ರೇಣುಕಾಚಾರ್ಯ ಜಯಂತಿಗೆ ನಮ್ಮ ವಿರೋಧವಿದೆ: ಹಾಲುಮತ ಚಿಂತಕ ಬಿಜ್ಜರಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಾಳೇಹಳ್ಳಿ ಪೀಠವನ್ನು ವೀರಶೈವರು ವಶಪಡಿಸಿಕೊಂಡಿದ್ದಾರೆ. ಅದನ್ನು ಹಾಲುಮತ ಸಮಾಜ ಮತ್ತೆ ಪಡೆಯುವ ವ್ಯವಸ್ಥೆ ಶುರುವಾಗಿದೆ, ಎಂದು ಬಿಜ್ಜರಗಿ ಹೇಳಿದರು.

ವಿಜಯಪುರ

ಸರಕಾರದ ವತಿಯಿಂದ ರೇಣುಕಾಚಾರ್ಯ ಜಯಂತಿಯನ್ನು ಆಚರಿಸುತ್ತಿರುವುದನ್ನು ಪ್ರಭಾವಶಾಲಿ ಹಾಲುಮತ ಚಿಂತಕ ಚಂದ್ರಕಾಂತ ಬಿಜ್ಜರಗಿ ವಿರೋಧಿಸಿದ್ದಾರೆ.

“ಈ ಜಯಂತಿ 2022ರಲ್ಲಿ ರಾಜಕೀಯ ಉದ್ದೇಶದಿಂದ ಶುರುವಾಯಿತು. ರಂಭಾಪುರಿ ಶ್ರೀಗಳು ಒಂದು ಅರ್ಜಿ ಕೊಟ್ಟರು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಗಳ ಆಸೆಗಾಗಿ ಹಿಂದೆ ಮುಂದೆ ನೋಡದೆ ಅನುಮತಿ ಕೊಟ್ಟರು.

ಸರಕಾರದ ವತಿಯಿಂದ ಒಂದು ಜಯಂತಿ ನಡೆಯಬೇಕಾದರೆ ಮೊದಲು ಒಂದು ಸಮಿತಿ ನೇಮಕವಾಗಬೇಕು. ಅದರಲ್ಲಿ ತಜ್ಞರು, ಸಂಶೋಧಕರು ಇರಬೇಕಾಗುತ್ತದೆ. ಅವರ ವರದಿಯ ಮೇಲೆ ಸರಕಾರ ನಿರ್ಧರಿಸಬೇಕಾಗುತ್ತದೆ. ಈ ಯಾವ ಪ್ರಕ್ರಿಯೆಯನ್ನೂ ಬೊಮ್ಮಾಯಿಯವರು ಪಾಲಿಸಿಲ್ಲ,” ಎಂದು ಬಿಜ್ಜರಗಿ ಆರೋಪಿಸಿದರು.

ಬಿಜ್ಜರಗಿ ಬರೆದಿರುವ ‘ಕುರುಬರ ಕುಲಗುರು ರೇವಣಸಿದ್ದ’ ಪುಸ್ತಕ 2009ರಲ್ಲಿ ಪ್ರಕಟವಾಯಿತು. ಮಹಾರಾಷ್ಟ್ರ, ಮಧ್ಯ ಪ್ರದೇಶ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮುಂದಾದ ಕಡೆ ಸಂಶೋಧನೆ ಈ ಪುಸ್ತಕ ಬರೆದರು. “800 ಶಾಸನಗಳನ್ನು ಅಧ್ಯಯನ ಮಾಡಿ ಬರೆದಿರುವ ಪುಸ್ತಕ ಇದು,” ಎಂದರು ಬಿಜ್ಜರಗಿ.

ರೇಣುಕಾಚಾರ್ಯ ಕಾಲ್ಪನಿಕ ವ್ಯಕ್ತಿ. ‘ರೇಣುಕಾಚಾರ್ಯ’ ಎನ್ನುವ ಹೆಸರು ಮೊದಲು ಬರುವುದು ವಿಜಯಪುರದ ರೇವಣಯ್ಯ ಅನ್ನುವವರು ಬರೆದಿರುವ 1603ರರ ಪುಸ್ತಕದಲ್ಲಿ.

ಆದರೆ ಹಾಲುಮತದ ಪ್ರಖ್ಯಾತ ಗುರುಗಳಾಗಿದ್ದ ರೇವಣಸಿದ್ದರು ಐತಿಹಾಸಿಕ ವ್ಯಕ್ತಿ. ಇವರು 1095 ಮತ್ತು 1193 ನಡುವೆ ಜೀವಿಸಿದ್ದರು ಮತ್ತು ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದರು.

ಬಾಳೇಹಳ್ಳಿಯ ಪೀಠ ಶುರುವಾಗಿದ್ದು ರೇವಣಸಿದ್ದರಿಂದ. ಅವರ ನಂತರ ಅವರ ಮಗ ರುದ್ರಮುನಿ ಪೀಠಕ್ಕೆ ಬಂದರು. ಕಳೆದ 50 ವರ್ಷದವರೆಗೂ ಅಲ್ಲಿ ಕುರುಬ ಸಂಸ್ಕೃತಿಯ ಲಕ್ಷಣಗಳಿದ್ದವು. ಮೂರು ತಲೆಮಾರಿನ ಹಿಂದಿನ ಪೀಠಾಧಿಪತಿ ಶ್ರೀ ಗಂಗಾಧರ ಸ್ವಾಮಿಯವರು ಕಂಬಳಿ ಹೊದೆದುಕೊಳ್ಳುತ್ತಿದ್ದರು, ಕೈಯಲ್ಲಿ ಕುರಿ ಕಾಯುವ ಬಡಿಗೆ ಹಿಡಿದು ಕೊಳ್ಳುತ್ತಿದ್ದರು.

ಬಾಳೇಹಳ್ಳಿ ಪೀಠವನ್ನು ವೀರಶೈವರು ವಶಪಡಿಸಿಕೊಂಡಿದ್ದಾರೆ. ಅದನ್ನು ಹಾಲುಮತ ಸಮಾಜ ಮತ್ತೆ ಪಡೆಯುವ ವ್ಯವಸ್ಥೆ ಶುರುವಾಗಿದೆ, ಎಂದು ಬಿಜ್ಜರಗಿ ಹೇಳಿದರು.

ರೇಣುಕಾಚಾರ್ಯರ ಲಿಂಗೋದ್ಭವದ ಕಲ್ಪನೆ 20ನೇ ಶತಮಾನದಷ್ಟು ಇತ್ತೀಚಿನದು. ಅದಕ್ಕಿಂತ ಹಿಂದಿನ ಲಿಂಗದಿಂದ ಚಿಮ್ಮುತ್ತಿರುವ ಯಾವುದೇ ಚಿತ್ರ ಅಥವಾ ಶಿಲ್ಪವಾಗಲಿ ಸಿಗುವುದಿಲ್ಲ. ಹರಿಹರನ ರಗಳೆಯಲ್ಲಿ ಕೊಲ್ಲಿಪಾಕೆಯಲ್ಲಿ ಪರದೆ ಸರಿದಾಗ ರೇವಣಸಿದ್ದರು ಪ್ರಕಟವಾದರು ಎನ್ನುವ ಉಲ್ಲೇಖ ಬರುತ್ತದೆ. ಅದನ್ನೇ ಬಳಸಿಕೊಂಡು ಇತ್ತೀಚೆಗೆ ಲಿಂಗೋದ್ಭವದ ಕಲ್ಪನೆ ಹುಟ್ಟುಹಾಕಿದ್ದಾರೆ.

ಇದರ ಬಗ್ಗೆ ಪಂಚ ಪೀಠದವರಿಗೆ ಪತ್ರಿಕೆಗಳ ಮೂಲಕ, ಫೋನ್ ಮೂಲಕ ಚರ್ಚೆಗೆ ಬನ್ನಿ ಅಂತ ಸವಾಲು ಎಸೆದಿದ್ದೇನೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆಯಿಲ್ಲ, ಎಂದು ಬಿಜ್ಜರಗಿ ಹೇಳಿದರು.

ಹಾಲುಮತ ಸಮಾಜದಲ್ಲಿ ರೇವಣಸಿದ್ದರ ಬಗ್ಗೆ ಜಾಗೃತಿ ಬೆಳೆಯುತ್ತಿದೆ. ಹಳ್ಳಿಗಳಲ್ಲಿ ರೇವಣಸಿದ್ದರ ಜಯಂತಿ ನಡೆಯುತ್ತಿದೆ.

ರೇಣುಕಾಚಾರ್ಯ ಜಯಂತಿ ವಿರೋಧಿಸಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಕಾಗಿನೆಲೆ ಕನಕ ಗುರು ಪೀಠದ ಸ್ವಾಮೀಜಿಯವರಿಗೂ ಈ ಜಯಂತಿ ವಿರೋಧಿಸಿ ಎಂದು ಕೇಳಿಕೊಂಡಿದ್ದೇನೆ. ಬರುವ ದಿನಗಳಲ್ಲಿ ನಮ್ಮ ಹೋರಾಟ ತೀವ್ರವಾಗುತ್ತದೆ, ಎಂದು ಬಿಜ್ಜರಗಿ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
1 Comment
  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲೆ ಬೀದರ. says:

    ನಿಜವಾದ ಇತಿಹಾಸವನ್ನು ತಿಳಿಯಲು ಹಿಂಜರಿಕೆ ಹಾಕುವ ಈ ಪಂಚಪೀಠದವರ ಬುಡಕ್ಕೆ ಬೆಂಕಿ ಶುರುವಾಗಿದೆ.ಅವರುಗಳು ಈಗ ವ್ಯಗ್ರರಾಗಿ ಚಡಪಡಿಸುತಿದ್ದಾರೆ.

Leave a Reply

Your email address will not be published. Required fields are marked *