ಶತಮಾನದ ಅಪರೂಪ ಮಹಿಳೆ, ಪೂಜ್ಯ ಮಾತಾಜಿ

ಪೂಜ್ಯ ಡಾ. ಮಾತೆ ಮಹಾದೇವಿ ಯವರ ಜನ್ಮ ದಿನದ ಶುಭಾಶಯಗಳು:

ಬೀದರ್

1960ರ ದಶಕದಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಡುವುದೇ ಒಂದು ದೊಡ್ಡ ಸಾಧನೆ ಆಗುತ್ತಿತ್ತು. ಮಗಳಿಗೆ ಪದವಿ ಶಿಕ್ಷಣ ಕೊಡಿಸಿದ್ದ ತಂದೆ ತಾಯಿಯರನ್ನು ಸಮಾಜ ಬೇರೆ ರೀತಿಯಿಂದ ಕಾಣುತಿದ್ದ ದಿನಗಳು.

ಆದರೆ ಮಾತಾಜಿ ಆವಾಗಲೇ ಎರಡು ಪದವಿ ಪಡೆದುಕೊಂಡು ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿದ್ದರು, ವಿದ್ಯಾರ್ಥಿ ಆಗಿದ್ದಾಗೆ ಆಧ್ಯಾತ್ಮಿಕ ಸೆಳೆತಕ್ಕೆ ಸಿಕ್ಕ ಮಾತಾಜಿ ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮೀಜಿಯವರಿಂದ ದೀಕ್ಷೆ ಪಡೆದು ಸನ್ಯಾಸ ಸ್ವೀಕಾರ ಮಾಡಿದರು. ಆವಾಗೆ ತಮ್ಮ ಕೃತಿ “ಹೆಪ್ಪಿಟ್ಟ ಹಾಲು” ಕಾದಂಬರಿ ಬರೆದು ಉನ್ನತ ಮಟ್ಟದ ಪ್ರಚಾರ ಪಡೆದು ಧಾರವಾಡ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿಗೆ ವಿಷಯ ಪುಸ್ತಕವಾಗಿ ಆಯ್ಕೆ ಆಗಿತ್ತು. ಸೋಜಿಗವೆಂದರೆ ಅದೇ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿ ಪೂಜ್ಯ ಮಾತಾಜಿಯಾಗಿದ್ದರು. ಲೇಖಕರೇ ವಿದ್ಯಾರ್ಥಿ ಆಗಿದ್ದು ವಿಶ್ವದಲ್ಲಿ ಇದು ಮೊದಲ ಬಾರಿ.

ಹೀಗಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಈ ವಿಷಯ ಕಲಿಸಲು ಹಿಂದೇಟು ಹಾಕಿದರು, ಏಕೆಂದರೆ ಪುಸ್ತಕದ ಲೇಖಕಿ ವಿಧ್ಯಾರ್ಥಿ, ಅವರಿಗೆ ಪಾಠ ಹೇಳುವದು ಹೇಗೆ? ವಿಶ್ವವಿದ್ಯಾಲಯದ ಸೆನೆಟ್ ಸಭೆ ಸೇರಿ ಪೂಜ್ಯ ಮಾತಾಜಿಯವರಿಗೆ ವಿಷಯ ಪಾಠ ಹೇಳಲು ತಾತ್ಪೂರ್ತಿಕ ಆಯ್ಕೆ ಮಾಡಿದರು, ಇದು ವಿಶ್ವದ ಯಾವ ವಿಶ್ವವಿದ್ಯಾಲಯದಲ್ಲಿ ನಡೆಯದ ಘಟನೆ. ಅವರು ಎಷ್ಟು ಬುದ್ದಿವಂತರು ಅನ್ನೋದಕ್ಕೆ ಇದು ಸಾಕ್ಷಿ ಆಯಿತು.

ವಿಶ್ವದ ಪ್ರಥಮ ಮಹಿಳಾ ಜಗದ್ಗುರು

ಪೂಜ್ಯ ಶ್ರೀ ಲಿಂಗಾನಂದ ಮಹಾಸ್ವಾಮೀಜಿ ಇವರನ್ನು ಕೇವಲ ಮಹಿಳೆ ಎಂದು ಕನಿಕರ ಅಥವಾ ಪ್ರತಿಷ್ಠೆಗಾಗಿ ಆಯ್ಕೆ ಮಾಡಿಲ್ಲ.

ಇವರ ಶಿಕ್ಷಣ, ಪ್ರತಿಭೆ, ನಡತೆ, ಸಂಸ್ಕೃತಿ, ಅಧ್ಯಯನ, ಸಮಾಜ ಬಗ್ಗೆ ತುಡಿತ, ಬಸವಾದಿ ಶರಣರ ವಚನ ಸಾಹಿತ್ಯ ಪಾರಂಗತೆ, ಸಂಘಟನೆ ಸಾಮರ್ಥ್ಯ, ತತ್ವಶಾಸ್ತ್ರ ಬಗ್ಗೆ ಇದ್ದ ಅಧ್ಯಯನ, ಎಲ್ಲ ಶಾಸ್ತ್ರ ಪುರಾಣ ಕಥೆ ಧರ್ಮ ಶಾಸ್ತ್ರಗಳ ಅಧ್ಯಯನ, ಕನ್ನಡ ಭಾಷೆ ಮೇಲೆ ಇದ್ದ ಹಿಡಿತ, ಇಂಗ್ಲೀಷ್ ಭಾಷೆಯ ಮನನ, ಮನಸ್ಸು ಭಾವನೆ ತನುವಿನ ಶುದ್ಧತೆ ಹಾಗೂ ಶೂನ್ಯತೆ ಇವೆಲ್ಲವೂ ತೂಗಿ ಅಳೆದು ಅವರು ಪೂಜ್ಯ ಡಾ. ಮಾತೇ ಮಹಾದೇವಿ ಯವರನ್ನು ಲಿಂಗಾಯತ ಧರ್ಮ ಪೀಠದ ಜಗತ್ತಿನ ಮೊದಲನೇ ಮಹಿಳಾ ಜಗದ್ಗುರು ಆಗಿ ನೇಮಕ ಮಾಡಿದರು.

ಇದು ಪುರುಷ ಪ್ರಧಾನ ಸಮಾಜದ ಕೆಂಗಣ್ಣಿಗೆ ಗುರಿ ಆಯಿತು, ಅಂದಿನಿಂದ ಇವರ ಪ್ರಯಾಣ ಕಲ್ಲು ಮುಳ್ಳಿನ ಹಾಸಿಗೆಯ ಮೇಲೆ ಆಯಿತು, ಪ್ರತಿ ಹೆಜ್ಜೆಗೂ ಮಾತಿಗೂ ಸಂಘರ್ಷ ಪ್ರಾರಂಭ ಆಯಿತು, ಪೂಜ್ಯ ಪಂಚಾಚಾರ್ಯರು ವೀರಶೈವ ಮಹಾಸಭಾ ಪ್ರಥಮ ವೈರಿಗಳಂತಾದರೂ ಲಿಂಗಾಯತ ಬಸವ ತತ್ವ ಮಠ, ಸಂಘಟನೆಗಳು ಕೂಡ ಏಳಿಗೆ ಸಹಿಸದ ದ್ವಿತೀಯ ಸ್ಥಾನದ ವೈರಿ ಆದರು. ಇದು ಇಷ್ಟೊಂದು ತೀವ್ರತರಹದ ಪ್ರಖ್ಯಾತಿಗೂ ಕಾರಣ ಆಯಿತು. ಕೆಲವೇ ವರ್ಷಗಳಲ್ಲಿ ಇಷ್ಟೊಂದು ಪ್ರಖ್ಯಾತಿ ಪಡೆದ ಲಿಂಗಾಯತ ಮಹಿಳಾ ಜಗದ್ಗುರು ಅವರು ಆದರು.

ಸರಳ ಜೀವನ

ಇದು ಪೂಜ್ಯ ಡಾ. ಮಾತೇ ಮಹಾದೇವಿಯವರ ವಾಸಿಸುವ ಕೋಣೆ. ಎಷ್ಟು ಸಾಧಾರಣ ಜೀವನ, ಕೇವಲ 9 ಅಡಿ 12 ಅಡಿ ಕೋಣೆ ಅದರಲ್ಲಿಯೇ ನಿಜಿ ಗ್ರಂಥಾಲಯ ಜೊತೆಗೆ ವಿಶ್ರಮಿಸುವ ಕೋಣೆ. ಇವರ ಜೊತೆ ನಾವು ಪ್ರಸಾದ ಮಾಡಿದ್ದೆವು ಬೆಂಗಳೂರು ಬಸವ ಮಂಟಪದಲ್ಲಿ, ಪ್ರಸಾದ ಕೂಡ ಸಾಧಾರಣ. ಯಾವ ಪ್ರಸಾದವನ್ನು ಅನಾಥಾಶ್ರಮ ಮಕ್ಕಳಿಗೆ ಕೊಡುತ್ತಾರೋ ಅದೇ ಪ್ರಸಾದ ಮಾತಾಜಿಯವರಿಗೂ ಕೊಡುತ್ತಿದ್ದರು, ಎಲ್ಲೂ ತಾರತಮ್ಯ ಇಲ್ಲಾ. ಅವರಿಗೆ ಎಂದು ಹೇಳಿ ಬೇರೆ ಬೆಳ್ಳಿ ತಾಟು ಇಲ್ಲ, ವಾಡಿಕೆಯಾಗಿ ಬಹುತೇಕ ಪೂಜ್ಯರು ತಮ್ಮ ತಮ್ಮ ಬೆಳ್ಳಿ ತಾಟುದಲ್ಲಿ ಪ್ರಸಾದ ಮಾಡುತ್ತಾರೆ. ಮಾತಾಜಿಯವರ ಬಗ್ಗೆ ಆಪಾದನೆ ಮಾಡುವವರು ಇವರ ಬಗ್ಗೆ ಅಧ್ಯಯನ ಮಾಡಬೇಕು. ಇವರ ಸರಳ ಜೀವನ ಎಲ್ಲರಿಗೂ ಮಾದರಿ.

ಶರಣ ಮೇಳ, ಕಲ್ಯಾಣ ಪರ್ವ

ಮಾತಾಜಿ ವರ್ಷಕ್ಕೊಮ್ಮೆ ಎಂದು ಹಾಕಿಕೊಂಡ ಕೂಡಲ ಸಂಗಮದ “ಗಣ ಮೇಳ” ಮತ್ತು ಬಸವ ಕಲ್ಯಾಣದ “ಕಲ್ಯಾಣ ಪರ್ವ” ಇಡೀ ಲಿಂಗಾಯತರಿಗೆ ಸಂಚಲನ ಮೂಡಿಸಿತ್ತು, ಸರಕಾರಗಳು ರಾಜಕೀಯ ಪಕ್ಷಗಳು ಬೆದರಿದ್ದವು.

ಮೂರು ದಿವಸದ ಕಾರ್ಯಕ್ರಮ, ಸಹಸ್ರಾರು ಸಂಖ್ಯೆಯ ಶರಣ ಶರಣೆಯರು ಮಕ್ಕಳು ಸೇರುವದು ಒಂದು ದೊಡ್ಡ ಸಮ್ಮೇಳನ ಆಗಿತ್ತು. ಅಲ್ಲಿ ಅತಿಥಿ ಆಗುವದು, ಉಪನ್ಯಾಸ ಮಾಡುವದು ಒಂದು ದೊಡ್ಡ ಗೌರವ ಅನ್ನಿಸುವ ಹಾಗೆ ಸಮಾಜದಲ್ಲಿ ಸ್ಥಾನ ಪಡೆದಿತ್ತು.

ಬಸವ ಕಲ್ಯಾಣದಲ್ಲಿಯ ಪ್ರಥಮ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ವೀರಶೈವ ಮಹಾಸಭಾ ವತಿಯಿಂದ ತಡೆದಿದ್ದು, ಸರಕಾರ ಹಾಗೂ ಪೊಲೀಸ್ ಸಹಕಾರದಿಂದ ಶರಣರ ಮೇಲೆ ನಡೆದ ದೌರ್ಜನ್ಯ ಕಲ್ಯಾಣ ಕ್ರಾಂತಿ ಮರುಸೃಷ್ಟಿ ಆಗಿದ್ದ ಹಾಗೆ ಆಯಿತು. ಎಷ್ಟೋ ಶರಣರು ಶರಣೆಯರು ಮಕ್ಕಳು ವೃದ್ಧರು ಊಟ ಉಪಚಾರ ಇಲ್ಲದೆ ಬೀದಿ ಪಾಲಾಗಿ ಕಾಲ ನಡಗೆಯಲ್ಲಿ ತಮ್ಮ ಊರು ಸೇರಿದ್ದರು. ಆವಾಗ ಸುತ್ತಮುತ್ತಲಿನ ಗ್ರಾಮದವರು ಹೊರಗಿನಿಂದ ಬಂದ ಶರಣರಿಗೆ ಆದರದಿಂದ ಬರಮಾಡಿಕೊಂಡು, ಆದರದಿಂದ ಅತಿಥಿ ಸತ್ಕಾರ ಮಾಡಿದ್ದು ಒಂದು ಇತಿಹಾಸ ಆಯಿತು.

ಆದರೆ ಜಗತ್ತಿನ ಯಾವ ಶಕ್ತಿಯೂ ಕಲ್ಯಾಣ ಪರ್ವ ನಿಲ್ಲಿಸಲು ಸಾಧ್ಯ ಆಗಿಲ್ಲ, ದಶಕಗಳಿಂದ ನಿರಂತರವಾಗಿ ಬಸವ ತತ್ವ ಪ್ರಚಾರ, ಸಾಹಿತ್ಯ ಕೃಷಿ ನಿರಾಂತಕವಾಗಿ ನಡೆಯುತ್ತಾ ಇದೆ. ಇದರಿಂದ ವೀರಶೈವ ಮಹಾಸಭಾ ಬಸವ ವಿರೋಧಿ ಎಂದು ನಾಡಿನ ತುಂಬಾ ಪ್ರಚಾರ ಪಡೆಯಿತು, ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಹೊತ್ತುಕೊಳ್ಳುವ ಒಂದು ಸಂಸ್ಥೆ ಆಗಿ ಮಾರ್ಪಟ್ಟಿತ್ತು, ಬಸವ ಅಭಿಮಾನಿಗಳು ವೀರಶೈವ ಮಹಾಸಭಾದಿಂದ ವಿಮುಖರಾದರು.

ಮಾತಾಜಿ ಕೇವಲ ಕರ್ನಾಟಕ ಅಲ್ಲ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳು ನಾಡಿನಲ್ಲಿ ಬೆಳೆದು ಹೆಮ್ಮರವಾಗಿ ತಮ್ಮ ಸಂಸ್ಥೆಯನ್ನು ಬೆಳೆಸಿದರು.

ಬಸವ ವಚನ ದೀಪ್ತಿ

ವಚನ ದಿಪ್ತಿಯಲ್ಲಿ ಮಾತಾಜಿಯವರು ಸ್ಥಾವರ ಮತ್ತು ನಿರಾಕಾರ ರೂಪಗಳ ವಿಶ್ಲೇಷಣೆ ಮಾಡುತ್ತಾ, “ಕೂಡಲ ಸಂಗಮ ದೇವ” ಸ್ಥಾವರದ ಒಂದು ಹೆಸರು, ಸ್ಥಾವರಕ್ಕೆ ಅಳಿವು ಉಂಟು ಜಂಗಮಕ್ಕೆ ( ಸೃಷ್ಟಿಕರ್ತ ಲಿಂಗದೇವರು) ಅಳಿವಿಲ್ಲ ಎನ್ನುವ ಬಸವಾದಿ ಶರಣರ ಒಂದು ನಂಬಿಕೆಗೆ ಬಿಂಬು ಕೊಡಲು ಹೋದರು.

ಬಸವಣ್ಣನವರ ವಚನಗಳನ್ನು ಎರಡು ಭಾಗವಾಗಿ ವಿಂಗಡಿಸಿ, ಜ್ಞಾನೋದಯದ ಮೊದಲಿನ ಅವರ ವಚನಗಳು ಪಾರ್ವತಿ ಶಿವನ ಆರಾಧನೆ ಆಗಿದ್ದವು, ಜ್ಞಾನೋದಯ ನಂತರ ಪಾರ್ವತಿ ಶಿವನನ್ನು ದೇವರು ಅನ್ನೋದು ತಿರಸ್ಕರಿಸಿ, ನಿರಾಕಾರ ರೂಪಿ ದೇವರು ಸೃಷ್ಟಿಕರ್ತ ಪರಶಿವ “ಲಿಂಗದೇವರು” ಹೆಸರನ್ನು ಬಸವಣ್ಣ ನಂಬಿದ್ದು, ಲಿಂಗದೇವ ವಚನಾಂಕಿತ ಆಗಿ ಮಾರ್ಪಾಡು ಮಾಡಿ ಬರೆದರು.

ಮೊದಲೇ ಕಾಯುತ್ತಿದ್ದ ಶತ್ರುಗಳಿಗೆ ವಿರೋಧಿಗಳಿಗೆ ವಿರೋಧ ಮಾಡಲು ಇದು ದೊಡ್ಡ ಆಯುಧವಾಗಿ ಸಿಕ್ಕಿತ್ತು. ಮಾತಾಜಿ ತನ್ನ ಪುಸ್ತಕದಲ್ಲಿ ಕೂಡ ನಮೂದಿಸಿದ್ದಾರೆ, ಇದು ನನ್ನ ಸಂಶೋಧನಾ ಗ್ರಂಥ, ನಾನು ಮಾರ್ಪಾಡು ಮಾಡಿದ್ದೇನೆ, ಆದರೆ ಯಾರಿಗೂ ಲಿಂಗದೇವ” ವಚನಾಂಕಿತ ಬಳಸುವದು ಕಡ್ಡಾಯ ಅಲ್ಲ ಅಂದರು. ಆದರೂ ಸಮಾಜದಲ್ಲಿ ಈ ವಿಷಯ ಬುಗಿಲೆದ್ದಿತ್ತು.

ಬಸವಣ್ಣನವರ ಬಗ್ಗೆ ಗೌರವ ಇಲ್ಲದ ಪಂಚಾಚಾರ್ಯರು ಕೂಡ ಇದನ್ನು ಅಪಪ್ರಚಾರ ಮಾಡುತ್ತಾ ಇದ್ದರು, ವೀರಶೈವ ಮಹಾಸಭಾ ಒಂದು ಹೆಜ್ಜೆ ಮುಂದೆ ಹೋಗಿ ಮಾತಾಜಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು, ಸರಕಾರಕ್ಕೆ ಪುಸ್ತಕ ಮುಟ್ಟುಗೋಲು ಹಾಕಲು ಮನವಿ ಕೊಟ್ಟರು, ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು.

ಸೃಷ್ಟಿಕರ್ತ ದೇವರ ಹೆಸರು

ನಾನು ಕೂಡ ಈ ವಿಷಯ ಆಳವಾಗಿ ಅಧ್ಯಯನ ಮಾಡಿದ್ದೆ. ಅಂದಿನ ಸರಕಾರದಲ್ಲಿ ನಮ್ಮ ನಾಯಕರು ಶ್ರೀ ಎಂ ಪಿ ಪ್ರಕಾಶ ಅವರು ಸಚಿವರು ಆಗಿದ್ದರು, ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು ಕೂಡ ಕನ್ನಡ ಸಂಸ್ಕೃತಿ ಸಚಿವರು ಆಗಿದ್ದರು, ಅವರು ಶ್ರೀ ಜೆ.ಹೆಚ್. ಪಟೇಲ್ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಿದ್ದ ವಿವಾದಿತ ಪುಸ್ತಕ ಮುಟ್ಟುಗೋಲು ಹಾಕಿದ್ದರು.

ಇವರೆಲ್ಲರ ಜೊತೆ ಚರ್ಚೆ ಮಾಡಿದ್ದಾಗ, ವಿಷಯ ಅಸ್ಪಷ್ಟ ಆಗಿತ್ತು, ಕೆಲವರು ವಚನಾಂಕಿತ ಯಾರಿಂದಲೂ ತಿದ್ದಲು ಬರಲ್ಲ, ಮೂಲ ಸಾಹಿತ್ಯ ಇದ್ದದ್ದು ಇದ್ದ ಹಾಗೆ ಇರಬೇಕು ಎಂದು ವಾದ ಮಾಡಿದರು. ಕೆಲವರು ಇದು ಸಂಶೋದನೆ ಗ್ರಂಥ, ಲೇಖಕರು ಮತ್ತೊಬ್ಬರ ಸಾಹಿತ್ಯ ವಿಮರ್ಶೆ ಮಾಡಬಹುದು ಎಂದರು. ನಾನು ಮಾತ್ರ ಏನೋ ಇರಬಹುದು, ಇಷ್ಟೊಂದು ಜ್ಞಾನಿ ಆಗಿರುವ ಮಾತಾಜಿ ಇಂತಹ ದೊಡ್ಡ ಪ್ರಮಾದ ಮಾಡಲು ಸಾಧ್ಯ ಇಲ್ಲ ಅನ್ನುವ ಒಂದು ವಿಚಾರ ನನಗೆ ಹೊಳೆಯಿತು.

ನಾನು ವಚನ ಸಾಹಿತ್ಯ ಅಧ್ಯಯನ ಮಾಡಲಾಗಿ, ಬಸವಾದಿ ಶರಣರ ಹಲವಾರು ವಚನಗಳಲ್ಲಿ ” ಲಿಂಗದೇವ ” ” ಲಿಂಗಯ್ಯ ” “ಲಿಂಗ ತಂದೆ” ” ಲಿಂಗದೇವರು ” ” ಲಿಂಗವೇ” ” ಮಹಾಲಿಂಗವೆ ” ಎನ್ನುವ ಶಬ್ದಗಳು ಗೌರವ ಪೂರ್ವಕ ಉಪಯೋಗಿಸಿದ್ದು ತಿಳಿದುಕೊಂಡೆ. ಬಸವಾದಿ ಶರಣರು ದೇಗುಲ ಮಂದಿರ ಗುಡಿ ಗೋಪುರ ವಿರೋಧ ಮಾಡಿದ್ದು ಹಲವಾರು ವಚನಗಳಲ್ಲಿ ಸಿಗುತ್ತವೆ, ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದು ಕಂಡೆ.

ನಾನು ಚಿಕ್ಕವನಿದ್ದಾಗ ಮನೆಯಲ್ಲಿ ಇದ್ದ ಪಾರ್ವತಿ ಶಿವನು ಫೋಟೋ ನೋಡಿ, ನಮ್ಮ ತಂದೆಗೆ ಪ್ರಶ್ನೆ ಮಾಡಿದ್ದೆ, ಶಿವ ಯಾರು ಎಂದು, ಅವರು ದೇವರು, ಅವನೆ ಎಲ್ಲ ಸರ್ವಸ್ವ ಎಂದು ಹೇಳಿದ್ದರು, ಮತ್ತೆ ಕೇಳಿದ್ದೆ ಹಾಗಿದ್ದರೆ ಶಿವ ಯಾರ ಧ್ಯಾನ ಮಾಡುತ್ತಾ ಇದ್ದಾರೆ ಎಂದು ಕೇಳಿದ್ದೆ, ಅದಕ್ಕೆ ನಮ್ಮ ತಂದೆ ಹಾರಿಕೆ ಉತ್ತರ ಕೊಟ್ಟಿದ್ದು ನನಗೆ ತೃಪ್ತಿ ಆಗಿದ್ದಿಲ್ಲ. ನಾನು ಅಧ್ಯಯನ ಮಾಡಲಾಗಿ ಪಾರ್ವತಿ ಶಿವನು ಕೂಡ ನಿರಾಕಾರ ರೂಪಿ ಸೃಷ್ಟಿಕರ್ತ ” ಪರಶಿವನ ” ಆರಾಧಕ ಆಗಿದ್ದ ಎಂದು ಗೊತ್ತಾಯಿತು. ಅದರಿಂದ ಮಾತಾಜಿ ನಿರಾಕಾರ ರೂಪಿ ಬಸವಾದಿ ಶರಣರ ದೇವರು ಸೃಷ್ಟಿಕರ್ತ ಹೆಸರು ” ಲಿಂಗದೇವರು ” ಎಂದು ಸಂಶೋಧನೆ ಮಾಡಿದ್ದು ತಿಳಿದುಕೊಂಡೆ. ಮಾತಜಿಯವರ ಸಂಶೋಧನೆ ಒಪ್ಪಿಕೊಂಡೆ, ಆದರೆ ಮಾತಾಜಿಯವರಿಗೆ ನೇರವಾಗಿ ಹೇಳಿದ್ದೆ, ನೀವು ಸಂಶೋಧನೆ ಮಾಡಿದ್ದ ದೇವರ ಹೆಸರು ” ಲಿಂಗದೇವರು ” ಒಪ್ಪುತ್ತೇವೆ ಆದರೆ ಬಸವಣ್ಣನವರ ವಚನಾಂಕಿತ ಮಾತ್ರ ” ಕೂಡಲ ಸಂಗಮ ದೇವ” ಸರಿ ಇದೆ, ವಚನಾಂಕಿತ ” ಲಿಂಗದೇವರು” ಬದಲಾಯಿಸಿದ್ದು ಒಪ್ಪಲ್ಲ ಎಂದು ನಾನು ಕಲ್ಯಾಣ ಪರ್ವದಲ್ಲಿ ನನ್ನ ಉಪನ್ಯಾಸ ಮುಖಾಂತರ ಹೇಳಿದ್ದೆ.

ಮಾತಾಜಿ ನನಗೆ ಒಪ್ಪಿಗೆ ಕೊಟ್ಟರು, ಹಾಗೂ ಮತ್ತೆ ಘೋಷಣೆ ಮಾಡಿದ್ದರು, ವಚನಾಂಕಿತ ಯಾವುದೇ ಉಪಯೋಗ ಮಾಡಿ ಅಭ್ಯಂತರ ಇಲ್ಲ ಆದರೆ, ಶರಣರ ದೇವರ ಸೃಷ್ಟಿಕರ್ತ ಹೆಸರು ಮಾತ್ರ “ಲಿಂಗದೇವರು” ಎಂದು ಹೇಳಿ ಅಂದರು.

ಕೆಲವು ಪಟ್ಟಭದ್ರಹಿತಾಸಕ್ತಿಗಳು ಇನ್ನೂ ಕೂಡ ವಿರೋಧ ಮಾಡುತ್ತಾರೆ, ಮಾತಾಜಿ ದೊಡ್ಡ ಅಪರಾಧ ಮಾಡಿದ್ದಾರೆ ಎಂದು ಹೇಳುತ್ತಾರೆ, ಆದರೆ 900 ವರ್ಷದಿಂದ ಇಲ್ಲಿಯವರೆಗೆ ಲಿಂಗಾಯತರ ದೇವರು ಹೆಸರು ಏನು ಎಂದು ಏಕೆ ಹೇಳಲ್ಲ? ಬಸವಾದಿ ಶರಣರು ತಮ್ಮ ವಚನಗಳ ಮುಖಾಂತರ ಸೃಷ್ಟಿಕರ್ತ ದೇವರ ಹೆಸರು ಲಿಂಗದೇವರು ಎಂದು ಹೇಳಿದ್ದು ಸುಳ್ಳೇ? ಮಾತಾಜಿ ಇಟ್ಟ ಹೆಸರು ಎಂದು ದೇವರ ಹೆಸರನ್ನು ವಿರೋಧ ಮಾಡುವದೇ? ಒಂದು ವೇಳೆ ಲಿಂಗಾಯತ ದೇವರ ಹೆಸರು ಲಿಂಗದೇವರು ಇಲ್ಲದಿದ್ದರೆ, ಬೇರೆ ಯಾವ ಹೆಸರೂ ಇದೆ ಹೇಳಿ? ನಾವು ಮಾತಾಜಿಯವರನ್ನು ದೇವರ ಹೆಸರು ಸಂಶೋದನೆ ಮೂಲಕ ಸಮಾಜಕ್ಕೆ ಕೊಟ್ಟಿದ್ದಕ್ಕೆ ಅಭಿನಂದಿಸಬೇಕು,

ಲಿಂಗದೇವರು ಸಮಾಜಕ್ಕೆ ಕೊಟ್ಟ ಮಾತಾಜಿಯ ದೊಡ್ಡ ಕೊಡುಗೆ. ವಚನಾಂಕಿತ ತಿದ್ದಿದು ಈಗಾಗಲೇ ಮುಗಿದ ಅಧ್ಯಾಯ, ದೇಶದ ಉಚ್ಚ ನ್ಯಾಯಾಲಯ ವಚನಾಂಕಿತ ” ಲಿಂಗದೇವ ” ಅನೂರ್ಜಿತ ಗೊಳ್ಳಿಸಿದೆ, ಹಾಗೂ ಮಾತಾಜಿ ಕೂಡ ನ್ಯಾಯಾಲಯ ತೀರ್ಪಿಗೆ ಮನ್ನಣೆ ಮಾಡುವದಾಗಿ ಘೋಷಣೆ ಮಾಡಿದ್ದಾರೆ.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ:

ಮಾತಾಜಿ ಮಾಡಿದ್ದ ಮತ್ತೊಂದು ಸಂಶೋಧನೆ ” ಲಿಂಗಾಯತ ಸ್ವತಂತ್ರ ಧರ್ಮ” ಲಿಂಗಾಯತ ಹಿಂದೂ ಧರ್ಮದ ಅಂಗ ಅಲ್ಲ, ಲಿಂಗಾಯತ ಧರ್ಮ ಸನಾತನ ವೈದಿಕ ಧರ್ಮ ವಿರುದ್ದ, ಮೂಢ ನಂಬಿಕೆ, ಮೌಢ್ಯಗಳ, ಮೌಢ್ಯ ಆಚರಣೆಗಳ, ಜಾತಿ ಲಿಂಗ ವರ್ಣ ಭೇದಗಳ ವಿರುದ್ಧ ಸ್ಥಾಪಿತವಾದ ಸಮಾನತೆ ಧರ್ಮ. ಇದು ವಿಶ್ವದಲ್ಲಿ ಸಮಾನತೆಗಾಗಿ, ಮನುಷ್ಯನ ಘನತೆ ಗೌರವಕ್ಕೆ, ಕಾಯಕ ದಾಸೋಹ ಸಿದ್ಧಾಂತಗಳಿಗೆ , ಗುಡಿ ಗೋಪುರ ದೇವಾಲಯಗಳ ವಿರುದ್ಧ ಸ್ಥಾಪಿತವಾದ ಪ್ರಥಮ ಆಧುನಿಕ ಧರ್ಮ.

ದೇಹವೇ ದೇಗುಲ ಎನ್ನುವ ಪ್ರಥಮ ಧರ್ಮ, ಸ್ವರ್ಗ ನರಕ, ಪಾಪ ಪುಣ್ಯ, ಕರ್ಮಸಿದ್ಧಾಂತ, ಪುನರ್ಜನ್ಮವನ್ನು ಅಲ್ಲಗಳೆದ ಧರ್ಮ, ಮಹಿಳಾ ಸ್ವಾತಂತ್ರ್ಯ ಕೊಟ್ಟ ಪ್ರಥಮ ಧರ್ಮ. ಇವೆಲ್ಲವೂ ಅಂಶಗಳನ್ನು ಒಟ್ಟುಗೂಡಿಸಿದಾಗ, ಜಗತ್ತಿನ ಎಲ್ಲ ಧರ್ಮಗಳಿಗೂ ವಿಭಿನ್ನ ಆಚರಣೆ, ವಿಭಿನ್ನ ತತ್ವ ಸಿದ್ಧಾಂತ ಉಳ್ಳ ಧರ್ಮ ಲಿಂಗಾಯತ ಧರ್ಮ. ಮಾತಾಜಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಧರ್ಮ ಸ್ಥಾಪಕ ಬಸವಣ್ಣ, ಧರ್ಮ ಗ್ರಂಥ ಸಮಾನತೆ ಸಾರುವ ವಚನ ಸಾಹಿತ್ಯ, ದೇವರು ಸೃಷ್ಟಿಕರ್ತ ಲಿಂಗದೇವರು, ಎಂದು ಪ್ರಚಾರ ಮಾಡಿದರು. ವೀರಶೈವ ಲಿಂಗಾಯತ ಒಂದು ಅಲ್ಲ, ವೀರಶೈವ ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಹೇಳಿದ್ದರು. ಇದು ಕೂಡ ವೀರಶೈವ ಮಹಾಸಭಕ್ಕೆ ಪಂಚಾಚಾರ್ಯರಿಗೆ ಅಪಚನ ಆಯಿತು.

1999 ರಿಂದ ಮಾತಾಜಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಪ್ರಚಾರ ಮಾಡುತ್ತಾ ಬಂದರು, ಭಾರತ ದೇಶದ ಜನಗಣತಿಯಲ್ಲಿ ” ಲಿಂಗಾಯತ ಧರ್ಮ” ಎಂದು ನಮೂದಿಸಿ ಎಂದು ಪ್ರಚಾರ ಮಾಡಿದ್ದರು. ಆದರೆ ವೀರಶೈವ ಮಹಾಸಭಾ ಮಾತ್ರ ” ವೀರಶೈವ ಲಿಂಗಾಯತ ” ಧರ್ಮ ಎಂದು ಹೇಳುತ್ತಾರೆ, ಪಂಚಾಚಾರ್ಯರು ವೀರಶೈವ ಹಿಂದೂ ಧರ್ಮ ಒಂದು ಜಾತಿ ಅನ್ನುತ್ತಾರೆ, ಅವರಲ್ಲಿಯ ಸ್ಪಷ್ಟತೆ ಇಲ್ಲ. ಅದರ ಪ್ರತಿಫಲವೇ 2017 ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಸಾಂವಿಧಾನಿಕ ಮಾನ್ಯತೆಗೆ ದೊಡ್ಡ ಹೋರಾಟ ಪ್ರಾರಂಭ ಆಯಿತು.

ಲಿಂಗಾಯತ ಧರ್ಮ ಹೋರಾಟ

ನಾನು 2001 ರಿಂದ ಮಾತಾಜಿಯವರ ಸ್ವತಂತ್ರ ಧರ್ಮ ಹೋರಾಟಕ್ಕೆ ಕೈ ಜೋಡಿಸಿದೆ. ನಾನು ಪ್ರಾರ್ಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಹೆಡಗಾಪೂರ ಗ್ರಾಮದ ನಮ್ಮ ಮನೆಗೆ ಪೂಜ್ಯ ಮಾತಾಜಿ ಭೇಟಿ ಕೊಟ್ಟಿದ್ದರು. ಆವಾಗ ನಮ್ಮ ತಂದೆ ಸ್ಥಾಪಿಸಿದ್ದ ಫ್ರೌಢ ಶಾಲೆಯ ಶಿಕ್ಷಕರ ಮಗಳು ಶರಣೆ ಕಾವೇರಿ ಅಕ್ಕ ಮಾತಾಜಿ ಯವರ ಒಡನಾಡಿ ನಮ್ಮ ಮನೆಯಲ್ಲಿ ಜನ್ಮ ತಾಳಿದರು ಅಂತೆ, ಆವಾಗ ನಮ್ಮೂರಲ್ಲಿ ಅವರಿಬ್ಬರ ಮೆರವಣಿಗೆ ಮಾಡಿದರು, ಅವರು ನೂರಾರು ಜನಕ್ಕೆ ಇಷ್ಟಲಿಂಗ ದೀಕ್ಷೆ ಕೊಟ್ಟಿದ್ದರು, ನಮ್ಮ ತಾಯಿ ಕೂಡ ಮಾತಾಜಿಯವರ ಅನುಯಾಯಿ ಆಗಿ ಬಿಟ್ಟರು.

ಆದ್ದರಿಂದ ನಮ್ಮ ಮನೆತನದ ಮಾತಾಜಿ ಮೇಲೆ ಅಪಾರ ಪ್ರೀತಿ. ನನ್ನ ಧರ್ಮ ಪತ್ನಿ ಶ್ರೀಮತಿ ರಾಜಶ್ರೀ ಸ್ವಾಮಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಗಿದ್ದಾಗ, ಮಾತಾಜಿ ಹೇಳಿದರು ನೀವು ಲಿಂಗಾಯತರು, ಅಧ್ಯಕ್ಷ ಆಗಿದ್ದೀರಿ ನಿಮ್ಮ ಕಚೇರಿಯಲ್ಲಿ ಸರಕಾರ ವತಿಯಿಂದ ಬಸವ ಜಯಂತಿ ಆಚರಣೆ ಮಾಡಿ ಎಂದು ಆದೇಶ ಮಾಡಿದ್ದರು, ಅದರಂತೆ ನನ್ನ ಧರ್ಮ ಪತ್ನಿ ಬಸವ ಜಯಂತಿ ಆಚರಣೆ ಮಾಡಿದರು, ಇದು ಸರಕಾರದಿಂದ ಮಾಡಿದ್ದ ಪ್ರಥಮ ಬಸವ ಜಯಂತಿ. ನಾವು ಮಾತಾಜಿ ನಡೆಸಿದ್ದ ಲಿಂಗಾಯತ ಸ್ವತಂತ್ರ ಧರ್ಮ ಎಲ್ಲಾ ಹೋರಾಟದಲ್ಲಿ ಭಾಗವಹಿಸಿದೆ.

2013 ರಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ, ಮಾತಾಜಿ ಹೇಳಿದರು, ಇವಾಗ ನಾವು ಹೋರಾಟ ತೀವ್ರಗೊಳಿಬೇಕು, ಏಕೆಂದರೆ ಕಾಂಗ್ರೆಸ್ ಸರಕಾರ ಜಾತ್ಯತೀತ ಪಕ್ಷ ಹಾಗೂ ಸಿದ್ದರಾಮಯ್ಯ ಅವರು ಜಾತ್ಯತೀತರು, ಅವರು ನಮಗೆ ಸಹಕಾರ ಕೊಡಬಹುದು ಎಂದರು. ನನಗೆ ರಾಜ್ಯ ಸಂಚಾಲಕ ನೇಮಕ ಮಾಡಿ ಸ್ವತಂತ್ರ ಧರ್ಮ ಹೋರಾಟ ಜವಾಬ್ದಾರಿ ನೀವೇ ವಹಿಸಿಕೊಳ್ಳಬೇಕು ಎಂದು ಆಜ್ಞೆ ಮಾಡಿದರು. ನಿಮಗೆ ಶ್ರೀ ಸಿದ್ದರಾಮಯ್ಯ ಆತ್ಮೀಯರು, ನೀವು ಅವರಿಗೆ ಮನವೊಲಿಸಿ ಎಂದು ಹೇಳಿದರು. ನಾನು, ನನ್ನ ಪತ್ನಿ ಶ್ರೀಮತಿ ರಾಜಶ್ರೀ ಸ್ವಾಮಿ ಮತ್ತು ಪೂಜ್ಯ ಶ್ರೀ ಚನ್ನಬಸವಾನಂದ ಮಹಾಸ್ವಾಮೀಜಿ ಅಂದಿನ ಲೋಕೋಪಯೋಗಿ ಸಚಿವರು ನನ್ನ ಆತ್ಮೀಯರು, ಮುಖ್ಯಮಂತ್ರಿ ಆಪ್ತರು ಶ್ರೀ ಡಾ. ಹೆಚ್. ಸಿ. ಮಹಾದೇವಪ್ಪ ಅವರಿಗೆ ಭೇಟಿ ಮಾಡಿ, ವಚನಗಳ ಮುಖಾಂತರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು 2014 ರಲ್ಲಿ ಮನವರಿಕೆ ಮಾಡಿಕೊಟ್ಟೆವು.

ಅದಕ್ಕೆ ಅವರು ಸಹಮತ ಕೊಟ್ಟು, ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಜೊತೆ ಸಭೆ ಏರ್ಪಡಿಸಿ ಕೊಟ್ಟರು. ಮುಖ್ಯಮಂತ್ರಿ ಅವರಿಗೆ ಮನವರಿಕೆ ಆಯಿತು, ಅವರು ಹೋರಾಟಕ್ಕೆ ಬೆಂಬಲ ಇದೆ ಆದರೆ ವೀರಶೈವ ಮಹಾಸಭಾ ಬಸವಣ್ಣ ಧರ್ಮಗುರು ಲಿಂಗಾಯತ ಧರ್ಮ ಒಪ್ಪಲ್ಲ ಹೇಗೆ ಮಾಡುವದು ಅಂದರು. ಮಾತಾಜಿ 2014 ರಲ್ಲಿ ಸ್ವತಂತ್ರ ಉದ್ಯಾನದಲ್ಲಿ ಬೃಹತ್ ಸಮೇಳ್ಳನ ಮಾಡಿದರು, ಅಂದು ನಾನು ಪ್ರಾಸ್ತಾವಿಕ ಮಾತಾಡಿದ್ದೆ, ನಂತರ ನಿಯೋಗ ಮುಖಾಂತರ ಮುಖ್ಯಮಂತ್ರಿ ಕಚೇರಿ ಕಾವೇರಿಯಲ್ಲಿ ಶ್ರೀ ಸಿದ್ದರಾಮಯ್ಯ ಅವರ ಜೊತೆ ಸಭೆ ಸೇರಿ ಮನವಿ ಕೊಟ್ಟಿದ್ದೆವು.

ನಂತರ 2015 ರಲ್ಲಿ ಮತ್ತೆ ಮಾತಾಜಿ ನೇತೃತ್ವದಲ್ಲಿ ಬೆಂಗಳೂರು ಟೌನ್ ಹಾಲ್ ಹತ್ತಿರ ಬೃಹತ್ ಸಭೆ ಸೇರಿದ್ದೆವು, ಅಂದು ಮನವಿ ಸ್ವೀಕರಿಸಲು ಅಂದಿನ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಮತ್ತು ಸಾಮಾಜ ಕಲ್ಯಾಣ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಬಂದರು, ಮನವಿ ಸ್ವೀಕರಿಸಲು ಮುಖ್ಯಮಂತ್ರಿ ಕಳಿಸಿದರು. ಇದು ಸರಕಾರದಿಂದ ಅಧಿಕೃತವಾಗಿ ನಮ್ಮ ಮನವಿ ಸ್ವೀಕರಿಸಿ ಮಾನ್ಯತೆ ಕೊಡುವ ಭರವಸೆ ಕೊಡಲಾಯಿತು.

2016 ರಲ್ಲಿ ಬೀದರ ರಾಷ್ಟೀಯ ಬಸವ ದಳ ವತಿಯಿಂದ ಬೀದರ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿವಸ ಧರಣಿ ಎಏರ್ಪಡಿಸಿದ್ದೆವು, ಅದರಲ್ಲಿ ಮಾತಾಜಿ ನೇತೃತ್ವ ವಹಿಸಿದರು. ಅಂದಿನ ಜಿಲ್ಲಾಧಿಕಾರಿ ಡಾ ಪಿ. ಸಿ. ಜಾಫರ್ ಅವರು ಬರಬೇಕು ಎಂದು ಮಾತಾಜಿ ನನಗೆ ಸೂಚಿಸಿದರು, ನಾನು ಅವರ ಮನೆಗೆ ಹೋಗಿ ಕರೆದುಕೊಂಡು ಬಂದು, ಮಾತಾಜಿ ಮುಖಾಂತರ ಮನವಿ ಸಲ್ಲಿಸಿದ್ದೆವು. 2017 ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಬೃಹತ್ ರ್ಯಾಲಿ ಬೀದರದಿಂದ ಪ್ರಾರಂಭ ಆಗಬೇಕು ಎಂದು ಮಾತಾಜಿ ಸೂಚಿಸಿದರು, ನನಗೆ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಆಗಿ ನೇಮಕ ಮಾಡಿದರು. ನಾವು 2017 ಜೂನ್ ತಿಂಗಳು 30 ರಂದು ಪ್ರಥಮ ಸಭೆ ಬಸವ ಮಂಟಪದಲ್ಲಿ ನೆರವೇರಿಸಿ, ಜಿಲ್ಲೆಯ ಎಲ್ಲಾ ಮಠಾಧೀಶರು ಪ್ರಮುಖರು ಒಳಗೊಂಡು ಯಾವುದೇ ರಾಜಕೀಯ ಇಲ್ಲದೆ, ಸಂಘಟನೆ ಭೇದ ಭಾವ ಇಲ್ಲದೆ ನೆರವೇರಿಸಬೇಕು ಎಂದು ನಿರ್ಣಯ ಮಾಡಲಾಗಿತ್ತು, ದಿನಾಂಕ 19, ಜುಲೈ ದಿನ ನಿಗದಿ ಪಡಿಸಲಾಗಿತ್ತು.

ಅದರಂತೆ ದಿನಾಂಕ 2 ಜುಲೈ ರಂದು ಶರಣ ಉದ್ಯಾನದಲ್ಲಿ ಎಲ್ಲ ಮಠಾಧೀಶರ ನೇತೃತ್ವದಲ್ಲಿ ಸಭೆ ಸೇರಿ ಬೃಹತ ಲಿಂಗಾಯತ ರ್ಯಾಲಿ ಮಾಡಲು ನಿರ್ಧರಿಸಲಾಯಿತು. ಅದರಂತೆ ದಿನಾಂಕ 19 ಜುಲೈ 2017 ರಂದು ರಾಷ್ಟ್ರ ಕಂಡ ಅದ್ಭುತ ರ್ಯಾಲಿ, ಯಶಸ್ವಿ ಆಯಿತು. ಮುಂದೆ ನಾಡಿನ ತುಂಬಾ, ನೆರೆ ರಾಜ್ಯ ಮಹಾರಾಷ್ಟ್ರದಲ್ಲಿಯು ದೊಡ್ಡ ದೊಡ್ಡ ರ್ಯಾಲಿ ಆಗಿ ಸರಕಾರದ ಗಮನ ಸೆಳೆದವು. ಶ್ರೀ ಎಂ. ಬಿ. ಪಾಟೀಲ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಮನವೊಲಿಸಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಮನ್ನಿಸಿ, ಅಲ್ಪಸಂಖ್ಯಾತ ಧರ್ಮ ಎಂದು ಪರಿಗಣಿಸಲು ಕೇಂದ್ರಕ್ಕೆ ಶಿಫಾರಸು ಮಾಡಿ ಐತಿಹಾಸಿಕ ನಿರ್ಣಯ ತೆಗೆದುಕೊಂಡಿತ್ತು.

ಇದು ಮಾತಾಜಿ ಮಾಡಿದ್ದ ಶತಮಾನದ ಐತಿಹಾಸಿಕ ಕಾರ್ಯ, 20ನೇ ಶತಮಾನದ ಲಿಂಗಾಯತ ಧರ್ಮದ ಇತಿಹಾಸ ರೂಪಿಸಿದ ಮಹಿಳೆ ಆಗಿ ಇತಿಹಾಸ ಪುಟ ಸೇರಿದ್ದರು.

ಮಾತಾಜಿ ಶ್ರಮ

ಮಾತಾಜಿ ರಾಷ್ಟ್ರೀಯ ಬಸವ ದಳ ಕೇವಲ ಕರ್ನಾಟಕ ಅಲ್ಲ ನೆರೆ ರಾಜ್ಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಕೂಡ ಕಟ್ಟಿ ಬೆಳೆಸಿದರು. ಬಸವಣ್ಣ ಹುಟ್ಟಿ ಬೆಳೆದ ಕೂಡಲ ಸಂಗಮದಲ್ಲಿ ಆಶ್ರಮ ಸ್ಥಾಪಿಸಿ ಪ್ರವಾಸಿ ತಾಣ ಮಾಡಿದರು, ಲಿಂಗಾಯತರು ಈ ಪುಣ್ಯ ಕ್ಷೇತ್ರಕ್ಕೆ ಒಮ್ಮೆ ಆದರೂ ಬೇಟಿ ಕೊಡಬೇಕು ಎಂದು ಪ್ರಚಾರ ಮಾಡಿದರು, ಹಾಗೂ ವರ್ಷಕ್ಕೆ ಸಂಕ್ರಾತಿ ಹಬ್ಬದ ಸಮಯದಲ್ಲಿ ಮೂರು ದಿವಸ ” ಗಣ ಮೇಳ” ಏರ್ಪಡಿಸಿ ಇಡೀ ಸಮಾಜದ ಮುಖ ಸಂಗಮ ಕಡೆ ಸೆಳೆದರು.

ಬಸವ ಕಲ್ಯಾಣದಲ್ಲಿ 108 ಅಡಿಯ ಬೃಹತ್ ಆಕಾರದ ಬಸವಣ್ಣನವರ ಅಭಯ ಹಸ್ತ ಮೂರ್ತಿ ಸ್ಥಾಪಿಸಿ ಇಡೀ ದೇಶದ ಗಮನ ಸೆಳೆದರು. ಅದರಂತೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕುಂಬೋಳಗೋಡದಲ್ಲಿ ಜಮೀನು ಖರೀದಿ ಮಾಡಿ ಆಶ್ರಮ ಕಟ್ಟಿ, ಬೃಹದಾಕಾರದ ಬಸವಣ್ಣನವರ ಮೂರ್ತಿ ಸ್ಥಾಪನೆಯ ಸಂಕಲ್ಪ ಮಾಡಿದರು, ಅದು ಇವಾಗ ಪ್ರಗತಿಯಲ್ಲಿ ಇದೆ.

ಬಸವ ಮಂಟಪ, ಪುಸ್ತಕಗಳು

ಬೀದರದಲ್ಲಿ ಇರುವ ಬಸವ ಮಂಟಪದಿಂದ ಪ್ರೇರಣೆಗೊಂಡು, ಇಡೀ ರಾಜ್ಯದ ಮೂಲೆ ಮೂಲೆಯಲ್ಲೂ ಬಸವ ಮಂಟಪ ಸ್ಥಾಪಿಸಲು ಕಾರಣ ಆದರು, ಸುಮಾರು ಎರಡು ನೂರು ಬಸವ ಮಂಟಪ ಕೇವಲ ಕರ್ನಾಟಕದಲ್ಲಿ ಇವೆ ಎಂದು ತಿಳಿದು ಬಂದಿದೆ.

ಎಲ್ಲ ಶರಣರ ವಚನಗಳ ಕೈಪಿಡಿ, ಲಿಂಗಾಯತ ಸಂಸ್ಕಾರ ಕೈಪಿಡಿ, ಬಸವ ಪ್ರಾರ್ಥನೆ ಗೀತೆಗಳು, ಗಣಸ್ತುತಿ ಗೀತೆಗಳು, ತಾವೇ ಬರೆದು ತಾವೇ ಹಾಡಿದ್ದಾರೆ. ಇವೆಲ್ಲ ಒಂದೇ ಜನ್ಮದಲ್ಲಿ ಆಗಲ್ಲು ಸಾಧ್ಯವೇ? ಆದರೆ ಮಾತಾಜಿಯವರ ನಿರಂತರ ಶ್ರಮದಿಂದ ಸಾಧ್ಯ ಆಗಿದೆ. ಹತ್ತಾರು ಆಶ್ರಮ ಕಟ್ಟಿದ್ದಾರೆ, ಹತ್ತಾರು ಪೂಜ್ಯರನ್ನು ಗುರುಮೂರ್ತಿಗಳನ್ನು ದೀಕ್ಷೆ ಕೊಟ್ಟು ತಯಾರು ಮಾಡಿದ್ದಾರೆ, ಇವರ ಆಶ್ರಮದಲ್ಲಿ ಜಾತಿ ಭೇದ ಇಲ್ಲದೆ ಗುರುದೀಕ್ಷೆ ಕೊಟ್ಟು ಗುರುಮೂರ್ತಿಗಳನ್ನು ನಿರ್ಮಾಣ ಮಾಡಿದ್ದಾರೆ. ಇವರ ದೂರದೃಷ್ಟಿಯ ಪ್ರತಿಕದಂತೆ ಅವರ ಮುಂದಿನ ಯಶಸ್ವಿ ಜಗದ್ಗುರು ಆಗಿ ಜೀವಂತ ಇರುವಾಗಲೇ ಪೂಜ್ಯ ಡಾ. ಗಂಗಾ ಮಾತಾಜಿ ಅವರನ್ನು ತಮ್ಮ ಸ್ಥಾನಕ್ಕೆ ಪಟ್ಟಕಟ್ಟಿದ್ದಾರೆ.

ಲಿಂಗಾಯತ ಧರ್ಮ ಗ್ರಂಥ

ಲಿಂಗಾಯತ ಧರ್ಮ ಗ್ರಂಥವನ್ನು ಅವರು ಅತಿ ಶ್ರಮಪಟ್ಟು ಬರೆದಿದ್ದಾರೆ ಎಂದು ಸ್ವತಃ ಮಾತಾಜಿ ನನಗೆ ಹೇಳಿದ್ದರು. ತಮ್ಮ ಆರೋಗ್ಯ ಪದೆ ಪದೇ ಹದಗೆಡುತ್ತಾ ಇದ್ದರಿಂದ, ಅವರು ಸಂಪೂರ್ಣ ಧ್ಯಾನ ಕೊಟ್ಟು ” ಲಿಂಗಾಯತ ಧರ್ಮ ಗ್ರಂಥ” ಪೂರ್ಣಗೊಳಿಸಿದ್ದಾರೆ. ಬಸವ ಧರ್ಮಪೀಠ ಗ್ರಂಥವನ್ನು ಮುದ್ರಿಸಿ ಆದಷ್ಟು ಬೇಗನೆ ಸಮಾಜಕ್ಕೆ ಧಾರೆ ಎರೆದು, ಮಾತಾಜಿಯ ಕನಸು ನನಸು ಮಾಡಬೇಕು.

ಬಿಚ್ಚು ಮನಸ್ಸು

ನಾನು ಮಾತಾಜಿ ಬಹಳ ವಿಷಯಗಳ ಬಗ್ಗೆ ಮುಕ್ತವಾಗಿ ಮಾತಾಡುತ್ತಾ ಇದ್ದೆವು. ವಚನಾಂಕಿತ ತಿದ್ದಿದ್ದು ಅದನ್ನು ಯಾರಿಗೂ ಒತ್ತಾಯ ಮಾಡಿ ಉಪಯೋಗಿಸಿ ಎಂದು ಅವರು ಹೇಳಿಲ್ಲ.

ಮಾತಾಜಿಯವರನ್ನು ಬೀದರದಲ್ಲಿ ಬೃಹತ್ ಸನ್ಮಾನ ಮಾಡಬೇಕು ಎಂದು ನನಗೆ ಸಮಿತಿ ಅಧ್ಯಕ್ಷ ಮಾಡಲಾಯಿತು. ನಾನು ಲಿಂಗಾಯತ ಪ್ರಮುಖರ, ಹಿರಿಯರ, ಯುವಕರ ಸಭೆ ಕರೆದು ಚರ್ಚೆ ಮಾಡಿದ್ದೆ. ಬೀದರ ಹಿರಿಯರು ಸನ್ಮಾನ ಮಾಡೋಣ ಆದರೆ ಕಾರ್ಯಕ್ರಮದಲ್ಲಿ ಯಾರು “ಲಿಂಗದೇವ” ವಚನಾಂಕಿತ ವಚನ ಹೇಳಬಾರದು ಎಂದು ನನಗೆ ಷರತ್ತು ಹಾಕಿದರು, ನಾನು ಒಪ್ಪಿದೆ.

ದೆಹಲಿ ರ್ಯಾಲಿ

ಲೋಕಸಭೆ ಚುನಾವಣೆ ಸಮೀಪ ಇದ್ದದ್ದರಿಂದ ಯಾವುದೇ ಲಿಂಗಾಯತ ರ್ಯಾಲಿ ಮಾಡಿ ರಾಜಕೀಯಕರಣಗೊಳಿಸುದು ಬೇಡ ಎಂದು ಮಾನ್ಯ ಶ್ರೀ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಬೀದರದಲ್ಲಿ ಸಭೆ ಸೇರಿ ನಾವೆಲ್ಲರೂ ನಿರ್ಣಯ ತೆಗೆದುಕೊಂಡಿದ್ದೆವು.

ಅದನ್ನೇ ನಾನು ಹೇಳಿಕೆ ಬಿಡುಗಡೆ ಮಾಡಿದೆ, ಕೂಡಲೇ ಮಾತಾಜಿ ನನ್ನ ಹೇಳಿಕೆ ಖಂಡಿಸಿದರು, ಶ್ರೀಕಾಂತ ಸ್ವಾಮಿ ನಮ್ಮನ್ನು ಸಂಪರ್ಕಿಸದೆ ಏಕಪಕ್ಷೀವಾಗಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಪತ್ರಿಕೆ ಹೇಳಿಕೆ ಕೊಟ್ಟರು. ಮತ್ತೆ ನಮ್ಮ ಸಭೆ ಕರೆದರು, ದೆಹಲಿಯಲ್ಲಿ ದೊಡ್ಡ ರ್ಯಾಲಿ ಮಾಡಬೇಕು ನೀವೆಲ್ಲ ಸಹಕರಿಸಿ ಎಂದು ಹೇಳಿದ್ದರು.

ನಾವು ರ್ಯಾಲಿ ಇವಾಗ ಬೇಡ, ಚಳಿಗಾಲ ಇದೆ, ನಿಮಗೂ ಆರೋಗ್ಯ ಸರಿ ಇಲ್ಲ, ಬೇಸಿಗೆ ಕಾಲದಲ್ಲಿ ರ್ಯಾಲಿ ಮಾಡೋಣ ಎಂದು ಅವರಿಗೆ ವಿನಂತಿ ಮಾಡಿದ್ದೆವು. ಆದರೆ ಇಲ್ಲ ನಾನು ಸಂಕಲ್ಪ ಮಾಡಿದ್ದೇನೆ ಮಾಡಲೇಬೇಕು ಅಂದರು. ಅದಕ್ಕೆ ನಾವು ಅವರ ಮಾತಿಗೆ ಮನ್ನಣೆ ಕೊಟ್ಟು ಒಪ್ಪಿದ್ದೆವು. ಅದರಂತೆ ಯಶಸ್ವಿ ರ್ಯಾಲಿ ನಡೆಯಿತು, ಇತಿಹಾಸ ರಚಿಸಿತ್ತು, ಆದರೆ ದೆಹಲಿಯ ಕೇಂದ್ರ ಸರಕಾರ ಕುತಂತ್ರ ಮಾಡಿ, ರ್ಯಾಲಿ ಮಧ್ಯದಲ್ಲಿ ನಮ್ಮ ಬೇಡಿಕೆ ಮರಳಿ ಕಳಿಸಿತ್ತು. ಇದು ಮಾತಾಜಿ ಅವರಿಗೆ ಆಘಾತ ತಂದಿತು, ಅಲ್ಲಿಯೇ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಒಂದು ತಿಂಗಳು ಅವರು ದೆಹಲಿಯಲ್ಲಿ ಆಸ್ಪತ್ರೆಯಲ್ಲಿ ಇರಬೇಕಾಯಿತು.

ಅವರು ಅತ್ಯಂತ ಯಶಸ್ವಿ ಜೀವನ ಪೂರ್ಣಗೊಳಿಸಿ 2019ರಲ್ಲಿ ತಮ್ಮ ಆತ್ಮವನ್ನು ಪರಮಾತ್ಮನಲ್ಲಿ ವಿಲೀನಗೊಳಿಸಿದರು:

ನಾವು ದೆಹಲಿಯಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಇದ್ದಾಗ ಪೂಜ್ಯ ಚನ್ನಬಸವಾನಂದ ಮಹಾಸ್ವಾಮೀಜಿ ಫೋನ್ ಮಾಡಿ, ಮಾತಾಜಿ ಆರೋಗ್ಯ ತೀರಾ ಹದಗೆಟ್ಟಿದೆ, ಸಿಂಗಾಪುರ ಆಸ್ಪತ್ರೆ ಹೋಗಬೇಕು, ನೀವು ಶ್ರೀ ಎಂ. ಬಿ. ಪಾಟೀಲ ಬೆಂಗಳೂರು ಬನ್ನಿ ಎಂದು ಹೇಳಿದರು, ಅಂದೆ ರಾತ್ರಿ ನಾವು ಮರಳಿ ಬೆಂಗಳೂರು ಬಂದು, ಮರುದಿವಸ ಮಾನ್ಯ ಶ್ರೀ ಎಂ. ಬಿ. ಪಾಟೀಲ ಗೃಹ ಸಚಿವರ ಜೊತೆ ನಾನು ಮಣಿಪಾಲ ಆಸ್ಪತ್ರೆ ಭೇಟಿ ಕೊಟ್ಟೆವು, ಮಾತಾಜಿ ಅವಸ್ಥೆ ನೋಡಿದ್ದೆವು, ಯಾವುದೇ ಚಲನವಲನ ಇದ್ದಿಲ್ಲ. ಅಲ್ಲಿಯ ವೈದ್ಯರ ಜೊತೆ ಚರ್ಚೆ ಮಾಡಲಾಗಿ, ವೈದ್ಯರು ಅಸಹಾಯಕತೆ ತೋಡಿಕೊಂಡಿದ್ದರು. ಅಂದೇ ರಾತ್ರಿ ನಮ್ಮನು ಅಗಲಿ ದೇವರಲ್ಲಿ ಕೂಡಿಕೊಂಡರು. ತನ್ನ ಚೈತನ್ಯ ಶಕ್ತಿಯನ್ನು ಪರಚೈತನ್ಯ ಶಕ್ತಿಯಲ್ಲಿ ವಿಲೀನಗೊಳಿಸಿ ಕೊಂಡು. ತಮ್ಮ ಸಾರ್ಥಕ ಜೀವನದ ಪಯಣ ಮುಗಿಸಿದರು.

ಮಾತಾಜಿ ನಮಗೆಲ್ಲರಿಗೂ ಪ್ರೇರಣೆ ಆಗಲಿ ಎಂದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರು ಸೃಷ್ಟಿಕರ್ತ ಲಿಂಗದೇವರಲ್ಲಿ ಪ್ರಾರ್ಥಿಸುತ್ತೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
3 Comments
  • ನಮ್ಮ ಲಿಂಗಾಯತರು ಗುರು ಬಸವಣ್ಣನವರನ್ನು ಸಹ ಪರಿಪೂರ್ಣ ಅರ್ಥ ಮಾಡಿಕೊಂಡಿಲ್ಲ. ಮಾತಾಜಿಗೆ ಸರಿಯಾದ ಗೌರವ ಕೊಡದೆ ಮತ್ತೆ ಅದೆ ತಪ್ಪುಮಾಡುತ್ತಿದ್ದಾರೆ.

  • ಲೇಖಕರಿಗೆ ಈ ಮಾಹಿತಿಗಾಗಿ ಮತ್ತು ಶೈಕ್ಷಣಿಕ ಪರಿಪೂರ್ಣತೆಯಿಗಾಗಿ ಮನಃಪೂರ್ವಕ ಧನ್ಯವಾದಗಳು.

    ಪೂಜ್ಯ ಡಾ. ಮಾತೇ ಮಹಾದೇವಿಯವರ ಜೀವನಶೈಲಿ, ತತ್ವಚಿಂತನೆ ಮತ್ತು ಅವರ ಹೋರಾಟವು ಲಿಂಗಾಯತ ಸಮಾಜದ ಪ್ರಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೇವಲ 9×12 ಅಡಿ ಕೋಣೆಯಲ್ಲಿ ಗ್ರಂಥಾಲಯದೊಂದಿಗೆ ಹಗಲಿರುಳು ತಾತ್ವಿಕ ಚಿಂತನೆ ನಡೆಸಿದ ಮಾತಾಜಿಯವರ ಸಾದಗಿ, ತತ್ವಪ್ರಿಯತೆ ಮತ್ತು ಧ್ಯೇಯನಿಷ್ಠೆ ಆದರ್ಶಪ್ರಾಯ.

    ‘ಗಣ ಮೇಳ’ ಮತ್ತು ‘ಕಲ್ಯಾಣ ಪರ್ವ’ಗಳಂತಹ ವೈಚಾರಿಕ ಮತ್ತು ಚರಿತ್ರಾತ್ಮಕ ಚಳವಳಿಗಳು ಸಮುದಾಯದಲ್ಲಿ ಸಂಚಲನ ಮೂಡಿಸಿದ್ದವು. ಆದರೆ ಬಸವಣ್ಣನವರ ಪರಿಕಲ್ಪನೆಗಳು ಮತ್ತು ಲಿಂಗಾಯತ ಪರಂಪರೆಯ ವೈಜ್ಞಾನಿಕ ಹಾಗೂ ತಾತ್ವಿಕ ಭೂಮಿಕೆಯನ್ನು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಲು ಆರ್ಕಿಯಾಲಾಜಿಕಲ್ ಹಾಗೂ ತಾತ್ವಿಕ-ತೂಲನಾತ್ಮಕ ಸಂಶೋಧನೆಯ ಅಗತ್ಯವಿದೆ. ಬಸವಣ್ಣನವರ ದರ್ಶನವನ್ನು ವೈಜ್ಞಾನಿಕ ಮತ್ತು ಪ್ರಾಯೋಗಿಕ ದೃಷ್ಟಿಕೋನದಿಂದ ಪುನರ್‌ವ್ಯಾಖ್ಯಾನ ಮಾಡುವ ಮೂಲಕ ಆಧುನಿಕ ಸಮಾಜಕ್ಕೆ ಸೂಕ್ತ ಪಠ್ಯ ರೂಪಿಸುವ ಹೊಣೆಗಾರಿಕೆ ಇಂದಿನ ತಲೆಮಾರಿನದು.

    ಇದು ಲಿಂಗಾಯತ ಸಮಾಜಕ್ಕೆ ಮಾತ್ರವಲ್ಲ, ಅಖಂಡ ಮಾನವ ಕುಲಕ್ಕೆ ಬಹುಮುಖ್ಯ ಕೊಡುಗೆ ಆಗಲಿದೆಯೆಂಬುದು ನಿರ್ವಿವಾದ.

  • ನಾನು ಇಂದು ನಿರ್ಭೀತಿಯಿಂದ ಜೀವನ ಮಾಡಲು ಮಾತಾಜಿ ಕಾರಣ.ಮಾತಾಜಿ ನೆನೆದಾಗ ಭಾವುಕನಾಗುವೆ ೧೦೦% ಬಸವಾದಿ ಶರಣರನ್ನು ನಂಬುವವರು ಮಾತಾಜಿ ಅವರನ್ನು ತಮ್ಮ ಜೀವನದುದ್ದಕ್ಕೂ ಮರೆಯುವುದಿಲ್ಲ. ಮಾತಾಜಿ ಅವರಂಥ ತಾಯಿಯ ಹೃದಯ ಈಗ ಅವಶ್ಯ

Leave a Reply

Your email address will not be published. Required fields are marked *

ಕರ್ನಾಟಕ ರಾಜ್ಯ ಸಂಚಾಲಕರು, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ