ಸಿಂಧನೂರ
ಜಡ ವೈದಿಕ ಸಂಸ್ಕೃತಿಗೆ ಚಲನಾತ್ಮಕ ಶಕ್ತಿ ಕೊಟ್ಟವರು ಹನ್ನೆರಡನೇ ಶತಮಾನದ ಬಸವಾದಿ ಶರಣರು. ಸೃಷ್ಟಿಯ ನೆಲೆ, ಅಲ್ಲಿ ಸೃಷ್ಟಿಕರ್ತನ ಇರುವಿಕೆ, ಸೃಷ್ಟಿಕರ್ತನ ಜೊತೆ ಸಂಪರ್ಕ ಹೊಂದುವ ಆರಾಧನ ಮಾರ್ಗ, ಮಾನವನ ಅಖಂಡ ಸ್ವರೂಪ, ಅದರ ಪರಿಣಾಮದಿಂದ ಆಗುವ ಸಾಮಾಜಿಕ ಪರಿವರ್ತನೆ, ಸಮಾನತೆಯ ಆನಂದ ಸ್ವರೂಪ, ಸಕಲ ಜೀವಿಗಳಲ್ಲಿ ಪ್ರೇಮಭಾವದ ಮೂಲಕ ಸೃಷ್ಟಿಕರ್ತನ ಒಡಲನ್ನು ಭೇದಿಸಿ ಅಲ್ಲಿ ಅಡಗಿದ್ದ ಗುರು ಲಿಂಗ ಜಂಗಮ ತತ್ವಗಳ ಮೂಲಕ ಮರ್ಥ್ಯಲೋಕವನ್ನ, ಮಾನವ ಬದುಕನ್ನು ಸುಂದರ ಗೊಳಿಸಿದ ಶ್ರೇಷ್ಠ ತತ್ವಜ್ಞಾನ ಬಸವಾದಿ ಶರಣರದ್ದು.
ಇದನ್ನು ಅರಿಯದ ಮನುಕುಲ, ಶರಣರ ಹತ್ಯಾಕಾಂಡಕ್ಕೆ ಕಾರಣವಾಗಿ ಅಪೂರ್ವ ಸಂಪತ್ತನ್ನು ಕಳೆದುಕೊಂಡಿತು. ಶರಣರ ತ್ಯಾಗದಿಂದ ಉಳಿದ ವಚನಗಳ ಅಧ್ಯಯನ, ಆಚರಣೆ ಈಗ ಸರ್ವ ಜನಾಂಗದಲ್ಲಿ ಮತ್ತೆ ಚಾಲನೆಗೆ ಬರುತ್ತಿರುವದು ಸಂತೋಷದ ಸಂಗತಿ.
ಇಂತಹ ಸಂಕ್ರಮಣ ಕಾಲದಲ್ಲಿ ಶರಣರ ವಚನಗಳ ಆಧಾರದಡಿ ಮನೆಯಲ್ಲಿ ನಡೆಯುವ ಮದುವೆ, ಗೃಹ ಪ್ರವೇಶ, ಇನ್ನಿತರ ಕಾರ್ಯಗಳನ್ನು ನಡೆಸಿದರೆ ಹೆಚ್ಚು ಜನರಿಗೆ ತಲುಪಿ ಅವರು ಮೌಢ್ಯದಿಂದ ಹೊರಬರಲು ಸಹಾಯಕ ಆಗುತ್ತದೆ. ಈ ದೆಸೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಸವಪುರ ಈ.ಜೆ. ಗ್ರಾಮದಲ್ಲಿ ಮೇ 12ರಂದು ಮುದ್ದನಗೌಡ ಮಾಲಿಪಾಟೀಲ ಇವರ ಮಗಳಾದ ಶರಣೆ ವಿದ್ಯಾ ಮತ್ತು ಶರಣ ಬಸವರೆಡ್ಡಿ ಇವರ ಶುಭಾರತಿ ಕಾರ್ಯಕ್ರಮ ಶರಣತತ್ವದ ಅಡಿಯಲ್ಲಿ ಜರುಗಿತು.
ಬೆಳಿಗ್ಗೆ 8 ಗಂಟೆಗೆ ಶಿವಯೋಗ ಪ್ರಾತ್ಯಕ್ಷಿಕೆಯನ್ನು ಬೆಳಗಾವಿ ಜಿಲ್ಲೆ ನೇಗಿನಾಳದ ಶರಣ ಮಂಜುನಾಥ ಮಡಿವಾಳರ ನಡೆಸಿಕೊಟ್ಟರು. ನೂರಕ್ಕಿಂತ ಹೆಚ್ಚು ಜನರು ಈ ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.
ಮಧ್ಯಾಹ್ನ 11 ಗಂಟೆಗೆ ಮೊದಲನೇ ಚರ್ಚಾ ಗೋಷ್ಠಿಯಲ್ಲಿ ಇಷ್ಟಲಿಂಗ ಯೋಗದ ಮಹತ್ವ ಕುರಿತು ಚಿಂತನೆ ನಡೆಯಿತು. 400ಕ್ಕೂ ಹೆಚ್ಚು ಜನರು ವಿವಿಧ ಗ್ರಾಮಗಳಿಂದ ಆಗಮಿಸಿದ್ದರು. ಚರ್ಚೆಯ ನಂತರ ಶರಣ ತತ್ವದ ವಿಷಯಗಳ ಬಗ್ಗೆ ಸಂವಾದ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿತು. ಅನೇಕ ಶರಣರು ವೈದಿಕದ ಸ್ಥಾವರ ಪೂಜೆಗೂ, ಇಷ್ಟಲಿಂಗ ಪೂಜೆಗೂ ಇರುವ ವ್ಯತ್ಯಾಸ ಏನು?, ಯಾವದು ಹೆಚ್ಚು ಪರಿಣಾಮಕಾರಿ?, ಅಷ್ಟಾಂಗಯೋಗದ ಧ್ಯಾನ ಮಾರ್ಗಕ್ಕೂ, ಶರಣರ ಇಷ್ಟಲಿಂಗ ಯೋಗ ಮಾರ್ಗಕ್ಕೋ ಇರುವ ವ್ಯತ್ಯಾಸಗಳೇನು?, ವೀರಶೈವ ಪರಂಪರೆಯವರು ಸ್ಥಾವರ ಪೂಜೆ ಮತ್ತು ಇಷ್ಟಲಿಂಗ ಪೂಜೆ ಎರಡನ್ನು ಹೇಳುತ್ತಾರೆ, ಅದು ಹೇಗೆ ಸಮಂಜಸ?, ಇಂತಹ ಬಹಳಷ್ಟು ಅರ್ಥಪೂರ್ಣ ಪ್ರಶ್ನೆಗಳು ಕೇಳಿ ಬಂದವು. ಈ ಪ್ರಶ್ನೆಗಳಿಗೆ ಶರಣ ಮಂಜುನಾಥ ಮತ್ತು ಶರಣ ಎಂ.ಎಂ. ಸಂಗೊಳ್ಳಿಯವರ ಜೊತೆ, ಪಿ. ರುದ್ರಪ್ಪ ಅವರು ಉತ್ತರಗಳನ್ನು ನೀಡಿದರು.
ಮಧ್ಯಾಹ್ನ ಲಿಂಗಾಯತ ನಿಜಾಚಾರಣೆಗಳ ಮಹತ್ವದ ಕುರಿತು ಶರಣ ಎಂ.ಎಂ. ಸಂಗೊಳ್ಳಿಯವರು ಉಪಯುಕ್ತವಾದ ಅನುಭಾವವನ್ನು ಹಂಚಿಕೊಂಡರು. ಅಲ್ಲಿಯೂ ಸಹ ಸಂವಾದ ನಡೆಯಿತು.
ಸಾಯಂಕಾಲ 6.30 ಕ್ಕೆ ಶುಭಾರತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶರಣ ಪಿ. ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. “ಸಾರ್ಥಕ ದಾಂಪತ್ಯ” ಕುರಿತು ಶರಣ ಮಂಜುನಾಥ ನೇಗಿನಾಳ ಅರ್ಥಪೂರ್ಣ ವಿವರಣೆ ಕೊಟ್ಟರು.
ಕ್ರಿಯಾಮೂರ್ತಿಗಳಾಗಿ ಎಂ. ಎಂ. ಸಂಗೊಳ್ಳಿ ಅವರ ನೇತೃತ್ವದಲ್ಲಿ ಮಾಲಿಪಾಟೀಲ ಕುಟುಂಬದ ಸದಸ್ಯರು ವಚನಗಳ ಆಧಾರದಡಿ ಕ್ರಿಯೆಗಳನ್ನು ನೆರವೇರಿಸಿದರು. ಸಂಗೀತ ಸೇವೆಯನ್ನು ಮಂಜುನಾಥ ನಡೆಸಿಕೊಟ್ಟರು.
ಈ ಶುಭಾರತಿಯಲ್ಲಿ ಸುಮಾರು ಎಂಟು ನೂರಕ್ಕು ಹೆಚ್ಚು ಜನ ಭಾಗವಹಿಸಿ ಕಾರ್ಯಕ್ರಮ ಸವಿದರು. ನೂತನ ದಂಪತಿಗಳಿಗೆ ಶುಭ ಕೋರಿದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದೊಂದು ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಎಂದು ಆಗಮಿಸಿದ ಶರಣರು ಹೇಳುತ್ತಿದ್ದುದು ಕೇಳಿ ಬಂತು.