ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಇದ್ದಿದ್ದರೆ ಡಿಕೆಶಿ ಪಂಚಪೀಠಗಳ ಕ್ಷಮೆ ಕೇಳುತ್ತಿರಲಿಲ್ಲ

ಬಸವ ಮೀಡಿಯಾ
ಬಸವ ಮೀಡಿಯಾ

ತಾವರಗೇರಾ

ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಇದ್ದಿದ್ದರೆ ಡಿಕೆಶಿ ಪಂಚಪೀಠಗಳ ಕ್ಷಮೆ ಕೇಳುತ್ತಿರಲಿಲ್ಲ, ಎಂದು ಧಾರವಾಡ ಜಾಗತಿಕ ಲಿಂಗಾಯತ ಮಹಾಸಭಾದ ಸಿ.ಜಿ. ಪಾಟೀಲ್ ಕೊಪ್ಪಳ ಬಸವಶಕ್ತಿ ಶಿಬಿರದಲ್ಲಿ
ಹೇಳಿದರು.

ಎರಡು ದಿನಗಳ ಮೂರನೇ ಬಸವಶಕ್ತಿ ಶಿಬಿರ ಜಿಲ್ಲೆಯ ತಾವರಗೇರಾ ತಾಲೂಕಿನಲ್ಲಿ ಇತ್ತೀಚೆಗೆ ನಡೆಯಿತು.

ಬಸವ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ ಬೇಕೇ ವಿಷಯದ ಮೇಲೆ ಪಾಟೀಲ್ ಮಾತನಾಡಿದರು.

ರಾಜಕೀಯ ಪ್ರಜ್ಞೆಯಿಲ್ಲದೆ ಲಿಂಗಾಯತ ಸಮುದಾಯ ರಾಜಕೀಯ ಶಕ್ತಿ ಕಳೆದುಕೊಂಡಿತು. ಈಗ ಸಂಖ್ಯೆಯನ್ನೂ ಕಳೆದುಕೊಳ್ಳುತ್ತಿದೆ. ಐದು ಆರು ಲಕ್ಷ ಲಿಂಗಾಯತ ಮತದಾರರು ಇರುವ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಸಮುದಾಯ ಹಿಡಿತ ಕಳೆದುಕೊಂಡಿದೆ. ಈ ಕ್ಷೇತ್ರದಲ್ಲಿ ಮೊದಲು ಎಲ್ಲಾ ಸಮುದಾಯಗಳ ಅಭ್ಯರ್ಥಿಗಳು ಗೆಲ್ಲುತ್ತಿದ್ದರು, ಈಗ ಅದು ಒಂದು ಸಮುದಾಯದ ಅಭ್ಯರ್ಥಿಗಳಿಗೆ ಸೀಮಿತವಾಗಿದೆ, ಎಂದು ವಿಷಾದ ವ್ಯಕ್ತಪಡಿಸಿದರು.

ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಸಕ್ರಿಯರಾಗಿ ಪ್ರತಿ ಕ್ಷೇತ್ರದಲ್ಲೂ ಶೇಕಡಾ 5-10ರಷ್ಟು ಮತಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬೇಕು.

ಇದು ಅಷ್ಟೊಂದು ಕಷ್ಟದ ಕೆಲಸವಲ್ಲ, ಬಸವಣ್ಣ ಅಂದರೆ ಜನ ತಾವಾಗಿಯೇ ಮುಂದು ಬರುತ್ತಾರೆ. ಆದರೆ ಸೈದ್ಧಾಂತಿಕವಾಗಿ ನಮ್ಮ ವಿರುದ್ಧ ಯಾರಿದ್ದಾರೆ ಎಂದು ಲಿಂಗಾಯತರು ತಿಳಿದುಕೊಳ್ಳಬೇಕು.

ಲಿಂಗಾಯತ ಧರ್ಮ ಮಾನ್ಯತೆಯನ್ನು ಆರೆಸ್ಸೆಸ್ ಕೊಡುವುದಿಲ್ಲ ಆದರೆ ಬಿಜೆಪಿ ಕೊಡುತ್ತದೆ, ಈ ಸೂಕ್ಷ್ಮತೆ ಅರ್ಥಮಾಡಿಕೊಳ್ಳಬೇಕು.

ಬಸವ ಸಂಘಟನೆಗಳ ರಾಜಕೀಯ ಚಟುವಟಿಕೆ ಚುನಾವಣೆಗಳಿಗೆ ಮಾತ್ರ ಸೀಮಿತವಾಗಬಾರದು. ಬೂತ್ ಮಟ್ಟದ ರಾಜಕೀಯದ ಜೊತೆಗೆ ಮಿಕ್ಕ ಸಮಯದಲ್ಲಿಯೂ ಅಧಿಕಾರಸ್ಥರ ಮೇಲೆ ಒತ್ತಡ ತರುವ ಕೆಲಸವಾಗಬೇಕು ಎಂದು ಹೇಳಿದರು.

ಇದೇ ವಿಷಯದ ಮೇಲೆ ಮಾತನಾಡಿದ ಲಡಾಯಿ ಪ್ರಕಾಶನದ ಬಸು ಸೂಳಿಬಾವಿ ತಡವಾಗಿಯಾದರೂ ಬಸವ ಸಂಘಟನೆಗಳು ರಾಜಕೀಯದ ಬಗ್ಗೆ ಮಾತನಾಡಲು ಶುರು ಮಾಡಿರುವುದುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ರಾಜಕೀಯ ಪ್ರಜ್ಞೆಯ ಅರ್ಥ ವಿವರಿಸುತ್ತಾ ಐದು ಬೆರಳು ಸಮವಲ್ಲ ಎನ್ನುವುದು ಒಂದು ರೀತಿಯ ರಾಜಕೀಯ ಪ್ರಜ್ಞೆಯಾದರೆ ಅದನ್ನು ಪ್ರಶ್ನಿಸಿ ಎಲ್ಲರೂ ಸಮನಾಗಿ ಹಂಚಿಕೊಂಡು ತಿನ್ನಬೇಕು ಎನ್ನುವುದು ಇನ್ನೊಂದು ರೀತಿಯ ರಾಜಕೀಯ ಪ್ರಜ್ಞೆ ಎಂದರು.

ಯುವಕರಲ್ಲಿ ಪ್ರಶ್ನಿಸುವ ಬಸವ ಪ್ರಜ್ಞೆ ಜಾಗೃತವಾದರೆ ಆರೆಸ್ಸೆಸ್ಸನ್ನು ಎಲ್ಲಿಡಬೇಕೋ ಅಲ್ಲಿಡಬಹುದು ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments

Leave a Reply

Your email address will not be published. Required fields are marked *