ದಾವಣಗೆರೆ:
ಶ್ರೀ ಶಿವಯೋಗಾಶ್ರಮ ವಿರಕ್ತ ಮಠ ದಾವಣಗೆರೆ ವತಿಯಿಂದ ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಆಯೋಜಿಸಲಾಗಿದ್ದ ಜಯದೇವ ಜಗದ್ಗುರುಗಳ ರಥೋತ್ಸವ ಹಾಗೂ 70ನೇ ಸ್ಮರಣೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಚಿತ್ರದುರ್ಗ ಮುರುಘಾಮಠ ಆಡಳಿತ ಮಂಡಳಿ ಸದಸ್ಯರಾದ ಪೂಜ್ಯ ಬಸವಕುಮಾರ ಸ್ವಾಮೀಜಿಯವರು ಮಾತನಾಡಿ, 1938 ರ ವೇಳೆಗೆ ಜಯದೇವ ಜಗದ್ಗುರುಗಳು ಮೈಸೂರು ಸಂಸ್ಥಾನದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 18 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿರುವುದನ್ನು ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬರೆದ ಪತ್ರದಲ್ಲಿ ಕಾಣಬಹುದಾಗಿದೆ.

1903 ರಿಂದ 1956 ರ ತನಕ 53 ವರ್ಷಗಳ ಅವಧಿಯು ಕರ್ನಾಟಕ ಇತಿಹಾಸದಲ್ಲಿ ಜಯದೇವ ಜಗದ್ಗುರುಗಳ ಕೊಡುಗೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೆ 5,000 ರೂ.ಗಳನ್ನು , 1913ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಗೆ 51,000 ರೂ.ಗಳನ್ನು ಆಶೀರ್ವದಿಸಿದುದ್ದನ್ನು ಸ್ಮರಿಸಿದರು.
ದಾವಣಗೆರೆ ವಿರಕ್ತ ಮಠದ ಪೂಜ್ಯ ಡಾ. ಬಸವಪ್ರಭು ಸ್ವಾಮೀಜಿಯವರು ಮಾತನಾಡಿ, ಜಯದೇವ ಜಗದ್ಗುರುಗಳು ಭಕ್ತರ ಪ್ರೇಮಿಗಳಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಈ ದಿನದ ರಥೋತ್ಸವದಲ್ಲಿರುವ 2.5 ಅಡಿ ಎತ್ತರದ, 10.5 ಕೆಜಿ ತೂಕದ ಬೆಳ್ಳಿ ಉತ್ಸವಮೂರ್ತಿಯನ್ನು ಚಿತ್ರದುರ್ಗದ ಭಕ್ತರು ಮಾಡಿಸಿಕೊಟ್ಟಿದ್ದಾರೆ.

ಶ್ರೀ ಮಠದ ವತಿಯಿಂದ ಅಂದಾಜು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ರಥೋತ್ಸವವನ್ನು ನಿರ್ಮಿಸಲಾಗಿದೆ. ಭಕ್ತರ ಬಹುದಿನಗಳ ಆಶಯದಂತೆ ಇಂದು ಶ್ರೀ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳ ರಥೋತ್ಸವವು ನಾಡಿನ ಹರ ಗುರು ಚರಮೂರ್ತಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಸಂಪನ್ನವಾಗುತ್ತಿರುವುದು ನಮಗೆಲ್ಲಾ ಹರ್ಷ ತಂದಿದೆ ಎಂದು ತಿಳಿಸಿದರು.
ಜಾನಪದ ಕಲಾತಂಡಗಳಾದ ವೀರಗಾಸೆ, ನಗಾರಿ, ಕಹಳೆ ಹಾಗೂ ಭಕ್ತಿಯ ಹರ್ಷೋದ್ಗಾರಗಳೊಂದಿಗೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಈ ಸಂದರ್ಭದಲ್ಲಿ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಇಳಕಲ್ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ, ಶಿವಮೂರ್ತಿ ಮುರುಘಾ ಶರಣರು, ಹೆಬ್ಬಾಳ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಹಾಗೂ ನಾಡಿನ ಅನೇಕ ಸ್ವಾಮೀಜಿಯವರು ಉಪಸ್ಥಿತರಿದ್ದರು.

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ