ಲಿಂಗಾಯತ ಅಸ್ಮಿತೆಯ ಹೋರಾಟಕ್ಕೆ ಪದೇ ಪದೇ ಅಡ್ಡ ಬರುತ್ತಿರುವ ಪಂಚಪೀಠಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಪಂಚಪೀಠಗಳ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಖಂಡನೆ

ಭಾಲ್ಕಿ

(ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನೀಡಿರುವ ಹೇಳಿಕೆ)

ಬೆಂಗಳೂರಿನಲ್ಲಿ ಇತ್ತೀಚೆಗೆ ಎಲ್ಲ ಅಂಗಾಯತ ಹಾಗೂ ವೀರಶೈವ ಸಂಘಟನೆಗಳು ಒಗ್ಗೂಡಿ ಮಾಡಿದ ‘ವಚನ ದರ್ಶನ ಮಿಥ್ಯ vs ಸತ್ಯ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ವಿಯಾಗಿರುವುದರಿಂದ ಪಂಚಪೀಠದ ಜಗದ್ಗುರುಗಳ ನಿದ್ದೆಗೆಡಿಸಿದ ಹಾಗೆ ಕಾಣುತ್ತದೆ.

ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷರಾದ ಶರಣ ಶಂಕರ ಬಿದರಿ ಅವರು ಭಾಗವಹಿಸಿ, ಅಂಗಾಯತ ಸಮಾಜ ಸಂಘಟನೆ ಮತ್ತು ಬಸವತತ್ವ ಪರವಾಗಿ ಮಾತನಾಡಿರುವುದು ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ ಪಂಚಪೀಠದ ಜಗದ್ಗುರುಗಳು ಹತಾಶವಾಗಿ ‘ಲಿಂಗಾಯತ’ ಕುರಿತು ಮಿಥ್ಯ ಹಾಗೂ ದ್ವಂದ್ವ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯನ್ನು ಅಂಗಾಯತ ಮಠಾಧಿಪತಿಗಳ ಒಕ್ಕೂಟ ಒಮ್ಮತದಿಂದ ಖಂಡಿಸುತ್ತದೆ.

ಪಂಚಪೀಠದ ಜಗದ್ಗುರುಗಳ ಹೇಳಿಕೆಯಲ್ಲಿ ವೀರಶೈವ ಧರ್ಮದ ಪ್ರಾಚೀನತೆ, ಶರಣರ ವಚನಗಳಲ್ಲಿ ವೀರಶೈವ ಪದಬಳಕೆ, ಹಿಂದೂ ಕಾಯ್ದೆಗಳು ಹಾಗೂ ಕೆಲವು ಅಧಿವೇಶನಗಳ ನಿರ್ಣಯಗಳ ಕುರಿತು ಅವರ ನಿಲುವು ಸ್ಪಷ್ಟಪಡಿಸುವಲ್ಲಿ ದ್ವಂದ್ವ ನೀತಿ ಅನುಸರಿಸಿದ್ದಾರೆ. ಒಂದು ಕಡೆ ವೀರಶೈವಧರ್ಮ ಪ್ರಾಚೀನ ಎಂದು ಹೇಳುವ ಜೊತೆಗೆ ಅದು ಹಿಂದೂ ಧರ್ಮದ ಭಾಗವೆಂದು ಘೋಷಿಸಿದ್ದಾರೆ. ಪಂಚಪೀಠಾಧಿಶರು ವೀರಶೈವರೇ ಅಥವಾ ಹಿಂದೂಗಳೆ ಎಂಬುದು ಮೊದಲು ನಿರ್ಣಯಿಸಿಕೊಳ್ಳಬೇಕು.

ಒಂದು ಧರ್ಮದಲ್ಲಿ ಇನ್ನೊಂದು ಧರ್ಮ ಇರಲು ಸಾಧ್ಯವಿಲ್ಲ. ಪಂಚಪೀಠಗಳಿಗೆ ವೀರಶೈವ ಧರ್ಮವೆಂದು ಹೇಳುವುದಾದರೆ ಅವರು ಹಿಂದೂಗಳಲ್ಲ ಎಂದು ಹೇಳಬೇಕಾಗುತ್ತದೆ. ಅಥವಾ ಅವರು ನಾವು ಹಿಂದೂಗಳು ಎಂದು ಹೇಳುವುದಾದರೆ ವೀರಶೈವ ಧರ್ಮವಲ್ಲ ಎಂದು ಹೇಳಬೇಕಾಗುತ್ತದೆ. ಪಂಚಪೀಠಗಳ ಪ್ರಕಾರ ‘ಐವರು ಆಚಾರ್ಯರು ಶಿವನ ಪಂಚಮುಖಗಳಿಂದ ಉದ್ಭವಿಸಿದರೆಂದು ಹೇಳಲಾಗಿದೆ. ಮತ್ತೆ ಅವರು ಶಿವನು ಆಯ್ಕೆ ಮಾಡಿ ಧರ್ಮ ಸಂಸ್ಥಾಪಿಸಲೋಸುಗ ಭೂಲೋಕಕ್ಕೆ ಕಳುಹಿಸಿಕೊಟ್ಟ ಐವರು ಶಿವಗಣಂಗಳೆಂದು ಹೇಳಲಾಗಿದೆ’. ಇವು ಎರಡು ಹೇಳಿಕೆಗಳು ಪರಸ್ಪರ ವಿರುದ್ಧವಾಗಿರುವುದು ಕಣ್ಣಿಗೆ ಹೊಡೆಯುತ್ತದೆ.

ಅವು ಒಟ್ಟಿಗೆ ಸತ್ಯವಾಗಿರದಿದ್ದರೆ ಎರಡರಲ್ಲಿ ಯಾವುದು ಸತ್ಯ?’ ಎಂಬ ಪ್ರಶ್ನೆ ಎಂ.ಆರ್. ಸಾಖರೆಯವರು ಈ ಮುಂಚೆಯೇ ಕೇಳಿದ್ದಾರೆ. ಇದಕ್ಕೆ ಕೇದಾರ ಶ್ರೀಗಳು ಉತ್ತರಿಸಬೇಕಾಗುತ್ತದೆ. ಅವರ ಹೇಳಿಕೆಯಲ್ಲಿ ಈ ರೀತಿಯ ದ್ವಂದ್ವ ನಿಲುವು ಅವರಲ್ಲಿರುವ ಅಸ್ಪಷ್ಟತೆ ಮತ್ತು ಅಂಗಾಯತರಿಗೆ ಮಾಡುವ ಮೋಸ ಗೋಚರಿಸುತ್ತದೆ.

ಬಸವಾದಿ ಶರಣರ ವಚನಗಳಲ್ಲಿ ವೀರಶೈವ ಪದ ಬಳಕೆಯ ಬಗ್ಗೆ ಪಂಚಪೀಠದವರು ಹೇಳಿದ್ದಾರೆ. ಶರಣರ ವಚನಗಳಲ್ಲಿ ಹದಿನೈದನೆ ಶತಮಾನದ ನಂತರ ಸೇರಿಸಲಾದ ಸಂಸ್ಕೃತ ಶ್ಲೋಕಗಳಲ್ಲಿ ವೀರಶೈವ ಪದ ಹೆಚ್ಚಿನ ರೀತಿಯಲ್ಲಿ ಬಳಕೆಯಾಗಿರುವುದು ನಾಡಿನ ವಿದ್ವಾಂಸರು ಖಚಿತಪಡಿಸಿದ್ದಾರೆ. ಆದರೆ ವಚನಗಳಲ್ಲಿ ಬರುವ ಲಿಂಗಾಯತ, ಲಿಂಗವಂತ ಪದಪ್ರಯೋಗ ಮೂಲ ವಚನಗಳಲ್ಲಿದ್ದು, ಅದು ಸಹಜವಾಗಿ ಬಳಕೆಯಾಗಿದೆ.

ಕೇವಲ ಯಾವುದೇ ಒಂದು ಶಬ್ದದ ಬಳಕೆಯಿಂದ ಆ ಧರ್ಮದ ಇತಿಹಾಸ ಮತ್ತು ಸಿದ್ಧಾಂತ ಹೇಳಲು ಸಾಧ್ಯವಿಲ್ಲ. ಯಾವ ಶಬ್ದ ಯಾವ ಅರ್ಥದಿಂದ ಬಳಕೆಯಾಗಿದೆ ಎಂಬುದು ಹೆಚ್ಚು ಅರ್ಥಪೂರ್ಣ. ಶರಣರ ಸಮಗ್ರ ಚಿಂತನೆ ಯಾವ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ ಎಂಬ ಅರಿವಿನಿಂದ ಅವರ ವಚನಗಳು ಅರ್ಥೈಸಬೇಕೆ ವಿನಃ ತಮ್ಮ ಪೂರ್ವಗ್ರಹಪೀಡಿತ ಆಲೋಚನೆಗಳು ಶರಣರ ಮೇಲೆ ಹೇರಿಸಿ ಲಿಂಗಾಯತ ಸಮಾಜದ ಮೇಲೆ ಮಾಡುತ್ತಿರುವ ಸವಾರಿ ಪಂಚಪೀಠಗಳು ನಿಲ್ಲಿಸಬೇಕು.

ಪಂಚಪೀಠದ ಹೇಳಿಕೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ನಿರ್ಣಯಗಳ ಕುರಿತು ಉಲ್ಲೇಖ ಇದೆ. ಆದರೆ ಇತ್ತೀಚಿಗೆ 2023 ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ 26ನೇ ಅಧಿವೇಶನದಲ್ಲಿ ‘ವೀರಶೈವ-ಲಿಂಗಾಯತರು ಹಿಂದೂಗಳಲ್ಲ’ ಎಂಬ ನಿರ್ಣಯ ತೆಗೆದುಕೊಂಡಿರುವುದು ಪಂಚಪೀಠಗಳಿಗೆ ಮರೆವು ಆಗಿರುವ ಹಾಗೆ ಕಾಣುತ್ತದೆ.

ವಿಶೇಷವೆಂದರೆ ಈ ನಿರ್ಣಯ ಮಂಡನೆಯ ಸಂದರ್ಭದಲ್ಲಿ ವೇದಿಕೆಯಲ್ಲಿ ಪಂಚಪೀಠದ ಕೆಲವು ಪೀಠಾಧೀಶರು ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ಅವರು ತಾಳಿದ ಮೌನ ಏನು ಸೂಚಿಸುತ್ತದೆ? ಮತ್ತೊಂದು ವಿಷಯವೆಂದರೆ, ಪಂಚಪೀಠದವರು ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಕೇಂದ್ರ ಸರಕಾರ ತಿರಸ್ಕರಿಸಿದೆ ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರಕಾರ ನೀಡಿರುವ ಉತ್ತರದಲ್ಲಿ:

1) ಲಿಂಗಾಯತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಇದ್ದಾರೆ. ಲಿಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಿದರೆ ಅವರಿಗೆ ದೊರೆಯುವ ಎಲ್ಲ ಸೌಲಭ್ಯಗಳು ನಿಂತು ಹೋಗುತ್ತದೆ.

2) 1871 ಜನಗಣತಿಯಿಂದ ಈವರೆಗಿನ ಎಲ್ಲ ಜನಗಣತಿಯಲ್ಲಿ ಅಂಗಾಯತರನ್ನು ಹಿಂದು ಧರ್ಮದ ಒಂದು ಶಾಖೆಯೆಂದು ಪರಿಗಣಿಸಲ್ಪಟ್ಟಿದೆ. ಅದರಿಂದ ಲಿಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಲು ಕಷ್ಟ ಆಗುತ್ತಿದೆ. ಈ ಎರಡು ಕಾರಣಗಳನ್ನು ತಿಳಿಸಿದೆ.

ಆದರೆ ಈ ಎರಡು ಕಾರಣಗಳು ಮಿಥ್ಯ ಮತ್ತು ತಪ್ಪು ಗ್ರಹಿಕೆಯ ಮೇಲೆ ನಿಂತಿವೆ. ಅದಕ್ಕಾಗಿ ಪಂಚಪೀಠದ ಪೂಜ್ಯರು ಕೇಂದ್ರ ಸರಕಾರದ ಉತ್ತರವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು.

ಪಂಚಪೀಠದ ಪೂಜ್ಯರು ಈ ಹೇಳಿಕೆಯಲ್ಲಿ ಹಿಂದು ಕಾಯ್ದೆಯ ಉಲ್ಲೇಖ ಮಾಡಿದ್ದಾರೆ. ಹಿಂದು ಕಾಯ್ದೆ ಪ್ರಕಾರ ಬೌದ್ಧ, ಜೈನ, ಸಿಖ್ಖರು ಹಿಂದುಗಳೇ ಆಗಿರುತ್ತಾರೆ. ಆದರೆ ಅವರಿಗೆ ಕೇಂದ್ರ ಸರಕಾರ ಪ್ರತ್ಯೇಕ ಧರ್ಮವೆಂದು ಪರಿಗಣಿಸಿದೆ. ಈ ದೃಷ್ಟಿಯಿಂದ ಅಂಗಾಯತ ಕೂಡ ಪ್ರತ್ಯೇಕ ಧರ್ಮವೆಂದು ಸ್ಪಷ್ಟವಾಗುತ್ತದೆ.

ಪಂಚಪೀಠದ ಜಗದ್ಗುರುಗಳು ಮಾತಿನ ಭರಾಟೆಯಲ್ಲಿ ನಾಡಿನ ಖ್ಯಾತ ಚಿಂತಕರು, ಹಿರಿಯ ಸಾಹಿತಿಗಳು, ಅಪ್ರತಿಮ ಸಂಘಟಕರು ಹಾಗೂ ಸಮಸ್ತ ಅಂಗಾಯತ ಸಮಾಜದ ಹೆಮ್ಮೆ ಆಗಿರುವ ಡಾ.ಗೊ.ರು. ಚನ್ನಬಸಪ್ಪ ಅವರ ಕುರಿತು ಏಕವಚನದಲ್ಲಿ ಮಾತನಾಡುವುದು ಅವರ ಗುರುತ್ವಕ್ಕೆ ಅವರೇ ಮಾಡಿದ ದ್ರೋಹವಾಗಿದೆ.

ಪಂಚಪೀಠಗಳು ಪದೇ ಪದೇ ಧರ್ಮ ಒಡೆಯುವ ಮಾತನಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಲಿಂಗಾಯತ ಹೋರಾಟ ಅಖಂಡ ಲಿಂಗಾಯತ ಸಮಾಜ ಒಗ್ಗೂಡಿಸುವ ಲಿಂಗಾಯತ ಧರ್ಮದಲ್ಲಿರುವ ನೂರಾರು ಪಳಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹೋರಾಡುವ ಹೋರಾಟವಾಗಿದೆ. ಅದಕ್ಕಾಗಿ ಪಂಚಪೀಠದ ಜಗದ್ಗುರುಗಳು ಸಮಸ್ತ ಲಿಂಗಾಯತ ಸಮಾಜದ ಅಸ್ಮಿತೆಯ ಹೋರಾಟಕ್ಕೆ ಪದೇ ಪದೇ ಅಡ್ಡ ಬರುವ ಮೂಲಕ ಸಮಾಜದ ಸಮಗ್ರ ಏಳಿಗೆಗೆ ಕೊಡಲೆ ಪೆಟ್ಟು ಹಾಕುವ ಬದಲಾಗಿ ಈ ಹೋರಾಟವನ್ನು ಬೆಂಬಲಿಸಬೇಕೆಂದು ಕೋರುತ್ತೇವೆ. ಒಟ್ಟಾರೆ ಆಗಿ ಪಂಚಪೀಠಗಳ ಹೇಳಿಕೆ ಮಿಥ್ಯ ಮತ್ತು ದ್ವಂದ್ವ ಸೃಷ್ಟಿಸುವದು ಆಗಿರುವುದರಿಂದ ಎಲ್ಲ ಹೇಳಿಕೆಗಳನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಒಮ್ಮತದಿಂದ ಖಂಡಿಸುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
4 Comments
  • ಬಿದರಿ ಲಿಂಗಾಯತ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಹೆಸರು ಉಲ್ಲೇಖಿಸಿದ್ದು, ಸಭಿಕರು ಹಾಗೂ ಆಯೋಜಕರು ಅದನ್ನು ವಿರೋಧಿಸಿದ್ದು ಪಂಚಾಚಾರ್ಯರಿಗೆ ಅಸ್ತ್ರವಾಗಿ ಸಿಕ್ಕಿದೆ.

    • ಮುಸ್ಲಿಂ ರಿಗಾಗಿ ಪ್ರತ್ಯೇಕ civil ಕಾನೂನು ಇದೆ.
      ಹಿಂದುಗಳಿಗಾಗಿ ಪ್ರತ್ಯೇಕ civil ಕಾನೂನು ಇದೆ.
      ಲಿಂಗಾಯತ, ಸಿಖ್, ಜೈನರಿಗಾಗಿ ಪ್ರತ್ಯೇಕ civil ಕಾನೂನು ಮಾಡದೆ, ಹಿಂದೂಗಳಿಗೆ ಇರುವ ಕಾಯದೆ ಅನ್ವಯ ಆಗುತ್ತದೆ. ಈ ವಿಷಯವನ್ನು ಮುಂದಿಟ್ಟು ಕೊಂಡು ಲಿಂಗಾಯತರು ಹಿಂದೂಗಳು ಅಂತ ಶಾಲೆ ಕಲಿಯದ ಈ ಪಿಂಡಗಳು ಹೇಳಿವೆ.

  • ತಡವಾಗಿ ಆದರೂ ಉತ್ತಮ ಪ್ರತಿಕ್ರಿಯೆ ನೀಡಿದ
    ಮಠಾಧೀಶರ ಒಕ್ಕೂಟಕ್ಕೆ ಧನ್ಯವಾದಗಳು 🙏🙏

Leave a Reply

Your email address will not be published. Required fields are marked *