‘ಅಳಿಯದೇ ಉಳಿದವರು’
ವಿಜಯಪುರ:
‘ಅಳಿಯದೇ ಉಳಿದವರು’ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಜೀವನಾಧಾರಿತ ಚಲನಚಿತ್ರದ ಚಿತ್ರೀಕರಣ ಬುಧವಾರ ಚಾಲನೆ ನೀಡಲಾಯಿತು.
ಬಿಎಲ್‌ಡಿಇ ಸಂಸ್ಥೆಯ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣ ಚಿಂತಕ ಡಾ. ಮಹಾಂತೇಶ ಬಿರಾದಾರ ಅವರು, ವಚನ ಪಿತಾಮಹ ಹಳಕಟ್ಟಿಯವರ ಜೀವನವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಂತೆ ಕುಳಿತವರ ಮೈನವಿರೇಳುವುದರ ಜೊತೆಗೆ ಕಣ್ಣಾಲಿಗಳು ತೇವವಾದವು.
‘ಹಳಕಟ್ಟಿ ಅವರು ತಮ್ಮ ಜೀವ ತೇಯ್ದುಕೊಂಡು ವಚನ ದೀಪವಾಗಿ ಬೆಳಗಿದ್ದಾರೆ. ಸಚಿವ ಎಂ.ಬಿ. ಪಾಟೀಲರ ಕಾಳಜಿ, ಮಹತ್ತರ ಕಾರಣದಿಂದ ಇಂದು ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ನಾಡಿನೆಲ್ಲೆಡೆ ಅವರು ಹೆಸರಾಗಿದ್ದಾರೆ.
ಅದರ ಪ್ರೇರಣೆಯ ಭಾಗವಾಗಿ ಈ ಚಿತ್ರ ತಯಾರಾಗುತ್ತಿದೆ. ಈ ತಂಡಕ್ಕೆ ನಾವುಗಳೆಲ್ಲ ಹೃದಯಪೂರ್ವಕವಾಗಿ ಸಹಕಾರ ನೀಡೋಣ’ ಎಂದಾಗ ಸೇರಿದ್ದವರು ಚಪ್ಪಾಳೆ ಮೂಲಕ ಸಹಮತ ತೋರಿದರು.
ನಗರದ ಅಭಿನವ ಸಿದ್ಧಾರೂಢ ಸ್ವಾಮಿಜಿ, ಕನ್ನಡದ ನಿಜವಾದ ಮ್ಯಾಕ್ಸಮುಲ್ಲರ್ ಎಂದರೆ ಅದು ಡಾ. ಫ. ಗು. ಹಳಕಟ್ಟಿ ಎಂದು ಸಿಂಪಿ ಲಿಂಗಣ್ಣ ಅವರು ಉಲ್ಲೇಖಿಸಿದ್ದನ್ನು ನೆನಪಿಸುತ್ತ, ಹಳಕಟ್ಟಿಯವರು ಕಾವಿ ತೊಡದ ಸರ್ವಸಂಗ ಪರಿತ್ಯಾಗಿ ಎಂದು ಮನದುಂಬಿ ಮಾತನಾಡಿದರು.
ಹಿರಿಯ ಜೀವಿ ವಿ.ಸಿ. ನಾಗಠಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿನಿಮಾಗೆ ಕತೆ ಬರೆದಿರುವ ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಚಿತ್ರ ತಂಡದ ಗುರುಪ್ರಸಾದ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಎಂ.ಎಸ್. ಮದಭಾವಿ, ಡಾ.ವಿ.ಡಿ. ಐಹೊಳಿ ಸೇರಿದಂತೆ ನೂರಾರು ಶರಣ ಮನಸ್ಸುಗಳು ಹಾಜರಿದ್ದು ಸಾಕ್ಷಿಯಾದವು.

ಗುಂಡ್ಲುಪೇಟೆ ತಾಲೂಕು, ಸೋಮಹಳ್ಳಿಯ ಸಾಹುಕಾರ್ ಪ್ರೊಡಕ್ಷನ್ ನಿಂದ ಚಿತ್ರ ನಿರ್ಮಾಣಗೊಳ್ಳುತ್ತಿದೆ.
