‘ಸಂತ, ಸರಳತೆಯ ಮೇರುವಾಗಿದ್ದ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ’

ಬಸವ ಮೀಡಿಯಾ
ಬಸವ ಮೀಡಿಯಾ

ಅನುಭಾವ ಶ್ರಾವಣ ; ಶರಣ ಚಿಂತನ ಮಾಲಿಕೆ

ಚಿತ್ರದುರ್ಗ:

ಪ್ರಕೃತಿ ನಮಗೆ ಏನೆಲ್ಲಾ ಕೊಟ್ಟಿದೆ. ಅದನ್ನು ನಾವು ಸದ್ಬಳಕೆ ಮಾಡಿಕೊಂಡರೆ ಅದು ನಮಗೆ ವರ, ಇಲ್ಲದೇ ಹೋದರೆ ವಿಪತ್ತು ಖಂಡಿತ. ಎಂಬಂತಹ ಪ್ರಕೃತಿ ಧರ್ಮವನ್ನು ಪಾಲಿಸಿದವರು ಈ ಶತಮಾನ ಕಂಡ ಶ್ರೇಷ್ಠ ಸಂತ, ಸರಳತೆಯ ಮೇರುವಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು. ಅವರದು ಅಪರೂಪದ ವ್ಯಕ್ತಿತ್ವ ಎಂದು ಭರಮಸಾಗರ ಬಾಪೂಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಮಮತ ಎನ್. ಅವರು ಸಂತರ ಅನುಪಮ ಸೇವೆಯನ್ನು ಸ್ಮರಿಸಿದರು.

ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ ೨೦ನೇ ದಿನ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ವಿಜಯಪುರದ ಸಿದ್ಧೇಶ್ವರ ಸ್ವಾಮಿಗಳವರ ಜೀವನ ಹಾಗೂ ಸಾಧನೆ ಕುರಿತಾದ ಚಿಂತನಗೋಷ್ಠಿಯಲ್ಲಿ ಉಪನ್ಯಾಸ ನೀಡುತ್ತಿದ್ದರು.

ಸಾಮಾನ್ಯ ಬಡರೈತ ಕುಟುಂಬದಲ್ಲಿ ಜನಿಸಿದ ಶ್ರೀಗಳು ಪ್ರಾಥಮಿಕ ವಿದ್ಯಾಭ್ಯಾಸ ಸ್ವಗ್ರಾಮದಲ್ಲಿ ಮುಂದಿನ ಉನ್ನತ ವ್ಯಾಸಂಗವನ್ನು ಜತೆಗೆ ತತ್ವಶಾಸ್ತ್ರವನ್ನು ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ಪಡೆಯುತ್ತಾರೆ. ಮುಂದೆ ಮಲ್ಲಿಕಾರ್ಜುನ ಶ್ರೀಗಳವರ ಪ್ರಭಾವಕ್ಕೆ ಒಳಗಾಗಿ ಅವರು ತಾವು ಹೋದ ಕಡೆಗೆ ಕರೆದುಕೊಂಡು ಹೋದ ಪರಿಣಾಮ ಪ್ರವಚನದ ನಂಟು ಹತ್ತಿಸಿಕೊಂಡರು.

ಬಹುಭಾಷಾ ಪ್ರವೀಣರಾಗಿದ್ದ ಶ್ರೀಗಳು ತಮ್ಮ ಪಾಂಡಿತ್ಯದ ಪ್ರಭಾವದಿಂದ ಸರಳತೆ ಮೈಗೂಡಿಸಿಕೊಂಡು ಸದಾ ಶ್ವೇತವಸ್ತ್ರಧಾರಿಯಾಗಿ ಜೇಬು ಇರದ ಅಂಗಿಯನ್ನು ತೊಟ್ಟು ನಿರಾಭಾರಿ ಜಂಗಮನಾಗಿ ಜನಪರ ಕಾಳಜಿ ಹೊಂದಿ ತಮ್ಮ ಅತ್ಯದ್ಭುತ ಜ್ಞಾನಭಂಡಾರದಿಂದ ಮೆಲುಧ್ವನಿ ಮೃದು ಸ್ವಭಾವದ ಕಂಠಸಿರಿಯಿಂದ ಮಾತು ಮುತ್ತುಗಳಾಗಿ ಹೊರಹೊಮ್ಮುತ್ತಿದ್ದವು ಎಂದರು.

ಅವರ ಪ್ರವಚನ ಅಂದರೆ ಜನ ಸಾಗರದಂತೆ ಸೇರಿ ಆಲಿಸುತ್ತಿದ್ದರು. ಇವರು ಸಾಹಿತ್ಯ ಸೇವೆಯನ್ನು ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವೆಲ್ಲ ಮೌಲಿಕ ಕೃತಿಗಳೇ ಆಗಿವೆ.

ಇವರ ನಡೆ ನುಡಿ ಮತ್ತು ವಿದ್ವತ್ತಿಗೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದರೂ ನಾನು ಸರಳ ಜೀವನ ನಡೆಸುವವನು ಅವ್ಯಾವ ಪ್ರಶಸ್ತಿಗಳು ಬೇಡವೆಂದು ನಯವಾಗಿ ತಿರಸ್ಕರಿಸಿದರು.

೮೨ ವರ್ಷಗಳ ತುಂಬು ಜೀವನ ನಡೆಸಿ ೨೦೨೩ರ ಜನವರಿ ೩ರಂದು ಬಯಲಾದರು. ನನ್ನ ಅಂತ್ಯಕ್ರಿಯೆ ಸಮಾಧಿ ಮಾಡಿ, ಗದ್ದುಗೆ ನಿರ್ಮಿಸುವುದು ಬೇಡ ಎಂದು ತನ್ನ ದೇಹವನ್ನು ಅಗ್ನಿಸ್ಪರ್ಶ ಮಾಡಿರಿ ಎಂದು ಸೂಚಿಸಿ ಅದರಲ್ಲಿಯೂ ಸರಳತೆ ಮೆರೆದ ಸರಳ ಸಂತ ಎಂದು ಸ್ಮರಿಸಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಇಂದು ಕೇವಲ ಹಣಕ್ಕೆ ಬೆಲೆ ಇದೆ. ಆದರೆ ಸಿದ್ಧೇಶ್ವರ ಸ್ವಾಮೀಜಿಯವರು ಜ್ಞಾನಕ್ಕೂ ಬೆಲೆ ಇದೆ ಎನ್ನುವುದನ್ನು ತೋರಿಸಿಕೊಟ್ಟ ವಿರಳಲ್ಲಿ ಒಬ್ಬರು.

ಭೌತಿಕವಾದದ್ದು ಅದೆಂದಿಗೂ ನಶ್ವರ, ಜ್ಞಾನವೊಂದೇ ಶಾಶ್ವತ ಎಂದು ನಂಬಿ ಅದರಂತೆ ನಡೆದುಕೊಂಡ ಸಂತಶ್ರೇಷ್ಠ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಜೆ.ಎನ್. ಕೋಟೆ ಬಸವಕೇಂದ್ರದ ಬಸವರಾಜಪ್ಪ, ಗಾಯತ್ರಿ ಶಿವರಾಂ, ನಾಗರಾಜ ಸಂಗಮ್, ಎಸ್. ವೀರೇಶ್ ಮತ್ತಿರರು ಭಾಗವಹಿಸಿದ್ದರು.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ಸಿದ್ಧೇಶ್ವರ ಶ್ರೀಗಳವರ ಕುರಿತಾದ ಗೀತೆಗಳನ್ನು ಹಾಡಿದರು. ದೇವಿಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *