ಬಸವಗಿರಿಯಲ್ಲಿ ಮರಣವೇ ಮಹಾನವಮಿ ಮಹೋತ್ಸವದ ಐದನೇ ದಿನ
ಬೀದರ :
ಪರಮಾತ್ಮನ ಪ್ರಾಣಪ್ರಿಯ ಆರಾಧನೆಯೇ ಭಕ್ತಿ ಎಂದು ತಜ್ಞ ವೈದ್ಯೆ ಡಾ. ಪ್ರಿಯಾ ಎಲಿ ಹೇಳಿದರು.
ಇಲ್ಲಿಯ ಬಸವಗಿರಿಯಲ್ಲಿ ಮರಣವೇ ಮಹಾನವಮಿ ಮಹೋತ್ಸವದ ಐದನೇ ದಿನವಾದ ಗುರುವಾರ ನಡೆದ ಪ್ರಾಣವಹ ಭಕ್ತಿ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇವಲ ಮಜ್ಜನಕ್ಕೆರೆವುದು, ವಿಭೂತಿ ಧರಿಸುವುದು, ಧೂಪ-ದೀಪಾರತಿ, ಹೂ-ಪತ್ರೆ ಏರಿಸಿ ಮಂತ್ರ ಹೇಳುವುದು ಭಕ್ತಿ ಅಲ್ಲ ಎಂದು ತಿಳಿಸಿದರು.ಗುರು ಶಾಸ್ತ್ರೋಕ್ತವಾಗಿ ದೀಕ್ಷೆ ನೀಡಿದರೂ ಭಕ್ತಿ ಶಿಷ್ಯನೊಳಗಿನಿಂದಲೇ ಹೊರ ಹೊಮ್ಮಬೇಕು. ವ್ಯಾಪಾರಿ ಭಕ್ತಿ ಸಲ್ಲದು ಎಂದು ಹೇಳಿದರು.

ದೇವರು ಭಕ್ತನ ಭಕ್ತಿ ಸೂತ್ರಕ್ಕೆ ಓಡೋಡಿ ಬರುತ್ತಾನೆ. ಆದರೆ, ಅವನಲ್ಲಿ ಪ್ರಾಣವಹ ಭಕ್ತಿ ಬೇಕು ಎಂದು ತಿಳಿಸಿದರು.ನಡೆ-ನುಡಿಯಲ್ಲಿ ಭಕ್ತಿ ತುಂಬಿ ತುಳುಕಿದರೆ ದೇಹವೇ ದೇವಾಲಯ. ಕಾಯಕದಲ್ಲಿ ಶಿವ ಭಾವವಿದ್ದರೆ ಅದೇ ಪ್ರಾಣವಹ ಭಕ್ತಿ ಎಂದು ಬಣ್ಣಿಸಿದರು.
ಸಾನಿಧ್ಯ ವಹಿಸಿದ್ದ ಪರುಷಕಟ್ಟೆ ಚನ್ನಬಸವಣ್ಣ ಮಾತನಾಡಿ, ಬಸವಣ್ಣನವರು ಭಕ್ತಿ ಭಂಡಾರಿಯಾಗಿದ್ದರು. ಅವರ ಭಕ್ತಿಯ ಕಾರಣ ಅಂದು ಜಗತ್ತಿನ ಎಲ್ಲ ಮೂಲೆಗಳಿಂದ ಅಧ್ಯಾತ್ಮ ಜೀವಿಗಳು ಕಲ್ಯಾಣಕ್ಕೆ ಧಾವಿಸಿದರು.
ಬಸವಣ್ಣನವರ ಭಕ್ತಿಯಿಂದ ತಮ್ಮ ಭಕ್ತಿ ಕಳೆಗಟ್ಟಿತ್ತೆಂದು ಸಂಭ್ರಮಿಸಿ, ಸಾಧನೆಯ ಶಿಖರವೇರಿದರು ಎಂದು ಹೇಳಿದರು.
ಸಂಸಾರ ದುಃಖದ ಸಾಗರವಿದೆ. ಎಂದೂ ಪೂರ್ಣ ವ್ಯಕ್ತಿಗಳಾಗಲು ಬಿಡದು. ಕೆಸರಿನಲ್ಲಿ ಕಮಲದ ಹೂವಿನಂತೆ ಅರಳಿ, ಭಕ್ತಿಯಲ್ಲಿ ಮಿಂದರೆ ಮಾತ್ರ ಸದ್ಗತಿ ಸಾಧ್ಯ ಎಂದು ತಿಳಿಸಿದರು.
ಮಹಾನಂದಾ ಮಾರುತಿ ಪಾಟೀಲ ಮಾತನಾಡಿ, ಭಕ್ತನಾದರೆ ಬಸವಣ್ಣ, ಜಂಗಮನಾದರೆ ಪ್ರಭು, ಜೋಗಿಯಾದರೆ ಚನ್ನಬಸವಣ್ಣ, ಯೋಗಿಯಾದರೆ ಸಿದ್ಧರಾಮ, ಐಕ್ಯನಾದರೆ ಅಜಗಣ್ಣ ಹಾಗೂ ಪ್ರವಚನಕಾರರಾದರೆ ಅಕ್ಕ ಅನ್ನಪೂರ್ಣತಾಯಿಯಂತಾಗಬೇಕು ಎಂದು ಹೇಳಿದರು.
ಕೌಶಲ್ಯಾದೇವಿ ಚೊಂಡಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ನಾವದಗೇರಿಯ ನೀಲಮ್ಮನ ಬಳಗದ ಸಹೋದರಿಯರು ನಡೆಸಿಕೊಟ್ಟ ಜನಪದ ಶೈಲಿ ಶೊಬಾನೆ ಪದ ಹಾಗೂ ಒಗಟುಗಳು ಗಮನ ಸೆಳೆದವು. ‘ಬೆಟ್ಟದಾ ಮೇಲೊಂದು’ ಸಮೂಹ ನೃತ್ಯ ಆಕರ್ಷಕವಾಗಿ ಮೂಡಿ ಬಂದಿತು.
ಮಹಾದೇವಿ ಬಿಜಾಪುರೆ ವಚನ ಪಠಣಗೈದು ಗೋಷ್ಠಿಗೆ ಚಾಲನೆ ನೀಡಿದರು. ನೀಲಮ್ಮನ ಬಳಗದ ವಿಜಯಲಕ್ಷ್ಮಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ಲದ್ದೆ, ಶೋಭಾ ಚಳಕಾಪುರೆ ಇದ್ದರು.
ವಿಜಯಲಕ್ಷ್ಮಿ ಟೆಕೂರೆ ಸ್ವಾಗತಿಸಿದರು. ಗಂಗಮ್ಮ ಲದ್ದೆ ನಿರೂಪಿಸಿದರು. ಅಶ್ವಿನಿ ಶರಣಪ್ರಕಾಶ ಮಲ್ಲಾಸೂರೆ ಭಕ್ತಿ ದಾಸೋಹಗೈದರು.
