ಬೆಳಗಾವಿ:
ನಿರಾಕಾರ ದೇವನನ್ನು ಸಾಕಾರ ರೂಪದಲ್ಲಿ ಆರಾಧಿಸುವ ಇಷ್ಟಲಿಂಗ ಪೂಜೆಯು ಅಂತರಂಗ ಹಾಗೂ ಬಹಿರಂಗ ಶುದ್ಧೀಕರಣಕ್ಕೆ ಸಹಕಾರಿಯಾಗಲಿದೆ.
ನಿರಂತರ ಇಷ್ಟಲಿಂಗ ಪೂಜೆಯಿಂದ ಅಂತರಂಗದ ಜ್ಞಾನವೃದ್ಧಿಯಾಗಿ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಎಂದು ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಹಾಗೂ ತಜ್ಞವೈದ್ಯ ಡಾ.ಅವಿನಾಶ ಕವಿ ಅಭಿಪ್ರಾಯಪಟ್ಟರು.

ಅವರು ರವಿವಾರ ಬೆಳಗಾವಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದ ಪ್ರಭುದೇವ ಸಭಾಗೃಹದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಆಯೋಜಿಸಿದ್ದ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಅನುಭಾವದ ನುಡಿಗಳನ್ನಾಡಿದರು.
ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿಗಳು ದಿನದ ಕೇವಲ15 ನಿಮಿಷ ಇಷ್ಟಲಿಂಗ ಪೂಜೆಗಾಗಿ ಮೀಸಲಿಟ್ಟರೆ ಅವರ ಮನಸ್ಸಿನ ಏಕಾಗ್ರತೆ ಇಮ್ಮಡಿಗೊಂಡು ಓದಿರುವ ಅಂಶಗಳೆಲ್ಲ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇದರಿಂದ ಅವರ ಪರೀಕ್ಷಾ ಫಲಿತಾಂಶ ಉತ್ತಮವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಚಾರಿ ಗುರುಬಸವ ಬಳಗದ ಸಂಚಾಲಕ ಮಹಾಂತೇಶ ತೋರಣಗಟ್ಟಿ ಹಾಗು ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಮಹಾನಗರ ಘಟಕದ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಖಜಾಂಚಿ ಮುರುಗೇಶ ಬಾಳಿ ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು.

ಪೂಜಾ ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯಗಳ ವಿದ್ಯಾರ್ಥಿಗಳು, ಶರಣ ಶರಣೆಯರು ಪಾಲ್ಗೊಂಡಿದ್ದರು.
