ಯಶವಂತಪುರ ನಿಲ್ದಾಣ, ನಮ್ಮ ಮೆಟ್ರೋಗೆ ಬಸವಣ್ಣನವರ ಹೆಸರಿಡಲು ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬೆಂಗಳೂರು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ‘ವಿಶ್ವಗುರು ಬಸವಣ್ಣ ರೈಲ್ವೆ ನಿಲ್ದಾಣ’ ಎಂದು ಹಾಗೂ ಬೆಂಗಳೂರಿನ ನಮ್ಮ ಮೆಟ್ರೋಗೆ ‘ವಿಶ್ವಗುರು ಬಸವ ಮೆಟ್ರೋ’ ಎಂದು ನಾಮಕರಣ ಮಾಡಬೇಕೇಂದು ಬಸವಧರ್ಮ ಪೀಠ ಹಾಗೂ ರಾಷ್ಟ್ರೀಯ ಬಸವದಳ ಭಾರತ ಸರಕಾರಕ್ಕೆ ಮನವಿ ಮಾಡಿವೆ.

ರವಿವಾರ ಮಹಾನಗರದ ಪುರಭವನದಲ್ಲಿ ನಡೆದ ಧರ್ಮಗುರು ಬಸವಣ್ಣನವರ ಲಿಂಗೈಕ್ಯ ಸಂಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರದಲ್ಲಿ, ಕರ್ನಾಟಕದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬೆಂಗಳೂರಿನ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣಕ್ಕೆ ೧೨ನೇ ಶತಮಾನದ ಮಹಾನ್ ಸಮಾಜ ಸುಧಾರಕ, ಸಮಾನತೆಯ ಹರಿಕಾರ ಹಾಗೂ ಕರ್ನಾಟಕ ಸಾಂಸ್ಕೃತಿಕ ನಾಯಕ ‘ವಿಶ್ವಗುರು ಬಸವಣ್ಣ’ನವರ ಹೆಸರನ್ನು ನಾಮಕರಣ ಮಾಡಬೇಕು.

ಯಶವಂತಪುರ ನಿಲ್ದಾಣದಿಂದ ಉತ್ತರ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಗೆ ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಈ ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಡುವುದರಿಂದ ಅವರ ವಿಶ್ವಮಾನವ ಸಂದೇಶವು ದೇಶ-ವಿದೇಶಗಳ ಜನರಿಗೆ ಸುಲಭವಾಗಿ ತಲುಪುತ್ತದೆ.

ಆದ್ದರಿಂದ, ಸಾರ್ವಜನಿಕರ ಹಾಗೂ ಬಸವಾಭಿಮಾನಿಗಳ ಬಹುದಿನಗಳ ಈ ಭಾವನಾತ್ಮಕ ಬೇಡಿಕೆಯನ್ನು ಪರಿಗಣಿಸಿ ಶೀಘ್ರವಾಗಿ ಮರುನಾಮಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.

ಜೊತೆಗೆ ಬೆಂಗಳೂರಿನ ನಮ್ಮ ಮೆಟ್ರೋಗೆ ‘ವಿಶ್ವಗುರು ಬಸವಣ್ಣ’ನವರ ಹೆಸರಿಡಲು ಒತ್ತಾಯಿಸಲಾಗಿದೆ.

ಬಸವಣ್ಣನವರು ‘ಅನುಭವ ಮಂಟಪ’ದ ಮೂಲಕ ವಿಶ್ವದ ಮೊಟ್ಟಮೊದಲ ಪ್ರಜಾಪ್ರಭುತ್ವ ಮಾದರಿಯ ಸಂಸತ್ತನ್ನು ರೂಪಿಸಿದವರು. ಜಾತಿ, ವರ್ಣ, ವರ್ಗ, ಲಿಂಗಭೇದವಿಲ್ಲದೆ ಸರ್ವರಿಗೂ ಸಮಾನತೆ ಸಾರಿದ ಅವರ ಆದರ್ಶಗಳು ಭಾರತೀಯ ಸಂವಿಧಾನದ ಮೂಲ ಮೌಲ್ಯಗಳಿಗೆ ಪ್ರೇರಣೆಯಾಗಿವೆ.

ಕಾಯಕವೇ ಮತ್ತು ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ ಬಸವಣ್ಣನವರ ತತ್ವಗಳು ಲಕ್ಷಾಂತರ ಶ್ರಮಿಕರಿಗೆ ಹಾಗೂ ಜನಸಾಮಾನ್ಯರಿಗೆ ನಿತ್ಯ ಸ್ಫೂರ್ತಿಯಾಗಿವೆ.

ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಅಧಿಕೃತವಾಗಿ ಘೋಷಿಸಿದೆ.

ರಾಜ್ಯದ ರಾಜಧಾನಿಯ ಪ್ರಮುಖ ರೈಲು ನಿಲ್ದಾಣಕ್ಕೆ ಹಾಗೂ ನಮ್ಮ ಮೆಟ್ರೋಗೆ ಅವರ ಹೆಸರಿಡುವುದು ಮಹಾತ್ಮರಿಗೆ ಸಲ್ಲಿಸುವ ಸೂಕ್ತ ಗೌರವವಾಗಿದೆ ಎಂದು ಮನವಿಪತ್ರದಲ್ಲಿ ಹೇಳಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *