ಬಸವ ಹರಳಯ್ಯ ಸ್ವಾಮೀಜಿ ಮೇಲೆ ಹಲ್ಲೆ: ಹಲವೆಡೆ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಬಸವ ಹರಳಯ್ಯ ಗುರುಪೀಠದ ಸ್ವಾಮೀಜಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಹರಳಯ್ಯ ಮಠದ ಭಕ್ತರು, ವಿವಿಧ ಸಮಾಜಗಳ ಸದಸ್ಯರು ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.

ಚಿತ್ರದುರ್ಗದ ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಶ್ರೀಗಳ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಆರೋಪಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ಸಮಾಜವನ್ನು ಪ್ರತಿನಿಧಿಸುವ ಸ್ವಾಮೀಜಿ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಸ್ವಾಮೀಜಿಗೆ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ನಾಗರಿಕರ ಪಾಡೇನು? ಸರ್ಕಾರ ಬಸವ ಹರಳಯ್ಯ ಸ್ವಾಮೀಜಿಗೆ ರಕ್ಷಣೆ ನೀಡಬೇಕು. ಭಯದಿಂದ ಹೊರಬರುವಂತೆ ಮಾನಸಿಕ ಸ್ಥೈರ್ಯ ತುಂಬಬೇಕು’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆದಿ ಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಒತ್ತಾಯಿಸಿದರು.

ಬಸವ ಹರಳಯ್ಯ ಸ್ವಾಮೀಜಿ ಭಯಭೀತರಾಗಿದ್ದಾರೆ. ಅವರನ್ನು ಭಯದಿಂದ ಮುಕ್ತಗೊಳಿಸುವ ವಾತಾವರಣ ನಿರ್ಮಾಣಗೊಳ್ಳಬೇಕು. ಕಾನೂನಾತ್ಮಕವಾಗಿ ಏನೇ ಸಮಸ್ಯೆ ಇದ್ದರೂ ಅದನ್ನು ಕೋರ್ಟ್‌ ಬಗೆಹರಿಸುತ್ತದೆ. ಆದರೆ, ಶ್ರೀಗಳ ಮೇಲೆ ಹಲ್ಲೆ ಮಾಡಿದ ಕ್ರಮವನ್ನು ಯಾರೂ ಸಹಿಸುವುದಿಲ್ಲ’ ಎಂದರು.

ನಂತರ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿಗೆ ಸಾಂತ್ವನ ಹೇಳಿದರು.

ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹರಳಯ್ಯ ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಆಸ್ಪತ್ರೆಯ ವೈದ್ಯರಿಂದ ಆರೋಗ್ಯ ಸ್ಥಿತಿಯ ಕುರಿತು ಸಮಗ್ರ ಮಾಹಿತಿ ಪಡೆದರು.

‘ಪ್ರಕರಣದ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಯಾರೂ ಇಂತಹ ಕೆಲಸ ಮಾಡದಂತೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಮಂಡ್ಯ

ಚಿತ್ರದುರ್ಗದ ಐಮಂಗಲ ಗ್ರಾಮದ ಬಸವ ಹರಳಯ್ಯ ಸ್ವಾಮೀಜಿ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜೈ ಭೀಮ್‌ ಮಾದಿಗರ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಸಲ್ಲಿಸಿದರು

ಐಮಂಗಲದ ಹರಳಯ್ಯ ಗುರುಪೀಠದ ಸ್ವಾಮೀಜಿ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು. ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದು ಸಮಾಜದಲ್ಲಿ ತಲೆ ತಗ್ಗಿಸುವ ಕೆಲಸವಾಗಿದೆ. ಇಂತಹ ಘಟನೆಗಳು ಪದೇಪದೆ ನಡೆಯುತ್ತಿದ್ದು, ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ನಂಜುಂಡಮೌರ್ಯ, ಶಂಕರ್‌, ದೇವರಾಜು, ಚಲುವರಾಜು, ಶಿವಕುಮಾರ್, ಗವಿ, ಸ್ವಾಮಿ, ಗುರುನಾಥ, ವಿಜಯ್‌ಕುಮಾರ್, ಗಣೇಶ್‌, ರಂಗಸ್ವಾಮಿ, ಬಾಬು, ಮಂಜುಳಾ, ಲಲಿತಮ್ಮ ಇದ್ದರು.

ಪ್ರಕರಣದ ಹಿನ್ನಲೆ

ಸುಮಾರು ಒಂದು ವರ್ಷದಿಂದ ಮಠದ ಪ್ರವೇಶ ದ್ವಾರದ ಜಾಗಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಭಾನುವಾರ ರಾತ್ರಿ ಆರೋಪಿಗಳು ಮಠಕ್ಕೆ ನುಗ್ಗಿ ಹರಳಯ್ಯ ಶ್ರೀಗಳು ಹಾಗೂ ಶಾಲಾ ಬಸ್ ಚಾಲಕ ಭೀಮರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ಬಳಿಕ ದೂರು ನೀಡಲು ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದ ಶ್ರೀಗಳ ಹಿಂದೆ ಠಾಣೆಗೂ ನುಗ್ಗಿದ ಆರೋಪಿಗಳು ಅಲ್ಲಿಯೂ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಾಳುಗಳಾದ ಹರಳಯ್ಯ ಶ್ರೀಗಳು ಹಾಗೂ ಚಾಲಕ ಭೀಮರಾಜ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
1 Comment
  • ಖಂಡನೀಯ. ತಕ್ಷಣ ಸ್ವಾಮೀಜಿಯವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ತಪ್ಪಿಸತರ ಮೇಲೆ ಸೂಕ್ತವಾದ ಮತ್ತು ದಿಟ್ಟ ಕ್ರಮಗಳನ್ನು ಕಾನೂನು ರೀತ್ಯ ಕೈಗೊಳ್ಳಬೇಕು.

Leave a Reply

Your email address will not be published. Required fields are marked *