ಚಿತ್ರದುರ್ಗ:
೧೨ನೇ ಶತಮಾನ ಭಾರತ ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಅತ್ಯಂತ ಪ್ರಮುಖವಾದದ್ದು, ಕಾರಣ ಕಲ್ಯಾಣ ಕ್ರಾಂತಿಯಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಭಿನ್ನ ಆಯಾಮಗಳಲ್ಲಿ ಬದಲಾವಣೆಯ ಪರ್ವದ ಕಾಲ. ಈ ಮನ್ವಂತರಕ್ಕೆ ಶರಣರೇ ಕಾರಣೀಭೂತರು.
ಅದರಲ್ಲಿ ಶಿವಶರಣರು, ಕಾಯಕ ಶರಣರನ್ನು ಕಾಣಬಹುದು. ಆ ಶರಣರಲ್ಲಿ ಮಾದಾರ ಚೆನ್ನಯ್ಯ, ಧೂಳಯ್ಯ, ಕಕ್ಕಯ್ಯ, ಮಡಿವಾಳ ಮಾಚಿದೇವ, ಆಯ್ದಕ್ಕಿ ಲಕ್ಕಮ್ಮ, ನುಲಿಯ ಚಂದಯ್ಯ ಅತ್ಯಂತ ಪ್ರಮುಖರಾದವರೆಂದು ಕವಿ ಲೇಖಕ ದ್ಯಾವರನಹಳ್ಳಿ ಆನಂದಕುಮಾರ ನುಡಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ನಡೆದ ಶಿವಶರಣ ನುಲಿಯ ಚಂದಯ್ಯನವರ ಜಯಂತಿಯಲ್ಲಿ ವಿಷಯಾವಲೋಕನ ಮಾಡುತ್ತಿದ್ದರು.
ನುಲಿಯ ಚಂದಯ್ಯನವರು ವಿಜಯಪುರ ಜಿಲ್ಲೆ ಹಿರೇಶಿವಣಗಿಯಲ್ಲಿ ಜನಿಸಿದರು. ಇವರ ಕಾಲಘಟ್ಟ ಕ್ರಿ.ಶ. ೧೧೬೦. ಇವರ ಅಂಕಿತನಾಮ ಚಂದೇಶ್ವರಲಿಂಗ. ಇವರು ರಚಿಸಿರುವ ಸುಮಾರು ೪೮ ರಿಂದ ೫೦ ವಚನಗಳು ಲಭ್ಯವಾಗಿವೆ.
ನುಲಿ ಎಂದರೆ ನೂಲಿನೊಂದಿಗೆ ನೇಯ್ಗೆ ಕಾಯಕ ಮಾಡುವುದಾಗಿದೆ. ಶರಣರ ಪಾರಿಭಾಷಿಕ ಪದಗಳಲ್ಲಿ ಕಾಯಕ ಪದವು ವೃತ್ತಿಯಲ್ಲಿ ತಲ್ಲೀನತೆ, ನಿಷ್ಠೆಯನ್ನು ಎತ್ತಿ ಹಿಡಿಯುವುದಾಗಿದೆ. ನುಲಿಯ ಚಂದಯ್ಯನವರು ಕೆರೆಯ ಹಿಂದೆ ಬೆಳೆದಿರುವ ಹುಲ್ಲನ್ನು ಕೊಯ್ದು ತಂದು ಅದರಿಂದ ಹಗ್ಗವನ್ನು ಮಾಡಿ ಮಾರಾಟ ಮಾಡುವ ಕಾಯಕ ನಿರ್ವಹಿಸುತ್ತ ಅದರಿಂದ ಬಂದ ಆದಾಯದಿಂದ ಜೀವನ ಸಾಗಿಸಿ ಉಳಿದದ್ದನ್ನು ದಾಸೋಹಕ್ಕೆ ಬಳಸುತ್ತಿದ್ದರು ಎಂದು ತಿಳಿಸಿದರು.
ನುಲಿಯ ಚಂದಯ್ಯನವರ ವಚನಗಳು ಭಾಷಿಕವಾಗಿ, ತಾತ್ವಿಕವಾಗಿ ಕಾಯಕದೊಂದಿಗೆ ಆಧ್ಯಾತ್ಮಿಕ ಅನುಸಂಧಾನವನ್ನು ತಿಳಿಸುವ ಪಸರಿಸುವ ಸೂಚಿಸುವ ವಚನಗಳಾಗಿವೆ.
ಅವರು ಒಮ್ಮೆ ಕೆರೆಯ ಹಿನ್ನೀರಿನಲ್ಲಿ ನುಲಿಗೆಗಾಗಿ ಹುಲ್ಲು ಕೊಯ್ಯುವ ಕಾಯಕದಲ್ಲಿ ತಲ್ಲೀನರಾದಾಗ ಇವರ ಕೊರಳಲ್ಲಿದ್ದ ಇಷ್ಟಲಿಂಗವು ಜಾರಿ ನೀರಿನೊಳಗೆ ಬೀಳುತ್ತದೆ. ಅದು ಮಾನವ ರೂಪವ ತಾಳಿ ಪುನಃ ತನ್ನನ್ನು ಚಂದಯ್ಯನ ಸೇರಲು ಕೇಳಿಕೊಂಡಾಗ ಅದು ಇಷ್ಟಲಿಂಗವಾದರು ತನ್ನನ್ನು ಬಿಟ್ಟು ಹೋಗಿದ್ದರಿಂದ ನಾನು ನಿನ್ನ ಸೇರುವುದಿಲ್ಲ ಎಂದಾಗ ಇಷ್ಟಲಿಂಗವು ಮಡಿವಾಳ ಮಾಚಿದೇವನ ಸಹಾಯ ಪಡೆದ ಕೆಲವು ಷರತ್ತುಗಳ ಮೂಲಕ ಚಂದಯ್ಯನೊಂದಿಗೆ ಇರಲು ಅನುವು ಪಡೆದು ನಂತರ ಒಂದು ಹಾಗಕ್ಕೆ ೫೦ ಹಾಗರ ಹಗ್ಗಕ್ಕೆ ಪಡೆದು ನುಲಿಯ ಚಂದಯ್ಯನಿಂದ ದೂರವಾಗಿ ಈ ಅನುಭವ ಮಂಟಪದಲ್ಲಿ ಚರ್ಚೆಯಾಗಿ ನುಲಿಯ ಚಂದಯ್ಯನೊಂದಿಗೆ ಲೀನವಾಗಲು ಅದನ್ನು ಸೇರಿಸಲು ಅವಕಾಶ ಪಡೆದ ಘಟನೆ ಅತ್ಯಂತ ಸ್ವಾರಸ್ಯಕರ ಘಟನೆಯು ನುಲಿಯ ಚಂದಯ್ಯರ ಕಾಯಕನಿಷ್ಠೆ ತೋರಿಸುತ್ತದೆ ಎಂದು ಸ್ಮರಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತ, ಆತ್ಮಶೋಧನೆಯಿಲ್ಲದೆ ಶರಣರ ಬಗೆಗೆ ಸಂಶೋಧನೆ ಮಾಡುವುದು ಅಯೋಗ್ಯತನ ಎನಿಸಿಕೊಳ್ಳುತ್ತದೆ.
ನುಲಿಯ ಚಂದಯ್ಯನವರು ಕಾಯಕ ಪರಂಪರೆಯವರು. ಅವರೆಂದೂ ಜಾತಿ ಪಂಗಡಗಳಿಗೆ ಮಹತ್ವ ನೀಡಿರಲಿಲ್ಲ. ವಿಚಾರ ಸ್ವಾತಂತ್ರ್ಯದ ಅತಿರೇಕವೇ ಜಾತಿ ಪಂಗಡಗಳಿಗೆ ಪ್ರೋತ್ಸಾಹಕ್ಕೆ ದಾರಿಯಾಗಿದೆ.
ನಡವಳಿಕೆಯಲ್ಲಿ ಕೊರತೆ ಬಂದಾಗ ತಿಳುವಳಿಕೆಯಲ್ಲೂ ಕೊರತೆ ಎಂದರ್ಥ. ಸರಿಯಾದ ತಿಳುವಳಿಕೆಯಿರುವ ಯಾವ ಮನುಷ್ಯನು ಜಾತಿಯನ್ನು ವೈಭವೀಕರಿಸಬಾರದು. ಕಾಯಕ ಧರ್ಮವೇ ಶರಣರ ಸತ್ಯ ಸಂದೇಶವಾಗಿದೆ ಎಂದರು.
ಶರಣ ಪರಂಪರೆಯ ಪ್ರಮುಖ ಘಟ್ಟ ಅಷ್ಟಾವರಣ, ಪಂಚಾಚಾರ ಹಾಗೂ ಷಟ್ಸ್ಥಲ. ಅದಕ್ಕಿಂತ ವಿಶಿಷ್ಟವಾದದ್ದೆಂದರೆ ಶರಣರ ಕಾಯಕ ಚಳುವಳಿ. ಈ ಕಾಯದಿಂದ ಮಾಡುವ ಎಲ್ಲ ಕೆಲಸಗಳು ಮಹತ್ವ ಪಡೆದಿವೆ. ಶರಣರ ಎಲ್ಲ ಕಾಯಕಗಳೂ ಸಹ ಶ್ರಮಾಧಾರಿತವಾಗಿವೆ.
ಬಸವಾದಿ ಶರಣರೆಲ್ಲರೂ ಕಾಯಕ ನಿಷ್ಠೆಗೆ ಮಹತ್ವ ಕೊಟ್ಟಿದ್ದರು. ಕಾಯಕದಲ್ಲಿ ನಿರತನಾದರೆ ಏನೆಲ್ಲ ಮರೆಯಬೇಕೆಂಬುದರ ಬಗ್ಗೆಯೇ ಒಂದು ವಚನವಿದೆ. ಗುರು, ಭಕ್ತ, ಒಟ್ಟಾರೆಯಾಗಿ ಕಾಯಕ ಮಾಡಿಯೇ ಉಣ್ಣಬೇಕೆಂದಿದ್ದಾರೆ.
ಕಾಯಕ ಪರಂಪರೆಯ ಮೂಲ ಆಶಯ ಶ್ರಮಸಹಿತ ಬದುಕಬೇಕೆಂದಿದೆ. ನುಲಿಯ ಚಂದಯ್ಯನವರ ಕಾಯಕ ನಿಷ್ಠೆಯ ಮುಂದೆ ಎಲ್ಲರೂ ತಲೆಬಾಗಬೇಕಿದೆ ಎಂದು ನುಡಿದರು.

ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಶರಣರ ಚಳುವಳಿ ಅಂದರೆ ಕಾಯಕ ಚಳುವಳಿ. ಅಲ್ಲಿ ದುಡಿದು ತಿನ್ನುವವರಿದ್ದರೇ ಹೊರತು ಬೇಡಿ ತಿನ್ನುವವರಿರಲಿಲ್ಲ. ಅದಕ್ಕಾಗಿ ಆಳ್ದನಿಂದ ಅರಸನವರೆಗೂ ಗುರುವಿನಿಂದ ಭಕ್ತ ಅಥವಾ ಶಿಷ್ಯನಾದರೂ ಕಾಯಕ ಮಾಡಬೇಕೆಂಬ ಕಾಯಕ ತತ್ವಕ್ಕೆ ಪ್ರಾಶಸ್ತ್ಯ ನೀಡಿದ್ದಾರೆಂದು ನುಡಿದರು.

ಸಮಾರಂಭದಲ್ಲಿ ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಕುಳೇನೂರು ಮುರುಘೇಶಗೌಡ್ರು, ಪ್ರಾಚಾರ್ಯರಾದ ರಘುನಾಥ ರೆಡ್ಡಿ, ಡಾ. ಎಲ್. ಈಶ್ವರಪ್ಪ ಸೇರಿದಂತೆ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಸ್.ಜೆ.ಎಂ. ಶಾಲಾ ಕಾಲೇಜುಗಳ ಕೆಲ ಸಿಬ್ಬಂದಿ ಭಾಗವಹಿಸಿದ್ದರು.
ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯದ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಲಿಂಗರಾಜು ಪ್ರಾರ್ಥನೆ ಮಾಡಿದರೆ ಕೆ.ಆರ್. ಲಕ್ಷ್ಮಿ ಸ್ವಾಗತಿಸಿದರು. ಎಸ್.ಆರ್. ಗೀತ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
