ರಾಮದುರ್ಗ
ತಾಲ್ಲೂಕಿನ ನಾಗನೂರ ಗ್ರಾಮದ ಗುರುಬಸವ ಮಠದಲ್ಲಿ ಬಸವಧರ್ಮ ಉತ್ಸವ-2025 ಹಾಗೂ ಅಲ್ಲಮಪ್ರಭುಗಳ ಜಯಂತಿಯ ಉದ್ಘಾಟನಾ ಸಮಾರಂಭ ಸೋಮವಾರ ಸಾಯಂಕಾಲ ಮಠದ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವು ಬಸವಭಾವಪೂಜೆಯೊಂದಿಗೆ ಆರಂಭವಾಯಿತು. ಷಟಸ್ಥಲ ಧ್ವಜಾರೋಹಣವನ್ನು ಜಮಖಂಡಿಯ ಮಲ್ಲನಗೌಡ ಪಾಟೀಲ ನೆರವೇರಿಸಿದರು.

ಕಾರ್ಯಕ್ರಮದ ಅನುಭಾವಿಗಳಾದ ಶಶಿಧರ ವಿ. ಕಲ್ಯಾಣಶೆಟ್ಟಿ ಅವರು “ನೀನೊಲಿದರೆ ಕೊರಡು ಕೊನರುವುದಯ್ಯಾ” ಎಂಬ ವಿಷಯದ ಕುರಿತು ಮಾತನಾಡಿ, ತಮ್ಮ ನಿಜ ಜೀವನದ ಅನುಭವವನ್ನು ಹಂಚಿಕೊಂಡರು, ಭಗವಂತನ ಒಲುಮೆಯಿಂದ ಎಂತಹದೇ ಕಷ್ಟ ಬಂದರೂ ಎದುರಿಸುವ ಶಕ್ತಿ ಬರುತ್ತದೆ ಮತ್ತು ನಮಗೆ ಬರುವ ಸಂಕಷ್ಟಗಳು ದೊಡ್ಡದು ಎನಿಸುವುದಿಲ್ಲ” ಎಂದರು.
ಜಮಖಂಡಿಯ ಬಸವಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ ಮಾತನಾಡಿ, “ಬಸವ ಧರ್ಮವು ದುಡಿಯುವವರನ್ನು ಒಟ್ಟುಗೂಡಿಸಿಕೊಂಡು ಕಟ್ಟಿದ ಧರ್ಮವಾಗಿದೆ. ಇದು ನೊಂದವರ ನೋವನ್ನು ಅರಿತ ಧರ್ಮವಾಗಿದೆ. ಇದನ್ನು ಅಳವಡಿಸಿಕೊಂಡರೆ ಎಂದಿಗೂ ನಮ್ಮ ಬದುಕಿನಲ್ಲಿ ಗೊಂದಲಗಳು ಸೃಷ್ಠಿಯಾಗುವುದಿಲ್ಲ. ಅದಕ್ಕೆ ಬಸವಗೀತಾ ಮಾತಾಜಿ ಹಾಗೂ ಬಸವಪ್ರಕಾಶ ಸ್ವಾಮೀಜಿಗಳೇ ಸಾಕ್ಷಿ. ಅವರು ಎಂತಹದ್ದೇ ಕಷ್ಟ ಬಂದರೂ ಬಸವ ತತ್ವವನ್ನು ಬಿಟ್ಟು ಅಲುಗಾಡದೆ ಉಳಿದಿದ್ದಾರೆ” ಎಂದರು.

ಹುಲ್ಯಾಳದ ಮಲ್ಲು ಗೆದ್ದಪ್ಪನವರ ಮಾತನಾಡಿ “ನಿಷ್ಠೆಯು ಬದುಕಿನಲ್ಲಿ ಇರಬೇಕಾದ ಬಹುಮುಖ್ಯ ಅಂಶ, ಅದನ್ನು ನಾವು ಬಸವಗೀತಾ ತಾಯಿಯವರಿಂದ ಕಲಿಯಬಹುದು. ಅವರು 20 ವರ್ಷಗಳಿಂದಲೂ ತತ್ವ ನಿಷ್ಠೆ ಪಾಲಿಸುತ್ತಲೇ ಇದ್ದಾರೆ” ಎಂದರು.
ಸಮ್ಮುಖ ವಹಿಸಿದ್ದ ಪೂಜ್ಯ ಬಸವಪ್ರಕಾಶ ಸ್ವಾಮೀಜಿಯವರು ಮಾತನಾಡಿ, “ಮಕ್ಕಳನ್ನು ಮಠಗಳಿಗೆ ಕಳಿಸಬೇಕು, ಅವರಿಗೆ ಒಳ್ಳೆಯ ಸಂಸ್ಕಾರ ಹಾಗೂ ಧರ್ಮದ ಬಗ್ಗೆ ಅರಿವನ್ನು ಮೂಡಿಸಬೇಕು, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯಿಂದಾಗಿ ನಮ್ಮ ಮಕ್ಕಳ ಭವಿಷ್ಯಕ್ಕೆ ಸಹಾಯಕವಾಗುತ್ತದೆ, ನಾವೆಲ್ಲರೂ ಧರ್ಮದ ಮಾನ್ಯತೆಗಾಗಿ ಹೋರಾಡಬೇಕು” ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬಸವಗೀತಾ ತಾಯಿಯವರು ಮಾತನಾಡಿ “ನೀನೊಲಿದರೆ ಕೊರಡು ಕೊನರುವುದಯ್ಯಾ ಎಂದರೆ ಪ್ರತಿ ಹೆಜ್ಜೆಯಲ್ಲಿಯೂ ಗುರುಬಸವಣ್ಣನವರ ಆಶೀರ್ವಾದ ನಮ್ಮೊಂದಿಗೆ ಇದ್ದೇ ಇರುತ್ತದೆ. ಇಷ್ಠಲಿಂಗವನ್ನು ಕಟ್ಟಿಕೊಳ್ಳುವುದರಿಂದ ಮಾನಸಿಕ, ದೈಹಿಕ ಆರೋಗ್ಯಗಳನ್ನು ಪಡೆದುಕೊಳ್ಳಬಹುದು” ಎಂದರು.
ವಿರೂಪಾಕ್ಷಿ ಮುದಕವಿ, ಶಿವಪ್ಪ ನಿರಾಕಾರಿ, ಬಸವರಾಜ ನರಗುಂದ, ಬಸವರಾಜ ಕಲ್ಪಡಿ ಉಪಸ್ಥಿತರಿದ್ದರು.

ಮುತ್ತು ಮುಷ್ಠಿಗೇರಿ ನಿರೂಪಣೆ ಮಾಡಿದರು. ವಚನಾಂಬಿಕಾ ಮಗದುಮ ಪ್ರಾರ್ಥಿಸಿದರು. ನಿವೇದಿತಾ ಡಿ. ಪಿ. ಸ್ವಾಗತಿಸಿದರು. ಈರಣ್ಣ ಗದಗಿನ ಹಾಗೂ ಕುಮಾರ ಚನ್ನಬಸವ ಪಾಟೀಲ ಸಂಗೀತ ಸೇವೆ ನೀಡಿದರು.