ಲಿಂಗಾಯತರನ್ನು ಟಾರ್ಗೆಟ್ ಮಾಡುತ್ತಿರುವವರ ಉದ್ದೇಶವೇನು?
ಬೆಂಗಳೂರು
ಕನ್ನೇರಿ ಸ್ವಾಮಿ ಮುಂದಿಟ್ಟುಕೊಂಡು ಸಂಘ ಪರಿವಾರ ಲಿಂಗಾಯತರ ಜೊತೆ ಘರ್ಷಣೆಗೆ ಇಳಿದಿದೆ. ವಿವಾದವನ್ನು ಸಣ್ಣದರಲ್ಲೇ ಮುಗಿಸಲು ಅನೇಕ ಅವಕಾಶಗಳಿದ್ದರೂ ಯಜ್ಞ ಮಾಡುವ ರೀತಿಯಲ್ಲಿ ಬೆಂಕಿಗೆ ತುಪ್ಪ ಕಡ್ಡಿ ಹಾಕಿ ಉರಿಸುತ್ತಿದೆ. ಇವರ ಉದ್ದೇಶವೇನು?
ಅನೇಕ ಕಡೆ ಸಂಘ ಪರಿವಾರದವರು ಕನ್ನೇರಿ ಸ್ವಾಮಿ ಪರ ಪ್ರತಿಭಟನೆ, ಮೆರವಣಿಗೆ, ಸುದ್ದಿ ಗೋಷ್ಠಿ ನಡೆಸಿದ್ದಾರೆ. ಅವೆಲ್ಲಾ ಅಧಿಕೃತವಾಗಿ ನಡೆದಿರುವುದು ಕನ್ನೇರಿ ಸ್ವಾಮಿಯ ಮೇಲೆ ನಿರ್ಬಂಧ ಹಾಕಿರುವ ರಾಜ್ಯ ಸರಕಾರದ ವಿರುದ್ಧ.
ಸೂಲಿಬೆಲೆ ಮಟ್ಟದ ಸುಳ್ಳುಗಳು
ಆದರೆ ಎಲ್ಲಾ ಕಡೆ ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಎದ್ದು ಕಾಣುವಂತೆ ಆಕ್ರೋಶದ ಆಪಾದನೆಗಳನ್ನೂ ಮಾಡುತ್ತಿದ್ದಾರೆ. ಅಭಿಯಾನದಲ್ಲಿ ಮದ್ಯ ಮಾಂಸ ತಿನ್ನಲು ಪ್ರೋತ್ಸಾಹ ನೀಡಿದ್ದಾರೆ; ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ; ಹಿಂದೂ ಧರ್ಮ ಒಡೆಯುತ್ತಿದ್ದಾರೆ ಇತ್ಯಾದಿ.
ಮದ್ಯ ಮಾಂಸಕ್ಕೆ ಪ್ರೋತ್ಸಾಹ ನೀಡಲಾಗಿದೆ ಎನ್ನುವುದು ಸೂಲಿಬೆಲೆ ಮಟ್ಟದ ಸುಳ್ಳು ಎಂದು ಸಂಘ ಪರಿವಾರದವರಿಗೂ ಗೊತ್ತು. ಅಭಿಯಾನ ಮಾತ್ರವಲ್ಲ ಯಾವ ಲಿಂಗಾಯತ ವೇದಿಕೆಯಲ್ಲೂ ಯಾರೂ ಈ ತರಹದ ಮಾತುಗಳನ್ನು ಎಂದೂ ಆಡಿಲ್ಲ.

10 ವರ್ಷ ಹಳೆಯ ವಿಡಿಯೋಗಳು
ಲಿಂಗಾಯತ ಪೂಜ್ಯರು ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂದು ತೋರಿಸಲು 10 ವರ್ಷ ಹಳೆಯ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಈಗ ಯಾವ ಲಿಂಗಾಯತ ಸ್ವಾಮೀಜಿ ಅಥವಾ ಮುಖಂಡರೂ ಆ ರೀತಿ ಮಾತನಾಡುತ್ತಿಲ್ಲ ಎನ್ನುವುದೂ ಅವರಿಗೆ ಗೊತ್ತು.
ಈ ಹಳೆಯ ವಿಡಿಯೋಗಳನ್ನು ಅಭಿಯಾನಕ್ಕೆ ಜೋಡಿಸಿರುವುದೇಕೆ? ಈ ವಿಷಯದ ಮೇಲೆ ಇಷ್ಟು ದಿನ ಸುಮ್ಮನಿದ್ದವರು ಈಗ ತಕ ತಕ ಕುಣಿಯುತ್ತಿರುವುದೇಕೆ? ಹಿಂದೂ ಧರ್ಮ ಒಡೆಯುವ ಆಪಾದನೆ ಕೂಡ ಏಳೆಂಟು ವರ್ಷ ಹಳೆಯದು.
ಈ ಹಳೆಯ ವಿಷಯಗಳನ್ನು ಕೆದಕಿಕೊಂಡು ಸುಳ್ಳು ಹೇಳಿಕೊಂಡು ಇಷ್ಟು ದೊಡ್ಡ ಮಟ್ಟದಲ್ಲಿ ಲಿಂಗಾಯತರ ವಿರುದ್ಧ ಅಖಾಡಕ್ಕೆ ಇಳಿಯಲು ಕಾರಣವೇನು? ಸಂಘ ಪರಿವಾರದವರು ತಮ್ಮ ನಿಜ ಉದ್ದೇಶ, ಕಾರಣ ಬಿಟ್ಟುಕೊಡುವುದು ಅಪರೂಪ. ಆಕಾಶ ತೋರಿಸಿ ಕೈಯಲ್ಲಿರುವುದನ್ನು ಕಿತ್ತುಕೊಳ್ಳುವ ಅಭ್ಯಾಸ ಇವರದು.
ಈ ಹಳೆಯ ವಿಡಿಯೋಗಳನ್ನು ಅಭಿಯಾನಕ್ಕೆ ಜೋಡಿಸಿರುವುದೇಕೆ?
ನಿಜವಾದ ಟಾರ್ಗೆಟ್ ಅಭಿಯಾನ
ಬಸವ ಸಂಸ್ಕೃತಿ ಅಭಿಯಾನ ನಡೆಯದಿದ್ದರೆ ಇಷ್ಟೆಲ್ಲಾ ರಂಪಾಟ ನಡೆಯುತ್ತಿತ್ತೇ? ಇವರ ನಿಜವಾದ ಟಾರ್ಗೆಟ್ ಅಭಿಯಾನದಲ್ಲಿ ಇವರು ನೋಡಿದ ವಿಷಯಗಳು. ಇಲ್ಲಿ ಕನ್ನೇರಿ ಸ್ವಾಮಿ ನೆಪವಷ್ಟೇ?
ಬೀದರಿನಿಂದ ಚಾಮರಾಜನಗರದವರೆಗೆ ಅಭಿಯಾನ ಸೆಳೆದ ಜನ ಸಮೂಹ, ಎಲ್ಲೆಲ್ಲೂ ಪ್ರಕಟವಾದ ಲಿಂಗಾಯತ ಪೂಜ್ಯರ, ಬಸವ ಸಂಘಟನೆಗಳ ಒಗ್ಗಟ್ಟು, ಬದ್ಧತೆ ಮತ್ತು ಸಂಘಟನಾ ಸಾಮರ್ಥ್ಯ, ಇವೆಲ್ಲವನ್ನೂ ಸಾಧ್ಯಗೊಳಿಸಿದ ಸಮಾಜದಲ್ಲಿನ ಬಸವ ಶಕ್ತಿ ಇವರ ನಿದ್ದೆಗೆಡಿಸಿದೆ.
ಜನ ಜಾಗೃತಿಯಿಂದ ದೊಡ್ಡ ಪ್ರಮಾಣದಲ್ಲಿ ಎಲ್ಲಾದರೂ ಸೇರಿದರೆ ಬೆಚ್ಚಿ ಬೀಳುವ ಜನ ಇವರು.

ಜನ ಜಾಗೃತಿಯಿಂದ ಎಲ್ಲಾದರೂ ಸೇರಿದರೆ ಬೆಚ್ಚಿ ಬೀಳುವ ಜನ ಇವರು.
ಬದಲಾಗುತ್ತಿರುವ ಲಿಂಗಾಯತ ಸಮಾಜ
ಜೊತೆಗೆ ಲಿಂಗಾಯತ ಸಮಾಜದಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಗಳು ಇವರಿಗೆ ಇನ್ನಷ್ಟು ಗಾಬರಿ ತಂದಿವೆ.
“2017-18ರ ಹೋರಾಟದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಮುಖಂಡರ ಮಟ್ಟದಲ್ಲಿ ಮಾತ್ರ ಸ್ಪಷ್ಟನೆಯಿತ್ತು. ಅದೀಗ ಜನಸಾಮಾನ್ಯರಿಗೆ ಮುಟ್ಟಿದೆ ಎಂದು ಅಭಿಯಾನ ಸ್ಪಷ್ಟಪಡಿಸಿದೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ಹೇಳುತ್ತಾರೆ.
ಇಂದು ಲಿಂಗಾಯತ ಧರ್ಮದ ಎರಡು ಮುಖ್ಯ ಸಂದೇಶಗಳು ಜನರನ್ನು ಸೆಳೆಯುತ್ತಿವೆ. ಒಂದನೆಯದು, ನಾವು ಹಿಂದೂ ಸಮಾಜದಲ್ಲಿ ಉಳಿದರೆ ನಮಗೆ ಶೂದ್ರ ಸ್ಥಾನ ಮಾತ್ರ ಲಭ್ಯ ಎನ್ನುವುದು. ಎರಡನೆಯದು, ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು ಎನ್ನುವುದು.
ಲಿಂಗಾಯತ ಧರ್ಮದ ಹೋರಾಟ ಈಗ ಜನಸಾಮಾನ್ಯರಿಗೂ ಮುಟ್ಟುತ್ತಿದೆ.
ಅಭಿಯಾನದಲ್ಲಿ ಎಲ್ಲಾ ಕಡೆ ಈ ಎರಡು ಸಂದೇಶಗಳನ್ನು ಲಿಂಗಾಯತ ಪೂಜ್ಯರು ಮತ್ತೆ ಮತ್ತೆ ನೀಡಿದರು. ಅಲ್ಲಿದ್ದವರು ಇದಕ್ಕೆ ಮತ್ತೆ ಮತ್ತೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಇಂದು ಪ್ರಗತಿಪರ ಲಿಂಗಾಯತದ ಬೇರುಗಳು ಗಟ್ಟಿಯಾಗುತ್ತಿರುವ ಸಣ್ಣ ಸೂಚನೆಗಳಿವೆ. ಒಳ ಪಂಗಡಗಳು ವೇದಿಕೆ ಹಂಚಿಕೊಳ್ಳುತ್ತಿವೆ. ಬಸವಣ್ಣ, ಅಂಬೇಡ್ಕರ್, ವಚನ, ಸಂವಿದಾನ ಎಲ್ಲಾ ಒಂದೇ ಎನ್ನುವ ಮನೋಭಾವದ ಬಿತ್ತನೆಯಾಗಿದೆ. ಅಲ್ಲಲ್ಲಿ ಲಿಂಗಾಯತ ಮದುವೆಗಳಲ್ಲಿಯೂ ಸಂವಿದಾನ ಓದುವ ಪರಿಪಾಠ ಬೆಳೆಯುತ್ತಿದೆ. ದಲಿತ, ಅಹಿಂದ ಕಾರ್ಯಕ್ರಮಗಳಲ್ಲಿ ಲಿಂಗಾಯತರೂ ಕಾಣಿಸಿಕೊಳ್ಳುತ್ತಿದ್ದಾರೆ.
ಬಸವ ತತ್ವ ಬೆಳೆದಷ್ಟೂ ಬಿಜೆಪಿಯಲ್ಲಿರುವ
ಲಿಂಗಾಯತರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಹಿಂದುತ್ವಕ್ಕೆ ಹಿನ್ನಡೆ
ಪ್ರತ್ಯೇಕ ಧರ್ಮದ ಕಾವು ಬೆಳೆದಷ್ಟೂ ಹಿಂದುತ್ವ ಅಜೆಂಡಾ ಇಟ್ಟುಕೊಂಡು ರಾಜಕೀಯ ಅಧಿಕಾರ ಕಬಳಿಸಲು ಕಷ್ಟವಾಗುತ್ತದೆ. ಬಸವ ತತ್ವ ಬೆಳೆದಷ್ಟೂ ಬಿಜೆಪಿಯಲ್ಲಿರುವ ಲಿಂಗಾಯತರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
ಅಖಂಡ ಹಿಂದೂ ರಾಷ್ಟ್ರ ಕಟ್ಟಲು ಹೊರಟಿರುವವರಿಗೆ ಲಿಂಗಾಯತ ಧರ್ಮದ ಬಗ್ಗೆ ಸೈದ್ಧಾಂತಿಕ ಭೀತಿಯೂ ಇದೆ.
ಬಸವ ತತ್ವ ವೈಚಾರಿಕತೆ ಕಲಿಸುತ್ತದೆ, ಪ್ರಶ್ನೆ ಕೇಳುವ ಧೈರ್ಯ ಕೊಡುತ್ತದೆ, ಸಮಾನತೆ, ಸಾಮರಸ್ಯದ ಬಗ್ಗೆ ಅರಿವು ಮೂಡಿಸುತ್ತದೆ. ಜನ ಬುದ್ದಿವಂತರಾಗುತ್ತಾರೆ, ಮಂದಿರದ ಬದಲು ಶಿಕ್ಷಣ ಕೊಡಿ ಎನ್ನುತ್ತಾರೆ.
ಈ ವಿಚಾರಗಳನ್ನು ಮುನ್ನೆಲೆಗೆ ತಂದ ಬಸವ ಸಂಸ್ಕೃತಿ ಅಭಿಯಾನ ಸಹಜವಾಗಿ ಸನಾತನಿಗಳ ಟಾರ್ಗೆಟ್ ಆಗಿದೆ. ಜನ ಬುದ್ದಿವಂತರಾದರೆ ಇವರು ಎಲ್ಲಿ ಹೋಗುತ್ತಾರೆ?
ಜನ ಬುದ್ದಿವಂತರಾದರೆ ಇವರು ಎಲ್ಲಿ ಹೋಗುತ್ತಾರೆ?
ಆದರೆ ಅಭಿಯಾನದ ಪ್ರಗತಿಪರ ಧೋರಣೆಗಳನ್ನು ನೇರವಾಗಿ ವಿರೋಧಿಸಿದರೆ ಯಾರೂ ಒಪ್ಪುವುದಿಲ್ಲ. ಅದಕ್ಕೆ ಕನ್ನೇರಿ ಸ್ವಾಮಿ, ಹಳೇ ವಿಡಿಯೋಗಳು, ಸೂಲಿಬೆಲೆ ಮಟ್ಟದ ಸುಳ್ಳುಗಳು ಸೃಷ್ಟಿಯಾಗಿರುವುದು.
ಇದು ಲಿಂಗಾಯತರು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರುವ ಸಂಘರ್ಷ. ಹಳೇ ವಿಡಿಯೋ, ಹೊಸ ಸುಳ್ಳುಗಳನ್ನು ಇಟ್ಟುಕೊಂಡು ಬೇರೆ ಬೇರೆ ಸಮುದಾಯಗಳನ್ನು ಲಿಂಗಾಯತರ ವಿರುದ್ಧ ಪ್ರಚೋದಿಸುವ ಪ್ರಯತ್ನ ನಡೆಯುತ್ತಿದೆ.
ಲಿಂಗಾಯತರ ವಿರುದ್ಧ ಲಿಂಗಾಯತರನ್ನ ಯುದ್ಧಕ್ಕೆ ಕಳಿಸುವ ಪ್ರಯತ್ನವೂ ನಡೆಯುತ್ತಿದೆ.
