ಅಸಹ್ಯ ಹುಟ್ಟಿಸುವಂತಹ ರಾಜಕಾರಣವಾಗಿದೆ: ಸಾಣೇಹಳ್ಳಿ ಚಿಂತನೆಯಲ್ಲಿ ಬಿ.ಆರ್. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಸಾಣೇಹಳ್ಳಿ

ಇಲ್ಲಿನ ಲತಾ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ‘ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ’ ಕುರಿತು ಸಮಾನ ಮನಸ್ಕರ ಸಂವಾದ ಕಾರ್ಯಕ್ರಮ ನಡೆಯಿತು.

ಅಳಂದ ಕ್ಷೇತ್ರದ ಶಾಸಕ ಬಿ. ಆರ್. ಪಾಟೀಲ `ರಾಜಕೀಯ ಪರಿವರ್ತನೆಗೆ ಜನಾಂದೋಲನ’ ಕುರಿತು ಮಾತನಾಡಿ, ನಾವು ಚಳವಳಿಯಿಂದಲೇ ರಾಜಕಾರಣಕ್ಕೆ ಬಂದವರು. ಇವತ್ತಿನ ರಾಜಕಾರಣ ನೋಡಿದರೆ ಅಸಹ್ಯವಾಗುತ್ತದೆ.

ರಾಜಕಾರಣದಲ್ಲಿ ಬದಲಾವಣೆ ಬಂದು ಹೊಸ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಅಣಿಯಾಗಬೇಕು. ರೈತರು ಬಿಟ್ಟರೆ ಯಾವ ಅಧಿಕಾರಿ, ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ನನಗೂ ತಿಳಿದಿಲ್ಲ. ಕೈಗಾರಿಕೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ನಮ್ಮಲ್ಲಿ ಆದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಬಜೆಟ್‌ನಲ್ಲಿ ಅನೇಕ ರೀತಿಯ ಕೈಚಳಕಗಳು ನಡೆಯುತ್ತಿವೆ. ಇವತ್ತಿನ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಉದ್ಯೋಗವನ್ನು ಸೃಷ್ಠಿಸಲಿಕ್ಕೆ ಸಾಧ್ಯವಿಲ್ಲ.

ಶಿಕ್ಷಣದಲ್ಲಿ ಬದಲಾವಣೆಯಾಗಬೇಕು. ಸಮಸ್ಯೆಗಳನ್ನಿಕೊಂಡು ಜನರ ಮುಂದೆ ಹೋಗದೇ ಅದಕ್ಕೆ ಪರಿಹಾರವನ್ನಿಟ್ಟುಕೊಂಡು ಹೋಗಬೇಕು. ಜನಪರವಾಗಿ ಆಂದೋಲನ ಮಾಡಿ ಜೈಲಿಗೆ ಹೋಗುವಂಥವರು ಕಡಿಮೆ ಇದ್ದಾರೆ. ಬೇರೆ ಬೇರೆ ಕಾರಣಕ್ಕಾಗಿ ಜೈಲಿಗೆ ಹೋಗುವಂಥವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು, ಧರ್ಮ ಮತ್ತು ರಾಜಕೀಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.

ನಾಣ್ಯ ಚಲಾವಣೆಯಲ್ಲಿರಲು ಎರಡೂ ಮುಖಗಳು ಚೆನ್ನಾಗಿರಬೇಕು. ಅಂದರೆ ಉಭಯ ಕ್ಷೇತ್ರಗಳ ವ್ಯಕ್ತಿಗಳಲ್ಲಿ ಆದರ್ಶಗಳು ಅರಳಬೇಕು. ಆಗ ಸಮಾಜದ ರಥ ಸುಗಮವಾಗಿ ಮುಂದೆ ಸಾಗುವುದು. ಧರ್ಮದ ಮೂಲ ದಯೆ. ಅದು ಸಕಲ ಜೀವಾತ್ಮರಿಗೆ ಒಳಿತು ಬಯಸುವಂತಹುದು. ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ, ದಯೆ, ಪ್ರೀತಿ ಇಂಥ ಮೌಲ್ಯಗಳನ್ನು ಎತ್ತಿಹಿಡಿಯುವುದೇ ಧರ್ಮಾಧಿಕಾರಿಗಳ ಜವಾಬ್ದಾರಿ ಎಂದರು.

ತಾತ್ವಿಕರು ಆಡಳಿತದ ಸೂತ್ರಧಾರಿಗಳಾದರೆ ಪಾರದರ್ಶಕ ಮತ್ತು ಪರಿಶುದ್ಧ ಆಡಳಿತ ಕೊಡಲು ಸಾಧ್ಯ. ಇದಕ್ಕೆ ಬಸವಣ್ಣನವರ ರಾಜ್ಯಾಡಳಿತ ಪ್ರೇರಣೆ ನೀಡುವಂತಿದೆ. ಅವರು ೧೨ನೆಯ ಶತಮಾನದಲ್ಲಿ ದೊರೆ ಬಿಜ್ಜಳನ ಕಲ್ಯಾಣದಲ್ಲಿ ಪ್ರಧಾನಿ ಮತ್ತು ಅರ್ಥ ಸಚಿವರಾಗಿದ್ದರು. ಜನರಿಗೆ ಏನು ಬೇಕು ಎಂದು ಚಿಂತನೆ ಮಾಡಿ ಅಂಥದನ್ನೇ ಕೊಡುವುದು ಅವರ ಸಿದ್ಧಾಂತವಾಗಿತ್ತು. ನಿಜವಾದ ಮುಖಂಡ ಜನ ಬಯಸಿದ್ದನ್ನು ಕೊಡುವ ಬದಲು ಜನರಿಗೆ ಬೇಕಾದದ್ದೇನು ಎನ್ನುವ ದೂರದೃಷ್ಟಿಯುಳ್ಳವನಾಗಿ ಅಂಥದನ್ನೇ ಕೊಡುವನು.

ಬಸವಣ್ಣನವರು ನಿಜಾರ್ಥದಲ್ಲಿ ತಾತ್ವಿಕರು. ನಡೆ ನುಡಿಗಳಲ್ಲಿ ಅಂತರ ಇಲ್ಲದಂತೆ ಬಾಳಿದವರು. ಸ್ವಾರ್ಥದಿಂದ ಬಹುದೂರ ಇದ್ದವರು.`ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ’ ಎನ್ನುವ ತತ್ವಕ್ಕೆ ಬದ್ಧರಾದವರು. ಅವರು ಎಂದರೆ ಸಮಾಜ ಬಾಂಧವರು. ಇಂದಿನ ಅರ್ಥದಲ್ಲಿ ಮತದಾರರು. ಅವರಿಗೆ ದುಃಖವಾದರೆ ಅದು ನನಗೇ ದುಃಖ ತಂದೊಡ್ಡುವುದು. ಅವರಿಗೆ ಸುಖವಾದರೆ ಅದರಿಂದ ನನಗೂ ಸುಖವಾಗುವುದು. ಈ ಭಾವ ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ತೀರಾ ಮುಖ್ಯ. ಒಬ್ಬ ಪ್ರಜಾಪ್ರತಿನಿಧಿಗೆ ಬಸವಣ್ಣನವರ ಹಾಗೆ ಜನಪರ, ಜೀವಪರ ಚಿಂತನೆ ಇರಬೇಕು. ಅವರು ಎಂದೂ ತನಗೆ, ತನ್ನ ಮಡದಿ, ಮಕ್ಕಳಿಗೆ ಎಂದು ಕೂಡಿಡುವ ಕನಸನ್ನು ಸಹ ಕಂಡವರಲ್ಲ. ಅಧಿಕಾರ ಅಹಂಕಾರದ ಪ್ರತೀಕ ಎಂದು ಬಸವಣ್ಣನವರು ಭಾವಿಸಿದವರಲ್ಲ. ಅದು ವಿನಯ, ವಿವೇಕ ಬೆಳೆಸಿಕೊಳ್ಳಲು ಸಹಕಾರಿ ಎಂದು ನಂಬಿದವರು.

ಶುಭಾಶಯದ ನುಡಿಗಳನ್ನಾಡಿದ ಪಾಂಡೋಮಟ್ಟಿಯ ವಿರಕ್ತ ಮಠದ ಗುರುಬಸವ ಸ್ವಾಮಿಗಳು ಮಾತನಾಡಿ, ರಾಜಕೀಯ ವಿಚಾರ ಬಂದಾಗ ನಾವೆಲ್ಲರೂ ಆತ್ಮಾವಲೋಕನ ಪಡೆದುಕೊಳ್ಳಬೇಕಾದ ಸಂದರ್ಭ ಬಂದಿದೆ. ಸೇವೆಯಲ್ಲಿ ಸದ್ಗತಿಯನ್ನು ಪಡೆಯದೇ ಸೇವನೆಯಲ್ಲಿ ಸದ್ಗತಿಯನ್ನು ಪಡೆಯುತ್ತಿದ್ದಾರೆ.

ಕರ್ನಾಟಕದ ರಾಜಕಾರಣವೀಗ ದೊಡ್ಡದಾದ ಕಪ್ಪುಚುಕ್ಕಿ ಹೊಂದಿದೆ. ಒಂದು ಕಾಲದಲ್ಲಿ ಸಾತ್ವಿಕ ರಾಜಕಾರಣಿಗಳಿದ್ದರು. ಸಿದ್ಧಾಂತಗಳಿಗೆ ಬದ್ಧವಾಗಿರುವ ರಾಜಕಾರಣ ಇತ್ತು. ಅದು ಈಗ ಗಾಳಿಗೆ ತೂರಿಹೋಗಿದೆ. ಜಾರ್ಜ್ ಫರ್ನಾಂಡೀಸ್‌ರವರ ಆದರ್ಶಗಳು ದಾರಿದೀಪವಾಗಬೇಕು. ಕರ್ನಾಟಕದ ರಾಜಕಾರಣದಲ್ಲಿ ಮೊಂಡುವಾದ ಮಾಡುವ ರಾಜಕಾರಣಿಗಳು ವಿಜೃಂಬಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮುತ್ಸದ್ಧಿಗಳು ಆಡಳಿತದ ಚುಕ್ಕಾಣಿ ಹಿಡಿಯಬೇಕು.

ನೇತಾರನಿಂದ ಮತದಾರ ಭ್ರಷ್ಟನಾಗುತ್ತಿದ್ದಾನೆ. ಮತದಾರನಿಂದ ನೇತಾರ ಭ್ರಷ್ಟನಾಗುತ್ತಿದ್ದಾನೆ. ಇಬ್ಬರೂ ಸರಿಯಾಗಬೇಕು. ರಾಜಕಾರಣ ಜಾತಿಯಿಂದ ಅಳೆಯದೇ ಸಿದ್ಧಾಂತಗಳಿಂದ ಅಳೆಯಬೇಕು. ರಾಜಕಾರಣ ಮಂಗನಾಟವಾಗಬಾರದು. ರಾಜಕಾರಣಿಗಳು ಅನುಕೂಲಸಿಂಧು ರಾಜಕಾರಣ ಮಾಡಬಾರದು. ರಾಜಕಾರಣ ವ್ಯಾಪಾರ ಕೇಂದ್ರವಾಗಿದೆ. ಎಲ್ಲ ವ್ಯವಸ್ಥೆಗಳು ಸರಿಯಾಗಬೇಕಾದರೆ ರಾಜಕಾರಣ ಸರಿಯಾಗಬೇಕು.
ಕರ್ನಾಟಕದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ಆಗ ಕನ್ನಡ ಭಾಷೆ ಉಳಿಯುತ್ತದೆ ಎಂದರು.

ಬಿ. ಎಲ್. ಶಂಕರ ಮಾತಾಡುತ್ತಾ, ಜನಾಂದೋಲನ ಸರಿಯಾದ ಕಾರಣದಿಂದ ಪ್ರಾರಂಭವಾಗುವುದು. ಅವರು ಪೂರ್ವಯೋಜಿತವಾಗಿ ಜನಾಂದೋಲನ ಮಾಡುವುದಿಲ್ಲ. ಜನಗಳು ಮುಂದೆ ಜನಾಂದೋಲನವನ್ನು ಮಾಡಬೇಕು. ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಬೇಕು. ಯಾವ ವಿಷಯವನ್ನು ತೆಗೆದುಕೊಂಡರೆ ಜನರಿಗೆ ಉಪಯೋಗವಾಗುತ್ತೆ ಎನ್ನುವುದನ್ನು ಚಿಂತನೆ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣದ ಹೆಚ್ಚು ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಅದಕ್ಕೆ ಮುಂದಾಳತ್ವವಹಿಸಿಕೊಳ್ಳುವಂಥವರು ಯಾವ ರಾಜಕಾರಣಿಯಾಗಿರಬಾರದು. ಆಗ ಜನಾಂದೋಲನ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.

ಚಿಂತಕ ಹೆಗ್ಗೋಡಿನ ಪ್ರಸನ್ನ ಮಾತನಾಡಿ; ಏನೇ ಸಮಸ್ಯೆ ಬಂದರೂ ತದ್ವಿರುದ್ಧವಾಗಿ ಯೋಚನೆ ಮಾಡುತ್ತೇವೆ. ಧಾರ್ಮಿಕ ನಾಯಕರುಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯಕ್ಕೆ ಬಂದಿದ್ದಾರೆ. ಸೋತ ವ್ಯವಸ್ಥೆಯನ್ನು ಗೆಲ್ಲೋದಕ್ಕೆ ಸೋತವರನ್ನೇ ತೆಗೆದುಕೊಳ್ಳಬಾರದು. ಕಾಯಕ ಎಂದರೆ ಕೈಕೆಲಸ. ಇವತ್ತು ನಮಗೆ ಬದಲಾವಣೆ ತರೋದಕ್ಕೆ ಸಮಯವಿಲ್ಲ. ಕಾಯಕ ಜಗತ್ತು ಮಾತ್ರವೇ ಬದಲಾವಣೆ ತರೋದಕ್ಕೆ ಸಾಧ್ಯ. ಕಾಂಗ್ರೇಸ್‌ನವರಿಗೆ ಸೋಷಿಯಲ್ ಜಸ್ಟಿಸ್ ಪಾಪಪ್ರಜ್ಞೆಯಾಗಿ ಕಾಡುತ್ತಿದೆ. ನಮ್ಮ ಆಧುನಿಕ ಬದುಕನ್ನು ಕಟ್ಟಿಕೊಂಡಿರುವುದು ತುಂಡು ತುಂಡಾಗಿ. ಇದ್ದು ಇಲ್ಲದಂತಾಗಿ ಶರಣರಾಗಬೇಕು. ಚಳವಳಿಗಳು ರೂಪಕವಾಗಬೇಕು. ಜನಾಂದೋಲನ ಮಾಡುವವರೆಲ್ಲರೂ ಬಸವಣ್ಣನವರೇ.

ಪ್ರಾಸ್ತಾವಿಕವಾಗಿ ಸರ್ವೋದಯ ಸಂಘಟನೆಯ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪನವರು ಮಾತನಾಡಿ, ಕೃತಜ್ಞತೆ, ವಿವೇಕ, ಕರುಣೆ, ಆಂತರಿಕ ಶಾಂತಿ. ಮನುಷ್ಯ ದುರಾಸೆ, ಭಯ, ಮೂರ್ಖತನ ಇಡೀ ಜಗತ್ತನ್ನು ಆಳುತ್ತಿದೆ. ಮನುಷ್ಯನಿಗೆ ಕಡೆಗೀತೆ ಬಹಳ ಮುಖ್ಯ. ಮನುಷ್ಯನಿಗೆ ಇಗೋದಿಂದ ಇಕೋದ ಕಡೆಗೆ ಹೋಗುವ ಪ್ರಯತ್ನವನ್ನು ಮಾಡಬೇಕು. ಮನುಷ್ಯನಿಗೆ ನಕರಾತ್ಮಕ ಚಿಂತನೆಯನ್ನು ದೂರ ಮಾಡಿಕೊಡಿಕೊಳ್ಳಬೇಕು. ಮನುಷ್ಯ ವಾದದಿಂದ ಸಂವಾದದ ಕಡೆಗೆ ಹೋಗಬೇಕು. ಸಹನೂಭೂತಿಯನ್ನು ಮೈಗೂಡಿಸಿಕೊಳ್ಳಬೇಕು. ಮನುಷ್ಯನಿಗೆ ಒಂದು ಸಂಕಲ್ಪಶಕ್ತಿಯನ್ನಿಟ್ಟುಕೊಳ್ಳಬೇಕು. ರಾಜಕೀಯವಾಗಿ ಸಾತ್ವಿಕ, ತಾತ್ವಿಕ, ಸಜ್ಜನ ರಾಜಕಾರಣಿಗಳು ಬೇಕು. ದುರ್ಜನರು ರಾಜಕಾರಣದಲ್ಲಿ ವಿಜೃಂಬಿಸುತ್ತಿರುವುದು ನಾವು ನೋಡುತ್ತಿದ್ದೇವೆ. ಸಕಲ ಜೀವಾತ್ಮರಿಗೆ ಲೇಸನೆ ಮಾಡುವ ಕೆಲಸ ಆಗ್ಬೇಕು. ಕರ್ನಾಟಕದಲ್ಲಿ ಸರ್ವೋದಯ ರಾಜಕೀಯ ಬರಬೇಕು ಎಂದರು.

ಬಿ. ಆರ್. ಪಾಟೀಲ, ಬಿ. ಜಿ. ಗೋವಿಂದಪ್ಪ, ರಘುಮೂರ್ತಿ, ಮುಖ್ಯಮಂತ್ರಿ ಚಂದ್ರು, ಬಿ. ಎಲ್. ಶಂಕರ್, ಎ.ಟಿ. ರಾಮಸ್ವಾಮಿ, ಪ್ರಸನ್ನ ಹೆಗ್ಗೋಡು, ಎಂ. ಪಿ. ನಾಡಗೌಡ, ರವಿಕೃಷ್ಣಾರೆಡ್ಡಿ, ವಿ. ಆರ್. ಸುದರ್ಶನ, ಡಾ. ಗೋಪಾಲ ದಾಬಡೆ, ಮಹಿಮಾ ಜೆ. ಪಟೇಲ್, ಅಬ್ದುಲ್ ರೆಹಮಾನ ಪಾಷಾ, ಭೈರೇಗೌಡ, ಡಾ. ರಾಘವನ್, ತೇಜಸ್ವಿ ಪಟೇಲ್ ಶುದ್ಧ ರಾಜಕಾರಣದಲ್ಲಿ ಆಸಕ್ತಿ ಇರುವ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *