
ನಂಜನಗೂಡು:
ಜ್ಞಾನ ಮತ್ತು ಸಂಸ್ಕಾರವು ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಇರುವ ಮಾರ್ಗಗಳು. ಎರಡನ್ನು ಪರಿಪೂರ್ಣಗೊಳಿಸಲು ಮಠಗಳಿಂದ ಮಾತ್ರ ಸಾಧ್ಯ ಮತ್ತು ಅದು ಮಠಗಳ ಕರ್ತವ್ಯ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಈಚೆಗೆ ತಾಲ್ಲೂಕಿನ ಶಿರಮ್ಮಳ್ಳಿ ಗ್ರಾಮದಲ್ಲಿ ಮುರುಗಿಸ್ವಾಮಿ ವಿರಕ್ತ ಮಠದ ಆವರಣದಲ್ಲಿ ಶಾಲಾ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಯಾರೂ ಕಬಳಿಸಲಾಗದ ಸಂಪತ್ತು ಅಂದರೆ ಜ್ಞಾನ. ಪೋಷಕರು ಮಕ್ಕಳಿಗೆ ಜ್ಞಾನದ ಜೊತೆ ಸಂಸ್ಕಾರವನ್ನು ನೀಡುವುದರ ಬಗ್ಗೆ ಹೆಚ್ಚು ಒತ್ತು ಕೊಡಬೇಕು ಎಂದರು.
ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಂಸ್ಕಾರಗಳಿಂದ ವಿಕಸನ ಸಾಧ್ಯ. ಅಂತಹ ವಿದ್ಯೆಯನ್ನು ಕಲಿಸುವುದು ಸಮಾಜದ ಕರ್ತವ್ಯವಾಗಿದೆ. ಶಾಲೆ ನಿರ್ಮಿಸುತ್ತಿರುವ ಕಾರ್ಯ ಶ್ಲಾಘನೀಯ ವಿಷಯ, ಇಂದು ಬಸವರಾಜ ಸ್ವಾಮಿಗಳ ಸಂಸ್ಮರಣೋತ್ಸವ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಸುಂದರವಾದ ಪರಿಸರದಲ್ಲಿ ಶಾಲೆ, ವಸತಿ ಶಾಲೆ ನಿರ್ಮಾಣವಾಗುತ್ತಿದ್ದು, ಮಠದ ಜ್ಞಾನವನ್ನು ಹಂಚುವ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.

ಅಕ್ಷರ, ಅನ್ನದಾಸೋಹ, ಆರೋಗ್ಯಸೇವೆ ನೀಡುವ ಮಠಗಳು ರಾಜ್ಯದ ಜನರ ಪ್ರೀತಿ, ನಂಬಿಕೆ, ಭಕ್ತಿ ಗಳಿಸಿವೆ. ಮಠದ ಇಮ್ಮಡಿ ಮುರುಗಿ ಸ್ವಾಮಿಗಳು ಸಂಕಲ್ಪತೊಟ್ಟು ಶಿಕ್ಷಣ ಸಂಸ್ಥೆ ಕಟ್ಟುತ್ತಿದ್ದಾರೆ. ಗ್ರಾಮೀಣ ಮಕ್ಕಳಿಗೆ ವಿದ್ಯೆ, ಸಂಸ್ಕಾರ ನೀಡುವಂತಾಗಲಿ ಎಂದು ಧಾರವಾಡದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಹೇಳಿದರು.
ಮಾಜಿ ಸಂಸದ ರಮೇಶ ಕತ್ತಿ, ಧಾರವಾಡದ ಶಿವಶಂಕರ ಸಾಹುಕಾರ, ಶಾಲೆ ವಸತಿ ಶಾಲೆ ನಿರ್ಮಿಸಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಸಮಾಗಮ ಮಾಡುತ್ತಿದ್ದು, ಈಗಿನ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ದೊರಕುವಂತಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ಬಸವ ಪಥ’ ಪುಸ್ತಕ ಬಿಡುಗಡೆ ನಡೆಯಿತು.
ದೇಗುಲ ಮಠದ ಚೆನ್ನಬಸವಸ್ವಾಮೀಜಿ, ಭಾಲ್ಕಿಯ ಹಿರೇಮಠದ ಗುರುಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಹರ್ಷವರ್ಧನ, ಮನೋಹರ ಮಠದ, ಮೋಹನಪ್ರಸಾದ ದುಬೆ, ನರೇಂದ್ರ ನಾಯಕ, ವಿಶ್ವನಾಥ ಕೋರವಿ, ಕೃಷ್ಣಭಟ್ ಭಾಗವಹಿಸಿದ್ದರು.
