ಪತ್ರ ಬರವಣಿಗೆ ಕಣ್ಮರೆಯಾಗುತ್ತಿದೆ: ತೋಂಟದ ಸಿದ್ಧರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ರಾಜರ ಕಾಲದಲ್ಲಿ ಹಂಸ ಪಕ್ಷಿಯ ಮೂಲಕ ಸಂದೇಶಗಳು ತಲುಪುತ್ತಿದ್ದವು. ಅದಕ್ಕಾಗಿಯೇ ಹಂಸ ಎಂದರೆ ಅಂಚೆ ಎಂಬ ಹೆಸರು ಬಂದಿದೆ. ಮನುಷ್ಯನ ಅಂತರಾಳದ ಭಾವನೆಗಳನ್ನು ಪ್ರಭಲವಾಗಿ ಅಭಿವ್ಯಕ್ತಿಸುವ ಮಾಧ್ಯಮ ಪತ್ರ. ಇಂತಹ ಪತ್ರ ಬರವಣಿಗೆ ಇಂದು ಕಣ್ಮರೆಯಾಗುತ್ತಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೧೫ ನೇ ಶಿವಾನುಭವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಒಳ್ಳೆಯದೆಲ್ಲವೂ ಶಿವಾನುಭವ. ಅಂಚೆ ಇಲಾಖೆಯ ಸಾಕಷ್ಟು ಯೋಜನೆಗಳು ಲಭ್ಯವಿದ್ದು ಜನರು ಸದುಪಯೋಗ ಮಾಡಿಕೊಳ್ಳಬೇಕು. ಪತ್ರ ವ್ಯವಹಾರಗಳಲ್ಲಿ ಹಲವು ಪ್ರಕಾರಗಳಿವೆ. ಔಪಚಾರಿಕ ಪತ್ರ, ಅನೌಪಚಾರಿಕ ಪತ್ರ.

ಪತ್ರಗಳು ವಿಮರ್ಶಾತ್ಮಕ ಓದುವಿಕೆ, ಆತ್ಮಾಭಿವ್ಯಕ್ತಿಯ ಬರಹ, ಚರ್ಚಾಸ್ಪದ ಬರಹ ಹೀಗೆ ಉಪಯೋಗಿಸಲಾಗುತ್ತಿತ್ತು. ಮಕ್ಕಳು ತಂದೆಗೆ, ತಾಯಿಗೆ, ಮಾವನಿಗೆ, ಅಣ್ಣನಿಗೆ ಹಾಗೆಯೇ ಕಛೇರಿಗಳಿಗೆ ಬಿಸಿನೆಸ್‌ಗೆ ಮುಂತಾದವುಗಳಿಗೆ ಯಾವ ರೀತಿ ಬರೆಯಬೇಕು ಎಂಬ ಮಹತ್ವ ತಿಳಿಯುತ್ತಿದ್ದರು. ಬರಹದಲ್ಲಿ ಅವರ ಭಾವನೆ, ಕ್ಷೇಮ, ಸಮಾಚಾರ, ಎಲ್ಲವೂ ಗೊತ್ತಾಗುತ್ತಿತ್ತು. ಈಗ ಆ ಪತ್ರದ ಸೊಗಸಿಲ್ಲ, “ಅಂಚೆಯ ಅಣ್ಣ ಬಂದಿಹನು, ಅಣ್ಣನ ಕಾಗದ ತಂದಿಹನು” ಎಂಬ ಹಾಡುಗಳು ಈಗೆಲ್ಲಿ. ಎಲ್ಲಾ ಇ-ಮೇಲ್, ಎಸ್‌ಎಂಎಸ್, ವಾಟ್ಸಪ್ ಇವುಗಳ ಮಧ್ಯೆ ಬರವಣಿಗೆ ಕಮರಿದೆ ಎಂದರು.

ಮುಂದುವರೆದು ಮಾತನಾಡಿದ ಶ್ರೀಗಳು ಇಂದು ಅಂಚೆ ಅತ್ಯುತ್ತಮ ಕಾರ್ಯ ಮಾಡುತ್ತಿದೆ. ಅಂಚೆ ಬ್ಯಾಂಕುಗಳಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿನ ಎಲ್ಲಾ ಸೇವೆಗಳನ್ನು ಅಂಚೆ ಇಲಾಖೆಯಲ್ಲಿ ಪಡೆಯಬಹುದು. ಆದರೆ ಅಂಚೆಯ ಎಲ್ಲಾ ಸೇವೆಗಳನ್ನು ಬ್ಯಾಂಕಿನಲ್ಲಿ ಪಡೆಯಲಾಗುವುದಿಲ್ಲ. ಪ್ರಾಚೀನ ಕಾಲದಿಂದಲೂ ಅಂಚೆಯ ಸಂದೇಶ ಉತ್ತಮವಾಗಿ ಸಾಗಿ ಬಂದಿದೆ ಹಾಗೂ ವಿವಿಧ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ ಎಂದರು.

ವಿಶ್ವ ಮತ್ತು ರಾಷ್ಟ್ರೀಯ ಅಂಚೆ ದಿನಾಚರಣೆ ನಿಮಿತ್ಯ ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಅಂಚೆ ಇಲಾಖೆಯ ಅಧೀಕ್ಷಕರಾದ ಜಯದೇವ ಕಡಗಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಸಿಗುವ ೩೨ ಸೌಲಭ್ಯಗಳ ಬಗ್ಗೆ ವಿವರಿಸಿದರು. ಅವುಗಳನ್ನು ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು.

ಗದಗ ಜಿಲ್ಲೆಯಲ್ಲಿ ಅತ್ಯುತ್ತಮ ಅಂಚೆ ಸೇವಕರಾಗಿ ಕಾರ್ಯನಿರ್ವಹಿಸಿದ ವೀರಪ್ಪ ಚನ್ನಬಸಪ್ಪ ಕುಪ್ಪಸ್ತ ಹಾಗೂ ಶಿವಲೀಲಾ ಅಶೋಕ್ ಸರ್ವಿ ಇವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಶ್ರಿಮತಿ ಶಿಲ್ಪಾ ರಮೇಶ್ ಕುರಿ ಇವರನ್ನು ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಇವರು ಸಂಗೀತ ಸೇವೆ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಚಂದನಾ .ಎಸ್. ದಂಡಿನ ಹಾಗೂ ವಚನ ಚಿಂತನವನ್ನು ಸೃಷ್ಟಿ .ಎನ್. ಸುಳ್ಳದ ನೆರವೇರಿಸಿದರು. ದಾಸೋಹ ಸೇವೆಯನ್ನು ಗವಿಸಿದ್ದಪ್ಪ ರಾಚಯ್ಯ ಪತ್ರಿಮಠ ಅಂಚೆ ಪ್ರತಿನಿಧಿ ಹಾಗೂ ಸಿದ್ದಲಿಂಗಪ್ಪ ಕಾತರಕಿ ಮತ್ತು ಕುಟುಂಬವರ್ಗದವರು ವಹಿಸಿದ್ದರು. ಶಿವಾನುಭವ ಸಮಿತಿಯ ಚೇರಮನ್‌ರಾದ ಐ. ಬಿ. ಬೆನಕೊಪ್ಪರವರು ಸ್ವಾಗತ ಕೋರಿದರು. ಶ್ರಿಮತಿ ವಿದ್ಯಾವತಿ ಪ್ರಭು ಗಂಜಿಹಾಳರವರು ನಿರೂಪಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್‌ರಾದ ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *