ಕೇಳು, ಕೂಡಲ ಸಂಗಮದೇವಾ, ಮರಣವೇ ಮಹಾನವಮಿ

ಹನ್ನೆರಡನೆಯ ಶತಮಾನಕ್ಕಿಂತ ಮೊದಲು ಈ ನಾಡಿನಲ್ಲಿ ಸಾಮಾಜಿಕ ಧಾರ್ಮಿಕ ರಾಜಕೀಯ ಕ್ಷೇತ್ರಗಳಲ್ಲಿ ಅಸಮಾನತೆ ಶೋಷಣೆ ಮೂಢನಂಬಿಕೆ ಅಸ್ಪೃಶ್ಯತೆ ಕಂದಚಾರ ತಾಂಡವಾಡುತಿದ್ದ ಕಾಲ

ಈ ಸಂದರ್ಭದಲ್ಲಿ ಜ್ಞಾನ ಸೂರ್ಯನಂತೆ ಬೆಳಕು ಬೀರಿದವರು ಬಸವಾದಿ ಶರಣರು

ಅಂತ್ಯಜನಿಂದ ಹಾರವರ ವರೆಗೆ ಎಲ್ಲಾ ಜಾತಿಯ ಜನರು ಜೈನ ಪಾರ್ಸಿ ಧರ್ಮದ ಕೆಲವರು ಸೇರಕೊಂಡು ತಾತ್ವಿಕ ವಿಚಾರಗಳನ್ನು ಸಾಮಾಜಿಕ ಧಾರ್ಮಿಕ ರಾಜಕೀಯ ವಿಚಾರಗಳನ್ನು ಚಿಂತನೆ ಮಾಡುತಿದ್ದರು

ಅವರು ಸೇರುತಿದ್ದ ಸ್ಥಳಕ್ಕೆ ಮಹಾಮನೆ ಎಂದು ಕರೆದರು

ಕಾಯಕ ಜೀವಿಗಳಾದ ಶರಣರು ಬೆವರು ಹರಿಸಿ ಅನುಭವ ಪಡೆದುಕೊಂಡರು ಇಷ್ಟ ಲಿಂಗ ದೀಕ್ಷೆ ಪಡೆದುಕೊಂಡು ಅನುಭಾವದ ನುಡಿಗಳನ್ನು ಹಂಚಿಕೊಂಡ ಸ್ಥಳವೇ ಅನುಭವ ಮಂಟಪ ಆಯಿತು

ಇಂಥಹ ಅನುಭವ ಮಂಟಪದ ನುಡಿಗಳೇ ವಚನಗಳಾದವು
ಈ ವಚನಗಳಲ್ಲಿ ಜೀವನ ಸಾರವನ್ನು ಹಿಡಿದಿಟ್ಟಿದ್ದಾರೆ

ವಚನಗಳಲ್ಲಿ ಶೋಷಣೆಯ ದನಿ ಇದೆ
ಬಂಡಾಯದ ಕಹಳೆ ಊದಿದ್ದಾರೆ
ಮಾನವೀಯ ಮೌಲ್ಯಗಳಿವೆ
ಮೂಢನಂಬಿಕೆ ವಿರುದ್ಧ ತೊಡೆ ತಟ್ಟಿದ್ದಾರೆ
ಧಾರ್ಮಿಕ ಕ್ಷೇತ್ರಗಳಲ್ಲಿ ಇರುವ ಕತ್ತಲೆಗೆ ಬೆಳಕು ನೀಡಿವೆ
ದೇವರು ಧರ್ಮದ ಹೆಸರಿನಲ್ಲಿ ಮಾಡುವ ಶೋಷಣೆಯನ್ನು ಖಂಡಿಸಿವೆ

ವೇದ ಉಪನಿಷತ್ ಶಾಸ್ತ್ರ ಪುರಾಣಗಳನ್ನು ತಿರಸ್ಕರಿಸಿದ್ದಾರೆ
ಗುಡಿ ಗುಂಡಾರ ಬಹುದೇವತಾ ಆರಾಧನೆ ಇವುಗಳನ್ನು ನಿರಾಕರಿಸಿದ್ದಾರೆ
ಹೋಮ ಹವನ ವೃತ ನೇಮಗಳ ಚಳಿ ಬಿಡಿಸಿದ್ದಾರೆ
ಅದು ಇದು ಏಕೆ ಇಡೀ ಜಗತ್ತಿನ ಜೀವನವನ್ನು ಮೂನ್ನೂರ ಅರವತ್ತು ಕೋನದಲ್ಲಿ ವಿಶ್ಲೇಷಣೆ ಮಾಡಿದ ಶರಣರು ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ್ದಾರೆ

ಇದು ಸಹಜವಾಗಿಯೇ ಸಮಾಜದಲ್ಲಿ ಶ್ರೇಣೀಕೃತ ಸಮಾಜವನ್ನು ನಿರ್ಮಿಸಿಕೊಂಡು ಧಾರ್ಮಿಕ ಕ್ಷೇತ್ರವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿಕೊಂಡು ಜನರಲ್ಲಿ ಭಯ ಮತ್ತು ಮೌಢ್ಯ ಬಿತ್ತಿ ಸುಖ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಪುರೋಹಿತ ಶಾಹಿ ವರ್ಗಕ್ಕೆ ಇದು ನುಂಗಲಾರದ ತುತ್ತಾಯಿತು

ಈ ಶರಣ ಚಳುವಳಿ ಬಗ್ಗು ಬಡಿಲು ಕಾಯುತಿದ್ದ ಈ ವರ್ಗಕ್ಕೆ ಕೆಳವರ್ಗದಲ್ಲಿ ಹುಟ್ಟಿದ ಹರಳಯ್ಯ ಮತ್ತು ಬ್ರಾಹ್ಮಣರಾಗಿ ಹುಟ್ಟಿದ ಮಧುವರಸರು ಲಿಂಗ ದೀಕ್ಷೆ ಪಡೆದು ಲಿಂಗಾಯತಧರ್ಮ ದೀಕ್ಷೆ ಪಡೆದುಕೊಂಡು ಲಿಂಗಾಯತರಾಗಿ ತಮ್ಮ ಮಕ್ಕಳಿಗೆ ಕಲ್ಯಾಣ ಮಹೋತ್ಸವ ಆಚರಿಸಿಕೊಂಡರು

ತಮ್ಮ ಅಸ್ತಿತ್ವದ ಉಳಿವಿಗಾಗಿ ಕಾದು ಕುಳಿತಿದ್ದ ಪುರೋಹಿತ ಶಾಹಿ ವರ್ಗ ಇದನ್ನು ಅಂತರ್ಜಾತಿ ವಿವಾಹ ಎಂದು ಗುಲ್ಲೆಬ್ಬಿಸಿತು

ಪರಿಣಾಮ ಬಸವಣ್ಣನವರನ್ನು ಗಡಿ ಪಾರು ಮಾಡಲಾಯಿತು
ಮಧುವರಸ ಹರಳಯ್ಯ ದಂಪತಿಗಳಿಗೆ ಎಳೆಹೊಟ್ಟೆ ಶಿಕ್ಷೆ ವಿಧಿಸಲಾಯಿತು
ಶರಣರ ಅನುಭವದ ನುಡಿಗಳಾದ ವಚನ ರಾಶಿ ಸುಟ್ಟು ಕರಕಲಾಯಿತು

ಮಡಿವಾಳ ಮಾಚಯ್ಯ ಅಕ್ಕ ನಾಗಮ್ಮ ಚನ್ನಬಸವಣ್ಣನವರ ನೇತೃತ್ವದಲ್ಲಿ ಎಚ್ಚೆತ್ತ ಶರಣರು ಅಳಿದುಳಿದ ವಚನ ರಾಶಿಯನ್ನು ಕಟ್ಟಿಕೊಂಡು ವೀರ ಗಚ್ಚೆ ಹಾಕಿಕೊಂಡು ಕೈಯಲ್ಲಿ ಕತ್ತಿ ಹಿಡಿದುಕೊಂಡು ಸೈನ್ಯದ ಜೊತೆಗೆ ಕಾದಾಡುತ್ತಾ ಹುಬ್ಬಳ್ಳಿ ಮಾರ್ಗವಾಗಿ ಉಳಿವಿ ತಲುಪಿ ಶರಣರ ವಚನಗಳನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದರು

ಶರಣರ ಅನುಭವ ಅನುಭಾವದ ಆಧ್ಯಾತ್ಮಿಕ ಸಂಜೀವಿನಿ ನುಡಿಗಳಾದ ವಚನ ಸಾಹಿತ್ಯ ರಕ್ಷಣೆಗೆ ಸಾವಿರಾರು ಶರಣರ ತ್ಯಾಗ ಬಲಿದಾನಗಳಿಂದ ಉಳಿದಿದೆ ಎಂದು ಎಷ್ಟೋ ಜನರಿಗೆ ತಿಳಿಯದಿರುವುದು ದುರಂತವೇ ಸರಿ

ಶರಣ ಬಂಧುಗಳೇ

ಈಗ ನಮ್ಮ ಕೈಯಲ್ಲಿ ಇರುವ ವಚನ ಸಾಹಿತ್ಯವನ್ನು ನಾವೂ ಸಹ ಓದಿ ನಮ್ಮ ಸಹೋದರ ಸಹೋದರಿಯರಿಗೆ ಮುಟ್ಟಿಸುವ ಮಹತ್ವದ ಜವಬ್ದಾರಿ ನಮ್ಮ ಮೇಲೆ ಇದೆ ಇಂಥಹ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಿ ವಚನ ಸಾಹಿತ್ಯ ರಕ್ಷಣೆಗೆ ತಮ್ಮ ಜೀವವನ್ನೇ ಮುಡುಪಿಟ್ಟ ಶರಣರನ್ನು ಸ್ಮರಿಸಿಕೊಂಡು ಮಹಾನವಮಿ ಹಾಗೂ ವಚನ ವಿಜಯೋತ್ಸವ ಆಚರಿಸೋಣ

ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಕೂಡಲಸಂಗಮದೇವಾ, ಮರಣವೇ ಮಹಾನವಮಿ.

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು