ರೇಣುಕಾಚಾರ್ಯರಿಗೆ ಪ್ರಾಶಸ್ತ್ಯ ನೀಡಿದರೆ ಸಮಾಜದಲ್ಲಿ ಮೇಲ್ಜಾತಿಯಾಗಿ ಗೌರವ ಹೊಂದಿರುತ್ತೀರಿ ಎಂಬ ಪರೋಕ್ಷ ಸಂದೇಶ ನೀಡುತ್ತಿದ್ದಾರೆ.
ರಾಯಚೂರು
(ರೇಣುಕಾಚಾರ್ಯ ಜಯಂತಿಗೆ ಶರಣ ತತ್ವ ಚಿಂತಕ ಬಸವರಾಜ ಕುರಗೋಡ ಅವರ ಪ್ರತಿಕ್ರಿಯೆ.)
1) ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?
ಬಸವ, ಲಿಂಗಾಯತ ಚಳವಳಿ ಪ್ರಾರಂಭವಾದ ಮೇಲೆ ಅಂದರೆ ೨೦೧೫ ರ ನಂತರ. ವೈದಿಕ ಪತ್ರಿಕೆಗಳು ಪ್ರಚಾರ ಕೊಡುತ್ತಿವೆ.
2) ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?
ಹೌದು. ಜನಪ್ರಿಯಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾರಣ; ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿದ ಮೇಲೆ, ಜನಸಾಮಾನ್ಯರಿಗೆ ಬಸವ ತಿಳವಳಿಕೆ ಹೆಚ್ಚುತ್ತಿರುವುದು, ಲಿಂಗಾಯತರಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆಂಬ ಆತಂಕವಿರಬಹುದು.
ಇನ್ನೂ ಇದರ ಸಂಪೂರ್ಣ ಉದ್ಧೇಶ ಸಂಘಪರಿವಾರದ್ದು. ಪಂಚಾಚಾರ್ಯರಿಗೆ ರೇಣುಕರ ಬಗ್ಗೆ ಹೆಚ್ಚಿನ ಗೌರವವಿದೆ ಹೊರತು ಬಸವನ ಬಗೆಯ ದ್ವೇಷವಿಲ್ಲ. ಅದೇನಿದ್ದರೂ ಮನುಸ್ಮೃತಿ ಆಧಾರಿತ ಹಿಂದೂ ಸಾಮ್ರಾಜ್ಯ ಕಟ್ಟುವ ಸಂಘ ಪರಿವಾರದ್ದೆ.
3) ಕಳೆದ ಕೆಲವು ವರ್ಷಗಳ ಯಾವುದಾದರು ಬೆಳವಣಿಗೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಅನಿಸುತ್ತದೆಯೇ?
ಈ ಮೊದಲು ಎರಡು ಒಂದೇ ಎಂದುಕೊಂಡು ಉತ್ತರ ನೀಡುತ್ತಿರಲಿಲ್ಲ. ಆದರೆ ಬಸವ ಚಳವಳಿ ನಂತರ ಸಂಘಪರಿವಾರದ ಪ್ರಚೋದನೆಯಿಂದ ಅವರು ಪ್ರತಿಕ್ರಿಯಿಸುತ್ತಿದ್ದಾರೆ.
4) ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?
ಇದರಲ್ಲಿ ಜನಸಾಮಾನ್ಯರಿಗೆ ವೇದಗಳು ಮತ್ತು ವಚನಗಳು ಒಂದೇ, ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ ಎಂದು ತಿಳಿಸುವ ಪ್ರಯತ್ನವಿದೆ.
ಹಾಗೂ ಪರೋಕ್ಷವಾಗಿ, ಬಸವಣ್ಣನ ಬದಲಿಗೆ ರೇಣುಕರಿಗೆ ಪ್ರಾಶಸ್ತ್ಯ ನೀಡಿದರೆ ಸಮಾಜದಲ್ಲಿ ಮೇಲ್ಜಾತಿಯಾಗಿ ಗೌರವ ಹೊಂದಿರುತ್ತೀರಿ ಎಂಬ ಸಂದೇಶ ನೀಡಿ ಸಮಸಮಾಜ ವ್ಯವಸ್ಥೆಯಿಂದ ದೂರ ಸರಿಸುವ ಸಂಚನ್ನು ಸಂಘ ಪರಿವಾರ ವ್ಯವಸ್ಥಿತವಾಗಿ ಮಾಡಿಸುತ್ತಿದೆ.
5) ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?
ರೇಣುಕಾಚಾರ್ಯರ ಜಯಂತಿಯ ಹಿಂದೆ ಬಂಡವಾಳಶಾಹಿ, ರಾಜಕಾರಣಿ ಲಿಂಗಾಯತರು ಮತ್ತು ಜಾತಿ ಲಿಂಗಾಯತರಿದ್ದಾರೆ. ಇವರಿಗೆ ಬೆನ್ನು ಹುರಿಯಾಗಿ ಸಂಘ ಪರಿವಾರದ ಹಣಕಾಸಿನ ಬೆಂಬಲವಿದೆ. ಹಣ ಮತ್ತು ಅಧಿಕಾರದ ಕಾರಣ ಹೆಚ್ಚು ಜನರನ್ನು ಕೂಡಿಸಬಲ್ಲರು.
6) ಈ ಬೆಳವಣಿಗೆಯನ್ನು ಲಿಂಗಾಯತರು ಹೇಗೆ ನೋಡಬೇಕು? ಹೇಗೆ ಪ್ರತಿಕ್ರಿಯೆ ನೀಡಬೇಕು?
ಇದನ್ನು ನಾವು ಸೂಕ್ಷವಾಗಿ ಅವಲೋಕಿಸಿ ಪ್ರತಿಕ್ರಿಯಿಸಬೇಕು. ಕೆಲವೊಮ್ಮೆ ನಾವೇ ಅವರಿಗೆ ಪ್ರಚಾರ ಕೊಡುತ್ತೇವೆ ಮತ್ತು ಕೆಲವೊಮ್ಮೆ ನಮ್ಮ ಪ್ರತಿಕ್ರಿಯೆಗೆ ವಿರೋಧಿಸಿ ಹೆಚ್ಚು ಜನ ಸೇರುವ ಸಂಭವವಿರುತ್ತದೆ.