ಕಾಯಕದ ಮೌಲ್ಯ ಹೆಚ್ಚಿಸಿದ ಶರಣ ನುಲಿಯ ಚಂದಯ್ಯ

ಕಲಬುರಗಿ:

ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ನಿಟ್ಟಿನಲ್ಲಿ ಎಲ್ಲರೂ ಸೇರಿ ಸಮಾನತೆಯ ಸಮಾಜ ಕಟ್ಟಿದ ಶರಣರು ಕಾಯಕವೇ ಕೈಲಾಸ ಸಂದೇಶ ಸಾರಿದರು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಬಸವಾದಿ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶರಣ ನುಲಿಯ ಚಂದಯ್ಯನವರು ಶ್ರೇಷ್ಠ ಶರಣರಾಗಿದ್ದರು. ಅಂದಿನ ಅನುಭವ ಮಂಟಪವೆಂಬ ಪಾರ್ಲಿಮೆಂಟ್ ನಲ್ಲಿ ನುಲಿಯ ಚಂದಯ್ಯನವರು ಈ ಸಮಾಜವನ್ನು ಪ್ರತಿನಿಧಿಸುತ್ತಿದ್ದರು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತರಲ್ಲ. ಇಡೀ ಮನುಕುಲಕ್ಕೆ ಸಂಬಂಧಿಸಿದ ಆದರ್ಶ ಪುರುಷರು.‌ ಹಿಂದೂ ಧರ್ಮದ ಜಡತ್ವ ಹೋಗಲಾಡಿಸಲು ಚಳವಳಿ ಆರಂಭಿಸಿದ್ದರು. ತಮ್ಮ ಪ್ರಜಾಸತ್ತಾತ್ಮಕ ವಿಚಾರಗಳಿಂದ ಶರಣರು ಇಂದಿಗೂ ಪ್ರಸ್ತುತವೆನಿಸುತ್ತಾರೆ ಎಂದು ಹೇಳಿದರು.

ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡುತ್ತ, ಗುರು, ಲಿಂಗ, ಜಂಗಮಕ್ಕೂ ಕಾಯಕ, ಚರಸೇವೆ  ಮಾಡಬೇಕು. ಸತ್ಯ, ಶುದ್ಧ ಕಾಯಕ ಮಾಡಬೇಕು ಎಂದು ಹೇಳಿ ಕಾಯಕದ ಮೌಲ್ಯ ಹೆಚ್ಚಿಸಿದ ನುಲಿಯ ಚಂದಯ್ಯನವರು ಅಜ್ಞಾನ ಕಳೆದು ಸುಜ್ಞಾನದೆಡೆಗೆ ಸಾಗುವ ಬಸವ ಮಾರ್ಗವನ್ನು ಹಾಕಿ ಕೊಟ್ಟಿದ್ದಾರೆ. ಆ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.

ಕೊರಮ ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಭಜಂತ್ರಿ ಕರ್ಜಗಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶ್ರೀಮಂತ ಎಲ್. ಜಾಧವ, ಸಿಪಿಐ ರಾಘವೇಂದ್ರ ಭಜಂತ್ರಿ, ಶಾಂತಪ್ಪ ಜಾಧವ, ಮಹಾದೇವಿ ಭಜಂತ್ರಿ, ಜಗನ್ನಾಥ ಭಜಂತ್ರಿ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಯುವ ಮುಖಂಡ ಸುನಿಲ ಮಾನಪಡೆ ಪ್ರಾಸ್ತಾವಿಕವಾಗಿ ಮಾತನಾಡಿ ಮನವಿ ಸಲ್ಲಿಸಿದರು. ಶಿವಾನಂದ ಅಣಜಗಿ ನಿರೂಪಿಸಿ ವಂದಿಸಿದರು.

ಜಯಂತಿ ಸಮಿತಿ ಕಾರ್ಯದರ್ಶಿ ರಾಜಕುಮಾರ ಮದಗುಣಕಿ, ಹಿರಿಯರಾದ ಲಕ್ಷ್ಮಣ ಭಜಂತ್ರಿ, ಯುವ ಮುಖಂಡರಾದ ಸಿದ್ದಲಿಂಗ ಪಾಳ, ರಂಗ ಕಲಾವಿದ ಕಲ್ಯಾಣಿ ಭಜಂತ್ರಿ, ರಮೇಶ ಶಹಾಬಾಜಾರ, ಶಿವಕುಮಾರ ಅಮೃತಪ್ಪ, ಹನಮಂತ ರಾಮನಗರ, ವಿಜಯ ಸಂತ್ರಸವಾಡಿ, ಶಂಕರ ಜಾಧವ, ರಾಜಶೇಖರ ಭಜಂತ್ರಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *