ಕಲ್ಯಾಣವು ಪ್ರಜಾಪ್ರಭುತ್ವದ ತಾಯಿ ಬೇರು: ಡಾ. ಪ್ರಹ್ಲಾದ ಚಿಂಗಟೆ

ಬಸವ ಮೀಡಿಯಾ
ಬಸವ ಮೀಡಿಯಾ

ಯುವಜನರು ಮತ್ತು ಪ್ರಜ್ಞಾವಂತರು ರಾಜಕೀಯಕ್ಕೆ ಬರಬೇಕು

ಬಸವಕಲ್ಯಾಣ:

ಕಲ್ಯಾಣವು ಪ್ರಜಾಪ್ರಭುತ್ವದ ತಾಯಿಬೇರು. ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಇಡೀ ವಿಶ್ವಕ್ಕೆ ನೀಡಿದ್ದರು ಎಂದು ಬಸವಕಲ್ಯಾಣ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಡಾ. ಪ್ರಹ್ಲಾದ ಚೆಂಗಟೆ ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರನ್ನು ರಾಜಕೀಯ ಮತ್ತು ಆರ್ಥಿಕ ಚೌಕಟ್ಟುಗಳಿಂದ ಅರಿವ ಮೂಲಕ ಡೆಮಾಕ್ರಸಿ ಅರ್ಥಮಾಡಿಕೊಳ್ಳಬೇಕು ಎಂದರು.

ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಬಸವಣ್ಣನವರು ವೈಚಾರಿಕವಾಗಿ ಹಾಗೂ ಸೈದ್ಧಾಂತಿಕವಾಗಿ ಒಂದೇ ನಾಣ್ಯದ ಎರಡು ಮುಖವಾಗಿದ್ದಾರೆ. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಹೆಚ್ಚು ಸ್ಪಷ್ಟವಾಗಿ ಅರಿಯಲು ಬಾಬಾಸಾಹೇಬ್ ಅಂಬೇಡ್ಕರರನ್ನು ಮತ್ತು ಬಸವಣ್ಣನವರನ್ನು ಹೆಚ್ಚು ಅಧ್ಯಯನ ಮಾಡಬೇಕು.

ಪ್ರತಿಯೊಂದನ್ನು ಪ್ರಶ್ನಿಸುವ ಶಕ್ತಿ ಬರುವುದೇ ಪ್ರಜಾಪ್ರಭುತ್ವದಿಂದ ಎಂದರು.

ಯುವಕರು ಮತ್ತು ಪ್ರಜ್ಞಾವಂತರು ರಾಜಕೀಯಕ್ಕೆ ಬರಬೇಕು. ರಾಜಕೀಯ ಅಧಿಕಾರದ ಭಾಗವಾಗುವ ಮೂಲಕ ಸಾಮಾಜಿಕ ಬದಲಾವಣೆ ಮತ್ತು ಸುಧಾರಣೆಯನ್ನು ಯುವ ಸಮುದಾಯ ತರಲು ಪ್ರಯತ್ನಿಸಬೇಕು ಎಂದರು.

ಮಾನವೀಯ ಮೌಲ್ಯಗಳಿಗಾಗಿ ನಡೆದ ಕಲ್ಯಾಣದ ಕ್ರಾಂತಿಯು ಸಮಾಜದ ಅಂಚಿನ ಸಮುದಾಯದವರನ್ನು ಅನುಭವ ಮಂಟಪಕ್ಕೆ ಕರೆತರುವ ಮೂಲಕ ಹೊಸ ಹೊಸ ಚಿಂತನೆಗಳು, ಸಂವಾದಗಳು, ಚರ್ಚೆಗಳಿಗೆ ಅವಕಾಶ ನೀಡಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆ ನೀಡುವ ಮೂಲಕ ಪ್ರಜಾಪ್ರಭುತ್ವದ ಎಲ್ಲಾ ಸಂವೇದನೆಗಳನ್ನು ಕಲ್ಯಾಣದಿಂದ ಕಟ್ಟಿಕೊಡಲು ಸಾಧ್ಯವಾಯಿತು. ಭಾರತೀಯ ಸಂವಿಧಾನದ ಆಶಯಗಳನ್ನು ಪ್ರಜಾಪ್ರಭುತ್ವದ ಮೂಲಕ ಸಾಕಾರಗೊಳಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಅಧಿಕಾರ ಮೀಮಾಂಸೆ ಅರಿಯಲು ಸಂವಿಧಾನ ಮತ್ತು ತಾತ್ವಿಕ ಚಿಂತನೆಗಳು ದಾರಿಯಾಗಿದೆ. ಅಧಿಕಾರ ಬದಲಾವಣೆ, ಸಾಮಾಜಿಕ ಬೆಳವಣಿಗೆ, ದೇಶದ ಅಭಿವೃದ್ಧಿಯು ಪ್ರಜಾಪ್ರಭುತ್ವದ ನೆಲೆಯ ಮೇಲೆ ನಿಂತಿದೆ. ಹಲವು ಸಂಗತಿಗಳನ್ನು ಪ್ರಶ್ನಿಸುವ, ಪರಾಮರ್ಶಿಸುವ, ವಿಮರ್ಶಿಸುವ ಸಾಧ್ಯತೆಯೇ ಪ್ರಜಾಪ್ರಭುತ್ವದ ಗುಣವಾಗಿದೆ ಎಂದರು.

ಮಹಿಳೆಯರು ಮಾತನಾಡುವ, ತಾವು ಆಲೋಚಿಸಿದ್ದನ್ನು ಎಲ್ಲರೆದುರು ಮಂಡಿಸುವ, ತಮ್ಮ ಚಿಂತನೆಗಳನ್ನು ತಾತ್ವಿಕ ಮತ್ತು ತಾರ್ಕಿಕವಾಗಿ ಹೇಳುವ ಸ್ವಾತಂತ್ರ್ಯ ನೀಡಿದ ಬಸವಾದಿ ಶರಣರ ಧೋರಣೆಯು ಪ್ರಜಾಪ್ರಭುತ್ವದ ಆಚರಣೆಯಾಗಿತ್ತು. ಆಧುನಿಕ ಕಾಲಘಟ್ಟದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ಹಾಗೂ ತಮ್ಮ ಅಗಾಧವಾದ ಬರಹದ ಮೂಲಕವು ಮತ್ತು ಮಹಾತ್ಮ ಗಾಂಧಿಯವರು ಅಹಿಂಸೆ – ಶಾಂತಿ ತತ್ವದ ಮೂಲಕ ಪ್ರಜಾಪ್ರಭುತ್ವದ ನಡೆಗಳನ್ನು ನಮ್ಮೆಲ್ಲರಲ್ಲಿ ಸಾಧ್ಯವಾಗಿಸಿದ್ದಾರೆ ಎಂದು ಹೇಳಿದರು.

ರಾಜ್ಯಶಾಸ್ತ್ರದ ಮುಖ್ಯಸ್ಥೆ ಸಂಗೀತಾ ಮಹಾಗಾಂವೆ ಅವರು ಮಾತನಾಡಿ, ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಜಾರಿಗೆ ತರಬೇಕು. ಸಂವಿಧಾನ ಕೇವಲ ನಮಗೆ ಹಕ್ಕು ಕರ್ತವ್ಯಗಳ ಬಗ್ಗೆ ಅಷ್ಟೇ ಮಾತನಾಡುವುದಿಲ್ಲ, ಬದಲಾಗಿ ಮನುಷ್ಯ ಪ್ರಜಾಸತ್ತಾತ್ಮಕವಾಗಿ ಬದುಕು ನಡೆಸುವುದನ್ನು ಕಲಿಸಿಕೊಡುತ್ತದೆ ಎಂದರು.

ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಕುರಿತು ಭಾಷಣವನ್ನು ಮಾಡಿ, ಸಂವಿಧಾನ ಪೀಠಿಕೆಯನ್ನು ಕಂಠಪಾಠವಾಗಿ ಹೇಳಿದ ಬಿಎ ವಿದ್ಯಾರ್ಥಿನಿ ವೈಶಾಲಿಯವರನ್ನು ಡಾ. ಪ್ರಹ್ಲಾದ ಚೆಂಗಟೆ ಅವರು ಸನ್ಮಾನಿಸಿ, ಹಣದ ರೂಪದಲ್ಲಿ ಬಹುಮಾನವನ್ನು ನೀಡಿದರು.

ಶ್ರೀನಿವಾಸ್ ಉಮಾಪುರೆ, ರೋಷನ್ ಬಿ, ವಿವೇಕಾನಂದ ಶಿಂಧೆ, ನಾಗರಾಜ ನಾಸೆ, ಗಂಗಾಧರ ಸಾಲಿಮಠ, ಸಚಿನ್ ಬಿಡುವೆ ಮೊದಲಾದವರು ಇದ್ದರು.

ಐಕ್ಯುಎಸಿ ಸಂಯೋಜಕ ಪವನ್ ಪಾಟೀಲ ಸ್ವಾಗತಿಸಿದರು. ಜಗದೇವಿ ಜವಳಗೆ ನಿರೂಪಿಸಿದರು. ಚೆನ್ನಬಸಪ್ಪ ಗೌರ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *