ಗದಗ
ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯ ಜಿಲ್ಲೆ ಮತ್ತು ರಾಜ್ಯ ಪ್ರವೇಶ ನಿರ್ಬಂಧಿಸಲು ಆಗ್ರಹಿಸಿ ಜಿಲ್ಲೆಯ ಬಸವಪರ ಸಂಘಟನೆಗಳ ಸದಸ್ಯರು ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕನ್ನೇರಿ ಸ್ವಾಮಿಯನ್ನು ಧಾರ್ಮಿಕ ಭಯೋತ್ಪಾದಕರೆಂದು ಪರಿಗಣಿಸಿ, ಸರ್ವಜನರ ಶಾಂತಿಯ ತೋಟವಾದ ಬಸವರ ನಾಡಿಗೆ ಬರದಂತೆ ಬಹಿಷ್ಕರಿಸಿ ಆದೇಶ ಹೊರಡಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಸಂಘಟನೆಗಳು ಮನವಿಪತ್ರ ಸಲ್ಲಿಸಿ ಕೇಳಿಕೊಂಡಿವೆ.

“ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ, ಧಕ್ಕೆ ತಂದಿರುತ್ತಾರೆ. ಸಮುದಾಯಗಳ ಮಧ್ಯೆ ಶತ್ರುತ್ವ ಭಾವ ಹುಟ್ಟಿಸಿರುತ್ತಾರೆ. ಅಶ್ಲೀಲ, ಅಸಂವಿಧಾನಾತ್ಮಕ, ಅನೈತಿಕ ಪದಗಳನ್ನು ಬಸವಭಕ್ತರ ಕುರಿತಾಗಿ ಬಳಸಿ ತಾವು ಸ್ವಾಮಿತ್ವಕ್ಕೆ ಅನರ್ಹರು ಎಂಬುದನ್ನು ನಿರೂಪಿಸಿದ್ದಾರೆ.
ನಾಡಿನ ಸಮಾಜ ಸೇವೆಗಾಗಿ ತಮ್ಮ ಮಕ್ಕಳನ್ನೇ ತ್ಯಾಗ ಮಾಡಿದ ತಾಯಂದಿರ ಪಾವಿತ್ರ್ಯವನ್ನು ಶಂಕಿಸಿ, ಅತ್ಯಂತ ಅಗೌರವಯುತ ಪದಬಳಕೆಯನ್ನು ಆ ತಾಯಂದಿರ ಕುರಿತಾಗಿ ಮಾಡಿ, ಮಹಿಳೆಯರ ಘನತೆಗೆ ಚ್ಯುತಿ ತಂದಿದ್ದಾರೆ.

ಮಠಾಧೀಶರೆಲ್ಲರೂ ಗುರುಪುತ್ರರೆಂಬುದನ್ನು ಮರೆತು ಅವರನ್ನು ಅಪಮಾನಿಸುವುದರ ಮೂಲಕ ಇಡೀ ಲಿಂಗಾಯತ ಗುರುಪರಂಪರೆಗೆ ದ್ರೋಹ ಎಸಗಿದ್ದಾರೆ.
ಅವರ ಮಾತುಗಳು ಶಾಂತಿಭಂಗ ಮಾಡುವ, ಸಾಮರಸ್ಯ ಕದಡುವ ಪೂರ್ವನಿಯೋಜಿತ ಸಂಚಿನ ಭಾಗವೇ ಆಗಿದೆ ಎಂಬುದು ತಿಳಿದು ಬರುತ್ತಿರುವುದು ಆಶ್ಚರ್ಯವೇನಲ್ಲ.

ಲಿಂಗಾಯತ ಮಠಾಧೀಶರನ್ನು, ಬಸವ ಸಂಸ್ಕೃತಿಯ ಅಭಿಯಾನ ನಡೆಸಿದವರನ್ನು ‘…. ಹೊಡೆಯಬೇಕೆಂದು ಮೂರ್ನಾಲ್ಕು ಸಾರಿ ಪುನರುಚ್ಚರಿಸುವ ಮೂಲಕ ಜನರ ಮಧ್ಯೆ ದ್ವೇಷದ ಜ್ವಾಲೆ ಹಬ್ಬುವಂತೆ ಮಾಡಿ ಗುಂಡಾಗಿರಿಗೆ, ಆಂತರಿಕ ಅರಾಜಕತೆಗೆ ಪ್ರಚೋದಿಸಿದ್ದಾರೆ.

ಆದ್ದರಿಂದ ಇವರನ್ನು ಧಾರ್ಮಿಕ ಭಯೋತ್ಪಾದಕರೆಂದು ಪರಿಗಣಿಸಿ, ಸರ್ವಜನರ ಶಾಂತಿಯ ತೋಟವಾದ ಬಸವರ ನಾಡಿಗೆ ಬರದಂತೆ ಬಹಿಷ್ಕರಿಸಿ ಆದೇಶ ಹೊರಡಿಸಬೇಕೆಂದು,” ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಪ್ರತಿಭಟನೆಯಲ್ಲಿ ಅಶೋಕ ಬರಗುಂಡಿ, ಬಸವರಾಜ ಸೂಳಿಬಾವಿ, ಶೇಖಣ್ಣ ಕವಳಿಕಾಯಿ, ಕೆ.ಎಸ್. ಚಟ್ಟಿ, ಡಾ. ಜಿ.ಬಿ. ಪಾಟೀಲ, ಕೆ.ಎ. ಬಳಿಗೇರ, ಚೆನ್ನಯ್ಯ ಹಿರೇಮಠ, ದಾನಯ್ಯ ಗಣಾಚಾರಿ, ಎಸ್. ಎಸ್. ಕಳಸಾಪುರಶೆಟ್ರ, ಪ್ರಕಾಶ ಅಸುಂಡಿ, ಗಿರಿಜಕ್ಕ ಧರ್ಮರೆಡ್ಡಿ, ಗೌರಕ್ಕ ಬಡಿಗಣ್ಣವರ, ಶಿವಕುಮಾರ ರಾಮನಕೊಪ್ಪ, ಪಾಲಾಕ್ಷಿ ಗಣದಿನ್ನಿ, ವೀರನಗೌಡ ಕರೇಗೌಡ್ರ, ಶಿವಾನಂದ ಮುಗದ, ಎನ್.ಎಂ. ಪವಾಡಿಗೌಡ್ರ, ರಾಜಶೇಖರ ದಾನರೆಡ್ಡಿ, ಬಸವರಾಜ ಹಿರೇಹಡಗಲಿ, ಮಂಜುನಾಥ ಅಡ್ನೂರ, ಸಿದ್ದಪ್ಪ ಮೂಗುನೂರ, ಪ್ರಭುಶಂಕರ ಗೌಡರ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.