ನಗರದ ಮೂಜಗಂ ಸಭಾಭವನದಲ್ಲಿ ಉದ್ಘಾಟನೆ
ಹುಬ್ಬಳ್ಳಿ:
ಕರ್ನಾಟಕದಲ್ಲಿ ಅತ್ಯಂತ ಬಲಿಷ್ಠ ಮತ್ತು ನಿರ್ಣಾಯಕ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯವನ್ನು ತಮ್ಮಿಚ್ಚೆಯಂತೆ ಬಳಸಿಕೊಂಡು ಆ ಸಮಾಜದ ಅಭಿವೃದ್ಧಿಗೆ ಅಲಕ್ಷ ತೋರುತ್ತಿರುವ ರಾಜಕೀಯ ಪಕ್ಷಗಳ ನಡೆಗೆ ಕಡಿವಾಣ ಹಾಕಲು ಅಖಿಲ ಭಾರತ ಲಿಂಗಾಯತ ನೇತಾರರ ಪರಿಷತ್ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಸ್ಥಾಪಕರಲ್ಲೊಬ್ಬರಾದ ಲಿಂಗಾಯತ ಸಮಾಜದ ಹಿರಿಯ ಮುಖಂಡ ಗಂಗಾಧರ ದೊಡ್ಡವಾಡ ಹೇಳಿದರು.
ನಗರದ ಮೂರುಸಾವಿರಮಠದ ಶ್ರೀ ಮೂಜಗಂ ಸಭಾಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಪರಿಷತ್ತನ್ನು ಉದ್ಘಾಟಿಸಲಾಯಿತು.

ಹಲವು ದಶಕಗಳ ಕಾಲ ಆಯಾ ಪಕ್ಷದಲ್ಲಿ ನಿಸ್ವಾರ್ಥಸೇವೆ ಸಲ್ಲಿಸಿದ ನೇತಾರರನ್ನು ಬದಿಗೆ ಸರಿಸುವುದಲ್ಲದೇ ಚುನಾವಣಾ ಪೂರ್ವದಲ್ಲಿ ಆಯಾ ಸಮಾಜದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಒದಗಿಸುವುದಾಗಿ ಹೇಳಿ, ಅಧಿಕಾರಕ್ಕೆ ಬಂದ ನಂತರ ತಮ್ಮಿಚ್ಚೆಯಂತೆ ನಡೆದುಕೊಳ್ಳುತ್ತಿರುವುದನ್ನು ಕಂಡು ಬೇಸತ್ತಿದ್ದೇವೆ.
ಕರ್ನಾಟಕ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಈ ಸಂಘಟನೆಯ ಶಾಖೆಗಳನ್ನು ತೆರೆದು ರಾಜಕೀಯ ಪಕ್ಷಗಳನ್ನು ಎಚ್ಚರಿಸುತ್ತೇವೆ. ಲಿಂಗಾಯತ ಎಂದರೆ 112 ಉಪಪಂಗಡಗಳ ಒಂದು ಕೇಂದ್ರ ಶಕ್ತಿ ಎಂದರು.
ಈ ಸಮಾಜದಲ್ಲಿರುವವರನ್ನು ಕಡೆಗಣಿಸಬಾರದೆಂಬುದು ನಮ್ಮ ಸಂಘಟನೆಯ ಮೂಲ ದ್ಯೇಯವಾಗಿದೆ ಎಂದು ದೊಡ್ಡವಾಡ ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮಾಜದ ಸದಾನಂದ ಡಂಗನವರಿಗೆ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಜೊತೆಗೆ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಸದ್ಯದಲ್ಲೇ ನಮ್ಮ ಸಂಘಟನೆಯು ನಿಯೋಗದೊಂದಿಗೆ ತೆರಳಿ ಅಭಿನಂದಿಸಲಿದೆ ಎಂದು ಹೇಳಿದರು.
ಹೀಗಾಗಿ ಮುಂದಿನ ದಿನಗಳಲ್ಲಿ ಲಿಂಗಾಯತ ಸಮುದಾಯದ ಸಹಕಾರ ಕೋರುವ ಪ್ರತಿಯೊಂದು ರಾಜಕೀಯ ಪಕ್ಷಗಳಿಗೆ ಕಟ್ಟುನಿಟ್ಟಾದ ಮಾನದಂಡಗಳನ್ನು ರೂಪಿಸುತ್ತೇವೆ ಎಂದು ಗಂಗಾಧರ ದೊಡ್ಡವಾಡ ಹೇಳಿದರು. ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಸರ್ಕಾರವನ್ನು ನಾವು ಅಭಿನಂದಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥಾಪಕರುಗಳಾದ ಈಶ್ವರ ಶಿರಸಂಗಿ, ಚಿಂತಾಮಣಿ ಸಿಂಧಗಿ, ಕುಮಾರಗೌಡ ಪಾಟೀಲ, ಬಸವರಾಜ ಕೆಲಗೇರಿ, ಮಲ್ಲಿಕಾರ್ಜುನ ಶಿರಗನ್ನವರ, ಚನ್ನಬಸಪ್ಪ ಅಲ್ಲಾಪುರ, ಬಸವರಾಜ ಶಿರಗೇರಿ, ಅರ್ಜುನ ಗಣಿ, ರಾಜಣ್ಣ ಹದ್ಲಿ, ಸಿದ್ದು ಮೇದಗೊಪ್ಪ, ಆನಂದ ಮುರಗೋಡ, ಸೋಮಣ್ಣ ಎಲಿಗಾರ, ಈರಯ್ಯ ಹಿರೇಮಠ, ಸಿದ್ದಣ್ಣ ಹಿಂದಿನಮನಿ, ಪ್ರಭಾವತಿ ಹಾದಿಮನಿ, ಸುಮಾದೇವಿ ಹಿರೇಮಠ,ಉಮಾ ಸುತಗಟ್ಟಿ, ಅನಸೂಯಾ ಅರಕೇರಿ, ಅನಸೂಯಾ ನವಲಗುಂದ, ನಿರ್ಮಲಾ ಹಿರೇಮಠ, ಎ. ವಾಣಿಶ್ರೀ, ಲಕ್ಷ್ಮೀ ಚಿಕ್ಕತೋಟರ, ಕಿಶೋರ ಶಿರಸಂಗಿ, ಅಶೋಕ ಬೆಳಗಲಿ, ಪ್ರಶಾಂತ ಬಾಗೇವಾಡಿ, ರಘುವೀರ ಸಕ್ರಿ, ಮಹಾಂತೇಶ ಸಾರಂಗಮಠ, ಕಿರಣ ಹದ್ಲಿ, ರವಿ ಬೆನಚಿನಮರಡಿ, ಮತ್ತಿತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
