ಧರ್ಮ ಮಾನ್ಯತೆಗಾಗಿ ಆರೋಗ್ಯವನ್ನೂ ಲೆಕ್ಕಿಸದೆ ಮಾತಾಜಿ ಹೋರಾಡಿದ್ದರು

ಬೀದರ

ಲಿಂಗಾಯತ ಧರ್ಮದ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪೂಜ್ಯ ಮಾತೆ ಮಹಾದೇವಿಯವರು ಹೋರಾಟ ಮಾಡಿದ್ದರು. ಹೀಗಾಗಿ ಮಾನ್ಯತೆ ಪಡೆಯುವುದು ಮಾತಾಜಿಯವರ ದೊಡ್ಡ ಕನಸಾಗಿತ್ತು, ಎಂದು ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಶನಿವಾರ ಹೇಳಿದರು.

ಹೀಗಾಗಿ ಶಾಸಕ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಇನ್ನಿತರ ಲಿಂಗಾಯತ ಶಾಸಕರು ವಿಧಾನಸೌಧದಲ್ಲಿ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಧ್ವನಿ ಎತ್ತಬೇಕೆಂದು ತಿಳಿಸಿದರು. ಲಿಂಗಾಯತ ಎಂದರೆ ಅದರಲ್ಲಿ ಎಲ್ಲಾ ೧೦೧ ಪಂಗಡದವರು ಬರುತ್ತಾರೆ. ಹೀಗಾಗಿ ಈಗಾಗಲೇ ಸಿದ್ಧರಾಮಯ್ಯನವರು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಚೆಂಡು ಕೇಂದ್ರದ ಅಂಗಳದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನುನೋದನೆ ಮಾಡಲು ಶಾಸಕರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಪೂಜ್ಯರು ಹೇಳಿದರು.

ನಗರದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಜರುಗಿದ ಲಿಂಗಾಯತ ಧರ್ಮದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಮರಣೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಬೆಲ್ದಾಳೆ ೧೯೮೦ರ ದಶಕದಲ್ಲಿ ಪೂಜ್ಯ ಲಿಂಗಾನಂದ ಸ್ವಾಮಿಗಳು ಹಾಗೂ ಪೂಜ್ಯ ಮಾತೆ ಮಹಾದೇವಿಯವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಗಲು ರಾತ್ರಿ ಎನ್ನದೆ ಬಸವ ತತ್ವದ ಪ್ರಸಾರವನ್ನು ನಾಡಿನಾದ್ಯಂತ ಮಾಡಿರುವುದು ನಿಜಕ್ಕೂ ಸ್ಮರಣೀಯ ಕಾರ್ಯ.

ಇಂದು ಅವರ ಸಂಸ್ಮರಣೆಯನ್ನು ಮಹಾದಂಡನಾಯಕರು ಎನ್ನುವ ವಿಶಿಷ್ಟ ಮತ್ತು ವಿನೂತನ
ಹೆಸರಿನ ಮೇಲೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಖುಷಿ ತಂದಿದೆ. ಮಾತಾಜಿಯವರು ಎಲ್ಲರ ಮನೆಮನಗಳಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಹುಲಸೂರಿನ ಪೂಜ್ಯ ಡಾ. ಶಿವಾನಂದ ಸ್ವಾಮೀಜಿ ಮಾತನಾಡಿ ಮಾತಾಜಿಯವರು ಕಟ್ಟಿದ್ದು ರಾಷ್ಟ್ರ್ರೀಯ ಬಸವ ದಳವೆಂಬ ಮಹಾಸೈನ್ಯ. ಇಲ್ಲಿ ಬಂದಿರುವವರು ಗಟ್ಟಿ ಕಾಳುಗಳು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಬಸವ ತತ್ವವನ್ನು ಬಿತ್ತಿ ಬೆಳೆಸುವ ಕಾರ್ಯ ಎಲ್ಲರೂ ಕೂಡಿ ಮಾಡೋಣ ಎಂದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ ಮಾತನಾಡಿ ಮಾತಾಜಿಯವರ ಜ್ಞಾನಕ್ಕೆ ಬೆರಗಾಗಿ ಅವರಿಗಿಂತ ದೊಡ್ಡವರಾದ ಲಿಂಗಾನಂದ ಸ್ವಾಮಿಗಳು ಚಿಕ್ಕವರಾದ ಮಾತಾಜಿಯವರಿಗೆ ಜಗದ್ಗುರು ಸ್ಥಾನ ನೀಡಿ ಪಾದಪೂಜೆ ಮಾಡಿದ್ದರು. ಇದು ನಿಜವಾದ ಗುರು ಶಿಷ್ಯರ ಪರಂಪರೆ ಎಂದು ಹೇಳಿದರು. ಮಾತಾಜಿಯವರ ಅವಿರತ ಬಸವ ತತ್ವ ಸೇವೆಗಾಗಿ ಅವರನ್ನು ಮಹಾದಂಡನಾಯಕಿ ಎಂದು ಅವರ ಅನುಯಾಯಿಗಳು ಕರೆದಿದ್ದಾರೆ ಎಂದು ಶ್ಲಾಘಿಸಿದರು.

ಇದೇ ವೇಳೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಶ್ರೀಗಳು, ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ಮಾತಾಜಿಯವರ ಕಾರ್ಯ ಶ್ಲಾಘಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಹಾಗೂ ಪತ್ರಕರ್ತ ಸದಾನಂದ ಜೋಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂರ್ಣಚಂದ್ರ ಮೈನಾಳೆ, ಸಮೃದ್ಧಿ ಲಾಧಾ ಅವರ ನೃತ್ಯ, ಶಿವು ಜನ್ಯ ಅವರ ವಚನ ಗಾಯನ ಸಭೀಕರ ಗಮನ ಸೆಳೆಯಿತು.

ವೇದಿಕೆ ಮೇಲೆ ಪೂಜ್ಯ ಅಕ್ಕನಾಗಲಾಂಬಿಕಾ ಮಾತಾಜಿ, ಪೂಜ್ಯ ಅಕ್ಕಮಹಾದೇವಿ ಮಾತಾಜಿ, ಪೂಜ್ಯ ಸತ್ಯಾದೇವಿ ಮಾತಾಜಿ, ಪೂಜ್ಯ ಓಂಕಾರೇಶ್ವರ ಸ್ವಾಮೀಜಿ, ಪೂಜ್ಯ ವೆಂಕಟೇಶ ಅಪ್ಪಾಜಿ, ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಡಾ. ಮಹೇಶ ಬಿರಾದಾರ, ಬೆಳಗಾವಿಯ ಅಶೋಕ ಬೆಂಡಿಗೇರಿ, ಕೆ. ಶರಣಪ್ರಸಾದ್, ಮಹಾಂತೇಶ ಗುಡಸ್, ಕಲಬುರಗಿಯ ನಾಗೇಂದ್ರಪ್ಪ ನಿಂಬರಗಿ, ಜಗದೇವಿ ಚೆಟ್ಟಿ, ಗೋಕಾಕ್‌ನ ಸಂಜಯ್ ಪಾಟೀಲ, ಶಿವಶರಣಪ್ಪ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ಸಚ್ಚಿದಾನಂದ ಚಟನಳ್ಳಿ, ಸತೀಶ ಪಾಟೀಲ, ಮಲ್ಲಿಕಾರ್ಜುನ ಜೈಲರ್, ಗಣಪತಿ ಬಿರಾದಾರ ಸೇರಿದಂತೆ ಹಲವರಿದ್ದರು. ಬಸವರಾಜ ಸಂಗಮದ್ ನಿರೂಪಿಸಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಪಾಟೀಲ ಶಿವಪೂರ ಸ್ವಾಗತಿಸಿದರು. ಅಕ್ಕಮಹಾದೇವಿ ಸ್ವಾಮಿ ವಂದಿಸಿದರು.

ವಸ್ತು ಪ್ರದರ್ಶನ:

ಮಾತೆ ಮಹಾದೇವಿಯವರ ಜೀವನ ಮತ್ತು ಸಾಧನೆಯಾಧಾರಿತ ವಸ್ತುಪ್ರದರ್ಶನ ಹಾಗೂ ಅವರ ಕುಳಿತ ಭಂಗಿಯ ಭಾವಚಿತ್ರದ ಆಕರ್ಷಕವಾಗಿತ್ತು. ಶರಣ ಶರಣೆಯರು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ