ಅವಿರತ ಪಯಣ: ಪ್ರೇಮ್‌ಜಿ ವಿವಿಯಿಂದ ಗೊರುಚ ಕಿರುಚಿತ್ರ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಹೆಮ್ಮೆಯ ಸಾಧಕರು’ ಸರಣಿಯ ಮೊದಲ ಕೊಡುಗೆ

ಬೆಂಗಳೂರು

ಹಿರಿಯ ಜಾನಪದ, ಶರಣ ಸಾಹಿತ್ಯದ ವಿದ್ವಾಂಸರಾದ ಡಾ. ಗೊ. ರು. ಚನ್ನಬಸಪ್ಪ ಅವರ ಜೀವನ-ಸಾಧನೆ ಆಧರಿತ ಕಿರುಚಿತ್ರ ಇಂಡಿಯನ್ ಹೆರಿಟೇಜ್ ಅಕಾಡೆಮಿಯ ಕಶ್ಯಪ ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಹಾಗೂ ಮಾಯಾ ಫಿಲ್ಮ್ಸ್ ಸಹಯೋಗದಲ್ಲಿ ರೂಪಿಸಿರುವ ‘ಹೆಮ್ಮೆಯ ಸಾಧಕರು’ ಸರಣಿಯ ಮೊದಲ ಚಿತ್ರವಾಗಿ ಈ ಕಿರುಚಿತ್ರ ಬಿಡುಗಡೆಯಾಗಿದೆ.

ಗೊರುಚ ಅವರ ಜೀವನ-ಸಾಧನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ದಾಖಲೆಯಾಗಿ ಈ ಕಿರುಚಿತ್ರ ಮೂಡಿಬಂದಿದೆ ಎಂದು ಕಿರುಚಿತ್ರದ ನಿರ್ಮಾಪಕಿ ಶ್ರೀಮತಿ ಮಾಯಚಂದ್ರ ತಿಳಿಸಿದರು.

ಗೊರುಚ ಅವರ ವಿಶಾಲ ಜೀವನಯಾನವನ್ನು ಕೇವಲ 45 ನಿಮಿಷಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಸವಾಲಿನ ಕೆಲಸವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಕ್ರಿಯೆ ನೀಡಿದ ಡಾ. ಗೊರುಚ ಅವರು, ತಮ್ಮ ಜೀವನಯಾನವನ್ನು ಇಷ್ಟೊಂದು ಆತ್ಮೀಯವಾಗಿ ದಾಖಲಿಸಿದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಮಾಯಾ ಫಿಲ್ಮ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಕಿರುಚಿತ್ರ ಗೊರುಚ ಅವರ ಬದುಕಿನ ಅನೇಕ ಆಯಾಮಗಳನ್ನು ಒಳಗೊಂಡಿದೆ.

ಅವರ ಜಾನಪದ ಮತ್ತು ಶರಣ ಸಾಹಿತ್ಯ ಕ್ಷೇತ್ರದ ಸಾಧನೆ, ವಿಚಾರಧಾರೆ, ಸಾಹಿತ್ಯಕ ಸಂಘಟನೆಗಳಲ್ಲಿ ನಿರ್ವಹಿಸಿದ ಜವಾಬ್ದಾರಿಗಳು, ಕನ್ನಡಪರ ಚಟುವಟಿಕೆಗಳು, ಹುಟ್ಟೂರಿನ ಅಭಿವೃದ್ಧಿಗೆ ಸಲ್ಲಿಸಿದ ಸೇವೆ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಮಹತ್ವದ ಕೊಡುಗೆಗಳು ಮತ್ತು ಅವರಿಗೆ ಸಂದ ಪ್ರಶಸ್ತಿ-ಪುರಸ್ಕಾರಗಳನ್ನು ಸಮಗ್ರವಾಗಿ ಪರಿಚಯಿಸುತ್ತದೆ.

ಜೊತೆಗೆ ನಾಡಿನ ಹಿರಿಯ ಸಾಹಿತಿಗಳು, ಶಿಕ್ಷಣತಜ್ಞರು ಮತ್ತು ಗಣ್ಯರ ಅಭಿಪ್ರಾಯಗಳೂ ಚಿತ್ರದಲ್ಲಿ ಅಡಕವಾಗಿವೆ.

ಕಾರ್ಯಕ್ರಮದ ಕೊನೆಯಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಡಾ. ಗೊರುಚ ಅವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಚಿಂತಕ ಹಾಗೂ ವಿದ್ವಾಂಸ ಡಾ. ಸಿ. ವೀರಣ್ಣ ಅವರು ಗೌರವ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ತಿಮ್ಮೇಗೌಡ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ. ಸಿದ್ದಪ್ಪ, ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಾಜಿ ರಾಜ್ಯ ಮುಖ್ಯ ಆಯುಕ್ತ ಶ್ರೀ ಕೊಂಡಜ್ಜಿ ಶಣ್ಮುಖಪ್ಪ, ಭಾರತೀಯ ಸೇನೆಯ ಮಾಜಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಬಿ. ಎಸ್. ರಾಜು, ಮಾಯಾ ಫಿಲ್ಮ್ಸ್‌ನ ಶ್ರೀಮತಿ ಮಾಯಚಂದ್ರ, ಗೊರುಚ ಅವರ ಕುಟುಂಬದ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕನ್ನಡ ಉಪಕ್ರಮಗಳ ಸಹ ನಿರ್ದೇಶಕರಾದ ಶ್ರೀ ಎಸ್. ವಿ. ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಶ್ರೀ ರಾಘವೇಂದ್ರ ಹೇರ್ಳೆ ಜಿ. ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *