(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)
ಧಾರವಾಡ
12ನೇ ಶತಮಾನದಲ್ಲಿ ಬಸವಣ್ಣನವರು ಸೃಷ್ಟಿಸಿದ ಹೊಸ ಧರ್ಮದಲ್ಲಿ ಹಲವಾರು ಸಮುದಾಯಗಳು ಮುಖ್ಯವಾಗಿ ಶ್ರಮಿಕ ವರ್ಗಗಳು ಸೇರಿಕೊಂಡವು.
ಆದರೆ ಬಸವಣ್ಣನವರ ನಂತರ ಲಿಂಗಾಯತ ಸಮಾಜ, ಧರ್ಮ ಕವಲೊಡೆಯಿತು.
ಅನುಯಾಯಿಗಳಾಗಿ ಬಂದು ಗುರುಗಳಾಗಿ ಬದಲಾದ ವೀರಶೈವರ ಮೂಲಕ ವೈದಿಕತೆ ಮತ್ತೆ ನುಸುಳಿ
ಲಿಂಗಾಯತದ ಅಂತರಂಗ ಮಲೀನವಾಯಿತು.
ಇದರ ವಿರುದ್ಧ ಬಂಡಾಯವೆದ್ದು ಅನೇಕ ನಾಥ ಮತ್ತು ದಲಿತ ಪಂಗಡಗಳು ಇಷ್ಟಲಿಂಗ ತೆಗೆದು ವಿಭಿನ್ನ ಪರಂಪರೆ ಸೃಷ್ಟಿಸಿಕೊಂಡರು.
ಹೊರನಡೆದ ಈ ಸಂಪ್ರದಾಯಗಳಲ್ಲಿ ಲಿಂಗಕಟ್ಟಿಕೊಂಡು ಬಸವತತ್ವ ಬಿಟ್ಟವರ ಮೇಲೆ ದೊಡ್ಡ ತಿರಸ್ಕಾರವಿದೆ. ಮೂಲ ಶರಣರ ಪಥದಿಂದ ತಮ್ಮನ್ನು ಅಗಲಿಸಿದ ನೋವು, ಆಕ್ರೋಶ ಕಾಣುತ್ತದೆ.
ಲಿಂಗಾಯತದಿಂದ ದಲಿತ, ನಾಥ ಪಂಥಗಳು ಬೇರೆಯಾದರೂ ಅವು ಶರಣತತ್ವ ಬಿಡಲು ಸಾಧ್ಯವಾಗಲಿಲ್ಲ. ಬಸವಣ್ಣನವರ ಮೇಲಿನ ಪ್ರೀತಿ, ಅಭಿಮಾನ, ಭಕ್ತಿ ಕಡಿಮೆಯಾಗಲಿಲ್ಲ.
ಬಸವಣ್ಣ ಅಲ್ಲಮ. ನಾಗಮ್ಮ, ನೀಲಮ್ಮ ಮುಂತಾದ ಹೆಸರುಗಳು ಇವರಲ್ಲಿಯೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಇವರಿಗೆಲ್ಲ ಕಲ್ಯಾಣ ಒಂದು ಮರೆಯಲಾಗದ ನೆನಪಾಯಿತು.
ಅವುಗಳ ಇತಿಹಾಸ, ಪರಂಪರೆ, ಪವಿತ್ರ ಕ್ಷೇತ್ರಗಳೆಲ್ಲಾ ಲಿಂಗಾಯತಕ್ಕೆ ಬೆಸೆದುಕೊಂಡಿವೆ.
ಲಿಂಗಾಯತದ ವಿಸ್ತಾರವಾದ ಮರುಕಲ್ಪನೆಯಲ್ಲಿ ಶರಣ ಮೂಲದ ಎಲ್ಲಾ ಸಮುದಾಯಗಳ ನಡುವೆ ಸಂವಾದ ನಡೆಯಬೇಕಿದೆ.
ಈ ಮಹತ್ವದ ಐತಿಹಾಸಿಕ ಬೆಳೆವಣಿಗೆಗಳನ್ನು ಬೆಳಕಿಗೆ ತಂದ ಕಲಬುರ್ಗಿಯವರ ಮಹತ್ವದ ಸಂಶೋಧನೆಯನ್ನು ಸರಳ ಕನ್ನಡಲ್ಲಿ ಕ್ರೋಡೀಕರಿಸಲಾಗಿದೆ.
ಲಿಂಗಾಯತ ಧರ್ಮದಲ್ಲಿ ನುಸುಳಿದ ವೈದಿಕತೆ

12ನೇ ಶತಮಾನದಲ್ಲಿ ಕರ್ನಾಟಕದ ಸಾಮಾಜಿಕ ಚಿತ್ರಣ ಬದಲಾಯಿತು. ಬಸವಣ್ಣ ಸೃಷ್ಟಿಸಿದ ಹೊಸ ಧರ್ಮದಲ್ಲಿ ಸಮಾಜದ ಎಲ್ಲಾ ಸ್ತರಗಳು, ಮುಖ್ಯವಾಗಿ ಶ್ರಮಿಕ ವರ್ಗಗಳು, ಸೇರಿಕೊಂಡವು.
ಪ್ರವಾಹದಂತೆ ಬಂದ ಲಿಂಗಾಯತ ಧರ್ಮದಲ್ಲಿ ಸ್ಥಾವರ ಲಿಂಗ ಪೂಜಿಸುತ್ತಿದ್ದ ಕಾಳಾಮುಖ, ಮಹಾವ್ರತಿ, ಪಾಶುಪತರಂತಹ ಅನೇಕ ವೈದಿಕ ಶೈವ ಧರ್ಮಗಳು ಕೊಚ್ಚಿ ಹೋದವು.
ನಾಥ ಪಂಥ ಕೂಡ ಬಸವಣ್ಣನವರ ಪ್ರಭಾವಕ್ಕೆ ಸಿಲುಕಿತು. ಯೋಗನಿಷ್ಠೆ, ಪ್ರಾಣಲಿಂಗ ಆರಾಧನೆ, ಜಾತ್ಯತೀತ ಮನಸ್ಸಿದ್ದ ಅನೇಕ ನಾಥ ಪಂಗಡಗಳೂ ಲಿಂಗಾಯತದಲ್ಲಿ ಲೀನವಾದವು.
ಇದೇ ರೀತಿ ಒಳ ಬಂದ ಆಂಧ್ರದ ಶುದ್ಧಶೈವ ಆಚಾರ್ಯರು ಮಾತ್ರ ಸಂಪೂರ್ಣವಾಗಿ ಲೀನವಾಗದೆ ಅನೇಕ ವೈದಿಕ ಆಚರಣೆಗಳನ್ನು ಉಳಿಸಿಕೊಂಡರು. ಇಷ್ಟಲಿಂಗ ಹಿಡಿದರೂ ಜನಿವಾರ ಬಿಡಲಿಲ್ಲ.
ಬಸವಣ್ಣನವರ ನಂತರ ಇವರ ಪ್ರಭಾವದಿಂದ ಲಿಂಗಾಯತದಲ್ಲಿ ವೈದಿಕತೆ ನುಸುಳಿತು. ಜಾತಿ, ಮಡಿ, ಮೈಲಿಗೆ, ಆಚರಣೆಗಳು ಮರುಕಳಿಸಿ ಸಮಾನತೆ ಕುಗ್ಗಿತು. ವಚನಗಳ ಬದಲು ಸಂಸ್ಕೃತ ಕೃತಿಗಳು ಬಂದವು.
ಇದನ್ನು ಪ್ರತಿಭಟಿಸಿ ಅನೇಕ ಶರಣ ಸಮುದಾಯಗಳು ನೋವು, ಆಕ್ರೋಶದಿಂದ ಇಷ್ಟಲಿಂಗ ತ್ಯಜಿಸಿ ಲಿಂಗಾಯತ ಧರ್ಮದಿಂದ ಹೊರ ನಡೆದವು. ಬಸವಣ್ಣ ಕಟ್ಟಿದ್ದ ಸಮಾಜ ಚೂರಾಯಿತು.
(‘ಬಸವೋತ್ತರ ಯುಗ: ಮೂರು ಕವಲುಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)
ನೋವು, ಆಕ್ರೋಶದಿಂದ ಪ್ರತ್ಯೇಕವಾದ ಶರಣರು

ಆಚಾರ್ಯರ ಮೂಲಕ ನುಸುಳಿದ ವೈದಿಕತೆಯಿಂದ ಲಿಂಗಾಯತದ ಅಂತರಂಗ ಮಲೀನವಾಯಿತು. ಇದರ ವಿರುದ್ಧ ಬಂಡಾಯವೆದ್ದು ಅನೇಕ ನಾಥ ಮತ್ತು ದಲಿತ ಪಂಗಡಗಳು ಹೊರನಡೆದವು.
ಬಸವಣ್ಣನವರ ಪ್ರಭಾವದಿಂದ ನಾಥ ಪಂಗಡಗಳು ಪ್ರಾಣ ಲಿಂಗ ಪೂಜೆ ಬಿಟ್ಟು ಇಷ್ಟಲಿಂಗ ಹಿಡಿದಿದ್ದವು. ಆದರೆ ನಂತರ ಇವು ಇಷ್ಟಲಿಂಗ ಬಿಟ್ಟು ಮತ್ತೆ ಪ್ರಾಣಲಿಂಗದತ್ತ ಹೊರಳಿದವು.
ಈ ಬಂಡಾಯ ಪ್ರಬಲವಾಗಿದ್ದು ೧೫ನೇ ಶತಮಾನದ ಕೊಡೇಕಲ್ ಬಸವಣ್ಣನವರ ಕಾಲದಲ್ಲಿ. ಅವರ ನೇತ್ರತ್ವದಲ್ಲಿ ಅತ್ತ ಲಿಂಗಾಯತ, ಇತ್ತ ನಾಥವೂ ಅಲ್ಲದ ಆರೂಢ ಪರಂಪರೆ ರೂಪಗೊಂಡಿತು.
ಲಿಂಗಾಯತದಲ್ಲಿ ಜಾತಿ ತೆಲೆಯೆತ್ತುತ್ತಿದ್ದಂತೆ ಅನೇಕ ದಲಿತ ಸಮುದಾಯಗಳು ಬೆಚ್ಚಿದವು. ಅವು ತಮ್ಮ ಮೂಲ ಜಾತಿಗಳಿಗೆ ಹಿಂದಿರುಗಿ, ಕೊಡೇಕಲ್ ಬಸವಣ್ಣನವರ ಶಿಷ್ಯ ಮಂಟೇಸ್ವಾಮಿಯವರ ಭಕ್ತರಾದರು.
ಹೊರನಡೆದ ಈ ಸಂಪ್ರದಾಯಗಳಲ್ಲಿ ಲಿಂಗಕಟ್ಟಿಕೊಂಡು ಬಸವ ತತ್ವ ಬಿಟ್ಟವರ ಮೇಲೆ ದೊಡ್ಡ ತಿರಸ್ಕಾರವಿದೆ. ಮೂಲ ಶರಣರ ಪಥದಿಂದ ತಮ್ಮನ್ನು ಅಗಲಿಸಿದ ನೋವು, ಆಕ್ರೋಶ ಕಾಣುತ್ತದೆ.
ಕೊಡೇಕಲ್ ಬಸವಣ್ಣ “ಹಂಗುಹರಿ ಲಿಂಗದ” ಎಂದರು. ಮಂಟೇಸ್ವಾಮಿಯವರು 9 ಹಿಂದುಳಿದ ವರ್ಗಗಳು ಮಾತ್ರ ನಿಜ ಲಿಂಗಾಯತರು, ಮಿಕ್ಕವರೆಲ್ಲ ‘ಕಲ್ಲು ವಡ್ಡರಾಗಿರಿ’ ಎಂದು ಶಾಪ ಕೊಟ್ಟರು.
(‘ಬಸವೋತ್ತರ ಯುಗ: ಮೂರು ಕವಲುಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)
ಲಿಂಗಾಯತರಿಂದ ಪ್ರತ್ಯೇಕವಾದ ಆರೂಢರು

ನಾಥರು ಲಿಂಗಾಯತದಿಂದ ಹೊರ ನಡೆದರೂ ಶರಣರ ಪ್ರಭಾವ ತಪ್ಪಿಸಿಕೊಳ್ಳಲಾಗಲಿಲ್ಲ. ಪ್ರಾಣಲಿಂಗ ಪೂಜೆಯಂತ ತಮ್ಮ ಮೂಲ ತತ್ವಗಳಿಗೆ ಶರಣ ತತ್ವವನ್ನು ಬೆರಸಿ ಆರೂಢ ಪರಂಪರೆ ರೂಪಿಸಿದರು.
ಅತ್ತ ಲಿಂಗಾಯತ ಇತ್ತ ನಾಥವೂ ಅಲ್ಲದ ಸಮ್ಮಿಶ್ರ ಆರೂಢ ಸಂಪ್ರದಾಯದಲ್ಲಿ ಮೊದಲು ಬಂದವರು ದಿಗ್ಗಿ ಸಂಗಮನಾಥ. ಇವರು “ಪ್ರಾಣಲಿಂಗ ಸ್ಥಲವ ತಂದರು” ಎಂದು ನಂದಿ ಆಗಮಲೀಲೆ ಹೇಳಿದೆ.
ಇವರ ಸಮಕಾಲೀನ ತಿಪ್ಪಣ್ಣಯ್ಯ ಇಷ್ಟಲಿಂಗವನ್ನು ಬಹಿರಂಗದ ಪೂಜೆಯೆಂದು ತಿರಸ್ಕರಿಸಿದರು. ಬದಲಿಗೆ “ಹಿಂಗದಿಹ ಅನಂತರಂಗದ ಪ್ರಾಣಲಿಂಗದ” ಪೂಜೆಯಲ್ಲಿ ತೊಡಗಿಸಿಕೊಂಡರು.
ಕೃತಿಗಳ ಪ್ರಕಾರ ಇವರು 60 ವರುಷ ಸ್ನಾನ ಮಾಡಲಿಲ್ಲ. ಹರಿದ ಬಟ್ಟೆಯನ್ನೂ ಬದಲಿಸದೆ ತಮ್ಮ ಕಾಯಕ, ಪೂಜೆಯಲ್ಲಿ ತೊಡಗಿಕೊಂಡಿದ್ದರು. ವಿಭೂತಿಯನ್ನು ಬಿಟ್ಟು ಬೊಟ್ಟು ಧರಿಸುತ್ತಿದ್ದರು.
ಇವೆಲ್ಲಾ ಲಿಂಗಾಯತರಲ್ಲಿ ಹೆಚ್ಚುತ್ತಿದ್ದ ಬಾಹ್ಯ ವೈದಿಕ ಆಚರಣೆಗಳಿಗೆ ಬಂದ ಪ್ರತಿರೋಧ. ಆದರೆ ಅವರ ಶಿಷ್ಯ ಗುಂಡ ಬಸವೇಶ್ವರರಿಗೆ ಅಷ್ಟು ನಿರ್ದಾಕ್ಷಿಣ್ಯವಾಗಿ ಇಷ್ಟಲಿಂಗ ತೆಗೆಯಲು ಸಾಧ್ಯವಾಗಲಿಲ್ಲ.
ನಂತರ ಬಂದ ಕೊಡೇಕಲ್ ಬಸವಣ್ಣನವರ ಕಾಲದಲ್ಲಿ ಆರೂಢ ಪರಂಪರೆ ಪ್ರಬಲವಾಯಿತು. ಸಂಪೂರ್ಣವಾಗಿ ಇಷ್ಟಲಿಂಗ ತೆಗೆದು ಆರೂಢರು ಲಿಂಗಾಯತರಿಗಿಂತ ವಿಭಿನ್ನವಾಗಿ ಬೆಳೆದರು.
(‘ಗುಂಡ ಬಸವೇಶ್ವರನ ಚರಿತ್ರೆ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)
ಒಲ್ಲದ ಮನಸ್ಸಿನಿಂದ ಇಷ್ಟಲಿಂಗ ತೆಗೆದ ಗುಂಡ ಬಸವೇಶ್ವರರು

ಬೇಸರದಿಂದ ಹೊರನಡೆದರೂ ಅನೇಕರಿಗೆ ಲಿಂಗಾಯತದ ಸಂಕೇತವಾದ ಇಷ್ಟಲಿಂಗ ತ್ಯಜಿಸುವುದು ಕಷ್ಟವಾಯಿತು. ಆ ನೋವು, ಅನಿವಾರ್ಯತೆ, ಗೊಂದಲ ಗುಂಡ ಬಸವೇಶ್ವರರ ಜೀವನದಲ್ಲಿ ಕಾಣುತ್ತದೆ.
ನಾಗಾವಿಯಲ್ಲಿ ನೆಲೆಸಿದ್ದ ಗುಂಡ ಬಸವೇಶ್ವರರು ಡಂಗುರದ ಹಾಡುಗಳ ಮೂಲಕ ನೀತಿ ಪ್ರಚಾರ ಮಾಡುತ್ತಿದ್ದರು. ಇವರು ದಿನಕ್ಕೆ 17 ಸಲ ಇಷ್ಟಲಿಂಗ ಮತ್ತು ಪ್ರಾಣಲಿಂಗ ಎರಡೂ ಪೂಜೆಗಳನ್ನು ಮಾಡುತಿದ್ದರು.
ಅವರು ಕರಡಿ ವಾದ್ಯದ ನಾದಕ್ಕೆ ಲಿಂಗಪೂಜೆ ಮಾಡುತ್ತಿದ್ದರು. ಇಷ್ಟಲಿಂಗ ತೆಗೆಯುವಂತೆ ಅವರ ದೈವ ಸಂಗಮೇಶನಿಂದ ಮೂರು ಬಾರಿ ಆಜ್ಞೆಯಾಯಿತು ಎಂದು “ಗುಂಡ ಬಸವೇಶ್ವರ ಚರಿತ್ರೆ” ಹೇಳುತ್ತದೆ.
ಆದರೂ ಒಪ್ಪದೇ ಗುಂಡ ಬಸವೇಶ್ವರರು ಇಷ್ಟಲಿಂಗ ತೆಗೆಯುವಂತೆ ಒಂದು ಬಹಿರಂಗ ಘಟನೆ ಪ್ರೇರೇಪಿಸಲಿ ಎಂದು ಕಾದರು. ಅಷ್ಟರಲ್ಲೇ ಅವರ ಲಿಂಗ ಪೂಜೆಗೆ ಕೆಲವು ಜಂಗಮರಿಂದ ವಿರೋಧ ಬಂದಿತು.
ಲಿಂಗ ಪೂಜೆಗೆ ಕರಡಿ ವಾದ್ಯ ಸೂಕ್ತವಲ್ಲ, ಅದನ್ನು ನಿಲ್ಲಿಸದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂಬ ಬೆದರಿಕೆ ಬಂದಿತು. ಕರಡಿ ವಾದ್ಯವಿಲ್ಲದೆ ಪೂಜೆ ಮಾಡುವುದಿಲ್ಲ ಎಂದು ಅವರು ಇಷ್ಟಲಿಂಗ ಪೂಜೆ ನಿಲ್ಲಿಸಿದರು.
ಸಾಯುವ ಸಮಯದಲ್ಲಿ ತಮ್ಮ ಐದು ಮಕ್ಕಳನ್ನು ಕರೆದು ಇಷ್ಟಲಿಂಗ ಪೂಜೆ ಮಾಡು ಎಂದರೆ ಮಾಡಿ ಬೇಡವೆಂದರೆ ನಿಲ್ಲಿಸಿ ಎಂದರು. ಅಂತ್ಯಕ್ರಿಯೆಯ ಸಮಯದಲ್ಲಿ ಕರಸ್ಥಲದಲ್ಲಿ ಇಷ್ಟಲಿಂಗ ಹಿಡಿದಿದ್ದರು.
(‘ಗುಂಡ ಬಸವೇಶ್ವರನ ಚರಿತ್ರೆ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)
ವಿಭಿನ್ನ ಪರಂಪರೆ ಸೃಷ್ಟಿಸಿದ ಕೊಡೇಕಲ್ ಬಸವಣ್ಣ, ಮಂಟೆ ಸ್ವಾಮಿ

ಗುಂಡ ಬಸವೇಶ್ವರರ ನಂತರ ಬಂದ ಕೊಡೇಕಲ್ ಬಸವಣ್ಣ ಆರೂಢರನ್ನು ಸಂಘಟಿಸಿದರು. ಇವರು ಕಲ್ಯಾಣದ ಬಸವಣ್ಣನ ಭಕ್ತರಾಗಿದ್ದರೂ ಇಷ್ಟಲಿಂಗವಿಲ್ಲದ ವಿಭಿನ್ನ ಸಂಪ್ರದಾಯವನ್ನು ಬೆಳಸಿದರು.
ಇವರು ಒಂದು ಕಾಲಿನಲ್ಲಿ ಹಿಂದೂಗಳ ಪಾದರಕ್ಷೆ, ಮತ್ತೊಂದರಲ್ಲಿ ಮುಸುಲ್ಮಾನರ ಬೂಟು ಧರಿಸಿ ಸಂಚರಿಸುತ್ತಾ ಲಿಂಗಾಯತ, ನಾಥ ಮತ್ತು ಮುಸಲ್ಮಾನ ಸಂಸ್ಕೃತಿಗಳ ಸಮನ್ವಯ ಸಾಧಿಸಿದರು.
ಈ ಸಂಪ್ರದಾಯದ ಪೀಠಾಧಿಪತಿಗಳು ಲಿಂಗಾಯತರಾದರೂ ಇಷ್ಟಲಿಂಗ ಧರಿಸುವುದಿಲ್ಲ. ಸತ್ತವರನ್ನು ಮುಸ್ಲಿಮರಂತೆ ದಫನ್ ಮಾಡುತ್ತಾರೆ. ಹಿಂದೂ, ಮುಸ್ಲಿಂ ಗುರುಗಳು ಜಯಘೋಷ ಮತ್ತು ದೀನ್ ಹೇಳುತ್ತಾರೆ.
ಇವರ ಮಗ ರಾಚಪಯ್ಯ, ಶಿಷ್ಯ ಮಂಟೇಸ್ವಾಮಿ ದಕ್ಷಿಣಕ್ಕೆ ಹೋಗಿ ನೆಲಸಿದರು. ಆಚಾರ್ಯರ ನಡೆಯಿಂದ ರೋಸಿ ತಮ್ಮ ಮೂಲ ಜಾತಿಗಳಿಗೆ ಮರಳಿದ್ದ ದಲಿತರು ಮಂಟೇಸ್ವಾಮಿ ಭಕ್ತರಾದರು.
ಮಂಟೇಸ್ವಾಮಿ ಅನುಯಾಯಿಗಳು ಸೃಷ್ಟಿಸಿದ ಜಾನಪದ ಸಾಹಿತ್ಯದಲ್ಲಿ ತನ್ನ ಮೂಲ ಸ್ವರೂಪ ಕಳೆದುಕೊಂಡು ಶೋಷಣೆಯ ಮಾಧ್ಯಮವಾದ ಲಿಂಗಾಯತದ ವಿರುದ್ಧ ಆಕ್ರೋಶ ಕಾಣಿಸುತ್ತದೆ.
ಒಂದು ಹಾಡಿನಲ್ಲಿ ಮಡಿವಾಳ, ಕುಂಬಾರ, ಹಡಪದ ಮುಂತಾದ 9 ಹಿಂದುಳಿದ ಜಾತಿಗಳು ಮಾತ್ರ ನಿಜ ಲಿಂಗಾಯತರೆಂದು ಮಿಕ್ಕವೆರಲ್ಲ “ಕಲ್ಲು ವಡ್ಡರಾಗಿರಿ” ಎಂದು ಮಂಟೇಸ್ವಾಮಿ ಶಾಪ ಕೊಡುತ್ತಾರೆ.
(‘ಕೊಡೇಕಲ್ಲ ಬಸವಣ್ಣ: ಒಂದು ಅಧ್ಯಯನ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೬)
ಬೇರೆಯಾದರೂ ಹತ್ತಿರವೇ ಉಳಿದ ಶರಣ ಸಂಪ್ರದಾಯಗಳು

ಲಿಂಗಾಯತದಿಂದ ದಲಿತ, ನಾಥ ಪಂಥಗಳು ಬೇರೆಯಾದರೂ ಅವು ಶರಣ ತತ್ವ ಬಿಡಲು ಸಾಧ್ಯವಾಗಲಿಲ್ಲ. ಅವುಗಳ ಇತಿಹಾಸ, ಪರಂಪರೆ, ಪವಿತ್ರ ಕ್ಷೇತ್ರಗಳೆಲ್ಲಾ ಒಂದಕ್ಕೊಂದು ಬೆಸೆದುಕೊಂಡಿವೆ.
ಈ ಎಲ್ಲಾ ಸಂಪ್ರದಾಯಗಳು ಬಸವಣ್ಣನವರ ಮೇಲೆ ಭಕ್ತಿ ಉಳಿಸಿಕೊಂಡವು. ಮಂಟೇ ಸ್ವಾಮಿಯ ಜನಪದದಲ್ಲಿ ಬಸವಣ್ಣನವರನ್ನು ಗುರುವಿಲ್ಲದ ಗುಡ್ಡ (ಶಿಷ್ಯ) ಎಂದು ಗೌರವಿಸಲಾಗಿದೆ.
ಬಸವಣ್ಣ ಅಲ್ಲಮ. ನಾಗಮ್ಮ, ನೀಲಮ್ಮ ಮುಂತಾದ ಹೆಸರುಗಳು ಇವರಲ್ಲಿಯೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆರೂಢರಲ್ಲಿ ‘ಐಕ್ಯಸ್ಥಲದ ಶೂನ್ಯ ಸಿಂಹಾಸನಾಧಿಪತಿ’ ಎಂಬ ಸಂಪ್ರದಾಯವಿದೆ.
ಇವರಿಗೆಲ್ಲ ಕಲ್ಯಾಣ ಒಂದು ಮರೆಯಲಾಗದ ನೆನಪಾಯಿತು. ಕುಸಿದ ಕಲ್ಯಾಣವನ್ನು ಮತ್ತೆ ಕಾಲ್ಪನಿಕವಾಗಿ ಕಟ್ಟಲು ದಿಗ್ಗಿ ಸಂಗಮನಾಥ, ಗುಂಡ ಬಸವೇಶ್ವರ, ಕೊಡೇಕಲ್ ಬಸವಣ್ಣ ಪ್ರಯತ್ನಿಸಿದರು.
ಈ ಎಲ್ಲ ಪರಂಪರೆಗಳಿಗೂ ಸಂಗಮನಾಥ ಮುಖ್ಯ ದೈವ, ಕೂಡಲ ಸಂಗಮವೇ ಪವಿತ್ರ ಕ್ಷೇತ್ರ. ಕೂಡಲ ಸಂಗಮದಲ್ಲಿ ‘ಒಂಟಿ ಪಾದ ಮಂಟೇ ಸ್ವಾಮಿ’ ಹೆಸರಿನ ಒಂದೇ ಒಂದು ಪಾದ ಕೆತ್ತಿದ ಶಿಲ್ಪವಿದೆ.
ಮಂಟೇ ಸ್ವಾಮಿಗೆ ‘ಆದಿ ಸಂಗಮನಾಥ’ ಎಂಬ ಹೆಸರೂ ಇದೆ. ಕೂಡಲ ಸಂಗಮದಲ್ಲಿ ಮಂಟೇ ಸ್ವಾಮಿ, ಮಂಟೇ ಬಸವ ಹೆಸರಿನ ಮನೆತನಗಳು ತಾವು ಸಂಗಮೇಶ್ವರನ ಪೂಜಾರಿಗಳ ಗುರುಗಳೆಂದು ಹೇಳಿಕೊಳ್ಳುತ್ತಾರೆ
(‘ಕಪ್ಪಡಿ – ನಾಥ ಸಂಪ್ರದಾಯ – ಕಪಿಲಷಷ್ಠಿ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೬)
