(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)
ಧಾರವಾಡ
ಪ್ರಾಚೀನ ಕರ್ನಾಟಕದಲ್ಲಿ ಲಿಂಗಾಯತರು ದೇವಾಲಯಗಳನ್ನು ನಾಶ ಮಾಡಿದರೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ ಆ ಕೃತ್ಯ ಎಸಗಿದ್ದು ಶರಣರಲ್ಲ ಉಗ್ರ ಶೈವರಾಗಿದ್ದ ವೀರಮಾಹೇಶ್ವರರು.
10ನೇ ಶತಮಾನದಲ್ಲಿ ಬಂದ ಇವರು, ಮುಂದೆ ವೀರಶೈವರಾಗಿ ಬದಲಾದರು. ಆದ್ದರಿಂದ ಕೆಲವರಲ್ಲಿ ಈ ಗೊಂದಲವುಂಟಾಗಿದೆ.
ಲಿಂಗಾಯತರು ಉಗ್ರ ಶೈವರಲ್ಲ

ಲಿಂಗಾಯತರು ಅಹಿಂಸಾವಾದಿಗಳು. ವೀರಮಾಹೇಶ್ವರರು ಉಗ್ರ ಭಕ್ತಿಯ ಶೈವರು. ಅನ್ಯ ಧರ್ಮಗಳ ಸಿದ್ದಾಂತ, ದೇವಾಲಯಗಳ ಮೇಲೆ ಅವರು ನಡೆಸಿದ ಆಕ್ರಮಣ ಇತಿಹಾಸದಲ್ಲಿ ಕಾಣುತ್ತದೆ.
ಶಿವನನ್ನು ಸಂತೃಪ್ತಿಪಡಿಸಲು ತಮ್ಮ ಪ್ರಾಣವನ್ನೂ ಅರ್ಪಿಸುತ್ತಿದ್ದರು. ಆಯುಧಗಳಿಂದ ತಮ್ಮ ರುಂಡ ಕತ್ತರಿಸಿಕೊಳ್ಳುತ್ತಿದರು. ಇವರಲ್ಲಿ ಬೀಜಚ್ಛೇದ, ಕುಕ್ಷಿಚ್ಛೇದಗಳಂತಹ ಕಠೋರ ಆಚರಣೆಗಳಿದ್ದವು.
ಶಿವನ ಅಸಂಖ್ಯಾತ ಗಣಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು. ಅವರು ರುದ್ರ ಗಣದ ಪ್ರಮುಖ ವೀರಭದ್ರನ ಭಕ್ತರು. ಅವನ ಹೆಸರಿನಲ್ಲಿ ಧರ್ಮ ರಕ್ಷಣೆಗಾಗಿ ವೀರವ್ರತವನ್ನು ಸ್ವೀಕರಿಸುತ್ತಿದ್ದರು.
ಹಲವಾರು ಶಾಸನ, ಕೃತಿಗಳು ಇವರನ್ನು ಅಸಂಖ್ಯಾತರು, ವೀರವ್ರತಿಗಳು, ವೀರಮಾಹೇಶ್ವರರು ಎಂದು ಕರೆದಿವೆ. ಇವರು ನಡೆಸಿದ ಧಾರ್ಮಿಕ ಆಕ್ರಮಣ ಮತ್ತು ಉಗ್ರ ಆಚರಣೆಗಳು ವ್ಯಾಪಕವಾಗಿ ದಾಖಲಾಗಿವೆ.
ವೀರಮಾಹೇಶ್ವರರು ಆಗಮಿಕ ಶೈವರು. ‘ಪುರ’ ಹೆಸರಿನ ಗ್ರಾಮ ಅಥವಾ ಬಡಾವಣೆಗಳಲ್ಲಿ ವಾಸಿಸುತ್ತಿದ್ದರು. 14-15 ಶತಮಾನದ ನಂತರ ಇವರು ವೀರಶೈವರಾಗಿ ಬದಲಾದರು.
ಕ್ರಮೇಣ ‘ವೀರಶೈವ’ ಪದ ಲಿಂಗಾಯತಕ್ಕೆ ಪರ್ಯಾಯವಾಗಿ ಬೆಳೆಯಿತು. ಇದರಿಂದ ಲಿಂಗಾಯತರು ಅನ್ಯ ಧರ್ಮಗಳನ್ನು ನಾಶಪಡಿಸಿದ ಉಗ್ರ ಭಕ್ತಿಯ ಶೈವರು ಎಂಬ ಅಪವಾದವೂ ಬಂದಿತು.
(‘ವೀರಶೈವ: ಮತವಲ್ಲ, ವ್ರತ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ. ಮಾರ್ಗ 7)
ವೀರಮಾಹೇಶ್ವರರು ವೀರವ್ರತಿಗಳು
‘ಶಿವ’, ‘ಮಹೇಶ್ವರ’ ಒಂದೇ ದೇವರ ಹೆಸರಾಗಿದ್ದರೂ, ಅವುಗಳಿಗೆ ಭಿನ್ನ ಅರ್ಥವಿದ್ದ ಸೂಚನೆಯಿದೆ. ಜೈನ ರಾಜ ಹೆಮ್ಮಾಡಿಯರಸ ಮತ್ತವನ ಮಗ ‘ಮಾಹೇಶ್ವರ ದೀಕ್ಷೆ’ ಪಡೆದರೆಂದು ಶಾಸನದಲ್ಲಿ (ಕ್ರಿಶ 1121) ದಾಖಲಾಗಿದೆ.
ಮಾಹೇಶ್ವರರು ಮಹೇಶ್ವರನ ಅನುಯಾಯಿಗಳು. ಈ ಹೆಸರಿನಲ್ಲಿ 10ನೇ ಶತಮಾನದ ಹೊತ್ತಿಗೆ, ಜೈನ ಮತ್ತು ವೈಷ್ಣವರೊಂದಿಗೆ ಘರ್ಷಣೆಯ ಸಮಯದಲ್ಲಿ, ಒಂದು ಉಗ್ರ ಶಿವ ಪಡೆ ಅಸ್ತಿತ್ವಕ್ಕೆ ಬಂದಿತು.
ಶಿವನ ಓಲಗದಲ್ಲಿ ‘ಅಸಂಖ್ಯಾತ’ ಗಣಗಳಿದ್ದರು. ಅವರಲ್ಲಿ ಸೌಮ್ಯ ರೂಪದ ಪ್ರಮಥ ಗಣ ಮತ್ತು ಉಗ್ರ ವರ್ತನೆಯ ರುದ್ರ ಗಣ ಎರಡು ಬಗೆ. ವೀರಮಾಹೇಶ್ವರರು ರುದ್ರ ಗಣದ ಮುಖಂಡ ವೀರಭದ್ರನ ಭಕ್ತರು.
ಧರ್ಮ ರಕ್ಷಣೆಗಾಗಿ ವೀರಮಾಹೇಶ್ವರರು ವೀರಭದ್ರನ ಸನ್ನಿದಿಯಲ್ಲಿ ವೀರವ್ರತ ಹಿಡಿಯುತ್ತಿದ್ದರು. ಇವರ ವೀರವ್ರತವನ್ನು ಉಲ್ಲೇಖಿಸುವ ಬಹಳಷ್ಟು ಶಾಸನಗಳು ವೀರಭದ್ರನ ದೇವಾಲಯಗಳಲ್ಲಿ ಸಿಕ್ಕಿವೆ.
ಉದಾಹರಣೆಗೆ – ಚೌಡದಾನಪುರದ ವೀರಭದ್ರ ದೇವಾಲಯದ ಶಾಸನ (ಕ್ರಿಶ 1269) ಗುರು ಶಿವದೇವನನ್ನು ‘ವೀರವ್ರತಮಂ ಧರಿಸಿದವ’, ‘ಪರದೈವ ಮಾನಮರ್ದನ’ ಎಂದು ಬಣ್ಣಿಸಿದೆ.
ತಾಳಿಕೋಟೆ, ಅಣ್ಣಿಗೇರಿ, ತೊಣಚಿ, ಇಂಗಳಗಿ, ಶ್ರೀಶೈಲ ಮುಂತಾದ ಕಡೆ ಸಿಕ್ಕಿರುವ ಶಾಸನಗಳು ಮತ್ತು ವೀರಾಗಮಗದಂತಹ ಕೃತಿಗಳು ಇವರನ್ನು ‘ಅಸಂಖ್ಯಾತರು’, ‘ವೀರವ್ರತಿಗಳು’, ಎಂದು ಗುರುತಿಸುತ್ತವೆ.
(‘ಅಸಂಖ್ಯಾತರು-ಗಣಮಠ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ. ಮಾರ್ಗ 7)
ಅನ್ಯ ದೇವಾಲಯಗಳ ನಾಶ
ವೀರಮಾಹೇಶ್ವರರು ಹುಟ್ಟಿದ್ದು ಧಾರ್ಮಿಕ ಸಂಘರ್ಷಣೆಯ ಸಮಯದಲ್ಲಿ. ‘ಧರ್ಮ ರಕ್ಷಣೆ’ಗಾಗಿ ಇವರು ಅನ್ಯ ದೇವಾಲಯಗಳ ಮೇಲೆ ದಾಳಿ ಮಾಡಿ ನಾಶ ಪಡಿಸಿದ್ದು ದಾಖಲಾಗಿದೆ.
ಅಣ್ಣಿಗೇರಿಯ ಬ್ರಹ್ಮೇಶ್ವರ ಲಿಂಗ ದೇವಾಲಯದ ಶಾಸನದ ಪ್ರಕಾರ ವೀರ ಗೊಗ್ಗಿದೇವ ಎಂಬ ವೀರವ್ರತಿ ತೀರ್ಥಂಕರ, ಪದ್ಮಾವತಿ ವಿಗ್ರಹಗಳನ್ನು ನಾಶಪಡಿಸಿದ. ಅವನಿಗೆ ‘ಜೈನ ಮೃಗ ಬೇಟೆಕಾರ’ ಎಂಬ ಬಿರುದಿತ್ತು.
ಅವನ ಕಾಲದಲ್ಲಿ ಆ ದೇವಾಲಯದಲ್ಲಿ ಬ್ರಹ್ಮೇಶ್ವರ ಲಿಂಗವಿತ್ತು. ನಂತರ ಯಾರೋ ಲಿಂಗ ಕಿತ್ತು ಆ ಜಾಗದಲ್ಲಿ ವೀರಭದ್ರನ ಪ್ರತಿಮೆ ಕೂರಿಸಿದ್ದಾರೆ. ಆದರೆ ಲಿಂಗದ ಮುಂದಿದ್ದ ನಂದಿ ಹಾಗೆಯೇ ಇದೆ.
ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯ ಅರಸು ಮಠದ ಆಡಳಿತದಲ್ಲಿತ್ತು. ಅವರಿಂದ ವೀರಮಾಹೇಶ್ವರರು ಸಮಸ್ತ ಆಸ್ತಿ ಹಾಗೂ ಪೂಜಾ ವ್ಯವಸ್ಥೆ ಕಸಿದುಕೊಂಡರು. (ತೆಲಗು ಶಾಸನ, ಕ್ರಿಶ 1313).
ವೀರಮಾಹೇಶ್ವರರು ನಾಥ ಜೋಗಿಗಳನ್ನು ನಾಶ ಮಾಡಿ ಕುಂಭಕೋಣಂ, ಶ್ರೀಶೈಲದ ಸಾರಂಗ ಮಠಗಳನ್ನು ವಶಪಡಿಸಿಕೊಂಡರು. ಇಂದು ಈ ಮಠಗಳು ಪಂಚಾಚಾರ್ಯರನ್ನು ಸೇರಿಕೊಂಡಿವೆ.
ಕುಡತಿನಿ, ಇಂಗಳಗಿ, ತೊಣಚಿ ಮುಂತಾದ ಶಾಸನಗಳಲ್ಲಿ ಇವರ ಉಗ್ರ ಭಕ್ತಿ, ಧಾರ್ಮಿಕ ದಾಳಿ ದಾಖಲಾಗಿದೆ. ಹಲವಾರು ಬಸದಿಗಳನ್ನು ನಾಶ ಮಾಡಿದ ಮಾಹಿತಿ ತಾಳಿಕೋಟೆ ಶಾಸನದಲ್ಲಿದೆ.
(‘ಅಣ್ಣಿಗೆರೆ ಶಾಸನೋಕ್ತ ವೀರಗೊಗ್ಗಿದೇವ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ. ಮಾರ್ಗ 3)
ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದ ಉಗ್ರ ಶೈವರು

ವೀರಮಾಹೇಶ್ವರರು ಉಗ್ರ ಭಕ್ತಿಯನ್ನು ತೋರಿಸಲು ಏಕಾಂಗಿ ಅಥವಾ ಸಾಮೂಹಿಕ ಆತ್ಮಾರ್ಪಣೆಯನ್ನೂ ಮಾಡಿಕೊಳ್ಳುತ್ತಿದ್ದರು. ಇವರಲ್ಲಿ ಶಿರಚ್ಛೇದ, ಬೀಜಚ್ಛೇದ, ಕುಕ್ಷಿಚ್ಚೇದ ಮುಂತಾದ ಆಚರಣೆಗಳಿದ್ದವು.
2010ರಲ್ಲಿ ಅಣ್ಣಿಗೇರಿಯ ವೀರಭದ್ರನ/ ಬ್ರಹ್ಮೇಶ್ವರ ಲಿಂಗ ದೇವಾಲಯದ ಬಳಿ ಸಾಲಾಗಿ ಜೋಡಿಸಿದ್ದ 500 ರುಂಡಗಳು ಪತ್ತೆಯಾಗಿದ್ದವು. ವೀರ ಗೊಗ್ಗಿದೇವನ ಶಾಸನ ಇದೇ ದೇವಸ್ಥಾನದ ಆವರಣದಲ್ಲಿದೆ.
ದಾವಣಗೆರೆಯ ಅವರಗೆರೆ ಗ್ರಾಮದ ವೀರಭದ್ರನ ದೇವಸ್ಥಾನದಲ್ಲಿ ರುಂಡಗಳ ಶಿಲ್ಪ ಮತ್ತು ಗಂಡಗತ್ತರಿಯನ್ನು ಅಳವಡಿಸುವ ಕಲ್ಲು ಕಂಬಗಳಿವೆ. ಇವುಗಳನ್ನು ಗಂಡಗತ್ತರಿ ಕಂಬವೆಂದೇ ಕರೆಯುತ್ತಾರೆ.
ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯದ ಕಂಬಗಳ ಮೇಲೆ ಆತ್ಮಾಹುತಿಯ ಶಿಲ್ಪಗಳಿವೆ. ಆವರಣದ ಗೋಡೆಯ ಮೇಲೆ ಶಿವಲಿಂಗದ ಸನ್ನಿದಿಯಲ್ಲಿ ನಾಲ್ಕು ಸಾಲುಗಳಲ್ಲಿ ಜೋಡಿಸಿರುವ ರುಂಡಗಳ ಶಿಲ್ಪವಿದೆ.
ಹರಿಹರನ ಕೊವೂರು ಬ್ರಹ್ಮಯ್ಯನ ರಗಳೆಯಲ್ಲಿ 300 ಜನ ವೀರಮಾಹೇಶ್ವರರರು ಏಕ ಕಾಲಕ್ಕೆ ರುಂಡ ಅರ್ಪಿಸಿದ ವರ್ಣನೆಯಿದೆ. ಶಿವತತ್ವ ಚಿಂತಾಮಣಿಯಲ್ಲಿ ರುಂಡ ಕತ್ತರಿಸಿಕೊಂಡ ಭಕ್ತರ ವಿವರವಿದೆ.
ಗೋಲಕಿ ಮಠದಲ್ಲಿ ಭಕ್ತರ ಶಿರಚ್ಛೇದ, ಬಿಜಚ್ಛೇದ, ಕುಕ್ಷಿಚ್ಚೇದ ಮಾಡಲು ‘ವೀರಭದ್ರ’ ಹೆಸರಿನ ಬಂಟರು ಮತ್ತು ಅವರಿಗೆ ನೆರವಾಗುವ 20 ಜನ ‘ವೀರಮುಷ್ಠಿಗಳು’ ಇದ್ದರು (ಆಂಧ್ರದ ಮಲಕಾಪುರಂ ಶಾಸನ).
(‘ಅಣ್ಣಿಗೇರಿಯಲ್ಲಿ ವೀರಮಾಹೇಶ್ವರರ ಸಾಮೂಹಿಕ ರುಂಡ ಸಮರ್ಪಣೆ’ ಲೇಖನದಿಂದ ಆಯ್ದ ಭಾಗ. ಮಾರ್ಗ 3)
ವೀರಮಾಹೇಶ್ವರರು ವೀರಶೈವರಾದರು
ಕಾಶ್ಮೀರ ಮೂಲದ ಶುದ್ಧ ಶೈವರು ‘ಮಾಹೇಶ್ವರರು’ ಹೆಸರಿನಿಂದ ಭಾರತದ ಹಲವಾರು ಕಡೆ ನೆಲೆಸಿದ್ದರು. ‘ಪುರ’ಗಳಲ್ಲಿ ವಾಸಿಸುತ್ತಿದ್ದ ಇವರು ‘ಪುರವಂತ’ರೆಂದೂ, ಆಂಧ್ರದಲ್ಲಿ ಆರಾಧ್ಯರೆಂದೂ ಪ್ರಸಿದ್ದರಾಗಿದ್ದರು.
ಇವರ ವೀರ ಪಡೆಯಾಗಿದ್ದ ವೀರ ಮಾಹೇಶ್ವರರು ವೀರಭದ್ರನ ಸಾನಿದ್ಯದಲ್ಲಿ ವೀರವ್ರತ ಹಿಡಿಯುತ್ತಿದ್ದರು. ಹಲವಾರು ಶಾಸನಗಳಲ್ಲಿ, 13ನೇ ಶತಮಾನದ ಅನೇಕ ಕೃತಿಗಳಲ್ಲಿ ಇವರ ವರ್ಣನೆಯಿದೆ.
ವೀರಮಾಹೇಶ್ವರಾಚಾರಸಂಗ್ರಹ ಕೃತಿಯು “ಶಿವಲಿಂಗ ಮುದ್ರೆಯ ಹೋರಿಯನ್ನು ಕೊಲ್ಲುವ ದುರಾತ್ಮನನ್ನು ವೀರಮಾಹೇಶ್ವರವ್ರತಿ ಕೊಲ್ಲಬೇಕು…,” ಎಂದು ತಿಳಿಸುತ್ತದೆ.
14ನೇ ಶತಮಾನದಲ್ಲಿ ಕಾಕತೀಯರ ಪತನದ ನಂತರ ಆರಾಧ್ಯರು ಕರ್ನಾಟಕಕ್ಕೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಶರಣರನ್ನು ಸೇರಿಕೊಂಡರು. ವೀರಮಾಹೇಶ್ವರರ ಹೆಸರು ವೀರಶೈವವಾಗಿದ್ದು ಈ ನಂತರ.
ಆರಾಧ್ಯರು ವೈದಿಕ-ಶರಣ ಮಿಶ್ರಣ ಪರಂಪರೆಯ ಕೃತಿಗಳನ್ನು ರಚಿಸಿದರು. ಇವರ ಕೃತಿಗಳಲ್ಲಿ ‘ವೀರಶೈವ’ ಪದದ ಬಳಕೆ ಶುರುವಾಗಿ ಬೆಳೆಯಿತು. ಹಾಗೆಯೇ ‘ವೀರಮಾಹೇಶ್ವರ’ ಪದ ಕಣ್ಮರೆಯಾಯಿತು.
ವ್ರತವಾಗಿ ಶುರುವಾಗಿದ್ದ ವೀರಶೈವ ಧರ್ಮವಾಗಿ ಬದಲಾಯಿತು. ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ನಂಬಿಸಿ ಬಸವಣ್ಣನವರ ಅನುಯಾಯಿಗಳ ಮೇಲೆ ಆರಾಧ್ಯರು ಸವಾರಿ ಮಾಡಿದರು.
(‘ವೀರಮಾಹೇಶ್ವರ > ವೀರಶೈವ, ಲಿಂಗಾಯತವಂತ > ಲಿಂಗವಂತ/ಲಿಂಗಾಯತ’
ಲೇಖನದಿಂದ ಆಯ್ದ ಭಾಗ. ಮಾರ್ಗ 3)
ದೇವಾಲಯಗಳನ್ನು ನಾಶ ಮಾಡಿದ್ದು ಲಿಂಗಾಯತರಲ್ಲ

ವೀರಮಾಹೇಶ್ವರರು ವೀರಶೈವರಾಗಿ ಲಿಂಗಾಯತರಲ್ಲಿ ಸೇರಿಕೊಂಡರು. ಇದರಿಂದ ಅವರ ಉಗ್ರ ಭಕ್ತಿ, ಧಾರ್ಮಿಕ ದಾಳಿ, ಪ್ರಾಚೀನ ಲಿಂಗಾಯತರು ಮಾಡಿದ ಕೃತ್ಯಗಳು ಎಂಬ ತಪ್ಪು ಕಲ್ಪನೆ ಬೆಳೆದಿದೆ.
ಲಿಂಗಾಯತರು ಅಹಿಂಸಾವಾದಿಗಳು. ದಯವೇ ಧರ್ಮದ ಮೂಲವೆಂದ ಬಸವಣ್ಣನವರ ಭಕ್ತರು. ಹಲವಾರು ಶರಣರು ತಮ್ಮ ವಚನಗಳಲ್ಲಿ ಉಗ್ರ ಭಕ್ತಿಯ ವಿಕೃತ ಆಚರಣೆಗಳನ್ನು ಖಂಡಿಸಿದರು.
ಶಿವ, ಪಾರ್ವತಿ, ಗಣಪತಿಗಳಂತಹ ಕಲ್ಪಿತ ದೇವರುಗಳನ್ನು ವಚನಗಳು ಮತ್ತೆ ಮತ್ತೆ ನಿರಾಕರಿಸುತ್ತವೆ. ಭೃಂಗಿ, ನಂದಿ, ವೀರಭದ್ರರಂತಹ ಗಣಗಳನ್ನೂ ಶರಣರು ನಂಬುವುದಿಲ್ಲ. ಇವೆಲ್ಲಾ ವೀರಶೈವ ಕಲ್ಪನೆಗಳು.
ಶರಣರಿಗೆ ದೇವಾಲಯ ಕಟ್ಟುವುದರಲ್ಲಿ ಅಥವಾ ನಾಶಪಡಿಸುವುದರಲ್ಲಿ ಆಸಕ್ತಿಯಿರಲಿಲ್ಲ. ದೇವಾಲಯ ನಿರಾಕರಣೆ, ದೇಹವನ್ನು ದೇಗುಲವಾಗಿಸುವುದು, ಸ್ಥಾವರವನ್ನು ಜಂಗಮಗೊಳಿಸುವುದು ಅವರ ಮೂಲ ತತ್ವ.
ದೇವಾಲಯಗಳು ರಾಜರ ರಕ್ಷಣೆಯಲ್ಲಿದ್ದವು. ಅವುಗಳ ಮೇಲೆ ಮಾದರ ಚೆನ್ನಯ್ಯ, ಆಯ್ದಕ್ಕಿ ಮಾರಯ್ಯರಂತಹ ಬಡ ಕಾಯಕ ಜೀವಿ ಶರಣರು ದಾಳಿ ನಡೆಸುವುದು ಕನಸಿನಲ್ಲಿಯೂ ಸಾಧ್ಯವಿರಲಿಲ್ಲ.
ಶರಣರು ನಡೆಸಿದ್ದು ಧಾರ್ಮಿಕ, ಸಾಮಾಜಿಕ ಚಳುವಳಿ. ಸಮಾಜವನ್ನು ಸುಧಾರಿಸಲು ಅವರು ಅನುಭವ ಮಂಟಪದಲ್ಲಿ ಚರ್ಚಾಗೋಷ್ಠಿ ನಡೆಸಿದರು. ಯಾವುದೇ ಧರ್ಮದ ಮೇಲೆ ದಂಡೆತ್ತಿ ಹೋಗಲಿಲ್ಲ.
(‘ಅಣ್ಣಿಗೆರೆ ಶಾಸನೋಕ್ತ ವೀರಗೊಗ್ಗಿದೇವ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ. ಮಾರ್ಗ 3)
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
