ಹಿಂದುತ್ವವಾದಿಗಳ ಹಿಡಿತದಲ್ಲಿ ಹುಬ್ಬಳ್ಳಿ ಬಸವ ಜಯಂತಿ

ಹುಬ್ಬಳ್ಳಿ :

ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಬಸವ ಜಯಂತಿಯಲ್ಲಿ ಹಿಂದುತ್ವವಾದಿಗಳ ಪ್ರಭಾವ ಕಳೆದ ವರ್ಷಕ್ಕಿಂತಲೂ ಎದ್ದು ಕಾಣಿಸಿತು.

ಇಲ್ಲಿ ಯಾವಾಗಲೂ ಒಂದು ರಾಜಕೀಯ ಪಕ್ಷದ ನಿರ್ದೇಶನದಂತೆಯೇ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತದೆ.

ಹುಬ್ಬಳ್ಳಿ ಮೂರುಸಾವಿರ ಮಠದ ವತಿಯಿಂದ ಬಸವ ಜಯಂತಿ ಆಚರಿಸುವುದಿಲ್ಲ. ಆದರೆ ಮಠದಲ್ಲಿರುವ ವೀರಶೈವ ಸಂಘಟನಾ ಸಮಿತಿಯವರು ಜಯಂತಿ ಆಚರಿಸುತ್ತಾ ಬಂದಿದ್ದಾರೆ.

ಇವರು ಬಸವ ಜಯಂತಿ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಳ್ಳುವ ಕಲಾವಿದರನ್ನು ಕರೆಸಿ, ಜನರನ್ನು ಸೇರಿಸಲು ಪ್ರಯಾಸಪಟ್ಟರು.

ಎರಡು ದಿನದ ಜಯಂತಿ ಕಾರ್ಯಕ್ರಮದಲ್ಲಿ ಬಸವತತ್ವ ಚಿಂತನೆ ಕೇಳಲೇ ಇಲ್ಲ. ಬಸವತತ್ವವನ್ನು ಪ್ರತಿಪಾದಿಸುವ ಚಿಂತಕರನ್ನೂ ಹೊರಗಿಡಲಾಗಿತ್ತು.

ಬದಲಾಗಿ ಹಿಂದುತ್ವವಾದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸ್ವಾಮಿಗಳು ಇಲ್ಲಿ ಉಪಸ್ಥಿತರಿದ್ದರು.

ಏಪ್ರಿಲ್ 17 ರಂದು ನಡೆದ ಬೈಕ್ ರ್ಯಾಲಿಗೆ ಬಸವಪರ ಸಂಘಟನೆಗಳನ್ನು ಆಹ್ವಾನಿಸಿದ್ದರು, ಆದರೆ ಅಲ್ಲಿ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಕಾರ್ಯಕರ್ತರು ಹೆಚ್ಚಾಗಿ ಕಂಡುಬಂದರು.

ಆ ರ್ಯಾಲಿಯನ್ನು ಮೂರುಸಾವಿರ ಮಠದ ಶ್ರೀಗಳು ಉದ್ಘಾಟಿಸಿದರು. ಸ್ಥಳೀಯ ಶಾಸಕರಾದ ಮಹೇಶ ಟೆಂಗಿನಕಾಯಿ ಉಪಸ್ಥಿತರಿದ್ದರು.

20ರಂದು ಮೂರುಸಾವಿರ ಮಠದ ಶ್ರೀಗಳ ಸಾನಿಧ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬಸವ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದರು.

ಆ ಕಾರ್ಯಕ್ರಮದಲ್ಲಿ ಯುವಕರು ಸಿನಿಮಾ ಹಾಡಿನ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಬಹುತೇಕರಿಗೆ ಬಸವಣ್ಣ, ಅವರ ತತ್ವ ಅರ್ಥ ಆಗಿರಲಿಲ್ಲ ಎಂದು ಹೇಳಬಹುದು.

ವೀರಾಪುರ ಓಣಿಯಲ್ಲಿ ಎರಡನೇ ವರ್ಷದ ಬಸವ ಜಯಂತಿ ಆಚರಿಸಿದರು. ತತ್ವ ಚಿಂತನೆಯ ಯಾವ ಕಾರ್ಯಕ್ರಮ ಇಲ್ಲೂ ನಡೆಯಲಿಲ್ಲ.

ಕಳೆದ ವರ್ಷ ಬಸವ ಜಯಂತಿ ಆಚರಣೆಯ ಬಸವ ಭಾವಚಿತ್ರದ ಪಕ್ಕದಲ್ಲಿ ಏಕೋರಾಮರಾಧ್ಯರ ಫೋಟೋ ಇಟ್ಟಿದ್ದರು ಈ ವರ್ಷ ಅದು ಇರಲಿಲ್ಲ. ಡಿಜೆ ಹಚ್ಚಿ ಸಿನಿಮಾ ಹಾಡುಗಳನ್ನು ಹಾಕಿದ್ದರ ಪರಿಣಾಮ ಯುವಕರು ಸೇರಿದರು.

ಕಾರ್ಯಕ್ರಮ ಸಂಘಟಿಸಿದ ಒಬ್ಬ ಪ್ರಮುಖರನ್ನು ನೀವು ವಚನಗಳನ್ನು ಯಾಕೆ ಹಾಕಲ್ಲ ಅಂತ ಕೇಳಿದ್ರೆ, ವಚನಗಳನ್ನು ಹಾಕಿದ್ರೆ ಯಾರು ಬರಲ್ಲ ಡಿಜೆ ಹಚ್ಚಿ ಹಿಂದಿ ಸಿನೆಮಾ ಹಾಡು ಹಾಕಿದರೆ ಹೆಚ್ಚು ಹುಡುಗರು ಸೇರ್ತಾರೆ, ಮುಂದಿನ ಪಾಲಿಕೆ ಚುನಾವಣೆ ತಯಾರಿಗಾಗಿ ಈ ಮೆರವಣಿಗೆ ಎಂದರು.

ಮಂಗಳವಾರಪೇಟೆಯ ರುದ್ರಾಕ್ಷಿಮಠದಿಂದ ಎರಡನೇ ವರ್ಷದ ಬಸವ ಜಯಂತಿಯನ್ನು ಆಚರಿಸಲಾಯಿತು. ಈ ಸಾರಿ ಕೂಡ ಬಸವಣ್ಣವರ ಮೂರ್ತಿ ಜೊತೆ ಜೋಡೆತ್ತುಗಳ ಮೆರವಣಿಯನ್ನು ಮಾಡಲಾಯಿತು.

ಇಲ್ಲಿಯ ಪ್ರಭಾವಿ ರಾಜಕಾರಣಿಯೊಬ್ಬರು ಲಿಂಗಾಯತರ ಓಟಿಗಾಗಿ ಬಸವ ಜಯಂತಿಯ ಈ ಅಬ್ಬರಕ್ಕೆ ಹಣಕಾಸಿನ ನೆರವು ನೀಡಿದ್ದಾರೆನ್ನುವ ಸುದ್ದಿ ಹರಿದಾಡುತ್ತಿದೆ.

ಲಿಂಗಾಯತರು ಈಗ ಸ್ವಲ್ಪ ಜಾಗೃತರಾಗಿದ್ದರಿಂದ ಮನುವಾದಿಗಳಿಗೆ ಬಸವಣ್ಣನವರನ್ನು ಬಿಡಲು ಆಗುತ್ತಿಲ್ಲ. ಬಸವತತ್ವ ಆಚರಿಸಲೂ ಅವರಿಗೆ ಮನಸ್ಸಿಲ್ಲ. ಲಿಂಗಾಯತರ ವಿರೋಧ ಕಟ್ಟಿಕೊಳ್ಳಲಾರದಕ್ಕೆ ಬಸವಣ್ಣನವರ ಹೊತ್ತು ತಿರುಗುತ್ತಿದ್ದಾರೆ.

ಕೆಲವು ಮಠಗಳಲ್ಲಿಯೂ ಬಸವ ಜಯಂತಿಯ ಬಗ್ಗೆ ನಿರಾಸಕ್ತಿಯಿದೆ. ಈ ಮಠಗಳವರಿಗೆ ಬಸವತತ್ವ ಬೇಕಾಗಿಲ್ಲ. ರಾಜಕೀಯ ಲಾಭಕ್ಕೋಸ್ಕರ, ನೆಪಕ್ಕೋಸ್ಕರ ಕಾರ್ಯಕ್ರಮ ಆಚರಿಸುತ್ತಾರೆ. ಈ ಮಠದವರು ಭಕ್ತರ ಅಂತರಂಗದಲ್ಲಿ ಬಸವಣ್ಣನ ತತ್ವ ತುಂಬದೆ, ಹಿಂದುತ್ವದ ಒಳಗೆ ಬಸವಣ್ಣನನ್ನು ತರಲು ಪ್ರಯತ್ನಿಸುತ್ತಿದ್ದಾರೆ.

ರಾಮನವಮಿ, ಹನುಮ ಜಯಂತಿ, ಗಣೇಶ ಉತ್ಸವ ಆಚರಿಸಿದಂತೆ ಬಸವ ಜಯಂತಿಯನ್ನು ಆಚರಿಸಲು ಇವರು ಆರಂಭಿಸಿಬಿಟ್ಟಿದ್ದಾರೆ.

ಈ ಮಠಗಳು ಮನುವಾದಿಗಳ ಸಂಪೂರ್ಣ ಹಿಡಿತಕ್ಕೆ ಸಿಲುಕಿವೆ. ಅವುಗಳನ್ನು ಬಸವ ತತ್ವದೆಡೆಗೆ ತರಬೇಕೆನ್ನುವುದು ನಮ್ಮಂಥವರ ಪ್ರಯತ್ನ ನಿಂತಿಲ್ಲ.

ಇವುಗಳಲ್ಲಿ ವೀರಶೈವ ಜಾತಿಜಂಗಮರ ಪ್ರಭಾವ ಬಹಳ ಇದೆ. ಲಿಂಗಾಯತ ಮಠಗಳೇ ಆದರೂ ಬಸವಣ್ಣನವರನ್ನು ಧರ್ಮಗುರು ಎಂದು ಅವರು ಒಪ್ಪೋದಿಲ್ಲ, ವಚನಗಳನ್ನು ಒಪ್ಪೊದಿಲ್ಲ, ಸಂಸ್ಕೃತ ವೈದಿಕ ಪದ್ಧತಿ ಪೂಜೆ ಬಿಡೋದಿಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *