದು ವಾಡಿಕೆ. ಆದರೆ, ಪೀಠಾಧ್ಯಕ್ಷ ಶಿವಮೂರ್ತಿ ಶರಣರು ಪೋಕ್ಸೊ ಪ್ರಕರಣದಲ್ಲಿ 2022ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ಹೀಗಾಗಿ 2022ರಲ್ಲಿ ಕರ್ತೃ ಮುರುಗಿ ಶಾಂತವೀರ ಸ್ವಾಮೀಜಿಯ ಭಾವಚಿತ್ರ, 2023ರಲ್ಲಿ ಮುರುಗಿ ಶಾಂತವೀರ ಸ್ವಾಮೀಜಿಯ ಕಂಚಿನ ಪುತ್ಥಳಿ ಇಟ್ಟು ಪೀಠಾರೋಹಣದ ವಿಧಿ–ವಿಧಾನ ಪೂರೈಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಧರ್ಮಗುರು ಬಸವಣ್ಣನವರ ಮತ್ತು ಅಲ್ಲಮಪ್ರಭುದೇವರ ಭಾವಚಿತ್ರಗಳ ಹಾಗೂ ಪ್ರಾಚೀನಹಸ್ತ ಪ್ರತಿಗಳ ಮೆರವಣಿಗೆ ನಡೆಯಿತು.

ಮೆರವಣಿಗೆಯು ಜಾನಪದ ಕಲಾತಂಡಗಳೊಂದಿಗೆ ಶ್ರೀಮಠದ ಆವರಣದಲ್ಲಿ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಅಕ್ಟೋಬರ್ 5ನೇ ತಾರೀಖಿನಿಂದ ನಡೆದುಕೊಂಡು ಬಂದ ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದಲ್ಲಿ ಬಂದು 13ರಂದು ಮುಕ್ತಾಯವಾಯಿತು.

fine.