ಕುಂಭಮೇಳ ಆಹ್ವಾನದಲ್ಲಿದೆ ಲಿಂಗಾಯತ ಧರ್ಮವನ್ನು ವಿರೋಧಿಸುವ ಸಂಚು (ಎಚ್ ಎಂ ಸೋಮಶೇಖರಪ್ಪ)

ಲಿಂಗಾಯತ ಸಮುದಾಯ ಕುಂಭಮೇಳಕ್ಕೆ ಬಂದಿರುವ ವಿಶೇಷ ಆಹ್ವಾನವನ್ನು ತಿರಸ್ಕರಿಸಬೇಕು. ಹಾಗೂ ಯಾರೂ ಆಹ್ವಾನಕ್ಕೆ ಮನ್ನಣೆ ಕೊಡದಂತೆ ಒತ್ತಡ ತರಬೇಕು

ಬೆಂಗಳೂರು

ಈ ಬಾರಿಯ ಕುಂಭಮೇಳವು 2025 ರ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯಲಿದೆ.

ಕುಂಭಮೇಳಗಳಲ್ಲಿ ಹಲವು ಲಕ್ಷ ಜನರು ಒಂದಡೆ ಸೇರಿ ಪುಣ್ಯ ಸ್ನಾನ ಮಾಡುತ್ತಾರೆ. ಕುಂಭಮೇಳದ ಬೇರುಗಳು ಈಗ ಹಿಂದೂ ಧರ್ಮದ ಭಾಗವೆಂದು ಪರಿಗಣಿಸುತ್ತಿರುವ ಸುಮಾರು ಕ್ರಿ.ಪೂ 1500 – 2500 ರ ಋಗ್ವೇದ ಮತ್ತು ಪುರಾಣಗಳ ಕಾಲಕ್ಕೆ ಹೋಗುತ್ತವೆ. ಇಂತಹ ಒಂದು ಪುರಾಣದ ನಂಬಿಕೆಯ ಭಾಗವಾದ ಕಥೆಯ ಪ್ರಕಾರ ಅಮರತ್ವವನ್ನು ದಯಪಾಲಿಸುವ ಅಮೃತವನ್ನು ಪಡೆಯಲು ದೇವತೆಗಳಿಗೂ ಅವರ ವಿರೋಧಿಗಳಾದ ರಾಕ್ಷಸರಿಗೂ ಸಮುದ್ರ ಮಂಥನ ನಡೆಯುತ್ತದೆ, ಅಲ್ಲಿ ದೊರೆತ ಅಮೃತದ ಗಡಿಗೆಗಾಗಿ ಆ ಎರಡೂ ಗುಂಪಿನ ಮಧ್ಯೆ ನಡೆಯುವ ಜಗಳ ಮತ್ತು ಹೋರಾಟದಲ್ಲಿ ಅಮೃತದ ಕೆಲವು ಹನಿಗಳು ನಾಲ್ಕು ಬೇರೆ ಬೇರೆ ಪ್ರದೇಶಗಳಲ್ಲಿ ಬೀಳುತ್ತವೆ.

ಅಮೃತದ ಹನಿಗಳು ಬಿದ್ದ ಸ್ಥಳಗಳೇ ಕುಂಭ ಮೇಳ ನಡೆಯುತ್ತಿರುವ ಸ್ಥಳಗಳಾದ ಉತ್ತರ ಪ್ರದೇಶದ ಪ್ರಯಾಗರಾಜ್, ಉತ್ತರಖಂಡದ ಹರಿದ್ವಾರ, ಮಹಾರಾಷ್ಟ್ರದ ನಾಸಿಕ್ ಮತ್ತು ಮಧ್ಯಪ್ರದೇಶದ ಉಜ್ಜಯನಿ. ಇವುಗಳಲ್ಲಿ ಒಂದಾದ ಪ್ರಯಾಗರಾಜದಲ್ಲಿ ಈ ಬಾರಿಯ ಕುಂಭ ಮೇಳ ನಡೆಯುತ್ತಿದೆ. ಧಾರ್ಮಿಕ ಆಚರಣೆಯಾಗಿದ್ದ ಕುಂಭ ಮೇಳಗಳನ್ನು ಹಿಂದೂ ಧರ್ಮದ ಭಾಗವೆಂದು ಹೇಳುವ ವಿವಿಧ ಧಾರ್ಮಿಕ ಪಂಥಗಳ ಸನ್ಯಾಸಿಗಳ ಮಂಡಳಿಗಳು ನೇತೃತ್ವ ವಹಿಸಿ ಸ್ಥಳೀಯ ಆಡಳಿತ ಮಂಡಳಿಗಳ ಸಹಯೋಗದೊಂದಿಗೆ ನಡೆಸುತ್ತಿದ್ದವು.

“ಹಿಂದೂ ನಾವೆಲ್ಲಾ ಒಂದು”

ಇತ್ತೀಚಿನ ವರ್ಷಗಳಲ್ಲಿ “ಹಿಂದೂ ನಾವೆಲ್ಲಾ ಒಂದು” ಎಂಬ ಘೋಷಣೆಯ ಅಡಿಯಲ್ಲಿ ಸಿಂಧೂ ನದಿ ನಾಗರೀಕತೆಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದ ಎಲ್ಲಾ ಗುಂಪುಗಳು, ಪಂಗಡಗಳು, ಮತಗಳು, ಪಂಥಗಳು ಮುಂತಾದವುಗಳನ್ನಲ್ಲಾ ಸೇರಸಿ ಐತಿಹಾಸಿಕ ಕಾರಣಕ್ಕಾಗಿ ಹಿಂದೂಗಳು ಎನ್ನುತ್ತಿದ್ದವರನ್ನೆಲ್ಲಾ ಈಗ ಹಿಂದೂ ಧರ್ಮವನ್ನಾಗಿ ಹೆಸರಿಸಿ ಅದರ ಸಂಪೂರ್ಣ ಮಾಲೀಕತ್ವವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆ (RSS) ಮತ್ತು ಅದರ ಸಹಸಂಸ್ಥೆಗಳು ಎಂದು ಗುರುತಿಸಿಕೊಂಡಿರುವ ಪರಿವಾರ ಪ್ರತಿನಿಧಿಸುತ್ತಿವೆ.

ಈ ಸಂಸ್ಥೆಯು ಮುಂದಿನ ವರ್ಷ ತನ್ನ 100 ನೇ ಸಂಸ್ಥಾಪನಾ ವರ್ಷವನ್ನು ಆಚರಿಸುತ್ತಿದ್ದು, ನೂರು ವರ್ಷಗಳು ಕಳೆದಿದ್ದರೂ ಹಿಂದೂ ಧರ್ಮದಲ್ಲಿರುವ ಹಲವು ರೀತಿಯ ತರತಮಗಳನ್ನು ಹೋಗಲಾಡಿಸಿ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡಿಲ್ಲ ಮತ್ತು ಅದನ್ನು ಮಾಡುವ ಅಜೆಂಡವೂ ಅದಕ್ಕಿಲ್ಲ ಅಲ್ಲದೆ ಆಸಕ್ತಿಯೂ ಇದ್ದಂತಿಲ್ಲ. ಇದಕ್ಕೆ ಕಾರಣ ಅದು ನಂಬಿರುವ ಮತ್ತು ಆಚರಣೆಗೆ ತರಬೇಕೆಂದಿರುವ ಅದರ ಸಿದ್ಧಾಂತಗಳ ಮೂಲ ವೇದ, ಉಪನಿಷತ್ತು, ಪುರಾಣ, ಶಾಸ್ತ್ರ, ಸ್ಮೃತಿ ಮುಂತಾದವುಗಳಾಗಿದ್ದು ಇವುಗಳ ಮೂಲ ಆಧಾರವೇ ಶ್ರೇಣೀಕೃತ ಸಮಾಜವಾಗಿದೆ. ಇದೇ ಕಾರಣಕ್ಕಾಗಿ ನಾಲ್ಕು ವರ್ಣಗಳಾಗಿ ಮಾನವ ಸಮಾಜವನ್ನು ವಿಭಜಿರುವುದು. ಇವುಗಳನ್ನು ಆಧಾರವಾಗಿಟ್ಟುಕೊಂಡು ಭಾರತೀಯ ಸಂಸ್ಕೃತಿಯನ್ನು ಇಂದಿಗೂ ಗುರುತಿಸುತ್ತಿರುವುದು ಮತ್ತು ಸಂರಕ್ಷಿಸುತ್ತಿರುವುದು.

ವಿರೋಧಿಗಳೆಲ್ಲಾ ‘ರಾಕ್ಷಸರು’ ಅಥವಾ ‘ಸಮಾಜದ್ರೋಹಿಗಳು’

ಋಗ್ವೇದ ಮತ್ತು ಪುರಾಣ ಕಾಲದಿಂದಲೂ ಸಾಮಾಜಿಕ ಕಾರಣಗಳಿಗಾಗಿ ಇವುಗಳ ಆಚರಣೆಗಳನ್ನು ವಿರೋಧಿಸುತ್ತಿದ್ದವರನ್ನು ಸಮಾಜದಲ್ಲಿ ರಾಕ್ಷಸರೆಂದು ವರ್ಗೀಕರಿಸಿ ಸಮಾಜದ್ರೋಹಿಗಳೆಂದು ಹಣೆಪಟ್ಟಿಕಟ್ಟುವುದು ಸರ್ವೇಸಾಮಾನ್ಯವಾಗಿತ್ತು.

ಈ ಹಿನ್ನೆಲೆಯಲ್ಲಿಯೇ ಸಮಾಜದ ಒಂದು ವರ್ಗವನ್ನು ದೇವತೆಗಳು ಎಂದು ಹಾಗೂ ಅವರ ಸಾಮಾಜಿಕ ನಿಲುವುಗಳನ್ನು ವಿರೋಧಿಸುತ್ತಿದ್ದವರನ್ನು ರಾಕ್ಷಸರೆಂದು ವರ್ಗೀಕರಿಸಿ, ರಾಕ್ಷಸರ ಕೈಗೆ ಅಮೃತ ಸಿಕ್ಕಿದರೆ ಸಮಾಜದಲ್ಲಿ ಅವರ ಕೈ ಮೇಲಾಗುತ್ತದೆ ಎಂಬ ಕಾರಣಕ್ಕೆ ಸಮುದ್ರ ಮಂಥನದಂತಹ ಕಥೆಗಳನ್ನು ಸೃಷ್ಟಿಸಿ ಸಮಾಜದ ಒಡೆತನವನ್ನು ಒಂದು ವರ್ಗದ ಕೈಗೆ ಸಿಗುವ ಹಾಗೆ ಮಾಡಲಾಯ್ತು. ಸಮಾಜದಲ್ಲಿನ ಜನರ ವರ್ಗೀಕರಣ, ಸಮಾಜದಲ್ಲಿ ಅವರ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಾನ-ಮಾನ, ಅವರುಗಳು ಮಾಡಬೇಕಿರುವ ಕೆಲಸಗಳು ಎಲ್ಲವನ್ನೂ ಧರ್ಮದ/ಗಳ ಹೆಸರಿನಲ್ಲಿ ವರ್ಗೀಕರಿಸಲಾಯ್ತು.

ದೇವತೆಗಳು ಮತ್ತು ರಾಕ್ಷಸರ ಮಧ್ಯೆ ನಡೆದ ಸಮುದ್ರ ಮಂಥನ ಮತ್ತು ಅಮೃತ ಗಡಿಗೆಗಾಗಿ ನಡೆದ ಹೋರಾಟ ಅದರಲ್ಲಿ ಕೊನೆಗೆ ದೇವತೆಗಳ ವಿಜಯವನ್ನು ವೈಭವೀಕರಿಸುವ ಆಚರಣೆಯೇ ಈ ಕುಂಭ ಮೇಳಗಳು.

ಪುಣ್ಯ ಸಂಪಾದಿಸಿ, ಸೇವೆ ಮಾಡಿಕೊಂಡಿರಿ

ಅಂದರೆ, ಈ ಕಥೆಯಲ್ಲಿ ಬರುವಂತೆ ಹೋರಾಟ ಅಥವಾ ಹೊಡೆದಾಟದಲ್ಲಿ ನಾಲ್ಕು ಹನಿಗಳು ಬಿದ್ದಿರುವ ನಾಲ್ಕು ಸ್ಥಳಗಳಲ್ಲಿ ಆಚರಿಸಿ ಈ ಸ್ಥಳಗಳಲ್ಲಿನ ನದಿಗಳಲ್ಲಿ ಸ್ನಾನ ಮಾಡುವುದರ ಮೂಲಕ ಸಮಾಜದ ಎಲ್ಲಾ ವರ್ಗದವರಿಗೂ ಪುಣ್ಯ ಪಡೆಯುವ ಅವಕಾಶ ಕಲ್ಪಿಸಿಕೊಡುತ್ತವೆ ಈ ಮೇಳಗಳು. ಅಮೃತ ದಕ್ಕದಿದ್ದರೂ ಕೊನೆಯ ಪಕ್ಷ ಅದು ಬಿದ್ದ ಜಾಗದಲ್ಲಿ ಸ್ನಾನ ಮಾಡಿ ಶ್ರೇಣಿಕೃತ ಸಮಾಜದಲ್ಲಿ ಪುಣ್ಯ ಸಂಪಾದಿಸಿದ ಸಂತೃಪ್ತಿಯಿಂದ ತಮಗೆ ವಹಿಸಿದ ಸೇವೆ ಮಾಡಿಕೊಂಡಿರುವ ಜನ ಸಮೂಹದ ಸೃಷ್ಟಿ ಮತ್ತು ಆ ಸಮೂಹಗಳ ಮೇಲೆ ತಮ್ಮ ಹಿಡಿತವನ್ನು ಗಟ್ಟಿಗೊಳಿಸಿಕೊಳ್ಳುವ ಉದ್ದೇಶ ಈ ಆಚರಣೆಯ ಹಿಂದಿನ ಹುನ್ನಾರವಾಗಿದೆ.

ಇಂತಹ ಪೌರಾಣಿಕ ಕಥೆಗಳಲ್ಲಿ ಮತ್ತು ಆಚರಣೆಗಳಲ್ಲಿ ಸಂಪೂರ್ಣ ನಂಬಿಕೆಯಿರುವ ಸಂಘ ಪರಿವಾರ ಈ ಕಾರಣಕ್ಕಾಗಿಯೇ “ಹಿಂದೂ ನಾವೆಲ್ಲಾ ಒಂದು” ಎಂಬ ಘೋಷವಾಕ್ಯದಡಿಯಲ್ಲಿ ಎಲ್ಲರನ್ನೂ ಧರ್ಮ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ಒಂದು ಮಾಡಲು ಹರ ಸಾಹಸ ಮಾಡುತ್ತಿದೆ. ಸಮಾಜದಲ್ಲಿನ ಹಲವು ಬಗೆಯ ತರತಮಗಳನ್ನ ಹೋಗಲಾಡಿಸುವ ಬದಲಾಗಿ ನಾವೆಲ್ಲಾ ಒಂದು ಎಂದು ನಂಬಿಸುವ ಕೆಲಸದಲ್ಲಿ ಮಾತ್ರ ಅದಕ್ಕೆ ಆಸಕ್ತಿ. ಇದು ರಾಜಕೀಯ ಅಧಕಾರಕ್ಕಾಗಿ ನಿರಂತರವಾಗಿ ಅದು ನಡೆಸುವ ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಕಾರಣ.

ಬಸವ ಚಳುವಳಿ

ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಭಾಗವಾಗಿ ಸಂಘ ಪರಿವಾರವು ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಚಳುವಳಿಯನ್ನು ಅದೇ ಕಾಲಮಾನದಲ್ಲಿ ನಡೆದ ಇತರೆ ಭಕ್ತಿ ಚಳುವಳಿಗಳಂತೆ ಇದೂ ಕೂಡ ಒಂದು ಭಕ್ತಿ ಚಳುವಳಿ ಎಂದು ಬಿಂಬಿಸುವ ಕೆಲಸವನ್ನು ಮುನ್ನೆಲೆಗೆ ತರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಶರಣತತ್ವ/ಬಸವತತ್ವದ ಆಧಾರದಲ್ಲಿ ಉದಯಿಸಿರುವ ಲಿಂಗಾಯತ ಧರ್ಮೀಯರು ಜೈನ ಧರ್ಮಕ್ಕೆ, ಬೌದ್ಧ ಧರ್ಮಕ್ಕೆ, ಸಿಖ್ ಧರ್ಮಕ್ಕೆ ಸಿಕ್ಕಿರುವ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಲಿಂಗಾಯತ ಧರ್ಮಕ್ಕೂ ಕೊಡಬೇಕೆಂಬ ಹೋರಾಟ ಪ್ರಾರಂಭಸಿದ ಕಾರಣಕ್ಕೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಈ ಬೇಡಿಕೆಯನ್ನು ಮನ್ನಿಸಿ, ಅದರ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಅನುಮೋದಿಸುವ ಬದಲಾಗಿ ಹಲವು ಕಾರಣಗಳನ್ನು ನೀಡಿ ಹಿಂದಕ್ಕೆ ಕಳುಹಿಸಿದೆ. ಇದರ ಮುಂದುವರಿದ ಭಾಗವಾಗಿ ಮುಂದೆ ಎಂದೆಂದೂ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಬಿಜೆಪಿಯ ಮಾತೃಸಂಸ್ಥೆಯಾದ ಆರೆಸ್ಸೆಸ್ಸ್ ಆದ್ಯತೆಯ ವಿಷಯವನ್ನಾಗಿಸಿಕೊಂಡಿದೆ.

ವಚನ ದರ್ಶನ

ಆ ಕಾರಣಕ್ಕಾಗಿ, ಇತ್ತೀಚೆಗೆ ವಚನ/ಶರಣ ಚಳುವಳಿಯ ಆದರ್ಶಗಳಿಗೆ ವಿರುದ್ಧವಾದ “ವಚನ ದರ್ಶನ” ಎಂಬ ಪುಸ್ತಕವೊಂದನ್ನು ಲಿಂಗಾಯತ ಮಠಾಧೀಶರುಗಳನ್ನೇ ಮುಂದಿಟ್ಟುಕೊಂಡು ರಾಷ್ಟ್ರದ ರಾಜಧಾನಿ ದೆಹಲಿಯೂ ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ದೊಡ್ಡ ಮಟ್ಟದ ಸಭೆಗಳನ್ನು ಆಯೋಜಿಸಿ, ಅದರಲ್ಲಿ ಆರೆಸ್ಸೆಸ್ಸಿನ ಒಬ್ಬ ಪ್ರತಿನಿಧಿ, ಅದರ ರಾಜಕೀಯ ಮುಖವಾಣಿ ಬಿಜೆಪಿಯ ಒಬ್ಬ ಪ್ರತಿನಿಧಿ, ಒಬ್ಬ ಹಿಂದುತ್ವ ರಾಜಕೀಯಕ್ಕ ಕೈಜೋಡಿಸಿರುವ ಸಾಂಸ್ಕೃತಿಕ ಅಥವಾ ಶೈಕ್ಷಣಿಕ ತಜ್ಞರು, ಜೊತೆಗೆ ಆರೆಸ್ಸೆಸ್ಸಿನ ಹಿಂದುತ್ವ ರಾಜಕಾರಣಕ್ಕ ಬಲಿಯಾಗಿರುವ ಒಬ್ಬ ವೀರಶೈವ/ಲಿಂಗಾಯತ ಮಠಾಧೇಶರುಗಳನ್ನು ಸಮ್ಮುಖದಲ್ಲಿ ಆರೆಸ್ಸೆಸ್ಸ್ ಮತ್ತು ಬಿಜೆಪಿ ಪ್ರತನದಿಗಳ ಭಾಷಣಗಳ ಜೊತೆಗೆ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಸಾಂಸ್ಕೃತಿಕ ಮತ್ತು ಧಾರ್ಮಿಕ ರಾಜಕಾರಣವನ್ನು ಮಾಡುತ್ತಿದೆ.

ವೇದ, ಉಪನಿಷತ್ತು, ಪುರಾಣಗಳ ಹಿಂದಿನ ಸಿದ್ಧಾಂತ ಮತ್ತು ಆಚರಣೆ ಮುಂತಾದವುಗಳನ್ನು ವಿರೋಧಿಸಿ ಸಮಸಮಾಜದ ಕನಸನ್ನು ಹೊತ್ತುಕೊಂಡು, ಬಸವಣ್ಣನವರ ನೇತೃತ್ವದ ಶರಣ/ವಚನ ಚಳುವಳಯನ್ನು ಅವರುಗಳು ರಚಿಸಿದ ವಚನಗಳನ್ನು ವೇದ ಮತ್ತು ಉಪನಿಷತ್ತುಗಳ ಮುಂದುವರಿದ ಭಾಗವೇ ಹೊರತು ಸಮಸಮಾಜ ನಿರ್ಮಾಣದ ಯಾವ ಪ್ರಯತ್ನವೂ ಆಗಲಿಲ್ಲ, ಬಸವಣ್ಣನೇ ಇರಲಿಲ್ಲ, ಅಂತಹ ವಚನಗಳನ್ನು ರಚಿಸಲೇಯಿಲ್ಲ ಮತ್ತು ಅಂತಹ ಚಳುವಳಿಯೇ ನಡೆಯಲಿಲ್ಲ ಬದಲಾಗಿ ಅದು ಒಂದು ಭಕ್ತಿ ಚಳುವಳಿಯಾಗಿದ್ದು ದೇವರನ್ನು ಒಲಿಸಿಕೊಳ್ಳುವ ಇನ್ನೊಂದು ಮಾದರಿಯಾಗಿತ್ತು ಎಂಬ ವಾದವನ್ನು ಮುಂದಿಟ್ಟು ಲಿಂಗಾಯತರೂ ಸಹ “ಹಿಂದೂ ನಾವೆಲ್ಲಾ ಒಂದು” ಎನ್ನುವ ಘೋಷಣೆಯ ಭಾಗವೆಂದು ನಂಬಿಸುವ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಇದರ ಇನ್ನೊಂದು ಭಾಗವಾಗಿ ಸಂಘ ಪರಿವಾರದ ಅಂಗಸಂಸ್ಥೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು (ಎ.ಬಿ.ವಿ.ಪಿ) ವಿದ್ಯಾರ್ಥಿಗಳಿಗೆ “ಇಷ್ಟಲಿಂಗ” ದೀಕ್ಷೆಯನ್ನೂ ಏರ್ಪಡಿಸುತ್ತಿರುವ ವದಂತಿಗಳೂ ಬರುತ್ತಿವೆ. ಈ ಮೂಲಕ ಇಷ್ಟಲಿಂಗ ಬಸವಣ್ಣನವರ ಅನ್ವೇಷಣೆಯಲ್ಲ ಅದು ಹನ್ನೆರಡನೇ ಶತಮಾನಕ್ಕೂ ಮುಂಚೆಯೇ ಹಿಂದೂ ಧರ್ಮದ ಭಾಗವಾಗಿ ಇತ್ತು ಎಂಬ ಸಂದೇಶವನ್ನು ವಿದ್ಯಾರ್ಥಿ ಸಮೂಹಕ್ಕೆ ಕೊಡುವ ಪ್ರಯತ್ನವನ್ನು ಮಾಡುತ್ತಿದೆ. ಅಂದರೆ ಲಿಂಗಾಯತ ಧರ್ಮವನ್ನು ಹಿಂದೂ ಧರ್ಮವು ಆಪೋಶನ ತೆಗೆದುಕೊಳ್ಳುವ ಪ್ರಯತ್ನದ ಭಾಗವಾಗಿ ಈ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳಲಾಗತ್ತಿದ್ದು ಈ ಕೆಲಸಕ್ಕೆ ಬಸವತತ್ವ ಆಧಾರಿತ ಲಿಂಗಾಯತ ಧರ್ಮದ ಮಠಾಧಪತಿಗಳನ್ನೇ ಉಪಯೋಗಿಸಿಕೊಳ್ಳಲಾಗುತ್ತಿದೆ.

ಲಿಂಗಾಯತ ಧರ್ಮದ ಆಪೋಶನ

ಮೇಲೆ ಚರ್ಚಿಸಲಾದ ಸಂಘ ಪರಿವಾರದ ಲಿಂಗಾಯತ ಧರ್ಮವನ್ನು ಆಪೋಶನ ತಗೆದುಕೊಳ್ಳುವ ಭಾಗವಾಗಿ ಈ ಬಾರಿ ಪ್ರಯಾಗರಾಜದಲ್ಲಿ ನಡೆಯುವ ಹಿಂದೂ ಧರ್ಮದ ಶ್ರೇಣೀಕೃತ ಸಮಾಜದ ಉಳಿವು ಮತ್ತು ಮುಂದುವರಿಕೆಗಾಗಿ ಆಚರಿಸಲಾಗುತ್ತಿರುವ ಕುಂಭ ಮೇಳಕ್ಕೆ ಲಿಂಗಾಯತರಿಗೆ ವಿಶೇಷ ಆಹ್ವಾನ ಕೊಡುವ ತೀರ್ಮಾನವನ್ನು ಇತ್ತೀಚೆಗೆ ಮಥುರಾದಲ್ಲಿ ನಡೆದ ಆರೆಸ್ಸೆಸ್ಸಿನ ಅಖಿಲ ಭಾರತೀಯ ಕಾರ್ಯಕಾರೀ ಮಂಡಲಿಯಲ್ಲಿ ನಿರ್ಧರಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಇಲ್ಲಿ, ಈ ಸಂದರ್ಭದಲ್ಲಿ ಏಳುವ ಪ್ರಶ್ನೆಗಳೆಂದರೆ ಲಿಂಗಾಯತರು ಮತ್ತು ಲಿಂಗಾಯತ ಧಾರ್ಮಿಕ ಮುಖಂಡರುಗಳು ಹಾಗೂ ಮಠಾಧೀಶರುಗಳು ಇಲ್ಲಿಯವರೆಗೂ ಏಕೆ ಭಾಗವಹಿಸಲಿಲ್ಲ ಮತ್ತು ಕುಂಭ ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಧಾರ್ಮಿಕ ಮಂಡಳಿಗಳು ಮತ್ತು ಸಂಸ್ಥೆಗಳು ಏಕೆ ಆಹ್ವಾನ ನೀಡಲಿಲ್ಲ. ಆದರೆ ಈಗ ಏಕೆ? ಈ ಪ್ರಶ್ನೆಗಳಿಗೆ ಇಂದು ಆಹ್ವಾನ ನೀಡುವ ನಿರ್ಧಾರ ತಗೆದುಕೊಂಡಿರುವ ಆರೆಸ್ಸೆಸ್ಸಿನ ಪ್ರಮುಖ ಪದಾಧಿಕಾರಿಗಳು ಉತ್ತರಿಸಬೇಕಾಗುತ್ತದೆ.

ಲಿಂಗಾಯತರಿಗೆ ಕುಂಭ ಮೇಳದಲ್ಲಿ ನಂಬಿಕೆಯಿಲ್ಲ

ಲಿಂಗಾಯತ ಧರ್ಮವು ವೇದ, ಪ್ರುರಾಣ, ಉಪನಿಷತ್ತು, ಶಾಸ್ತ್ರ, ಸ್ಮೃತಿಗಳ ಆಧಾರದ ಸಂಸ್ಕೃತಿಗಳನ್ನು ವಿರೋಧಿಸುವ ಮತ್ತು ಪ್ರತಿಭಟಿಸುವ ಮೂಲಕ ಬಸವಣ್ಣನವರ ನೇತೃತ್ವದಲ್ಲಿ ಶರಣರ ಸಮಾಜೋ-ಧಾರ್ಮಿಕ ಚಳುವಳಿಯ ರೂಪದಲ್ಲಿ ಹೊಸ ಧರ್ಮವಾಗಿ ಉದಯಿಸಿದೆ. ಈ ಕಾರಣಗಳಿಗಾಗಿ ಲಿಂಗಾಯತ ಧರ್ಮವು ಬಹುದೇವತಾ ಆರಾಧನೆಯಲ್ಲಿಯೂ ನಂಬಿಕೆ ಹೊಂದಿಲ್ಲ. ಕುಂಭ ಮೇಳದ ಹಿಂದಿನ ಧಾರ್ಮಿಕ ನಂಬಿಕೆಗಳಲ್ಲಿಯೂ ನಂಬಿಕೆ ಹೊಂದಿಲ್ಲ. ಸ್ವರ್ಗ-ನರಕ, ದೇವತೆಗಳು-ರಾಕ್ಷಸರು ಮತ್ತು ಶ್ರೇಣಿಕೃತ ವರ್ಣಾಶ್ರಮ ವ್ಯವಸ್ಥೆಯಲ್ಲಿಯೂ ನಂಬಿಕ ಹೊಂದಿಲ್ಲ.

ಬದಲಾಗಿ “ಸಕಲ ಜೀವರಾಶಿಗೂ ಲೇಸನೆ ಬಯಸುವ” ತಾತ್ವಿಕ ಹಿನ್ನೆಲೆಯಲ್ಲಿ ನಂಬಿಕೆ ಹೊಂದಿದ್ದು ಲಿಂಗಾಯತ ಧರ್ಮದ ನಂಬಿಕೆ ಮತ್ತು ಆಚರಣೆಗಳು ಸಂಪೂರ್ಣವಾಗಿ ಹೊಂದೂ ಧರ್ಮವೆಂದು ಗುರುತಿಸಲ್ಪಡುತ್ತಿರುವ ಶ್ರೇಣೀಕೃತ ಧರ್ಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಆದರೆ, ಕುಂಭ ಮೇಳಗಳು ಮೇಲೆ ಪಟ್ಟಿ ಮಾಡಿರುವ ವೇದೋಪನಿಷತ್ತುಗಳ ಆಧಾರದಲ್ಲಿ ನಡೆಯುವ ಆಚರಣೆಗಳಾಗಿವೆ. ಬಹುಷಃ ಈ ಕಾರಣಗಳಿಗಾಗಿ ಹಿಂದೂ ಧರ್ಮದ ಇತರೆ ಮತ, ಪಂಥ, ಜಾತಿಗಳ ಜನರು ಮತ್ತು ಅವುಗಳ ಧಾರ್ಮಿಕ ಮುಖಂಡರಗಳು ಭಾಗವಹಿಸುವ ಈ ಆಚರಣೆಯಲ್ಲಿ ಲಿಂಗಾಯತ ಧರ್ಮೀಯರು ಮತ್ತು ಮಠಾಧೀಶರುಗಳು ಭಾಗವಹಿಸುತ್ತಿಲ್ಲ.

ಲಿಂಗಾಯತರು, ಹಿಂದೂ ಧರ್ಮದ ಭಾಗವಲ್ಲ

ಲಿಂಗಾಯತರು, ಹಿಂದೂ ಧರ್ಮದ ಭಾಗವಲ್ಲವೆಂಬ ಆಧಾರದಲ್ಲಿಯೇ ಇಲ್ಲಿಯ ತನಕ ಅವರೂ ಭಾಗವಹಿಸಲಿಲ್ಲ ಮತ್ತು ಅವುಗಳ ಧಾರ್ಮಿಕ ವ್ಯವಸ್ಥಾಪಕರು ಲಿಂಗಾಯತರನ್ನು ಆಹ್ವಾನಿಸಲಿಲ್ಲ. ಆದರೆ, ಇಂದು ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಷಯಗಳ ಆಧಾರದಲ್ಲಿ ಹಿಂದೂ ಧರ್ಮವನ್ನು ಪುನರ್ ಸಂಘಟನೆ ಮಾಡುವ ನೇತೃತ್ವ ವಹಿಸಿಕೊಂಡಿರುವ ಮತ್ತು ಅದನ್ನೇ ರಾಷ್ಟ್ರೀಯತೆಯ ಗುರುತನ್ನಾಗಿ ಮಾರ್ಪಡಿಸುವ ಹೊಣೆ ಹೊತ್ತಿರುವ ಆರೆಸ್ಸೆಸ್ಸ್ ಅದರ ಭಾಗವಾಗಿ ಲಿಂಗಾಯತರನ್ನು ಆಹ್ವಾನಿಸುವ ಮತ್ತು ಈ ಮೂಲಕ ಲಿಂಗಾಯತರು “ಹಿಂದೂ ನಾವೆಲ್ಲಾ ಒಂದು” ಅಜೆಂಡಾದ ಭಾಗವಾಗಿಸುವ ಪ್ರಯತ್ನವಾಗಿ ಆಹ್ವಾನ ಮಾಡುವ ನಿರ್ಧಾರ ಮಾಡಿದೆ. ಜೊತೆಗೆ, ನಿಮಗೆ ಸ್ವತಂತ್ರ ಧರ್ಮದ ಮಾನ್ಯತೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂಬ ಸಂದೇಶವೂ ಇದರಲ್ಲಿ ಅಡಗಿದೆ.

ಅಸ್ತ್ರವಾದ ಲಿಂಗಾಯತರ ಗೊಂದಲ

ಲಿಂಗಾಯತ ಸಮಾಜವು ಹಲವು ಐತಿಹಾಸಿಕ ಕಾರಣಗಳಿಗಾಗಿ ಒಂದು ತರಹದ ಹೈಬ್ರಿಡ್ ಧರ್ಮವಾಗಿದೆ. ಇಲ್ಲಿ ಶೈವಬ್ರಾಹ್ಮಣ ಹಿನ್ನೆಲೆಯಿಂದ ಬಸವಣ್ಣನವರ ಕಾಲದಲ್ಲಿ ಲಿಂಗಾಯತ ಧರ್ಮಕ್ಕೆ ಬಂದವರು ಶರಣ ಚಳುವಳಿಯ ಅನಿರೀಕ್ಷಿತ ಮತ್ತು ಹಠಾತ್ ಅಂತ್ಯದನಂತರ ಸಂಪೂರ್ಣವಾಗಿ ಬಸವತತ್ವವನ್ನು ಪಾಲಿಸುವ ಬದಲಿಗೆ ಅವರು ಬಂದ ಧರ್ಮದ ಆಚರಣೆಗಳಿಗೆ ಹೊರಳಿದ ಕಾರಣಕ್ಕಾಗಿ ವೇದ, ಉಪನಿಷತ್ತು, ಪುರಾಣಗಳಲ್ಲಿ ನಂಬಿಕೆ ಉಳಿಸಿಕೊಂಡು ಹಿಂದೂ ಧರ್ಮದ ಭಾಗವೆಂದು ಹೇಳಿಕೊಳ್ಳುವ “ವೀರಶೈವರು” ಮತ್ತು ಬಸವ/ಶರಣ ತತ್ವಗಳ ಸಿದ್ಧಾಂತ ಮತ್ತು ಆಚರಣೆಗಳನ್ನು ಒಪ್ಪಿಕೊಂಡು ಬಸವತತ್ವ ಪ್ರಣೀತ “ಲಿಂಗಾಯತರು” ಇದ್ದಾರೆ.

ಜೊತೆಗೆ, ಹಲವು ಐತಿಹಾಸಿಕ ಕಾರಣಗಳಿಂದಾಗಿ ಹೆಚ್ಚಿನ ಲಿಂಗಾಯತ ಮಠಾಧೀಶರುಗಳು ವೀರಶೈವ ಹಿನ್ನೆಲೆಯಿಂದ ಬಂದವರಾಗಿದ್ದು ಬಸವತತ್ವ ಆಧಾರದಲ್ಲಿ ಸ್ಥಾಪಿತವಾಗಿರುವ ಮಠಗಳ ಉಸ್ತುವಾರಿಗಳಾಗಿದ್ದಾರೆ. ಈ ಎರಡೂ ಧರ್ಮಗಳ ಭಿನ್ನತೆಯ ಅರಿವಿಲ್ಲದ ಲಿಂಗಾಯತ ಸಮುದಾಯವು ಗೊಂದಲದಲ್ಲಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಸಂಘಪರವಾರವು ಲಿಂಗಾಯತ ಸಮುದಾಯವನ್ನು ತನ್ನ ವಶಕ್ಕೆ ಪಡೆಯುವ ಹುನ್ನಾರ ನಡೆಸಿದೆ. ಈ ಆಹ್ವಾನವನ್ನು ಅದರ ಒಂದು ಭಾಗವನ್ನಾಗಿ ನೋಡಬೇಕು.

ವಿಶೇಷ ಅಹ್ವಾನ ತಿರಸ್ಕರಿಸಿ

ಇಲ್ಲಿ, ಬಸವತತ್ವ ಪ್ರಣೀತ ಲಿಂಗಾಯತ ಸಮುದಾಯ, ಸಂಘಟನೆಗಳು, ಮಠಗಳು ಸಂಘ ಪರಿವಾರದ ಈ ಹುನ್ನಾರವನ್ನು ವಿರೋಧಿಸಬೇಕು. ಜೊತೆಗೆ, ಬಸವತತ್ವ ಪ್ರಣೀತ ಲಿಂಗಾಯತ ಮಠಗಳ ಮಠಾಧೀಶರುಗಳಿಗೆ ಭಕ್ತ ಸಮುದಾಯ ಸೂಕ್ತ ಎಚ್ಚರಿಕೆಯನ್ನು ಕೊಡುವುದರ ಮೂಲಕ ಈ ಆಹ್ವಾನಕ್ಕೆ ಮನ್ನಣೆ ಕೊಟ್ಟು ಭಾಗವಹಿಸದಂತೆ ಒತ್ತಡ ಹೇರಬೇಕು. ಭಾಗವಹಿಸುವುದಾದಲ್ಲಿ ಮಠಗಳನ್ನು ತೊರೆಯುವಂತೆ ಒತ್ತಡ ತರಬೇಕು. ಇಲ್ಲದೆ ಹೋದಲ್ಲಿ ಲಿಂಗಾಯತ ಧರ್ಮೀಯರ ಮತ್ತು ಮಠಾಧೀಶರುಗಳ ಭಾಗವಹಿಸುವಿಕೆ ಭವಿಷ್ಯದಲ್ಲಿ ಲಿಂಗಾಯತ ಧರ್ಮದ ಉಳಿವಿಗೆ ಮಾರಕವಾಗಬಹುದು. ಇಲ್ಲಿ ವೈಯಕ್ತಿಕ ಸ್ವಾತಂತ್ರದ ಪ್ರಶ್ನೆ ಉದ್ಭವಿಸುವುದಿಲ್ಲ, ಕಾರಣವೇನೆಂದರೆ ಮಠಾಧೀಶರುಗಳು ಸ್ವತಂತ್ರ ವ್ಯಕ್ತಿಗಳಲ್ಲ, ಬದಲಾಗಿ ಅವರಗಳು ಒಂದು ಧಾರ್ಮಿಕ ಸಿದ್ಧಾಂತದ ಪ್ರತಿನಿಧಿಗಳಾಗಿ ಮಠಾಧೀಶರ ಸ್ಥಾನ ಅಲಂಕರಿಸಿರುತ್ತಾರೆ.

ಅವರು ಪ್ರತಿನಿಧಿಸುವ ಧಾರ್ಮಿಕ ಸಿದ್ಧಾಂತಕ್ಕೆ ಬದ್ಧರಾಗಿರಲು ಸಾಧ್ಯವಿಲ್ಲದಿದ್ದಲ್ಲಿ ಅಥವಾ ಅವರು ಸೈದ್ಧಾಂತಿಕವಾಗಿ ನಂಬಿಕೆ ಕಳೆದು ಕೊಂಡಿದ್ದಲ್ಲಿ ಬಸವ ಪ್ರಣೀತ ಲಿಂಗಾಯತ ಮಠಗಳನ್ನು ತೊರೆದು ಅವರ ವೈಯುಕ್ತಿಕ ಆಸಕ್ತಿ, ನಂಬಿಕೆ, ಸಿದ್ಧಾಂತಗಳಂತೆ ಪರ್ಯಾಯ ಮಠಗಳನ್ನು ಸ್ಥಾಪಿಸಕೊಳ್ಳುವ ಸ್ವಾತಂತ್ರವನ್ನು ಅನುಸರಿಸಿ ಅದರಂತೆ ಕಾರ್ಯನಿರ್ವಹಿಸಲು ಯಾರೂ ಅಡ್ಡಿಪಡಿಸುವ ಸಾಧ್ಯತೆಗಳು ಇರುವುದಿಲ್ಲ. ಅದನ್ನು ಯಾರೂ ಪ್ರಶ್ನಿಸಲು ಮತ್ತು ಅಡೆತಡೆ ಒಡ್ಡಲು ಬರುವುದಿಲ್ಲ.

ಇಂತಹ ಸಂದೇಶವನ್ನು ಎಲ್ಲಾ ಮಠಾಧೀಶರುಗಳಿಗೆ ಬಸವತತ್ವ ಪ್ರಣೀತ ಲಿಂಗಾಯತ ಸಮುದಾಯ ಕೊಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಸಂಕೀರ್ಣ ಸಂದರ್ಭದಲ್ಲಿ ನಾವಿದ್ದೇವೆ. ಇಲ್ಲವಾದಲ್ಲಿ ನಮ್ಮ ಅಸ್ಮಿತೆಯನ್ನು ಕಳೆದುಕೊಂಡು ನಾವು ಕಳೆದು ಹೋಗುತ್ತೇವೆ. ಅಲ್ಲದೆ, ಬಸವತತ್ವ ಪ್ರಣೀತ ಲಿಂಗಾಯತ ಧರ್ಮವನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮತ್ತು ಉಳಿಸಿ ಬೆಳಸುವ ಜವಾಬ್ದಾರಿಯಿಂದ ತಪ್ಪಿಸಿಕೊಂಡ ಅಪರಾಧವನ್ನು ಇಂದಿನ ಲಿಂಗಾಯತ ಧರ್ಮೀಯರು ಹೊರಬೇಕಾಗುತ್ತದೆ. ಈ ಎಚ್ಚರ ಲಿಂಗಾಯತ ಧರ್ಮೀಯರಿಗೆ ಬರಲಿ ಎಂದು ಆಶಿಸುತ್ತೇನೆ.

Share This Article
6 Comments
  • ಲೊಕ್ಕಾ ಕೊಟ್ಟರ ವಿಭೂತಿ ಬಿಟ್ಟು ಕುಂಕುಮಧಾರಿಗಳಾದ ಸ್ವಾಮಿಗಳು ಕಾಂವಿ ಬಿಚ್ಚಿಟ್ಟ ಹೊಕ್ಕಾರ. ಲಿಂಗಾಯತರು ಕರಡಿಗೆ ಬಿಚ್ಚಿ ಗಂಧಧಾರಿಗಳಾಗಿ ಹೋಗತಾರ. ಇಷ್ಟ ನಾಲಾಯಕ ಧರ್ಮವಿರೋಧಿಗಳು ಅದಾರ ಲಿಂಗಾಯತ ಧರ್ಮದಲ್ಲಿ. ರೊಕ್ಕಕ್ಕ ಹೆಂಡರನ್ನೂ ಸ್ವಾಮಿಗಳಿಗೆ ಮಾರಿಕೊಳ್ಳಾವರು ಇರಬೇಕಾದರ ನೀವೇನ ಶಂಖಾ ಹೊಡದರೂ ಪ್ರಯೋಜನ ಇಲ್ಲಾ ಬಿಡರಿ. ಇದೆಲ್ಲಾ ನಾಲಾಯಕರಿಗೆ ಅರ್ಥ ಆಗಂಗಿಲ್ಲಾ.

  • ಶರಣು ಶರಣಾರ್ಥಿ ನೀವು ತಿಳಿಸಿದಂತೆ ಕುಂಭ ಮೇಳ ತಿರಸ್ಕರಿಸಬೇಕು ಇಲ್ಲವಾದರೆ ಪೀಠ (ಮಠ) ಬೇಡಬೇಕು

    • I am perticular about ದ್ವೈತ ಸಿದ್ಧಾಂತಿಗಳು includinh ಕುಂಭಮೇಳ, ಹೌದರಿ ಎರಡೂ ಬೇಕು ಅನ್ನಾವರಿಗೆ ಸಮಾಜದಲ್ಲಿ ಹಿಜಡಾ ಅಂತಾರ. I am sorry but, ಇಂಥಾ ನಾಲಾಯಕರಿಗೆ I have to use these words. ಸದಾಶಿವಾನಂದ, ಮಲ್ಲೇಪುರಂ, ಸವದತ್ತಿಮಠ, ಬನ್ನಂಜೆ, ಹೆಗಡೆ ಮತ್ತು ವಚನಗಳಲ್ಲಿ ವೈದಿಕತೆಯನ್ನು ಹುಡುಕುವ ಎಲ್ಲಾ ದರಿದ್ರರಿಗೆ ಈ ಮಾತು ಅಗದೀ ಹೋಂದತೈತಿ. ರೊಕ್ಕಕ್ಕ ಎಲ್ಲಾನೂ ಮಾರಕೋ ಜನಾ ಇವರು.

  • ಇದು ಬಸವಮಾರ್ಗಕ್ಕೆ ಅತ್ಯಂತ ವಿರುಧ್ದವಾದ ನಡೆ. ನಮ್ಮ ಲಿಂಗಾಯತ ಧರ್ಮ ವೈಚಾರಿಕ, ವೈಜ್ಞಾನಿಕ ಹಾಗೂ ಎಲ್ಲಾ ವಿಚಾರಧಾರೆಯಿಂದ ಸರ್ವಸಮ್ಮತವಾದದ್ದು. ಇಂತಹ ನೈಜ ವಿಚಾರಧಾರೆಯನ್ನು ಬೇರೆಮಾರ್ಗದಲ್ಲಿರುವವರನ್ನು ಈಕಡೆ ಸೆಳೆಯಬೇಕೇ ವಿನ: ನಾವು ಅವರ ಆವ್ಹಾನಕ್ಕೆ ಮಣಿಯಬಾರದು. ಇದರ ಹಿಂದೆ ದೊಡ್ಡ ಶಡ್ಯಂತ್ರವಿರುವ ವಿಚಾರವೇನೂ ಗುಟ್ಟಾಗಿ ಉಳಿದಿಲ್ಲ. ಜಯ ಬಸವ! ಜೈ ಲಿಂಗಾಯತ!

Leave a Reply

Your email address will not be published. Required fields are marked *