ಗದಗ
ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಅವಕಾಶವನ್ನು ಮೊದಲು ನೀಡಿದವರು ಬಸವಾದಿ ಶರಣರು. ಗಂಡು ಹೆಣ್ಣು ಬೇಧವಿಲ್ಲದೆ ವರ್ಣಬೇಧ, ವರ್ಗಬೇಧ ಮಾಡದೇ ಹೆಣ್ಣುಮಕ್ಕಳಿಗೂ ವಿದ್ಯೆ, ಸಂಸ್ಕಾರ ಕಲ್ಪಿಸಿಕೊಟ್ಟವರು ಶರಣರು. ಮಹಿಳೆಯರಲ್ಲಿ ಒಂದು ವಿಶಿಷ್ಠ ಶಕ್ತಿಯಿದೆ, ಸಾಮರ್ಥ್ಯವಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೩೭ ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹೆಣ್ಣುಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಬೆಳೆಸಬೇಕು. ಪ್ರೋತ್ಸಾಹಿಸಬೇಕು. ಸರಿಯಾದ ವಿದ್ಯೆ ಸಂಸ್ಕಾರ ಕೊಟ್ಟರೆ ಭೂಮಿ ಮತ್ತು ಅಂತರಿಕ್ಷದಲ್ಲಿಯೂ ಸಾಧನೆ ಮಾಡಬಹುದು ಎಂಬುದಕ್ಕೆ ಸುನೀತಾ ವಿಲಿಯಮ್ಸ್ ಉದಾಹರಣೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ, ಸ್ಪರ್ಧಿಸುತ್ತಿದ್ದಾರೆ. ಮಹಿಳೆಯರಿಗೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೆಣ್ಣುಮಕ್ಕಳಿಗೆ ವಿದ್ಯೆ ಕೊಡಬೇಕು. ಸಂಸ್ಕಾರ ನೀಡಬೇಕು ಎಂದು ಶ್ರೀಗಳು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಸಾಹಿತಿಗಳಾದ ಡಾ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಮಠಗಳು ಸಂಸ್ಕೃತಿಯ ಸಂಕೇತಗಳು. ಶಿಸ್ತಿನ ನಿವಾಸಗಳು. ಅಕ್ಕಮಹಾದೇವಿ ಮೊದಲ ಮಹಿಳಾವಾದಿ ಚಿಂತಕಿ. ತನ್ನ ಯೋಗ್ಯತೆಯ ಅರಿವು ಇತ್ತು. ಅಂತೇಯೇ ಉತ್ತುಂಗಕ್ಕೆ ಏರಿದಳು. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರನ್ನು ಹುಟ್ಟಿಸಿದರು. ಸ್ವಾತಂತ್ರವೆಂದರೆ ಸಂತೋಷ. ಗಂಡಿನ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ‍್ಯ ಇರಬೇಕು. ಹೆಣ್ಣಿಗೆ ದೇವರು ಒಂದು ಹೆಚ್ಚಿನ ಕ್ವಾಲಿಫಿಕೇಷನ್ ಕೊಟ್ಟಿದ್ದಾನೆ. ಮಕ್ಕಳನ್ನು ಹೆರುವುದು. ಅದು ಹೆಮ್ಮೆ. ಆ ಭಾಗ್ಯ ಗಂಡಿಗಿಲ್ಲ. ಸಹನೆ, ತಾಳ್ಮೆಯನ್ನು ಕೊಟ್ಟಿದ್ದಾನೆ. ದೇಹ, ಮನಸ್ಸು, ಬುದ್ದಿಯಿಂದ ಸ್ವತಂತ್ರಳಾಗಿರಬೇಕು. ಮಹಿಳೆಯರು ಪ್ರವಾಸ ಮಾಡಬೇಕು, ಜೊತೆಗೆ ಜಗತ್ತಿನ ಜ್ಞಾನ ಬರುವುದು. ಹೆಣ್ಣುಮಕ್ಕಳು ಉದ್ಯಮಶೀಲರಾಗಬೇಕು. ಸಂಡಿಗೆ ಹಪ್ಪಳ ಮಾಡಬೇಕು. ಆರ್ಥಿಕವಾಗಿ ಸಬಲರಾಗಬೇಕು. ಮನೆ ಗೆದ್ದು ಮಾರು ಗೆಲ್ಲು, ಕ್ಷೇತ್ರ ವಿಸ್ತರಿಸಿಕೊಂಡು ಜಗತ್ತನ್ನು ಗೆಲ್ಲಬಹುದು. ಹೆಣ್ಣು ಮಕ್ಕಳು ಒಳ್ಳೆಯ ಪುಸ್ತಕ ಓದಬೇಕು. ಓದಿನಲ್ಲಿ ಸಂತೋಷವಿದೆ ಎಂದು ಮನೋಜ್ಞವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುವರ್ಣ ಹೊಸಂಗಡಿ ಉಪಸ್ಥಿತರಿದ್ದರು. ಶ್ರೀಮತಿ ಮಂಜುಳಾ ಬುಳ್ಳಾ ಮಾರ್ಗದರ್ಶನದಲ್ಲಿ ಜೆ.ಸಿ. ಪ್ರೌಢಶಾಲೆ ಗದಗ ಮಕ್ಕಳಿಂದ ಆಕರ್ಷಕ ಯೋಗ ಪ್ರದರ್ಶನ ನಡೆಯಿತು.

ವಚನ ಸಂಗೀತವನ್ನು ಕುಮಾರಸ್ವಾಮಿ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಶರಣೆ ಪುಷ್ಪ ಭಂಡಾರಿ, ವಚನ ಚಿಂತನವನ್ನು ಶರಣೆ ಜಯಶ್ರೀ ಹಳ್ಳಿಕೇರಿ ಇವರು ನಡೆಸಿಕೊಟ್ಟರು.
ದಾಸೋಹ ಸೇವೆಯನ್ನು ಶ್ರೀಮತಿ ಸುಗಲಾ ಹಿರೇಮಠ ಹಾಗೂ ಶ್ರೀಮತಿ ಉಮಾ ಕವಳಿಕಾಯಿ ವಹಿಸಿಕೊಂಡಿದ್ದರು. ಅಕ್ಕಮಹಾದೇವಿ ಯೋಗ ಕೇಂದ್ರದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ, ಸಹ ಚೇರ್ಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.
ಅಕ್ಕಮಹಾದೇವಿ ಯೋಗ ಕೇಂದ್ರದ ಅಧ್ಯಕ್ಷರಾದ ಸುವರ್ಣ ಹೊಸಂಗಡಿ ಸ್ವಾಗತಿಸಿದರು. ಶ್ರೀದೇವಿ ಶೆಟ್ಟರ ಪರಿಚಯಿಸಿದರೆ, ಅಕ್ಕಮಹಾದೇವಿ ಚಟ್ಟಿ ಅಭಿನಂದನಾ ಪತ್ರ ಓದಿ, ಅರ್ಪಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಸಾಹಿತಿಗಳಾದ ಡಾ. ಮಾಲತಿ ಪಟ್ಟಣಶೆಟ್ಟಿ ಅವರನ್ನು ಸಂಮಾನಿಸಲಾಯಿತು.