ಹುನಗುಂದ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಅವಹೇಳನಕಾರಿ, ಅವಾಚ್ಯ ಪದಗಳಿಂದ ನಿಂದಿಸಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕ ಹಾಗೂ ಬಸವಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದವು.
ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ನಾಗರತ್ನ ಭಾವಿಕಟ್ಟಿ ಮಾತನಾಡಿ, ಕನ್ನೇರಿ ಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದು, ಮಠಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಮಠದಿಂದ ಉಚ್ಚಾಟಿಸಿ ರಾಜ್ಯದಿಂದ ಬಹಿಷ್ಕರಿಸಬೇಕು. ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಡಿದ ಅವಹೇಳನಕಾರಿ ಮಾತಿಗೆ ಬಹಿರಂಗ ಕ್ಷಮೆ ಕೇಳಬೇಕು. ಕೇಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕ ಅಧ್ಯಕ್ಷ ಶಂಕ್ರಪ್ಪ ಕಡಿವಾಲ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದ ಲಿಂಗಾಯತ ಮಠಾಧಿಪತಿಗಳನ್ನು ಅಸಂವಿಧಾನಿಕ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಈ ಮಾತುಗಳು ಸ್ವಾಮೀಜಿಗಳ ಕುಲಕ್ಕೆ ಅಪಮಾನ. ಸಮಾಜದಲ್ಲಿ ಅಶಾಂತಿ ಹಾಗೂ ಒಣ ಸಂಘರ್ಷಕ್ಕೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಸ್ವಾಮೀಜಿ ಹಾಗೂ ರಾಜಕಾರಣಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ಮುಖಂಡರಾದ ಎಂ.ಎನ್. ತೆನಹಳ್ಳಿ, ಎಸ್. ಜಿ ಎಮ್ಮಿ, ಅಶೋಕ ಭಾವಿಕಟ್ಟಿ, ಸಿ.ಜಿ. ಹವಾಲ್ದಾರ, ಎಸ್. ಎನ್. ಹಾದಿಮನಿ, ಬಸವರಾಜ ಗೊಣ್ಣಾಗರ, ಆರ್.ಎಸ್. ರಾಜಮನಿ, ಮಹಾಂತೇಶ ಪರೂತಿ, ಕೆ. ಎಂ. ಅಗಸಿಬಾಗಿಲು, ಚಂದ್ರಶೇಖರ ಚಟ್ನಿಹಾಳ, ವಿಜಯಲಕ್ಷ್ಮಿ ಗಂಜಿಹಾಳ, ಗೀತಾ ಚಿತ್ತರಗಿ, ಅಂಬಕ್ಕ ಮತ್ತಿತರರು ಇದ್ದರು.