‘ದ್ವೇಷ ಅಸೂಯೆಗಳಿಂದ ಮುಕ್ತರಾಗಲು ಶರಣರ ವಿಚಾರ ಅರಿಯಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭಾವ ಶ್ರಾವಣ: ಶರಣ ಚಿಂತನ

ಹೊಸದುರ್ಗ:

ಶಿವಶರಣರ ವಚನಗಳಲ್ಲಿ ತಿಳಿಸಿರುವಂತಹ ಆದರ್ಶ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಈಚೆಗೆ ನಗರದಲ್ಲಿ ಚಿತ್ರದುರ್ಗದ ಶ್ರೀ ಮುರುಘಾಮಠ ಹಾಗೂ ಶ್ರೀಗುರು ಒಪ್ಪತ್ತಿನಸ್ವಾಮಿ ವಿರಕ್ತಮಠ, ವೀರಶೈವ ಸಮಾಜ, ಶ್ರೀ ಜಗದ್ಗುರು ಜಯದೇವ ವಿದ್ಯಾರ್ಥಿ ನಿಲಯ ಸಮಿತಿ ಹೊಸದುರ್ಗ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಜಯದೇವ ಸಭಾಂಗಣದಲ್ಲಿ ಆಯೋಜಿಸಿದ್ದ ಅನುಭವ ಶ್ರಾವಣ; ಶರಣರ ಚಿಂತನ ಮಾಲಿಕೆಯು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ನುಡಿದರು.

ಬದುಕಿನ ಒಡನಾಟದಲ್ಲಿ ಒಳ್ಳೆಯ ವ್ಯಕ್ತಿಗಳ ಸಹವಾಸ ಮಾಡಿದರೆ ಅವರಿಂದ ಒಳ್ಳೆಯ ಆಚಾರ, ವಿಚಾರಗಳನ್ನು ಕೇಳುತ್ತಾ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬಹುದೆಂದು ನುಡಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡುತ್ತಾ, ಶ್ರೀ ಮುರುಘಾಮಠವು ಅನುಭವ ಶ್ರಾವಣದ ಶರಣರ ಚಿಂತನೆ ಮಾಲಿಕೆ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತದೆ. ಬಸವಾದಿ ಶರಣರು ತಮ್ಮ ಆಚಾರ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮೌಲ್ಯಯುತವಾದ ಜೀವನವನ್ನು ನಡೆಸಿದ್ದರು ಎಂಬುದನ್ನು ಅವರ ವಚನಗಳಿಂದ ತಿಳಿಯಬಹುದೆಂದರು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಬಿ.ಪಿ. ಓಂಕಾರಪ್ಪ ‘ಶರಣರ ವಚನಗಳಲ್ಲಿ ಜೀವನ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದ ಕಾರ್ಯದರ್ಶಿ ಕೆ.ಎಸ್. ಕಲ್ಮಠ ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಕೇವಲ ಗುಡಿ ಗುಂಡಾರಗಳಿಗೆ ಸೀಮಿತವಾಗದೆ ಶರಣರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ತಮ್ಮ ಬದುಕು ಸಾರ್ಥಕವಾಗುತ್ತದೆ.

ಮುರುಘಾಮಠದಿಂದ ನಡೆಯುತ್ತಿರುವ ಅನುಭಾವ ಶ್ರಾವಣದ ಶರಣರ ಚಿಂತನ ಮಾಲಿಕೆ ಇಂದಿನ ಸಮಾಜಕ್ಕೆ ಸಮಯೋಚಿತವಾಗಿದೆ. ಪ್ರಸ್ತುತ ಸಮಾಜದಲ್ಲಿ ನಾವು ಸಾಮಾಜಿಕ ಸಾಮರಸ್ಯವನ್ನು ಕಳೆದುಕೊಂಡು ಕ್ರೌರ‍್ಯಕ್ಕೆ ಒಳಗಾಗಿದ್ದೇವೆ. ಇದರಿಂದ ಮನುಷ್ಯ ಮನುಷ್ಯರ ನಡುವೆ ದ್ವೇಷಾಸೂಯೆಗಳು ಹೆಚ್ಚಾಗಿ ಸಮಾಜ ಕಲುಷಿತವಾಗಿದೆ. ನಾವು ಇದರಿಂದ ಮುಕ್ತರಾಗಬೇಕಾದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶರಣರ ವಿಚಾರಗಳನ್ನು ತಿಳಿಯಬೇಕೆಂದರು.

ಶ್ರೀಗುರು ಒಪ್ಪತ್ತಿನಸ್ವಾಮಿ ವಿರಕ್ತಮಠ ಸಮಿತಿ ಉಪಾಧ್ಯಕ್ಷ ಎಮ್. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ, ಮಲ್ಲೇಶ ರೇಷ್ಮೆರಾಜ, ಎ.ಎಸ್. ಸಿದ್ದರಾಮೇಶ ಮುಂತಾದ ಗಣ್ಯರು ಹಾಜರಿದ್ದರು.

ಜಮುರಾ ಕಲಾವಿದರಾದ ಉಮೇಶ ಪತ್ತಾರ ಸಂಗಡಿಗರು ವಚನ ಪ್ರಾರ್ಥನೆ ಹಾಡಿದರು. ಸ್ವಾಗತವನ್ನು ಮಂಜುನಾಥ ಮಾಡಿದರೆ, ಎಸ್.ಜೆ.ಎಂ. ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರಕಾಶ್ ಜಿ.ಟಿ. ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *