ಸಾಣೇಹಳ್ಳಿ ಶ್ರೀಗಳು ಟೀಕಿಸಿದ್ದು ಹಿಂದೂ ಧರ್ಮದ ಕಂದಾಚಾರವನ್ನು, ವೈದಿಕ ಮಾಧ್ಯಮಗಳು ತಿರುಚುತ್ತಿವೆ: ಆಪ್ತರ ಮಾತು

ಎಂ. ಎ. ಅರುಣ್
ಎಂ. ಎ. ಅರುಣ್

“ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಖಂಡಿಸಿರುವುದು ಹಿಂದೂ ಧರ್ಮದಲ್ಲಿರುವ ಮೂಢನಂಬಿಕೆ, ಕಂದಾಚಾರ, ಅಸಮಾನತೆಯನ್ನು. ಇದನ್ನು ವೈದಿಕ ಮಾಧ್ಯಮಗಳು ತಿರುಚಿ ಗುರುಗಳು ಹಿಂದೂ ಧರ್ಮವನ್ನು ಅವಹೇಳನ ಮಾಡಿರುವ ಹಾಗೆ ಬಿಂಬಿಸುತ್ತಿವೆ.”

ಇದು ಶ್ರೀಗಳ ಮೇಲೆ ಮುಗಿಬಿದ್ದಿರುವ ಹೊಸ “ವಿವಾದ”ದ ಬಗ್ಗೆ ಬಹಳ ವರ್ಷಗಳಿಂದ ಅವರ ಒಡನಾಟದಲ್ಲಿರುವ ಗುರುಗಳ ಆಪ್ತರೊಬ್ಬರ ಪ್ರತಿಕ್ರಿಯೆ.

ಹೊಳಲ್ಕೆರೆಯಲ್ಲಿ ಗುರವಾರ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಯವರ 30ನೇ ಸ್ಮರಣಾರ್ಥ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಸಾಣೇಹಳ್ಳಿ ಮಠದ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ ಎಂದರು.

ಆ ಸಂಧರ್ಭದಲ್ಲಿ ಹಿಂದೂ ಧರ್ಮವನ್ನು ವಿವರಿಸಲು ಅವರು ಬಳಸಿದ ಎರಡು ಪದಗಳು. “ಅನೈತಿಕ,” “ಅನಾಚಾರ” ದೊಡ್ಡ ವಿವಾದ ಸೃಷ್ಟಿಸಿವೆಯೆಂದು ಮಾಧ್ಯಮಗಳು ಬಿಂಬಿಸಿತ್ತುವೆ.

ಇದರ ಬಗ್ಗೆ ಮಾತನಾಡಲು ಶ್ರೀಗಳಿಗೆ ಕರೆ ಮಾಡಿದಾಗ ಅವರು ಮತ್ತೊಂದು ಕಾರ್ಯಕ್ರಮದಲ್ಲಿದ್ದರು. ಆದರೆ ಬಹಳ ವರ್ಷಗಳಿಂದ ಅವರ ಒಡನಾಟದಲ್ಲಿರುವ ಆಪ್ತರೊಬ್ಬರು ಮಾತನಾಡಲು ಒಪ್ಪಿದರು.

ಅವರು ಹೇಳಿದ್ದು ಇಷ್ಟು:

“ಗುರುಗಳು ‘ಅನೈತಿಕ,’ ‘ಅನಾಚಾರ’ ಎಂದು ಕರೆದದ್ದು ಹಿಂದೂ ಧರ್ಮದಲ್ಲಿ ಇರುವ ಮೂಢನಂಬಿಕೆ, ಕಂದಾಚಾರಗಳನ್ನು, ಅದರಲ್ಲಿರುವ ಎದ್ದು ಕಾಣುವ ಅಸಮಾನತೆಯನ್ನು.

ಈ ವ್ಯವಸ್ಥೆಯಲ್ಲಿ ಅಸಮಾನತೆ ಹೇಗೆ ಬೇರುಬಿಟ್ಟಿದೆ, ಹೇಗೆ ಇನ್ನೂ ಯಾವುದೇ ಎಗ್ಗಿಲ್ಲದೆ ಬೆಳೆಯುತ್ತದೆ ನೋಡಿ. ಇಂದೂ ಕೂಡ ಎಲ್ಲದರಲ್ಲೂ ಪುರೋಹಿತಶಾಹಿಗಳಿಗೆ ಒಂದು ನಿಯಮ, ಕಾನೂನು. ಮಿಕ್ಕವರಿಗೆ ಇನ್ನೊಂದು ನಿಯಮ, ಕಾನೂನು. ಇದು ಪ್ರತಿ ದಿನ ಪ್ರತಿಯೊಬ್ಬರೂ ನೋಡುತ್ತಿರುವ, ಅನುಭವಿಸುತ್ತಿರುವ ವಾಸ್ತವ. ಗುರುಗಳು ಧ್ವನಿಯೆತ್ತಿರುವುದು ಈ ಅನಾಚಾರದ ಬಗ್ಗೆ.”

“ಗುರುಗಳು ಹೇಳಿದ್ದು ಹಿಂದೂ ಧರ್ಮ “ಅನೈತಿಕ,” “ಅನಾಚಾರ” ಅಂಶಗಳನ್ನು “ಒಳಗೊಂಡಿದೆ” ಎಂದು. ಅವರು ಇಡೀ ಹಿಂದೂ ಧರ್ಮವನ್ನು “ಅನೈತಿಕ,” “ಅನಾಚಾರ” ಎಂದು ಕರೆದಿಲ್ಲ.

ಅಂಗಡಿಗಳಲ್ಲಿ ಕೆಲವು ಪದಾರ್ಥಗಳ ಬೆಲೆಯನ್ನು ತೆರಿಗೆ ಒಳಗೊಂಡಿದೆ ಎಂದು ಹಾಕಿರುತ್ತಾರೆ. ಆ ಬೆಲೆಯಲ್ಲಿ ತೆರಿಗೆ ಒಂದು ಅಂಶ ಮಾತ್ರ, ಒಟ್ಟು ಬೆಲೆಯಲ್ಲ. ಹಾಗೆಯೇ ಯಾವುದೇ ಧರ್ಮದಲ್ಲಿ ಅದರಲ್ಲಿರುವ ಅನಾಚಾರ ಅನೈತಿಕತೆ ಒಂದು ಅಂಶ ಮಾತ್ರ, ಇಡೀ ಧರ್ಮವಲ್ಲ. ಹಿಂದೂ ಧರ್ಮ ಇದಕ್ಕೆ ಹೊರತಾಗಿಲ್ಲ

ಅನಾಚಾರ ಅನೈತಿಕತೆ ಎಲ್ಲ ಧರ್ಮಗಳಲ್ಲಿ ಕಂಡರೆ ಶ್ರೀಗಳು ಹಿಂದೂ ಧರ್ಮವನ್ನೇ ಟೀಕೆ ಮಾಡಲು ಕಾರಣವೇನು?

“ಇದಕ್ಕೆ ಗುರುಗಳು ಮಾತನಾಡಿದ ಸಂಧರ್ಭವನ್ನೂ ನೀವು ಗಮನಿಸಬೇಕು. ಕಳೆದ ಕೆಲವು ದಿನಗಳಿಂದ ವಚನ ದರ್ಶನ ಪುಸ್ತಕದ ಮೂಲಕ ಕೆಲವರು ಲಿಂಗಾಯತರು ಹಿಂದೂ ಧರ್ಮದ ಭಾಗ ಎಂದು ಹೇಳುತ್ತಿದ್ದಾರೆ. ಇಷ್ಟೊಂದೆಲ್ಲಾ ಮೂಢನಂಬಿಕೆ, ಕಂದಾಚಾರ, ಅಸಮಾನತೆಯಿರುವ ಹಿಂದೂ ಧರ್ಮದ ಭಾಗವಾಗಿ ಇದ್ದುಕೊಂಡು ಲಿಂಗಾಯತರು ಸಾಧಿಸಬೇಕಾಗಿರುವುದೇನು?

ಭಾಷಣದಲ್ಲಿ ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳುವಾಗ ಸಾಂದರ್ಭಿಕವಾಗಿ ಹೇಳಿದ ಮಾತಿದು. ಬೇರೆ ಯಾವ ಧರ್ಮವೂ ಲಿಂಗಾಯತರನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಹಾಗೆ ಬೇರೆ ಯಾರಾದರೂ ಪ್ರಯತ್ನಿಸಿದರೆ ಅವರನ್ನೂ ವಿಮರ್ಶೆಗೆ ಒಳಪಡಿಸುವುದು ಅನಿವಾರ್ಯವಾಗುತ್ತದೆ.”

ಅವರು ಮುಂದುವರೆದು ಗುರುಗಳು ಹೇಳಿರುವುದರಲ್ಲಿ ಹೊಸದೇನಿಲ್ಲ ಎಂದರು.

“೧೨ನೇ ಶತಮಾನದಿಂದಲೂ ಶರಣರು ಹಿಂದೂ ಧರ್ಮದ ಮೂಡ ನಂಬಿಕೆ, ಕಂದಾಚಾರ, ಅಸಮಾನತೆ ವಿರುದ್ದ ಬಂಡಾಯವೆದ್ದಿದ್ದಾರೆ. ವಚನಗಳಲ್ಲಿ ಇದಕ್ಕಿಂತ ಉಗ್ರವಾದ ಹಿಂದೂ ಧರ್ಮದ ಟೀಕೆಯಿದೆ.

ಲಿಂಗಾಯತರದು ಬರಿ ಮೋಕ್ಷಕ್ಕಾಗಿ ಹೊಡೆದಾಡುವ ಧರ್ಮವಲ್ಲ. ಆತ್ಮೋದ್ದಾರದ ಜೊತೆಗೆ ಸಾಮಾಜಿಕ ಕಳಕಳಿಯ, ಎಲ್ಲರಿಗೂ ನ್ಯಾಯ ಒದಗಿಸುವ ಧರ್ಮ. ಅವರ ಹೇಳಿಕೆಯನ್ನು ಈ ಹಿನ್ನಲೆಯಲ್ಲಿ ನೋಡಬೇಕು.

ಸಮಾಜದಲ್ಲಿನ ಅನೈತಿಕತೆ, ಅನಾಚಾರ, ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವ ಪರಂಪರೆಯನ್ನು ಶುರು ಮಾಡಿದ್ದು ಬಸವಣ್ಣನವರು. ಕಲ್ಯಾಣ ಕ್ರಾಂತಿಯಾಗಿದ್ದೂ ಇದೇ ಕಾರಣಕ್ಕಾಗಿ ಎಂದು ಮರೆಯಬಾರದು. ಗುರುಗಳ ನಿರ್ಭೀತಿಯ ನಿಲುವಿನ ಹಿಂದೆ ಒಂದು ದೊಡ್ಡ ಪರಂಪರೆಯಿದೆ. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಡುವುದು ಪ್ರತಿಯೊಬ್ಬ ಬಸವ ಅನುಯಾಯಿಯ ಕರ್ತವ್ಯ. ಇದಕ್ಕೆ ಅಲ್ಲಿ ಇಲ್ಲಿ ವಿರೋಧ ಬರಬಹುದು. ಅದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ.”

“ಗುರುಗಳ ಹೇಳಿಕೆಗಳಿಂದ ವಿವಾದವಾಗುತ್ತಿಲ್ಲ, ಅವುಗಳನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಅವರು ಯಾರು? ಅವರ ಹಿನ್ನಲೆಯೇನು? ಇದನ್ನು ಗಮನಿಸಬೇಕು,” ಎಂದು ಸಾಣೇಹಳ್ಳಿ ಶ್ರೀಗಳ ಆಪ್ತರು ಹೇಳಿದರು.

“ಒಂದು ಪ್ರಜಾಪ್ರಭುತ್ವಕ್ಕೆ ಪ್ರಗತಿಪರ, ಜನಪರ ಮಾಧ್ಯಮ ಅವಶ್ಯ. ನಮ್ಮ ದೇಶದ ಮಾಧ್ಯಮ ಈ ರೀತಿ ಉಳಿದಿಲ್ಲವೆಂದು ಎಲ್ಲರಿಗೂ ಗೊತ್ತು.

ಭಾರತದಲ್ಲಿ, ಕರ್ನಾಟಕದಲ್ಲಿ ಬಹುತೇಕ ಮಾಧ್ಯಮಗಳು ಇಂದು ಹಿಂದೂ ಧರ್ಮದ ವರ್ಣಭೇದ ನೀತಿಯ ಪ್ರಕಾರವೇ ಕೆಲಸ ಮಾಡುತ್ತಿವೆ. ಅವು ವಾಸ್ತವವನ್ನು ಬಿಂಬಿಸುತ್ತಿಲ್ಲ, ಒಂದು ವರ್ಗದ ಪ್ರಾಬಲ್ಯವನ್ನು ಇತರರ ಮೇಲೆ ಹೇರುವುದಕ್ಕೆ ಶ್ರಮಿಸುತ್ತಿವೆ. ಇದನ್ನು ನಿಷ್ಠುರವಾಗಿ ಟೀಕಿಸುವ ಶ್ರೀಗಳಂತವರು ಅವರಿಗೆ ಶತ್ರುವಾಗಿ ಕಾಣಿಸುತ್ತಾರೆ.”

“ಹೋದ ವರ್ಷ ಗುರುಗಳು ಲಿಂಗಾಯತರು ಗಣಪತಿ ಪೂಜೆ ಮಾಡಬಾರದು ಎಂದು ಹೇಳಿದರು. ಅದನ್ನು ಇಡೀ ಸಮಾಜದಲ್ಲೇ ಗಣಪತಿ ಪೂಜೆ ನಿಷೇಧ ಮಾಡಲು ಕೊಟ್ಟ ಕರೆಯಂತೆ ಬಿಂಬಿಸಲಾಯಿತು. ಇಲ್ಲದ ವಿವಾದ ಹುಟ್ಟಿಹಾಕಲು ಈ ವೈದಿಕ ಮಾಧ್ಯಮಗಳು ಕಾದು ಕುಳಿತಿರುತ್ತವೆ,” ಎಂದರು.

ಗುರುವಾರದ ಭಾಷಣದಲ್ಲಿ “ಒಂದರ್ಥದಲ್ಲಿ ಹಿಂದೂ ಧರ್ಮವೇ ಅಲ್ಲ” ಎಂದು ಶ್ರೀಗಳು ಹೇಳಿದರು. ಕೆಲವು ಟಿವಿ ಚಾನೆಲ್‌ಗಳು ಇದು ಕೂಡ ವಿವಾದಾಸ್ಪದ ಎನ್ನುತ್ತಿವೆಯಲ್ಲ.

“ಪ್ರಾಚೀನ ಕಾಲದ ಪರ್ಷಿಯನ್ನರು ಸಿಂಧೂ ನದಿಯ ಕೆಳಗಿರುವವರೆಲ್ಲ ಹಿಂದೂಗಳು ಎಂದು ಕರೆದರು.

ಹಿಂದೂ ಪದಕ್ಕೆ ಭೌಗೋಳಿಕ ಅರ್ಥ ಕೊಟ್ಟರೆ ಈ ದೇಶದಲ್ಲಿ ಇರುವವರೆಲ್ಲ ಹಿಂದುಗಳೇ, ಲಿಂಗಾಯತರೂ ಸೇರಿದಂತೆ. ಆದರೆ ಅದಕ್ಕೆ ಒಂದು ಧಾರ್ಮಿಕ ಅರ್ಥ ಕೊಟ್ಟರೆ ಲಿಂಗಾಯತರು ಹಿಂದೂಗಳಲ್ಲ. ಇಷ್ಟನ್ನೇ ಗುರುಗಳು ಹೇಳಿರುವುದು.”

Share This Article
1 Comment
  • ಪೂಜ್ಯ ಪಂಡಿತಾರಾದ್ಯ ಶ್ರೀ ಗಳವರು ಓರ್ವ ವಿಚಾರವಂತ ಸ್ವಾಮಿಗಳು ಅನ್ನುವುದರಲ್ಲಿ ಎರಡು‌ ಮಾತಿಲ್ಲ. ಪೂಜ್ಯರ ಬರಹಗಳನ್ನು ಓದುತ್ತ ಹೋದಮಕತೆ ಅವರ ಬಗೆಗಿನ ಗೌರವ ನೂರ್ಮಡಿಯಾಗಿದೆ.
    ಲಿಂಗಾಯತ ಧರ್ಮ ಶ್ರೇಷ್ಠವಾದುದು. ವಚನ ಸಾಹಿತ್ಯವು ಸರ್ವಶ್ರೇಷ್ಠ ವಾಙ್ಮಯದ ಸರಣಿಯಲ್ಲಿ ನಿಲ್ಲವಂತಹುದು ಅದಕ್ಕಾಗಿ ಲಿಂಗಾಯತರೆಲ್ಲರೂ ಅಭಿಮಾನ ಪಡಬೇಕು.
    ನಾವು ನಮ್ಮ ಧರ್ಮದ ಶ್ರೇಷ್ಠ ತೆಯನ್ನು ಹೇಳೋಣ ಆದರೆ ಇನ್ನೊಂದು ಧರ್ಮವನ್ನು ತುಚ್ಛೀಕರಿಸುವುದು ಬೇಡ.
    ಹಿಂದೂ ಸಂಸ್ಕೃತಿಯ ಛಾಯೆಯಲ್ಲಿ ಬೌದ್ಧ, ಜೈನ, ಸಿಖ್ಖ, ಲಿಂಗಾಯತ ಧರ್ಮಗಳು ಬೆಳೆದು ನಿಂತಿವೆ.
    ಅನೈತಿಕ. ಅನಾಚಾರ ಮುಂತಾದ ಪದಬಳಕೆ ಲಿಂಗಾಯತ ಧರ್ಮಿಯರಿಗೆ ಖಂಡಿತ ಶೋಭಿಸುವುದಿಲ್ಲ. ಅನುಚಿತ ಪದಗಳ ಸಮರ್ಥನೆ ಸರಿಯಾಗದು.
    ನಮ್ಮಧರ್ಮದ ಒಳ್ಳೆಯತನವನ್ನು ಘಂಟಾಘೊಷವಾಗಿ ಸಾರೋಣ ಆದರೆ ಮತ್ತೊಂದರಲ್ಲಿ ಇರಬಹುದಾದ ಒಳ್ಳೆಯದಲ್ಲದ್ದನ್ನು ಹೇಳುವಾಗ ಬಳಕೆಯಾಗುವ ಭಾಷೆಯ ಬಗ್ಗೆ
    ಸ್ವಲ್ಪ ಜಾಗರೂಕತೆ ವಹಿಸಿದರೆ ಲಿಂಗಾಯತರ ಘನತೆ ಗೌರವಗಳು ಮತ್ತಷ್ಟು ವೃದ್ಧಿಸಿಯಾವು.

Leave a Reply

Your email address will not be published. Required fields are marked *